ಶ್ರೀಲಂಕಾ ಚುನಾವಣೆಯಲ್ಲಿ ಹೊಸ ಇತಿಹಾಸ ನಿರ್ಮಿಸಲಿರುವ ದಿಸ್ಸನಾಯಕೆ?
ಭಾರತದ ನೆರೆಯ ದೇಶ, ದ್ವೀಪರಾಷ್ಟ್ರ ಶ್ರೀಲಂಕಾ ಹೊಸ ಮನ್ವಂತರಕ್ಕೆ ಸಜ್ಜಾಗಿದೆ. ಇದೀಗ ಶ್ರೀಲಂಕಾ ದೇಶದಲ್ಲಿ ಹಲವು ವರ್ಷಗಳ ನಂತರ ಚುನಾವಣೆ ನಡೆಯುತ್ತಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಚುನಾವಣೆ ಭಾರತಕ್ಕೂ ಬಹುಮುಖ್ಯ ಎನ್ನಬಹುದು, ಯಾಕಂದ್ರೆ ಹಿಂದೂ ಮಹಾಸಾಗರದ ಮೇಲೆ ಭಾರತ ಹಿಡಿತ ಸಾಧಿಸಲು ಶ್ರೀಲಂಕಾ ಸಹಾಯ ಬಹುಮುಖ್ಯ. ಇಂತಹ ಸಮಯದಲ್ಲೇ ಭಾರತದ ಪರ ಒಲವು ಇರುವ ಅಧ್ಯಕ್ಷ ಶ್ರೀಲಂಕಾ ಅಧಿಕಾರ ವಹಿಸಿಕೊಂಡರೆ ಮಾತ್ರ ನಮ್ಮ ದೇಶಕ್ಕೆ ಲಾಭ. ಹಾಗಾದ್ರೆ ಇದೀಗ ಹೇಗಿದೆ ಶ್ರೀಲಂಕಾ ಚುನಾವಣೆ ಪರಿಸ್ಥಿತಿ?
ಶ್ರೀಲಂಕಾ ನೈಸರ್ಗಿಕವಾಗಿ ಸಂಪತ್ಭರಿತ ನಾಡು, ಆದರೂ ದ್ವೀಪರಾಷ್ಟ್ರ ಶ್ರೀಲಂಕಾ ಬಡತನ & ನಾನಾ ಸಮಸ್ಯೆಗಳ ಸುಳಿಯಲ್ಲಿ ನಲುಗಿ ಹೋಗಿದೆ. ಅದರಲ್ಲೂ 2022 ರಲ್ಲಿ ಶ್ರೀಲಂಕಾದ ಜನರು ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಹೋರಾಟ ನಡೆಸಿದ್ದರು. ಆರ್ಥಿಕವಾಗೂ ದಿವಾಳಿ ಆಗಿದ್ದ ಶ್ರೀಲಂಕಾ 2022 ರಲ್ಲಿ ನಾಗರಿಕ ದಂಗೆ ಎದುರಿಸಿತ್ತು. ಇಂತಹ ದೇಶದಲ್ಲಿ ಎಲೆಕ್ಷನ್ ನಡೆಯುತ್ತಿದೆ. ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ತಿರುವ ಶ್ರೀಲಂಕಾದಲ್ಲಿ ಈಗ ಅಧ್ಯಕ್ಷೀಯ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಹಾಗಾದ್ರೆ ಇದೀಗ ಮುನ್ನಡೆ ಕಾಯ್ದುಕೊಂಡ ಅಭ್ಯರ್ಥಿ ಯಾರು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

55 ವರ್ಷದ ರಾಜಕಾರಣಿಗೆ ಗೆಲುವು?
ನ್ಯಾಷನಲ್ ಪೀಪಲ್ಸ್ ಪವರ್ ಒಕ್ಕೂಟದ ಅಭ್ಯರ್ಥಿಯಾಗಿ & ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರೆಮುನಾ ಅಂದ್ರೆ ಜೆವಿಪಿ ಪಕ್ಷದಿಂದ ಶ್ರೀಲಂಕಾ ಚುನಾವಣೆ ಅಖಾಡ ಪ್ರವೇಶ ಮಾಡಿರುವ ಅನುರ ಕುಮಾರ ದಿಸ್ಸನಾಯಕೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚುನಾವಣೆ ಪ್ರಚಾರದಲ್ಲಿ, 55 ವರ್ಷದ ದಿಸ್ಸನಾಯಕೆ ಭ್ರಷ್ಟಾಚಾರ ವಿರೋಧಿ ಕಠಿಣ ಕ್ರಮಗಳನ್ನ ಶ್ರೀಲಂಕಾದಲ್ಲಿ ಜಾರಿಗೆ ತರುವ ಭರವಸೆ ನೀಡಿದ್ದರು.
ಇದೇ ಕಾರಣಕ್ಕೆ ಶ್ರೀಲಂಕಾದ ಜನರ ವಿಶ್ವಾಸ ಗಳಿಸಿದ್ದಾರೆ ದಿಸ್ಸನಾಯಕೆ ಎನ್ನಲಾಗಿದೆ. ಹಾಗೇ ಮತ್ತೊಂದು ಕಡೆ ಅಧಿಕಾರಕ್ಕೆ ಬಂದರೆ ತಮ್ಮ ನೀತಿಗಳಿಗೆ ಜನಾದೇಶ ಪಡೆಯಲು 45 ದಿನಗಳಲ್ಲಿ ಸಂಸತ್ ವಿಸರ್ಜನೆ ಮಾಡುವುದಾಗಿಯೂ ದಿಸ್ಸನಾಯಕೆ ಘೋಷಣೆ ಮಾಡಿದ್ದಾರೆ. ಹೀಗಾಗಿಯೇ ಕುತೂಹಲ ಡಬಲ್ ಆಗುತ್ತಿದೆ. ಅಲ್ಲದೆ ಯಾರಿಗೆ ಅಧಿಕಾರ ಸಿಗುತ್ತೆ ಅನ್ನೋದನ್ನ ಪ್ರಪಂಚ ಎದುರು ನೋಡುತ್ತಿದೆ.
ಒಟ್ಟು 1.7 ಕೋಟಿ ಮತದಾರರು!
ದಿಸ್ಸನಾಯಕೆಗೆ ಒಟ್ಟಾರೆ 23,62,751 ಮತಗಳು ಸಿಕ್ಕಿದ್ದು, 11:45ರ ತನಕ ನಡೆದಿರುವ ಮತ ಎಣಿಕೆಯಲ್ಲಿ ಶೇಕಡಾ 40.13 ರಷ್ಟು ಮತ ಗಳಿಸಿದ್ದಾರೆ ದಿಸ್ಸನಾಯಕೆ. ಮತ್ತೊಂದು ಕಡೆ, ವಿರೋಧ ಪಕ್ಷ ನಾಯಕ ಸಾಜಿತ್ ಪ್ರೇಮದಾಸ ಅವರು ಶೇಕಡಾ 33.3 ರಷ್ಟು ಮತವನ್ನು ಅಂದ್ರೆ 19,60,647 ಮತಗಳನ್ನ ಪಡೆದಿದ್ದಾರೆ. ಹಾಗೇ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ 3ನೇ ಸ್ಥಾನದಲ್ಲಿ ಇದ್ದು, ಶೇಕಡಾ 17.4 ರಷ್ಟು ಮತ ಗಳಿಸಿದ್ದಾರೆ. ಅಂದ್ರೆ ಈವರೆಗೂ 10,24,517 ಮತಗಳು ರಾನಿಲ್ ವಿಕ್ರಮಸಿಂಘೆ ಅವರಿಗೆ ಬಿದ್ದಿವೆ.
ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ. ಸಾಜಿತ್ ಪ್ರೇಮದಾಸ ಭಾರತದ ಪರ ನಿಲುವು ಹೊಂದಿದ್ದಾರೆ ಎನ್ನಲಾಗಿದೆ. ಶ್ರೀಲಂಕಾ ಚುನಾವಣೆಯಲ್ಲಿ ಒಟ್ಟಾರೆ 1.7 ಕೋಟಿ ಮತದಾರರು ಇದ್ದರು, ಈ ಪೈಕಿ ಶೇಕಡಾ 75 ರಷ್ಟು ಮತದಾರರು ತಮ್ಮ ಮತ ಚಲಾವಣೆ ಮಾಡಿದ್ದರು. ಹೀಗಾಗಿ ಕುತೂಹಲ ತೀವ್ರವಾಗಿ ಹೆಚ್ಚಾಗುತ್ತಿದ್ದು, ಫಲಿತಾಂಶವನ್ನ ತಿಳಿಯಲು ಕಾದು ನೋಡಬೇಕಿದೆ.












Click it and Unblock the Notifications