ಹಮಾಸ್ & ಇಸ್ರೇಲ್ ಯುದ್ಧದಲ್ಲಿ 7,650ಕ್ಕೆ ತಲುಪಿದ ಸಾವಿನ ಸಂಖ್ಯೆ!
ಹಮಾಸ್ ವಿರುದ್ಧ ಇಸ್ರೇಲ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯು ಈಗ ರಕ್ತದ ಕೋಡಿ ಹರಿಸಿದೆ. ಅದರಲ್ಲೂ ಗಾಜಾಪಟ್ಟಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆರೋಪ, ಪ್ರತ್ಯಾರೋಪದ ನಡುವೆ ಎರಡೂ ಕಡೆ ಸೇರಿ ಒಟ್ಟಾರೆ 7,650 ಜನಗಳು ಮೃತಪಟ್ಟಿದ್ದಾರೆ. ಹಾಗಾದರೆ ಇಷ್ಟು ಸಾವಿನ ನಡುವೆ, ಆಸ್ಪತ್ರೆ ಸೇರಿ ನರಳುತ್ತಿರುವ ಜನರ ಸಂಖ್ಯೆ ಎಷ್ಟು ಗೊತ್ತಾ?
ತನ್ನ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ ಹಿನ್ನೆಲೆ ಇಸ್ರೇಲ್ ಸೇನೆ ಪ್ರತಿಕಾರಕ್ಕೆ ದಾಳಿ ಆರಂಭಿಸಿದೆ. ಹೀಗೆ ಇಸ್ರೇಲ್ ಸೇನೆ ಎಲ್ಲಾ ರೀತಿಯಲ್ಲೂ, ಅಂದ್ರೆ ಭೂದಾಳಿ, ವೈಮಾನಿಕ ದಾಳಿ ಸೇರಿದಂತೆ ಜಲದಾಳಿಯನ್ನೂ ನಡೆಸುತ್ತಿದೆ. ಹೀಗಾಗಿ ಹಮಾಸ್ ಉಗ್ರರು ಹೈರಾಣಾಗಿ ಹೋಗಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ಸಾವಿನ ಸಂಖ್ಯೆ ಕೂಡ ಈಗ ಹೆಚ್ಚಾಗುತ್ತಿದೆ. ಹಾಗೇ ದಿಢೀರ್ ನಡೆಯುತ್ತಿರುವ ಕ್ಷಿಪಣಿ ದಾಳಿಯ ಪರಿಣಾಮ ಅವಶೇಷದ ಅಡಿಯಲ್ಲಿ ಸಿಲುಕಿ ಪ್ರಾಣ ಬಿಡುತ್ತಿರುವ ಗಾಜಾ ನಿವಾಸಿಗಳ ಸಂಖ್ಯೆ ಹಿಡಿತಕ್ಕೆ ಸಿಗುತ್ತಿಲ್ಲ.

19,450 ಮಂದಿ ಆಸ್ಪತ್ರೆಗೆ ದಾಖಲು
ಅಂದಹಾಗೆ ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್ ಮೇಲೆ 5000ಕ್ಕೂ ಹೆಚ್ಚು ರಾಕೆಟ್ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನ ಮತ್ತು ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು ಹೀಗೆ ಮೂರು ವಾರದಿಂದ ನಡೆಯುತ್ತಿರುವ ಕಿತ್ತಾಟ ತೀವ್ರವಾಗಿದ್ದು. ಈವರೆಗೂ ಸುಮಾರು 19,450 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಸಾಲದು ಎಂಬಂತೆ, ಈವರೆಗೆ ನಾಶವಾಗಿ ಹೋಗಿರುವ ಮನೆಗಳ ಸಂಖ್ಯೆ ಎಷ್ಟು ಗೊತ್ತಾ?
1,77,781 ಜನವಸತಿ ಕಟ್ಟಡ ನೆಲಸಮ
ಹೌದು, ಈಗ ಸಿಗುತ್ತಿರುವ ಮಾಹಿತಿ ಪ್ರಕಾರ ಈವರೆಗೂ ಸುಮಾರು 1 ಲಕ್ಷ 77 ಸಾವಿರಕ್ಕೂ ಹೆಚ್ಚು ಜನವಸತಿ ಕಟ್ಟಡಗಳು ಯುದ್ಧಕ್ಕೆ ಬಲಿಯಾಗಿವೆ. ಈ ಮೂಲಕ ಲಕ್ಷಾಂತರ ಜನರ ಜೀವನ ಬೀದಿಗೆ ಬಿದ್ದಿದೆ. ಈ ನಡುವೆ ಎರಡು ಕಡೆ ಸಂಧಾನ ನಡೆಸಲು ಯಾರೂ ಮುಂದೆ ಬಾರದ ಹಿನ್ನೆಲೆ, ಯುದ್ಧ ಮುಂದಿನ ದಿನಗಳಲ್ಲಿ ಮತ್ತಷ್ಟು ಭೀಕರವಾಗುವ ಸಾಧ್ಯತೆ ಇದೆ. ಹೀಗಾಗಿ ಇಸ್ರೇಲ್ ಸೇನೆ ಕೂಡ ಅಲರ್ಟ್ ಆಗಿದೆ.

ವಿಶ್ವಸಂಸ್ಥೆ ಮತದಾನದಲ್ಲಿ ಏನಾಯ್ತು?
ಆಧುನಿಕ ಜಗತ್ತಿಗೆ ಯುದ್ಧ ಬೇಕಿಲ್ಲ ಅಭಿವೃದ್ಧಿಯೇ ಆಧುನಿಕ ಜಗತ್ತಿನ ಅನಿವಾರ್ಯತೆ ಅಂತಾ ಹೇಳುತ್ತಿತ್ತು ಜಗತ್ತು. ಆದ್ರೆ ರಷ್ಯಾ ಮತ್ತು ಉಕ್ರೇನ್, ಇಸ್ರೇಲ್ & ಹಮಾಸ್ ನಡುವೆ ಯುದ್ಧವು ಶುರುವಾದ ಬಳಿಕ ಜಗತ್ತಿನ ಹಲವು ದೇಶಗಳು ರಾಗ ಬದಲಿಸಿವೆ. ಈ ವೇಳೆಯೇ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನ ನಿಲ್ಲಿಸಲು ನಡೆದ ವಿಶ್ವಸಂಸ್ಥೆ ಮತದಾನದಲ್ಲಿ, 120 ಸದಸ್ಯ ರಾಷ್ಟ್ರಗಳು ಪರವಾಗಿ ಮತ ಹಾಕಿದ್ದರೆ, 14 ರಾಷ್ಟ್ರಗಳು ವಿರುದ್ಧವಾಗಿ ಮತ ಚಲಾಯಿಸಿವೆ. ಭಾರತ ಸೇರಿ ಒಟ್ಟಾರೆ 45 ದೇಶಗಳು ಈ ನಿರ್ಣಯದಿಂದ ಹೊರಗುಳಿದಿವೆ.












Click it and Unblock the Notifications