ಬೆಚ್ಚಿಬಿದ್ದ ಪಾಕಿಸ್ತಾನದಲ್ಲಿ ಇಂಟರ್ನೆಟ್ ಸ್ಥಗಿತ, ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ- ವಿಷ ಉಂಡು ಸತ್ತು ಹೋದನೇ ಡಾನ್ ದಾವೂದ್?
ಇಸ್ಲಾಮಾಬಾದ್, ಡಿಸೆಂಬರ್ 18: ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಷ ಸೇವಿಸಿದ್ದಾನೆ ಎಂಬ ವರದಿಗಳು ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದೆ. ಡಾನ್ ದಾವೂದ್ ಇಬ್ರಾಹಿಂ ಸತ್ತೇ ಹೋಗಿದ್ದಾನೆಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಬ್ಬಿದೆ. ಇದರ ಪರಿಣಾಮ ಪಾಕಿಸ್ತಾನದಲ್ಲಿ ಇಂಟರ್‌ನೆಟ್‌ನ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧವನ್ನೂ ಹೇರಲಾಗಿದೆ.
ದಾವೂದ್ ಹೊಟ್ಟೆಯೊಳಗೆ ವಿಷ ಕಂಡುಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆತ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ವರದಿಗಳು ಪ್ರಕಟವಾಗಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಊಹಾಪೋಹಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಕಾರ್ಯಗತವಾಗಿದೆ ಎಂದು ಹೇಳಲಾಗುತ್ತಿದೆ.

ವಿಷಪ್ರಾಶಾನ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಶಂಕೆ
ಭಾರತದಿಂದ ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಷ ಸೇವಿಸಿ ಸತ್ತು ಹೋಗಿದ್ದಾನೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಆತ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಮೂಲಗಳು ಹೇಳಿವೆ. ಈ ವರದಿಗಳ ಸುತ್ತಲಿನ ವರದಿಗಳು ಪಾಕಿಸ್ತಾನದಲ್ಲಿ ವ್ಯಾಪಕ ಆತಂಕವನ್ನು ಹೆಚ್ಚಿಸಿವೆ. ಆನ್‌ಲೈನ್ ಚರ್ಚೆಗಳಿಗೆ ಕಾರಣವಾಗಿದೆ.
ಪತ್ರಕರ್ತ ಅರ್ಜೂ ಕಜ್ಮಿ ಆರೋಪವೇನು?
ಟ್ವಿಟರ್, ಗೂಗಲ್ ಮತ್ತು ಯೂಟ್ಯೂಬ್ ಸೇವೆಗಳಿಗೆ ಪಾಕಿಸ್ತಾನದಲ್ಲಿ ನಿರ್ಬಂಧ ಹೇರಲಾಗಿದೆ. ಈ ಮೂಲಕ ಪ್ರಮುಖ ಘಟನೆಯೊಂದನ್ನು ಮರೆಮಾಚುವ ಕೆಲಸಗಳು ನಡೆಯುತ್ತಿವೆ. ಉದ್ದೇಶಪೂರ್ವಕವಾಗಿ ಪಾಕಿಸ್ತಾನದಲ್ಲಿ ಇಂಟರ್‌ನೆಟ್‌ಗೆ ನಿರ್ಬಂಧ ಹೇರಲಾಗಿದೆ ಎಂದು ಪಾಕಿಸ್ತಾನಿ ಪತ್ರಕರ್ತೆ ಅರ್ಜೂ ಕಾಜ್ಮಿ ವಿಡಿಯೊ ಹೇಳಿಕೆಯನ್ನು ನೀಡಿದ್ದಾರೆ.
ಕರಾಚಿಯ ಹೆಸರಾಂತ ಆಸ್ಪತ್ರೆಯಲ್ಲಿ ದಾಖಲಾಗಿರುವ ದಾವೂದ್‌ನ ಸ್ಥಿತಿ ಗಂಭೀರವಾಗಿದೆ. ಆದರೆ, ಆತ ಸತ್ತು ಹೋಗಿರುವುದರ ಬಗ್ಗೆ ಯಾವುದೇ ಮಾಹಿತಿಯನ್ನು ವೈದ್ಯಾಧಿಕಾರಿಗಳು ಹೊರಹಾಕುತ್ತಿಲ್ಲ.

ಇಮ್ರಾನ್ ಖಾನ್ ವರ್ಚುವಲ್ ರ‍್ಯಾಲಿ ಅಡ್ಡಿ?
ಈ ಆರೋಪಗಳನ್ನು ಸರ್ಕಾರಿ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನದಲ್ಲಿ ವರ್ಚುವಲ್ ರ‍್ಯಾಲಿಗೆ ಮುಂದಾಗಿದ್ದಾರೆ. ಈ ಸುಳಿವು ಪಡೆದ ನಂತರ ಪಾಕಿಸ್ತಾನದಲ್ಲಿ ಇಂಟರ್‌ನೆಟ್ ಅನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಮ್ರಾನ್ ಖಾನ್ ಅವರ ವರ್ಚುವಲ್ ಸಭೆಯು ಪಾಕಿಸ್ತಾನದಲ್ಲಿ ಅಶಾಂತಿಯನ್ನು ಉಂಟುಮಾಡಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕೂ ದಾವೂದ್ ಇಬ್ರಾಹಿಂ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಸರ್ಕಾರದ ಕ್ರಮವು ಕೇವಲ ರಾಜಕೀಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಸಾರ್ವಜನಿಕರ ತೊಂದರೆ ಉಲ್ಬಣ
ರಾಷ್ಟ್ರವ್ಯಾಪಿ ಇಂಟರ್ನೆಟ್ ಬ್ಲ್ಯಾಕೌಟ್‌ನಿಂದಾಗಿ ಪಾಕಿಸ್ತಾನದ ಜನರ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಇದು ಸಾರ್ವಜನಿಕರಿಗೆ ಭಾರೀ ತೊಂದರೆಗಳನ್ನು ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ. ಇಮ್ರಾನ್ ಖಾನ್ ರ್ಯಾಲಿಗೆ ಮೊದಲು ಇಂಟರ್‌ನೆಟ್ ವೇಗವನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಈ ವಿಷಯದಲ್ಲಿ ಮೌನವಾಗಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ಸಂಭಾವ್ಯ ಹಕ್ಕುಗಳ ಉಲ್ಲಂಘನೆ ಮತ್ತು ವ್ಯಾಪಾರದ ಅಡೆತಡೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ ಎಂಬ ಆತಂಕವನ್ನು ಪಿಟಿಎ ವ್ಯಕ್ತಪಡಿಸಿದೆ.
1993ರ ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಭಾನುವಾರ ಕರಾಚಿ ಆಸ್ಪತ್ರೆಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿರಬಹುದು ಎಂದು ಸೋಮವಾರದ ವರದಿಗಳು ಹೇಳಿವೆ. ರಾತ್ರಿ 8 ರಿಂದ 9 ರ ವರೆಗೆ ಆತ ನಿಧನ ಹೊಂದಿರಬಹುದು ಎಂದು ಮೂಲಗಳು ಹೇಳಿಕೊಂಡಿದೆ. ಆದರೆ, ಈ ಕುರಿತು ಯಾವುದೇ ಅಧಿಕೃತ ದೃಢೀಕರಣವನ್ನು ನೀಡಲಾಗಿಲ್ಲ. ಭಾರತದಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿರುವ ದಾವೂದ್ ಮೂರು ದಶಕಗಳಿಂದ ದುಬೈ ಹಾಗೂ ಪಾಕಿಸ್ತಾನದಲ್ಲಿ ವಾಸವಾಗಿದ್ದಾನೆ.












Click it and Unblock the Notifications