ಯುದ್ಧ ನಿಲ್ಲಿಸಲು ಮುಂದಾದ ವಿಶ್ವಸಂಸ್ಥೆಗೆ ಅಮೆರಿಕ ಅಡ್ಡಗಾಲು!
ಅಮೆರಿಕ ತನ್ನ ಬುದ್ಧಿ ಬಿಡೋದಿಲ್ಲ ಅಂತಾ ಕಾಣುತ್ತೆ, ಯಾಕಂದ್ರೆ ಅವರಿವರ ನಡುವೆ ಈ ದೇಶ ತಂದಿಟ್ಟು ಆಟ ನೋಡುತ್ತೆ ಅನ್ನೋ ಆರೋಪ ಇದೆ. ಅದರಲ್ಲೂ ಅಮೆರಿಕ ವೆಪನ್ಸ್ ಮಾರಾಟಕ್ಕೆ ಹೀಗೆ ಯುದ್ಧಗಳನ್ನ ಬೆಂಬಲಿಸುತ್ತೆ ಅನ್ನೋ ಗಂಭೀರ ಆರೋಪ ಕೂಡ ಇದೆ. ಹೀಗಿದ್ದಾಗ ಇಸ್ರೇಲ್ ಹಾಗೂ ಹಮಾಸ್ ಯುದ್ಧದಲ್ಲಿ ಕೂಡ ಅಮೆರಿಕ ತನ್ನ ದ್ವಂದ್ವ ನೀತಿ ಮುಂದುವರಿಸಿದೆ.
ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ಬೆಂಕಿ ಹೊತ್ತಿಕೊಂಡು ಬರೋಬ್ಬರಿ 2 ತಿಂಗಳ ಸಮಯ ಕಳೆದು ಹೋಗಿದೆ. ಹೀಗಿದ್ದಾಗ ಹೇಗಾದರೂ ಮಾಡಿ ಈ ಯುದ್ಧಕ್ಕೆ ಬ್ರೇಕ್ ಹಾಕಿ, ಲಕ್ಷಾಂತರ ಜನರ ಜೀವವನ್ನ ಕಾಪಾಡಬೇಕು ಅನ್ನೋದು ವಿಶ್ವಸಂಸ್ಥೆಯ ಆಶಯವಾಗಿತ್ತು. ಆದರೆ ಆಗಿದ್ದೇ ಬೇರೆ, ಸುಮ್ಮನೆ ಇರದ 'ದೊಡ್ಡಣ್ಣ' ಎಂಬ ಬಿರುದು ಪಡೆದ ಅಮೆರಿಕದ ಸರ್ಕಾರ ಅಡ್ಡಗಾಲು ಹಾಕಿದೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಶಾಂತಿ ಪಾಠ ಮಾಡುತ್ತಿರುವ ದೊಡ್ಡಣ್ಣ ಅಮೆರಿಕದ ಈ ದ್ವಂದ್ವ ನೀತಿ ಬಗ್ಗೆ ಆಕ್ರೋಶ ಮೊಳಗಿದೆ. ಹಾಗಾದರೆ ಇದೀಗ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಆಗಿದ್ದು ಏನು?

ಬ್ರಿಟನ್ ಎಸ್ಕೇಪ್, ಅಮೆರಿಕ ಅಡ್ಡಗಾಲು!
ಅಷ್ಟಕ್ಕೂ ಭದ್ರತಾ ಮಂಡಳಿ ಸದಸ್ಯರು ಸೇರಿ ಅನೇಕ ರಾಷ್ಟ್ರಗಳ ಬೆಂಬಲದ ಜೊತೆ ಗಾಜಾದಲ್ಲಿ ತಕ್ಷಣ ಕದನ ವಿರಾಮ ಘೋಷಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಮಾನವೀಯ ನೆಲೆಯಲ್ಲಿ ತಕ್ಷಣ ಕದನ ವಿರಾಮ ಘೋಷಿಸುವ ಭದ್ರತಾ ಮಂಡಳಿಯ ನಿರ್ಣಯಕ್ಕೆ ಅಮೆರಿಕ ಅಡ್ಡಗಾಲು ಹಾಕಿದೆ. ಭದ್ರತಾ ಮಂಡಳಿ ನಿರ್ಣಯಕ್ಕೆ ವಿರುದ್ಧವಾಗಿ ಅಮೆರಿಕ ತನ್ನ 'ವಿಟೋ' ಪವರ್ ಬಳಸಿದೆ. ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ 13 ದೇಶಗಳು ನಿರ್ಣಯದ ಪರ ಮತ ಹಾಕಿದ್ದರೆ ಅಮೆರಿಕ ಮಾತ್ರ ಉಲ್ಟಾ ಮತ ಹಾಕಿದೆ. ಬ್ರಿಟನ್ ಮತದಾನದಿಂದ ದೂರ ಉಳಿದು ಹೊಸ ಆಟ ಶುರು ಮಾಡಿದೆ.
ಯಾಕ್ ಹಿಂಗೆ ಮಾಡಿತು ಅಮೆರಿಕ?
ಅಮೆರಿಕದ ನಿರ್ಣಯದ ಕುರಿತು ಮಾತನಾಡಿರುವ, ಅಮೆರಿಕದ ಉಪ ರಾಯಭಾರಿ ರಾಬರ್ಟ್ ವುಡ್ 'ವಿಟೋ' ಪವರ್ ಬಳಸಿದ್ದು ಯಾಕೆ? ಅಂತಾ ತಿಳಿಸಿದ್ದಾರೆ. ಹೀಗೆ, ಕದನ ವಿರಾಮ ಘೋಷಣೆ ಮಾಡಿದರೆ ಗಾಜಾ ಮೇಲೆ ಮತ್ತೆ ಹಮಾಸ್ ನಿಯಂತ್ರಣ ಸಾಧಿಸಿಬಿಡುತ್ತೆ. ಭವಿಷ್ಯದ ಮತ್ತೊಂದು ಯುದ್ಧಕ್ಕೆ ಇದು ಅವಕಾಶ ಮಾಡಿಕೊಡಲಿದೆ ಅಂತಾ ಸಮಜಾಯಿಷಿ ನೀಡಿದ್ದಾರೆ. ಅಲ್ಲದೆ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಜನರ ಶಾಂತಿ ಮುಖ್ಯ. ಹೀಗಿದ್ದರೂ ಹಮಾಸ್ ಉಗ್ರ ಪಡೆ ಮಾತ್ರ ದೀರ್ಘ ಕಾಲದ ಶಾಂತಿ ಬಯಸುತ್ತಿಲ್ಲ, ಇದೇ ಕಾರಣಕ್ಕೆ ಅಮೆರಿಕದ ತಕ್ಷಣದ ಕದನ ವಿರಾಮ ನಿರ್ಣಯ ಬೆಂಬಲಿಸಿಲ್ಲ ಎಂದಿದ್ದಾರೆ.

ಎಡವಟ್ಟು ಮಾಡಿತಾ ಅಮೆರಿಕ ಸರ್ಕಾರ?
ಒಟ್ನಲ್ಲಿ ಯುದ್ಧ ನಿಲ್ಲಬೇಕು ಅಂತಾ ಇಡೀ ಜಗತ್ತು ಬಯಸುತ್ತಿದ್ದರೆ, ಹಮಾಸ್ & ಇಸ್ರೇಲ್ ಜಗಳ ಇನ್ನೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದನ್ನ ಬಿಡಿ ಅಮೆರಿಕ ಈಗ ಕೈಗೊಂಡಿರುವ ನಿರ್ಧಾರ, ರಷ್ಯಾ & ಉಕ್ರೇನ್ ಯುದ್ಧದ ಮೇಲೂ ಪರಿಣಾಮ ಬೀರುವ ಸಾಧ್ಯತೆಯು ಇದೆ ಅಂತಾ ಹೇಳಲಾಗುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯದ ಬೆಂಕಿ ಯುರೋಪ್‌ಗೂ ಹಬ್ಬುವ ಭಯ ಆವರಿಸಿದೆ. ಅಮೆರಿಕದ ನಿರ್ಧಾರದ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ.
ಸಾವಿರಾರು ಜನರು ಯುದ್ಧಕ್ಕೆ ಬಲಿ
ಹಮಾಸ್ ಉಗ್ರರು ಮಾಡಿದ್ದ ತಪ್ಪಿಗೆ 63 ದಿನದಿಂದ ಗಾಜಾದ ಸಾಮಾನ್ಯ ಜನರು ನರಳುತ್ತಿದ್ದು ಈಗಾಗಲೇ 17,000ಕ್ಕೂ ಹೆಚ್ಚು ಜನರು ಯುದ್ಧಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಇಸ್ರೇಲ್ 1,200 ಜನರನ್ನ ಕಳೆದುಕೊಂಡಿದೆ. ಕೇವಲ 63 ದಿನದ ಅಂತರದಲ್ಲಿಇಷ್ಟು ಸಾವು ನೋಡಿ ಜಗತ್ತಿಗೆ ಚಿಂತೆ ಶುರುವಾಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಈ ಯುದ್ಧ ಸಂಪೂರ್ಣ ನಿಲ್ಲಿಸಬೇಕು ಎಂಬ ಒತ್ತಾಯ ಜೋರಾಗಿದೆ. ಹೀಗಿದ್ದಾಗ ಯುದ್ಧ ನಿಲ್ಲಿಸುವ ಪ್ರಯತ್ನಕ್ಕೆ ಈಗ ಅಮೆರಿಕ ಅಡ್ಡಿ ಮಾಡುತ್ತಿದೆ. ಹೀಗೆ ಇದೆಲ್ಲಾ ಎಲ್ಲಿ ಬಂದು ನಿಲ್ಲುತ್ತೋ ಮುಂದೆ ಏನೆಲ್ಲಾ ಅವಾಂತರ ಸೃಷ್ಟಿಯಾಗುತ್ತೋ ಗೊತ್ತಿಲ್ಲ.












Click it and Unblock the Notifications