ಡೊನಾಲ್ಡ್ ಟ್ರಂಪ್ ಇನ್ನೊಂದು ದೇಶಕ್ಕೂ ಮಾರಕವಾಗ್ತಾರೆ: ಖ್ಯಾತ ಜ್ಯೋತಿಷಿ ಭವಿಷ್ಯ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ವೆನೆಜುವೆಲಾದ ಅಧ್ಯಕ್ಷರಾಗಿದ್ದ ನಿಕೋಲಸ್ ಮದುರೊ ಮತ್ತು ಅವರ ಪತ್ನಿಯನ್ನು ಸೆರೆ ಹಿಡಿದಿದ್ದರು. ಅಮೆರಿಕವು ವೆನಿಜುವೆಲಾ ದೇಶದ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಟ್ರಂಪ್ ಘೋಷಿಸಿದ್ದರು. ಸದ್ಯ ವೆನಿಜುವೆಲಾ ಬಳಿಕ ಡೊನಾಲ್ಡ್ ಟ್ರಂಪ್ ಮತ್ತೊಂದು ದೇಶಕ್ಕೂ ಮಾರಕವಾಗ್ತಾರೆ ಎಂದು ಖ್ಯಾತ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.
'ಅಪಾಯಕಾರಿ ಟ್ರಂಪ್. ಇವರು ಆಡಳಿತಕ್ಕೆ ಬರುವ ಮುನ್ನವೇ ಬರೆದಿದ್ದೆ. ಕೆರಳಿದರೆ ಏನೂ ಮಾಡಬಹುದು. ಬಹುಷಃ ಹಿರೋಷಿಮದ ನಂತರ ಇನ್ನೊಂದು ದುರಂತಕ್ಕೆ ಕಾರಣ ಆಗಬಹುದು' ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಭವಿಷ್ಯ ನುಡಿದಿದ್ದಾರೆ. 'ಸದ್ಯ ಟ್ರಂಪ್ ಅವರಿಗೆ ಚಂದ್ರಾಷ್ಟಮ ಗುರು, ಚಂದ್ರ ಪಂಚಮ ಶನಿ. ಅದರಲ್ಲೂ ಕುಜಾಷ್ಟಮ ಶನಿ ಇರುವುದರಿಂದ ಇನ್ನೊಂದು ರಾಷ್ಟ್ರಕ್ಕೆ ಮಾರಕವಾಗಿ ಸಾಯಬಹುದು. ತಾಳ್ಮೆ ಇಲ್ಲದ ವ್ಯಕ್ತಿಯಲ್ಲಿ ಬ್ರಹ್ಮಾಸ್ತ್ರ ಕೊಟ್ಟರೇನಾದೀತೋ ಅದೇ ರೀತಿ ಮಾಡಬಹುದು' ಎಂದಿದ್ದಾರೆ.

ಹುಚ್ಚು ಆಡಳಿತದ ಕೊನೆಯ ಹಂತ
'ಇಂಡೋ ಪಾಕ್ ಸಿಂಧೂರ ಆಪರೇಷನ್ ವೇಳೆ ಸೀಸ್‌ಫಯರ್ (ಕದನ ವಿರಾಮ) ಎಂದವ ಈಗ ಮಾಡೋದೇನು? ಕಾರಣ ಹಲವು ಇರಬಹುದು. ಆದರೆ ರಷ್ಯಾವನ್ನು, ಈಗಿನ ಮೋದಿ ಸರ್ಕಾರವನ್ನು ಎದುರು ಹಾಕಿಕೊಂಡು ಯುದ್ಧಕ್ಕಿಳಿದಿದ್ದಾನೆ. ಅದೂ ಅಮಾನವೀಯ ರೀತಿಯಲ್ಲಿ. ಬಹುಷಃ ಈತನ ಹುಚ್ಚು ಆಡಳಿತದ ಕೊನೆಯ ಹಂತ ಬಂದಿದೆ' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಅಮೆರಿಕಾ ಮಿಲಿಟರಿ ಪಡೆಯು ತೈಲ ಸಂಪದ್ಭರಿತ ವೆನಿಜುವೆಲಾ ದೇಶದ ಮೇಲೆ ದಾಳಿ ನಡೆಸಿದೆ. ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮದುರೋ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಡೋನಾಲ್ಡ್ ಟ್ರಂಪ್ ಆರೋಪಿಸಿ ಅವರನ್ನು ತಮ್ಮ ಜಾಗದಿಂದಲೇ ಸೆರೆಹಿಡಿದು ಅಮೆರಿಕಾಗೆ ಹೊತ್ತೊಯ್ದರು. ಬಳಿಕ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮದುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆಹಿಡಿಯಲಾಗಿದೆ ಮತ್ತು ದೇಶದಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಅಧಿಕೃತವಾಗಿ ಘೋಷಿಸಿ ಫೋಟೋ ಕೂಡ ಹಂಚಿಕೊಂಡರು.
ಅಮೆರಿಕದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಟ್ರಂಪ್, ಅಮೆರಿಕದ ಸಶಸ್ತ್ರ ಪಡೆಗಳು ವೆನೆಜುವೆಲಾದ ರಾಜಧಾನಿಯಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದ್ದು, ಇದು ಎರಡನೇ ಮಹಾಯುದ್ಧದ ನಂತರ ಜನರು ನೋಡದಂತಹ ದಾಳಿ. ಸರ್ವಾಧಿಕಾರಿ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿಯಲು ಕ್ಯಾರಕಾಸ್‌ನ ಹೃದಯಭಾಗದಲ್ಲಿರುವ ಕೋಟೆಗೆ ನುಗ್ಗಿದೆವು. ಇದು ಅಮೆರಿಕಾದ ಇತಿಹಾಸದಲ್ಲಿ ಮಿಲಿಟರಿ ಶಕ್ತಿ ಮತ್ತು ಸಾಮರ್ಥ್ಯದ ಅತ್ಯಂತ ಅದ್ಭುತ ಮತ್ತು ಶಕ್ತಿಯುತ ಪ್ರದರ್ಶನಗಳಲ್ಲಿ ಒಂದಾಗಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡರು.
ಅಲ್ಪಾವಧಿಯಲ್ಲಿ ಅಮೆರಿಕ ಸಾಧಿಸಿದ್ದನ್ನು ಜಗತ್ತಿನ ಯಾವುದೇ ರಾಷ್ಟ್ರ ಸಾಧಿಸಲು ಸಾಧ್ಯವಿಲ್ಲ. ರಾತ್ರಿಯ ವೇಳೆ ಮದುರೊನನ್ನು ಯಶಸ್ವಿಯಾಗಿ ಸೆರೆಹಿಡಿದಾಗ, ವೆನೆಜುವೆಲಾದ ಎಲ್ಲಾ ಮಿಲಿಟರಿ ಸಾಮರ್ಥ್ಯಗಳು ದುರ್ಬಲಗೊಂಡವು. ಸುರಕ್ಷಿತ, ಸರಿಯಾದ ಮತ್ತು ವಿವೇಚನಾಯುಕ್ತ ಪರಿವರ್ತನೆಯನ್ನು ಮಾಡಲು ಸಾಧ್ಯವಾಗುವವರೆಗೆ ನಾವು ವೆನೆಜುವೆಲಾ ದೇಶವನ್ನು ನಡೆಸುತ್ತೇವೆ. ವೆನೆಜುವೆಲಾದ ಮಹಾನ್ ಜನರಿಗೆ ನಾವು ಶಾಂತಿ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಬಯಸುತ್ತೇವೆ ಎಂದು ಟ್ರಂಪ್ ಹೇಳಿದರು.












Click it and Unblock the Notifications