India VS Canada: ಭಾರತದ ರಾಜತಾಂತ್ರಿಕರಿಗೆ ಕೆನಡಾದಲ್ಲಿ ಭಯದ...
ಭಾರತ & ಕೆನಡಾ ನಡುವೆ ಇದ್ದ ಅತ್ಯುತ್ತಮ ಸಂಬಂಧ ಈಗ ಮುರಿದು ಹೋಗಿದೆ. ಇದು ಯಾವ ಹಂತಕ್ಕೆ ಹೋಗಿದೆ ಎಂದರೆ, ಒಂದು ಕಾಲದಲ್ಲಿ ಅತ್ಯಾಪ್ತ ದೇಶವಾಗಿದ್ದ ಎರಡೂ ದೇಶಗಳು ಒಬ್ಬರನ್ನ ಕಂಡ್ರೆ ಮತ್ತೊಬ್ಬರು ಗುಟುರು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲೇ ಕೆನಡಾದ ಬಗ್ಗೆ ಭಾರತದ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆ ತೀವ್ರ ಸಂಚಲನ ಸೃಷ್ಟಿ ಮಾಡಿದೆ.
ಕೆನಡಾ ಪ್ರಧಾನಿ ಟ್ರುಡೋ ಮಾಡಿದ ಎಡವಟ್ಟು ಈಗ ಭಾರತ ಹಾಗೂ ಕೆನಡಾ ಸಂಬಂಧ ಹಾಳು ಮಾಡಿದೆ. ಸೂಕ್ತ ಸಾಕ್ಷ್ಯಾಧಾರ ಇಲ್ಲದೆ, ಖಲಿಸ್ತಾನಿ ಉಗ್ರನ ಹತ್ಯೆ ಆರೋಪವನ್ನು ಭಾರತದ ಅಧಿಕಾರಿಗಳ ತಲೆಗೆ ಕಟ್ಟಲು ಟ್ರುಡೋ ಮುಂದಾಗಿದ್ದರು. ಇದು ಭಾರತ ಮತ್ತು ಕೆನಡಾ ನಡುವೆ ಕಿಚ್ಚು ಹೊತ್ತಿಸಿತ್ತು. ಅಲ್ಲದೆ ಇಷ್ಟುದಿನ ಕೆನಡಾ ನೆಲದಲ್ಲಿ ಭಾರತೀಯರು ಹಾಗೂ ಭಾರತದ ರಾಜತಾಂತ್ರಿಕರು ಖಲಿಸ್ತಾನಿಗಳಿಂದ ಎದುರಿಸುತ್ತಿದ್ದ ಸಮಸ್ಯೆ ಕೂಡ ಈಗ ಜಗತ್ತಿಗೆ ತಿಳಿಯುವಂತಾಗಿದೆ. ಖುದ್ದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ಬಗ್ಗೆ ಗಂಭೀರ ಹೇಳಿಕೆ ನೀಡಿದ್ದಾರೆ.

ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ವಾತಾವರಣ
ಹೌದು, ಕೆನಡಾದಲ್ಲಿ ಖಲಿಸ್ತಾನಿ ಉಗ್ರರ ಹಾವಳಿ ಹೇಗಿದೆ ಎಂದರೆ ಅಲ್ಲಿ ವಾಸ ಮಾಡುವ ಭಾರತೀಯರಿಗೆ ನೆಮ್ಮದಿಯೇ ಇಲ್ಲ. ಭಾರತೀಯರ ಜೊತೆಗೆ ಭಾರತದ ರಾಜತಾಂತ್ರಿಕರಿಗೂ ಇದೇ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕೆನಡಾ ನೆಲದಲ್ಲಿ ಭಾರತೀಯರ ಪರಿಸ್ಥಿತಿ ಕುರಿತಾಗಿ ವಿದೇಶಾಂಗ ಸಚಿವರು ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ. ಕೆನಡಾದ ನೆಲದಲ್ಲಿ ಭಾರತದ ರಾಜತಾಂತ್ರಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮುಕ್ತವಾಗಿ ಮಾತನಾಡಿರುವ ಜೈಶಂಕರ್ ಭಾರತದ ತಂಟೆಗೆ ಬಂದ ಕೆನಡಾಗೆ ಪೆಟ್ಟು ಕೊಟ್ಟಿದ್ದಾರೆ. ಭಾರತದ ವಿರುದ್ಧವೇ ಆರೋಪ ಮಾಡುತ್ತಿರುವ ಕೆನಡಾ ಪ್ರಧಾನಿ ಟ್ರುಡೋ ಸರ್ಕಾರದ ಬಣ್ಣವನ್ನ ಬಯಲು ಮಾಡಿದ್ದಾರೆ.
ಖಲಿಸ್ತಾನಿ ಉಗ್ರರಿಗೂ ಎಚ್ಚರಿಕೆ ಸಂದೇಶ
ಅಮೆರಿಕದ ವಾಷಿಂಗ್ಟನ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಕೆನಡಾದ ನಿಜ ಬಣ್ಣ ಬಯಲು ಮಾಡಿದ ಎಸ್. ಜೈಶಂಕರ್, ಕೆನಡಾದಲ್ಲಿ ಇರುವ ಭಾರತೀಯ ರಾಜತಾಂತ್ರಿಕರಿಗೆ ಹಿಂಸಾಚಾರ ಮತ್ತು ಬೆದರಿಕೆಯ ವಾತಾವರಣವು ಕಂಡುಬಂದಿದೆ ಎಂದಿದ್ದಾರೆ. ಅಲ್ದೆ ವಾಕ್ ಸ್ವಾತಂತ್ರ್ಯ ಇದೆ ಅಂತಾ ರಾಜತಾಂತ್ರಿಕರಿಗೂ ಬೆದರಿಕೆ ಹಾಕುವುದು ಸರಿ ಅಲ್ಲ, ಅಂತಾ ನಾನು ಭಾವಿಸುತ್ತೇನೆ. ಭಾರತ ಮತ್ತು ಕೆನಡಾ ಸಂಬಂಧ ಉದ್ವಿಗ್ನಗೊಂಡಿದೆ. ಕೆನಡಾದಲ್ಲಿರುವ ಸಿಖ್ ಪ್ರತ್ಯೇಕತಾವಾದಿಗಳ ಉಪಸ್ಥಿತಿ ಖಾಲಿಸ್ತಾನ ಚಳುವಳಿ ಜೀವಂತವಾಗಿಟ್ಟಿದೆ. ಭಾರತದಿಂದಲೇ ಸ್ವತಂತ್ರ ಸಿಖ್ ರಾಜ್ಯ ಬೇರ್ಪಡಿಸುವ ಬೇಡಿಕೆ ಇದೆ ಎನ್ನುವ ಮೂಲಕ ಖಲಿಸ್ತಾನಿ ಉಗ್ರರಿಗೂ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.

ಕೆನಡಾ ಪ್ರಧಾನಿ ಆರೋಪ ಏನು?
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆದರೆ ಕೊಲೆಯನ್ನು ಭಾರತದ ಏಜೆಂಟ್‌ಗಳೇ ಮಾಡಿದ್ದಾರೆ ಎಂಬ ಆರೋಪವನ್ನ ಜಸ್ಟಿನ್ ಟ್ರುಡೋ ಮಾಡಿದ್ರು. ಇದು ಭಾರತ ಸರ್ಕಾರವನ್ನ ಕೂಡ ಕೋಪಗೊಳ್ಳುವಂತೆ ಮಾಡಿತ್ತು. ಸೂಕ್ತ ಸಾಕ್ಷ್ಯ ಇಲ್ಲದೆ ಈ ರೀತಿಯಾಗಿ ಆರೋಪಗಳನ್ನ ಮಾಡುವುದು ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈಗ ನೇರವಾಗಿ ವಿದೇಶಾಂಗ ಸಚಿವರೇ ಕೆನಡಾಗೆ ಶಾಕ್ ಕೊಟ್ಟಿದ್ದಾರೆ.
ಒಟ್ಟಾರೆ ಹೇಳುವುದಾದರೆ ಪರಿಸ್ಥಿತಿ ಕೈಮೀರಿ ಹೋಗಿದ್ದು, ಇದನ್ನ ಸರಿಪಡಿಸಲು ಎರಡೂ ದೇಶಗಳು ತುರ್ತಾಗಿ ಮಾತುಕತೆ ನಡೆಸಬೇಕಿದೆ. ಅದರಲ್ಲೂ ಭಾರತದ ವಿರುದ್ಧ ಕೆನಡಾದ ಪ್ರಧಾನಿ ಮಾಡಿರುವ ಆರೋಪ ಹಿಂದಕ್ಕೆ ಪಡೆದು, ಚರ್ಚೆ ಮಾಡಬೇಕಿದೆ. ಇಲ್ಲದವಾದರೆ ಖಲಿಸ್ತಾನಿ ಉಗ್ರರ ಕಾರಣಕ್ಕೆ ಎರಡು ದೈತ್ಯ ದೇಶಗಳ ನಡುವಿನ ಸಂಬಂಧ ಹಾಳಾಗುವುದು ಗ್ಯಾರಂಟಿ. ಆದರೆ ಈಗಲಾದರೂ ಕೆನಡಾ ಪ್ರಧಾನಿಗೆ ಸತ್ಯದ ಅರಿವು ಆಗುತ್ತಾ? ಗೊತ್ತಿಲ್ಲ.












Click it and Unblock the Notifications