ನಿಮ್ಮ ಗ್ಯಾಸ್ ಸಿಲಿಂಡರ್‌ನಲ್ಲಿಯೂ A-26 ಅಥವಾ D-28 ಗುರುತುಗಳಿವೆಯಾ? ಈ ಕೋಡ್‌ಗಳ ಅರ್ಥ ತಿಳಿಯಿರಿ
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಸಾಮಾನ್ಯವಾಗಿ ಸಿಲಿಂಡರ್‌ನ ಮೇಲ್ಭಾಗದಲ್ಲಿರುವ ಲೋಹದ ರಿಂಗ್ ಮೇಲೆ A-24, B-26, C-25 ಅಥವಾ D-27 ಎಂಬ ಗುರುತುಗಳನ್ನು ಮುದ್ರಿಸಿರುತ್ತಾರೆ. ಆದರೆ ಇದನ್ನು ಅನೇಕ ಮಂದಿ ಗಮನಿಸಿರುವುದೇ ಇಲ್ಲ. ಗಮನಿಸಿದ್ದರೂ ಬಹುತೇಕ ಮಂದಿ ಅದನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ ಈ ಗುರುತುಗಳು ಸಿಲಿಂಡರ್ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವು ಸುರಕ್ಷತೆ ಮತ್ತು ನಿರ್ವಹಣೆಯಲ್ಲಿ ಮಹತ್ತರ ಕೆಲಸ ಮಾಡುತ್ತದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಹಾಕಲಾಗಿರುವ A-26 ಅಥವಾ D-28 ನಂತಹ ಕೋಡ್‌ಗಳು ಸಿಲಿಂಡರ್‌ನ ಬಳಕೆಯ ಕೊನೆಯ ಅವಧಿ ಅಂದರೆ ಅದರ ಎಕ್ಸ್ಪೈರಿ ಡೇಟ್ ಅನ್ನು ಸೂಚಿಸುತ್ತದೆ. ಇದು ಸಿಲಿಂಡರ್‌ನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಳಸುವ ಒಂದು ರೀತಿಯ ಕೋಡಿಂಗ್ ವ್ಯವಸ್ಥೆಯಾಗಿದೆ.
ಏನ್ನನು ಸೂಚಿಸುತ್ತವೆ ಈ ಗುರುತುಗಳು:
ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ರಿಂಗ್‌ನಲ್ಲಿ ಹಾಕಲಾಗಿರುವ ಈ ಅಕ್ಷರಗಳು ಮತ್ತು ಸಂಖ್ಯೆಗಳು ಸಿಲಿಂಡರ್‌ನ ಮುಂದಿನ ಸುರಕ್ಷತಾ ಪರೀಕ್ಷೆಯ ನಿಗದಿತ ದಿನಾಂಕವನ್ನು ಸೂಚಿಸುತ್ತವೆ. ಎಲ್‌ಪಿಜಿ ಸಿಲಿಂಡರ್‌ಗಳು ಬಳಕೆಗೆ ಸುರಕ್ಷಿತವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಪರಿಶೀಲಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಿಲಿಂಡರ್ ಮೇಲಿರುವ ಈ ಗುರುತುಗಳು ಸಾಮಾನ್ಯವಾಗಿ A-24 ಅಥವಾ B-26 ಹೀಗೆ ಒಂದು ಅಕ್ಷರದ ನಂತರ ಒಂದು ಸಂಖ್ಯೆಯನ್ನು ಹೊಂದಿರುತ್ತವೆ.

ಅಕ್ಷರ ಮತ್ತು ಸಂಖ್ಯೆಯ ಅರ್ಥ:
ಅಕ್ಷರವು ಸಿಲಿಂಡರ್ ತನ್ನ ಮುಂದಿನ ಸುರಕ್ಷತಾ ಪರೀಕ್ಷೆಗೆ ಒಳಗಾಗಬೇಕಾದ ವರ್ಷದ ತ್ರೈಮಾಸಿಕವನ್ನು ಸೂಚಿಸುತ್ತದೆ. ಇಲ್ಲಿ ವರ್ಷದ 12 ತಿಂಗಳುಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕು ತ್ರೈಮಾಸಿಕಗಳನ್ನು A, B, C, D ಎನ್ನುವ ಅಕ್ಷರಗಳಿಂದ ಗುರುತಿಸಲಾಗುತ್ತದೆ.
A: ಜನವರಿಯಿಂದ ಮಾರ್ಚ್‌ವರೆಗೆ
B: ಏಪ್ರಿಲ್‌ನಿಂದ ಜೂನ್‌ವರೆಗೆ
C: ಜುಲೈನಿಂದ ಸೆಪ್ಟೆಂಬರ್‌ವರೆಗೆ
D: ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಸಿಲಿಂಡರ್ ಅನ್ನು ಸುರಕ್ಷತಾ ಪರೀಕ್ಷೆಗೆ ಒಳಪಡಿಸಬಹುದು ಎನ್ನುವುದನ್ನು ಸೂಚಿಸುತ್ತದೆ.
ಇನ್ನು ಅಕ್ಷರದ ನಂತರ ಬರುವ ಸಂಖ್ಯೆಗಳು ಸಿಲಿಂಡರ್ ಪರೀಕ್ಷೆಗೆ ಒಳಗಾಗಬೇಕಾದ ವರ್ಷವನ್ನು ಸೂಚಿಸುತ್ತವೆ. ಉದಾಹರಣೆಗೆ, B-26 ಎಂದರೆ ಆ ಸಿಲಿಂಡರ್ ಅನ್ನು 2026ರ ಏಪ್ರಿಲ್ ಮತ್ತು ಜೂನ್ ನಡುವಿನ ಅವಧಿಯಲ್ಲಿ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅಂದರೆ A-26: ಈ ಸಿಲಿಂಡರ್ ಅನ್ನು 2026ರ ಮಾರ್ಚ್ ತಿಂಗಳೊಳಗೆ ಮರುಪರಿಶೀಲನೆಗೆ ಕಳುಹಿಸಬೇಕು.D-28: ಈ ಸಿಲಿಂಡರ್ ಅನ್ನು 2028ರ ಡಿಸೆಂಬರ್ ತಿಂಗಳೊಳಗೆ ಪರೀಕ್ಷೆಗೆ ಒಳಪಡಿಸಬೇಕು ಎಂದರ್ಥ.
ನಿಯಮಿತ ಪರೀಕ್ಷೆಯ ಅಗತ್ಯ:
ಎಲ್‌ಪಿಜಿ ಸಿಲಿಂಡರ್‌ಗಳು ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇಲ್ಲಿ ಗ್ಯಾಸ್ ಸೋರಿಕೆಯ ಭಯ ಇರುತ್ತದೆ. ಹಾಗಾಗಿ ಗ್ಯಾಸ್ ಲೀಕೇಜ್, ಜೊತೆಗೆ ತುಕ್ಕು ಅಥವಾ ರಚನಾತ್ಮಕ ಹಾನಿಯಂತಹ ಸಮಸ್ಯೆಗಳನ್ನು ಪತ್ತೆಹಚ್ಚಲು ಸಿಲಿಂಡರ್ ಅನ್ನು ನಿಯಮಿತ ಪರೀಕ್ಷೆಗೆ ಒಳಪಡಿಸುವುದು ಅತ್ಯಗತ್ಯವೂ ಹೌದು, ಅನಿವಾರ್ಯವೂ ಹೌದು.
ಒಂದು ವೇಳೆ ನಿಗದಿತ ಅವಧಿಯೊಳಗೆ ಈ ಸಿಲಿಂಡರ್ ಅನ್ನು ಪರೀಕ್ಷೆಗೆ ಒಳಪಡಿಸದಿದ್ದಲ್ಲಿ ಅಥವಾ ಅವಧಿಯನ್ನು ಮೀರಿದ ಸಿಲಿಂಡರ್ ಬಳಕೆ ಮಾಡಿದ್ದೇ ಆದಲ್ಲಿ ಅದು ಸುರಕ್ಷತಾ ಅಪಾಯಗಳನ್ನು ಹೆಚ್ಚಿಸಬಹುದು. ಆದ್ದರಿಂದ, ನಿಮ್ಮ ಮನೆಗೆ ಹೊಸ ಸಿಲಿಂಡರ್ ಡೆಲಿವೆರಿ ಆದಾಗ ತಪ್ಪದೇ ಅದರ ಮೇಲಿನ ಗುರುತನ್ನು ಪರಿಶೀಲಿಸಿಕೊಳ್ಳಿ. ಈ ಕೋಡ್ ಪ್ರಸ್ತುತ ವರ್ಷಕ್ಕಿಂತ ಮುಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.ಇದು ನಿಮ್ಮ ಗ್ಯಾಸ್ ಸಿಲಿಂಡರ್ ಮಾತ್ರವಲ್ಲ ನಿಮ್ಮ ಸುರಕ್ಷತೆಗೂ ಬಹಳ ಮುಖ್ಯವಾಗಿದೆ.
ಇನ್ನು ಗ್ಯಾಸ್ ಸಿಲಿಂಡರ್ ನಮ್ಮ ದೈನಂದಿನ ಬದುಕಿನಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಂಡಿರುವುದು ಅಗತ್ಯ.
ಸಿಲಿಂಡರ್ ಸುರಕ್ಷತೆಯನ್ನು ಪರಿಶೀಲಿಸುವ ಇತರ ವಿಧಾನಗಳು:
ರೆಗ್ಯುಲೇಟರ್ ರಿಂಗ್ ಪರೀಕ್ಷೆ: ಸಿಲಿಂಡರ್ ಜೋಡಿಸುವ ಮುನ್ನ ರೆಗ್ಯುಲೇಟರ್ ಕೂರುವ ಕಪ್ಪು ರಬ್ಬರ್ ರಿಂಗ್ ಸರಿಯಾಗಿದೆಯೇ ಎನ್ನುವುದನ್ನು ಸರಿಯಾಗಿ ಚೆಕ್ ಮಾಡಿಕೊಳ್ಳಿ.
ಸೋಪ್ ವಾಟರ್ ಟೆಸ್ಟ್: ಗ್ಯಾಸ್ ಲೀಕ್ ಆಗುತ್ತಿದೆ ಎನ್ನುವ ಸಣ್ಣ ಅನುಮಾನ ಬಂದರೂ ಆ ಜಾಗಕ್ಕೆ ಸಾಬೂನು ನೀರನ್ನು ಹಚ್ಚಿ. ಈ ಸಂದರ್ಭದಲ್ಲಿ ನೊರೆ ಎದ್ದರೆ ಗ್ಯಾಸ್ ಲೀಕ್ ಆಗುತ್ತಿದೆ ಎಂದರ್ಥ.
ಸುರಕ್ಷತಾ ಪೈಪ್: ನಿಮ್ಮ ಗ್ಯಾಸ್ ಪೈಪ್ ಐಎಸ್‌ಐ ಮುದ್ರೆ ಹೊಂದಿರಬೇಕು. ಪ್ರತಿ 3-5 ವರ್ಷಕ್ಕೊಮ್ಮೆ ಇದನ್ನು ಕಡ್ಡಾಯವಾಗಿ ಬದಲಾಯಿಸಿ.
ರೆಗ್ಯುಲೇಟರ್ ಆಫ್ ಮಾಡಿ: ಅಡುಗೆ ಮುಗಿದ ನಂತರ ಮತ್ತು ರಾತ್ರಿ ಮಲಗುವ ಮುನ್ನ ರೆಗ್ಯುಲೇಟರ್ ಸ್ವಿಚ್ ಆಫ್ ಮಾಡುವುದನ್ನು ಮರೆಯಬೇಡಿ.
ಗ್ಯಾಸ್ ಲೀಕ್ ಆದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ:
ಗಾಬರಿಯಾಗದೆ ಸಮಾಧಾನದಿಂದ ಇರಿ. ತಕ್ಷಣ ಸಿಲಿಂಡರ್‌ನ ರೆಗ್ಯುಲೇಟರ್ ಅನ್ನು ಆಫ್ ಮಾಡಿ, ಸೇಫ್ಟಿ ಕ್ಯಾಪ್ ಅನ್ನು ಸಿಲಿಂಡರ್ ಮೇಲೆ ಹಾಕಿ.
ಕಿಟಕಿ-ಬಾಗಿಲು ತೆರೆಯಿರಿ: ಗ್ಯಾಸ್ ಹೊರಹೋಗಲು ಮನೆಯ ಎಲ್ಲಾ ಕಿಟಕಿ ಮತ್ತು ಬಾಗಿಲುಗಳನ್ನು ತಕ್ಷಣವೇ ಸಂಪೂರ್ಣವಾಗಿ ತೆರೆಯಿರಿ.
ವಿದ್ಯುತ್ ಸ್ವಿಚ್ ಮುಟ್ಟಬೇಡಿ: ಯಾವುದೇ ಕಾರಣಕ್ಕೂ ವಿದ್ಯುತ್ ಸ್ವಿಚ್‌ಗಳನ್ನು ಆನ್ ಅಥವಾ ಆಫ್ ಮಾಡಬೇಡಿ.
ಬೆಂಕಿ ಹಚ್ಚಬೇಡಿ: ಬೆಂಕಿಪೆಟ್ಟಿಗೆ, ಲೈಟರ್, ಮೇಣದಬತ್ತಿ ಅಥವಾ ಅಗರಬತ್ತಿಗಳನ್ನು ಹಚ್ಚಬೇಡಿ.
ತುರ್ತು ಕರೆ ಮಾಡಿ: ನಿಮ್ಮ ಗ್ಯಾಸ್ ಏಜೆನ್ಸಿಗೆ ಅಥವಾ ಎಲ್‌ಪಿಜಿ ತುರ್ತು ಸಹಾಯವಾಣಿ ಸಂಖ್ಯೆ 1906 ಗೆ ಕರೆ ಮಾಡಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications