ಇರಾನ್ ಮೇಲೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಣೆ, ಇರಾನ್ ಮುಂದೆ ಮಂಡಿಯೂರಿತೇ ಅಮೆರಿಕ
ಕಳೆದ ಎರಡು ವಾರಕ್ಕೂ ಹೆಚ್ಚು ಅವಧಿಯಿಂದ ನಡೆಯುತ್ತಿರುವ ಇರಾನ್ vs ಇಸ್ರೇಲ್, ಅಮೆರಿಕದ ನಡುವಿನ ಯುದ್ಧ ಅಂತ್ಯವಾಗುತ್ತಿದೆ. ಈ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಘೋಷಣೆ ಮಾಡಿದ್ದಾರೆ. ಕಳೆದ ವಾರವಷ್ಟೇ ಇರಾನ್ ಇಷ್ಟೊಂದು ಪ್ರಬಲವಾಗಿ ಪ್ರತ್ಯುತ್ತರ ನೀಡಲಿದೆ ಎಂದು ನಾವು ಅಂದಾಜಿಸಿರಲಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದರು.
ಇಡೀ ವಿಶ್ವವೇ ನಿಟ್ಟುಸಿರುವ ಬಿಡುವ ಸುದ್ದಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊಟ್ಟಿದ್ದಾರೆ. ಕಳೆದ ಎರಡು ವಾರಕ್ಕೂ ಹೆಚ್ಚು ಅವಧಿಯಿಂದ ನಡೆಯುತ್ತಿದ್ದ ಇರಾನ್ vs ಇಸ್ರೇಲ್, ಅಮೆರಿಕದ ಯುದ್ಧ ಅಂತ್ಯವಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಯುದ್ಧವು ಭಾರತವೂ ಸೇರಿದಂತೆ ಹಲವು ದೇಶಗಳಿಗೆ ಸಂಕಷ್ಟವನ್ನು ತಂದೊಡ್ಡಿತ್ತು. ಇದೀಗ ಜಗತ್ತನ್ನೇ ಬೆಚ್ಚಿಬೀಳಿಸುತ್ತಿರುವ ಇರಾನ್-ಅಮೆರಿಕ ಬಿಕ್ಕಟ್ಟು ಇದ್ದಕ್ಕಿದ್ದಂತೆ ತಣ್ಣಗಾಗಿದೆ. ಇರಾನ್‌ನ ಅತಿದೊಡ್ಡ ವಿದ್ಯುತ್ ಸ್ಥಾವರಗಳನ್ನು ನಾಶಮಾಡುವ 48 ಗಂಟೆಗಳ ಅಂತಿಮ ಗಡುವು ಮುಗಿಯುವ ಮುನ್ನವೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿದ್ದಾರೆ. ಮಿಲಿಟರಿ ಕ್ರಮವನ್ನು ಸದ್ಯಕ್ಕೆ ಮುಂದೂಡಲಾಗುವುದು ಮತ್ತು ರಾಜತಾಂತ್ರಿಕ ಮಾತುಕತೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ. ಈ ಸುದ್ದಿಯನ್ನು ಕೇಳಿ ಹಲವು ದೇಶಗಳು ನಿಟ್ಟುಸಿರು ಬಿಟ್ಟಿವೆ.

Donald Trump ಡೊನಾಲ್ಡ್ ಟ್ರಂಪ್ ಹೇಳಿದ್ದೇನು
ಇರಾನ್‌ನಲ್ಲಿರುವ ಪ್ರಮುಖ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸಲಾಗುವುದು ಎಂದು ಎಚ್ಚರಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಎರಡೂ ದೇಶಗಳ ನಡುವಿನ ರಹಸ್ಯ ರಾಜತಾಂತ್ರಿಕ ಮಾತುಕತೆಗಳು ಯಶಸ್ವಿಯಾಗಿವೆ ಎಂದು ಹೇಳಲಾಗಿದೆ. 5 ದಿನಗಳ ಕದನ ವಿರಾಮಕ್ಕೆ ನಾವು ನಿರ್ಧರಿಸಿದ್ದೇವೆ ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ. ತಮ್ಮದೇ ಆದ ಸಾಮಾಜಿಕ ಮಾಧ್ಯಮ ವೇದಿಕೆ 'ಟ್ರುತ್ ಸೋಷಿಯಲ್' ಮೂಲಕ ಈ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ತೆರೆಮರೆಯಲ್ಲಿ ನಡೆದ ರಾಜತಾಂತ್ರಿಕತೆ ಫಲ ನೀಡಿದೆ ಎಂದೂ ಇದೇ ಸಂದರ್ಭದಲ್ಲಿ ಟ್ರಂಪ್ ಹೇಳಿದ್ದಾರೆ. ಮಧ್ಯಪ್ರಾಚ್ಯದ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಮಗ್ರ ಪರಿಹಾರಕ್ಕಾಗಿ ಅಮೆರಿಕ ಹಾಗೂ ಇರಾನ್ ನಡುವೆ ರಚನಾತ್ಮಕ ಮಾತುಕತೆಗಳು ನಡೆದಿದ್ದವು. ಈ ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಎಲ್ಲ ಮಿಲಿಟರಿ ದಾಳಿಗಳನ್ನು ಮುಂದಿನ ಐದು ದಿನಗಳವರೆಗೆ ಮುಂದೂಡಲು ನಾನು ಆದೇಶಿಸಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದಾರೆ. ಆದಾಗ್ಯೂ, ಇದು ಶಾಶ್ವತ ಯುದ್ಧ ವಿರಾಮವಲ್ಲ ಮತ್ತು ಮಾತುಕತೆಯಲ್ಲಿ ಪ್ರಗತಿ ಆಗದಿದ್ದರೆ ದಾಳಿಗಳು ಮುಂದುವರಿಯಬಹುದು ಎಂದು ಹೇಳಲಾಗಿದೆ.
ಇರಾನ್ ಹೇಳಿದ್ದೇನು
ಇನ್ನು ಇರಾನ್ vs ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಕದನ ವಿರಾಮವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಣೆ ಮಾಡಿದ್ದರೂ, ಇರಾನ್ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಇರಾನ್‌ನಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಇಸ್ರೇಲ್ ಮತ್ತು ಸೌದಿ ಅರೇಬಿಯಾದಂತಹ ಅಮೆರಿಕದ ಮಿತ್ರರಾಷ್ಟ್ರಗಳು ಈ 'ತಾತ್ಕಾಲಿಕ ವಿರಾಮ'ದ ಹಿಂದಿನ ತಂತ್ರ ಏನು ಎಂದು ಗೊಂದಲಕ್ಕೆ ಒಳಗಾಗಿವೆ. ಇರಾನ್ ಈ ಯುದ್ಧದಲ್ಲಿ ಗೆದ್ದಿದೆಯೇ ಅಥವಾ ಇರಾನ್‌ನ ಮುಂದೆ ಅಮೆರಿಕ ಮಂಡಿಯೂರಿತೇ ಎನ್ನುವ ಅನುಮಾನ ಶುರುವಾಗಿದೆ. ಈ ವಿಷಯವು ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಅಮೆರಿಕದ ಪ್ಲ್ಯಾನ್ ಏನು
ಇನ್ನು ಅಂತರರಾಷ್ಟ್ರೀಯ ವಿಶ್ಲೇಷಕರ ಪ್ರಕಾರ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $120 ಮೀರಿದರೆ ಜಾಗತಿಕ ಆರ್ಥಿಕತೆ ಕುಸಿಯುತ್ತದೆ ಎಂಬ ಭಯದಿಂದ ಡೊನಾಲ್ಡ್ ಟ್ರಂಪ್ ಅವರು ಈ ಕದನ ವಿರಾಮಕ್ಕೆ ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಮತ್ತೊಂದೆಡೆ ಇರಾನ್‌ಸಂಪೂರ್ಣವಾಗಿ ಕತ್ತಲೆಯಲ್ಲಿ ಮುಳುಗಿದರೆ ತನ್ನ ಇಂಧನ ಸಂಪನ್ಮೂಲಗಳು ಸಂಪೂರ್ಣವಾಗಿ ನಾಶವಾಗುತ್ತವೆ ಎಂಬ ಕಳವಳದಿಂದ ಇರಾನ್ ಕೂಡ ಮಾತುಕತೆಗೆ ಒಲವು ತೋರಿರಬಹುದು. ಮುಂದಿನ 120 ಗಂಟೆಗಳು (5 ದಿನಗಳು) ವಿಶ್ವ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕವಾಗಿರಲಿದೆ ಎಂದು ಹೇಳಲಾಗಿದೆ.
ಡೊನಾಲ್ಡ್ ಟ್ರಂಪ್ ಟ್ವೀಟ್‌ನಲ್ಲಿ ಏನಿದೆ
ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತು ಇರಾನ್ ದೇಶದ ನಡುವೆ ಕಳೆದ ಎರಡು ದಿನಗಳಿಂದ ಅತ್ಯಂತ ಉತ್ತಮ ಹಾಗೂ ಫಲಪ್ರದ ಮಾತುಕತೆಗಳು ನಡೆದಿರುವುದನ್ನು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿನ ವೈಮನಸ್ಯಕ್ಕೆ ಸಂಪೂರ್ಣ ಹಾಗೂ ಅಂತಿಮ ಪರಿಹಾರ ಕಂಡುಕೊಳ್ಳುವ ಕುರಿತು ಈ ಚರ್ಚೆಗಳು ನಡೆದಿವೆ.
ಈ ಆಳವಾದ, ವಿವರವಾದ ಮತ್ತು ರಚನಾತ್ಮಕ ಮಾತುಕತೆಗಳ ಸ್ವರೂಪವನ್ನು ಆಧರಿಸಿ ಹಾಗೂ ವಾರಪೂರ್ತಿ ಮುಂದುವರಿಯಲಿರುವ ಚರ್ಚೆಗಳ ಯಶಸ್ಸಿನ ಮೇಲೆ ಮುಂದಿನ ನಡೆ ಅವಲಂಬಿತವಾಗಿದೆ. ಇರಾನ್‌ನ ವಿದ್ಯುತ್ ಘಟಕಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಯಾವುದೇ ಸೈನಿಕ ದಾಳಿಗಳನ್ನು ಐದು ದಿನಗಳ ಕಾಲ ಮುಂದೂಡಲು ನಾನು ಮಿಲಿಟರಿಗೆ ಸೂಚನೆ ನೀಡಿದ್ದೇನೆ.
ಈ ವಿಷಯಕ್ಕೆ ಗಮನ ನೀಡಿದಕ್ಕಾಗಿ ಧನ್ಯವಾದಗಳು.
- ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications