ಅಮೆರಿಕ ಜೊತೆ ಸೇರಿದ್ದಕ್ಕೆ ಕೆಂಡ: ಯುದ್ಧಕ್ಕೆ ಸರ್ವಾಧಿಕಾರಿ ಸಿದ್ಧ?
ಸಿಯೋಲ್, ದ.ಕೊರಿಯಾ: ಏಷ್ಯಾ ಖಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತಹ ಪರಿಸ್ಥಿತಿ ಎದುರಾಗಿದೆ. ಅಕ್ಕಪಕ್ಕದ ದೇಶಗಳ ಮಧ್ಯೆ ದ್ವೇಷದ ವಾತಾವರಣ ಬೆಳೆಯುತ್ತಲೇ ಇದೆ. ಇದೀಗ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ನಡುವಿನ ಕಿತ್ತಾಟ ತಾರಕಕ್ಕೆ ಏರಿದ್ದು. ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ಆವರಿಸಿದ್ದು, ದಿಢೀರ್ ಎರಡೂ ದೇಶಗಳ ಮಧ್ಯೆ ಮಾತುಕತೆಯೇ ನಿಂತು ಹೋಗಿದೆ.
ಅಮೆರಿಕ ಜೊತೆ ಸೇರಿ ದಕ್ಷಿಣ ಕೊರಿಯಾ ಜಂಟಿ ಸಮರಭ್ಯಾಸ ನಡೆಸಿದ ನಂತರ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪಿತ್ತ ನೆತ್ತಿಗೇರಿತ್ತು. ಈ ಘಟನೆ ಬಳಿಕ ಹೊಸ ಪರಮಾಣು ಕ್ಷಿಪಣಿ ಪರೀಕ್ಷೆ ನಡೆಸಿ ಪರೋಕ್ಷ ಎಚ್ಚರಿಕೆ ರವಾನಿಸಿತ್ತು ಉತ್ತರ ಕೊರಿಯಾ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಕ್ಷಿಣ ಕೊರಿಯಾ ಜೊತೆಗಿನ ಸಂಪರ್ಕವನ್ನೇ ಸಂಪೂರ್ಣವಾಗಿ ಕಡಿದುಕೊಂಡಿದೆ. ಕಳೆದ ಕೆಲವು ದಿನಗಳಿಂದ ಎರಡೂ ದೇಶಗಳ ನಡುವೆ ಪ್ರತಿನಿತ್ಯ ನಡೆಯುತ್ತಿದ್ದ ದೂರವಾಣಿ ಮಾತುಕತೆ ನಿಂತು ಹೋಗಿದ್ದು, ಯುದ್ಧದ ಭೀತಿ ಆವರಿಸಿದೆ.

ರೊಚ್ಚಿಗೆದ್ದ ಸರ್ವಾಧಿಕಾರಿ ಕಿಮ್:
ಅಮೆರಿಕ ಜೊತೆ ಸೇರಿ ದಕ್ಷಿಣ ಕೊರಿಯಾ ಸಮರಾಭ್ಯಾಸ ನಡೆಸಿದ ನಂತರ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೋಪ ಮಿತಿಮೀರಿದೆ. ಅಮೆರಿಕ ಮತ್ತು ತನ್ನ ನೆರೆಯ ದೇಶ ಒಟ್ಟೊಟ್ಟಿಗೆ ಸೇರಿ ಪರೋಕ್ಷವಾಗಿ ಬೆದರಿಕೆ ಹಾಕುತ್ತಿರುವುದಾಗಿ ಉತ್ತರ ಕೊರಿಯಾ ಆಕ್ರೋಶ ಹೊರಹಾಕಿತ್ತು. ಈ ಸಿಟ್ಟನ್ನು ಹೊಸ ಪರಮಾಣು ಕ್ಷಿಪಣಿಯ ಮೂಲಕ ತೋರಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ. ಈಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಕಳೆದ 3 ದಿನಗಳಿಂದ ಎರಡೂ ರಾಷ್ಟ್ರಗಳ ನಡುವಿನ ಮಾತುಕತೆ ನಿಲ್ಲಿಸಿದ್ದಾನೆ ಎನ್ನಲಾಗುತ್ತಿದೆ.
ಇದೇ ಮೊದಲು ಹೀಗಾಯ್ತಾ?
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಮಧ್ಯೆ 2018ಕ್ಕೆ ಮೊದಲು ಮಾತುಕತೆಯೇ ಇರಲಿಲ್ಲ. ಆದರೆ 2018ರ ನಂತರ ಹಲವು ಶಾಂತಿ ಒಪ್ಪಂದ ನಡೆದು, ಎರಡೂ ರಾಷ್ಟ್ರಗಳ ನಡುವೆ ನಿಯಮಿತವಾಗಿ ಪ್ರತಿನಿತ್ಯ ಸಂವಹನೆ ನಡೆಯುತ್ತಿತ್ತು. ಎರಡೂ ರಾಷ್ಟ್ರಗಳ ಸೇನಾಧಿಕಾರಿಗಳು, ಪ್ರತಿದಿನ ಬೆಳಗ್ಗೆ 9 ಗಂಟೆ ಹಾಗೂ ಸಂಜೆ 5 ಗಂಟೆಗೆ ಕರೆ ಮಾಡಿ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಗಡಿಯಲ್ಲಿನ ಪರಿಸ್ಥಿತಿ ಬಗ್ಗೆ ಎರಡೂ ಕಡೆಯಿಂದ ಮಾಹಿತಿ ವಿನಿಮಯ ಆಗುತ್ತಿತ್ತು. ಆದರೆ ಇದೀಗ ದಿಢೀರ್ ಮಾತುಕತೆ ಬಂದ್ ಆಗಿದ್ದು, ದಕ್ಷಿಣ ಕೊರಿಯಾ ಕರೆ ಮಾಡಿದರೂ ಉತ್ತರ ಕೊರಿಯಾ ಸೇನಾಧಿಕಾರಿಗಳು ಉತ್ತರ ನೀಡುತ್ತಿಲ್ಲ ಎನ್ನಲಾಗಿದೆ.

ನಡುಗುತ್ತಿದೆ ದಕ್ಷಿಣ ಕೊರಿಯಾ!
'ಪಕ್ಕದ ದೇಶದಲ್ಲಿ ಕೂತಿರುವುದು ಮೊದಲೇ ಮೆಂಟಲ್ ಗಿರಾಕಿ, ಈಗಾಗಲೇ ಪರಮಾಣು ಶಸ್ತ್ರಾಸ್ತ್ರ ತೋರಿಸುತ್ತಾ ಬೆದರಿಕೆ ಬೇರೆ ಹಾಕುತ್ತಿದ್ದಾನೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಮೇಲೆ ನ್ಯೂಕ್ಲಿಯರ್ ದಾಳಿ ನಡೆದರೆ ಕಥೆ ಏನು?' ಅನ್ನೋ ಚಿಂತೆ ದಕ್ಷಿಣ ಕೊರಿಯಾ ನಾಯಕರನ್ನು ಕಾಡುತ್ತಿದೆ. ಹೀಗಾಗಿ ಪದೇ ಪದೆ ಉತ್ತರ ಕೊರಿಯಾ ಅಧಿಕಾರಿಗಳನ್ನು ಸಂಪರ್ಕಿಸಲು ಕರೆ ಮಾಡುತ್ತಿದೆ ದಕ್ಷಿಣ ಕೊರಿಯಾ. ಆದರೆ ಕಳೆದ ಮೂರು ದಿನಗಳಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ.
ಹೀಗೆ ಎರಡು ಕೊರಿಯಾ ರಾಷ್ಟ್ರಗಳ ನಡುವಿನ ಭಿನ್ನಮತ ಮತ್ತೆ ಮತ್ತೆ ಜಗತ್ತಿಗೆ ತಲೆನೋವು ತಂದೊಡ್ಡುತ್ತಿದೆ. ಒಂದೆಡೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಪಂಚದ ನಿದ್ದೆಗೆಡಿಸಿದ್ದರೆ, ಇನ್ನೊಂದು ಕಡೆ ಉ.ಕೊರಿಯಾ ಹಾಗೂ ದ.ಕೊರಿಯಾ ನಡುವೆ ಇಂತಹದ್ದೇ ಉದ್ವಿಗ್ನ ಸ್ಥಿತಿ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲಾ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸ್ಪಷ್ಟವಾಗಲಿದೆ.












Click it and Unblock the Notifications