ಕೋವಿಡ್ 2022ರಲ್ಲಿ ಅಂತ್ಯವಾಗುತ್ತಾ?: WHO ಮುಖ್ಯಸ್ಥರ ಮಹತ್ವದ ಹೇಳಿಕೆ
ಹೊಸ ವರ್ಷ 2022 ಆರಂಭವಾಗುತ್ತಿದ್ದಂತೆ ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕಿನ ಹೊಸ ಅಲೆಯು ಹರಡುವ, ಸೃಷ್ಟಿ ಆಗುವ ಭೀತಿ ಕಾಡುತ್ತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಕೊರೊನಾ ವೈರಸ್ ಸೋಂಕಿನ ಅಂತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಶ್ವದಲ್ಲಿ ಈ ಹೊಸ ವರ್ಷದಲ್ಲಿ ಕೊರೊನಾ ವೈರಸ್ ಸೋಂಕು ಏರಿಕೆ ಆಗುತ್ತಿದೆ ಎಂಬ ಹಿನ್ನೆಲೆಯಿಂದಾಗಿ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಕೋವಿಡ್ ನಿಯಮವನ್ನು ಕಠಿಣ ಮಾಡಿದೆ. ಕೆಲವು ರಾಷ್ಟ್ರಗಳಲ್ಲಿ ಲಾಕ್‌ಡೌನ್‌ನಂತಹ ಕ್ರಮವನ್ನು ಕೈಗೊಂಡಿರುವಾಗ ಇನ್ನು ಕೆಲವು ರಾಷ್ಟ್ರಗಳಲ್ಲಿ ನೈಟ್ ಕರ್ಫ್ಯೂ ಮೊದಲಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ವರ್ಷದಲ್ಲೇ ಕೊರೊನಾ ವೈರಸ್ ಸಾಂಕ್ರಾಮಿಕ ಅಂತ್ಯವಾಗುತ್ತದೆ ಎಂದು ಹೇಳಿದ್ದಾರೆ.
"ನಾನು ಈ ವಿಚಾರದಲ್ಲಿ ದೃಢವಾಗಿದ್ದೇನೆ, ಕೊರೊನಾ ವೈರಸ್ ಸಾಂಕ್ರಾಮಿಕವು 2022ರಲ್ಲಿ ಕೊನೆಯಾಗುವ ಸಾಧ್ಯತೆ ಇದೆ," ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ. 2020 ರಲ್ಲಿ ವಿಶ್ವದಲ್ಲೇ ಆವರಿಸಿದ ಕೊರೊನಾ ವೈರಸ್ ಸೋಂಕು ಈಗ ಹಲವಾರು ರೂಪಾಂತರಗಳನ್ನು ಹೊಂದಿದ್ದು, ಹೊಸ ಹೊಸ ಅಲೆಯನ್ನು ಸೃಷ್ಟಿ ಮಾಡುತ್ತಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ವಿಶ್ವದಲ್ಲಿ ಕಾಣಿಸಿಕೊಂಡು ಮೂರನೇ ವರ್ಷಕ್ಕೆ ನಾವು ಕಾಲಿರಿಸಿದ್ದೇವೆ. ಈ ವರ್ಷದಲ್ಲಿ ಹೊಸ ರೂಪಾಂತರ ಓಮಿಕ್ರಾನ್ ಭಾರೀ ಆತಂಕವನ್ನು ಸೃಷ್ಟಿ ಮಾಡುತ್ತಿದೆ. ಈ ಕೊರೊನಾ ವೈರಸ್‌ನ ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕ ಎಂದು ತಜ್ಞರು ಹೇಳಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಯ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, "ಕೊರೊನಾ ವೈರಸ್ ಸಾಂಕ್ರಾಮಿಕವು 2022ರಲ್ಲಿ ಕೊನೆಯಾಗಲಿದೆ. ನಾವು ಅಸಮಾನತೆಗೆ ಯಾವಾಗ ಅಂತ್ಯವನ್ನು ಹಾಡುತ್ತೇವೋ ಆಗ ವಿಶ್ವದಿಂದ ಕೊರೊನಾ ವೈರಸ್ ಸೋಂಕು ಕೊನೆಯಾಗಲಿದೆ," ಎಂದು ಹೇಳಿದ್ದಾರೆ.
ಅಸಮಾನತೆ ಹೆಚ್ಚಾದಂತೆ ಕೊರೊನಾ ವೈರಸ್ ಸೋಂಕು ಹೆಚ್ಚಳ!
"ಕೊರೊನಾ ಸಾಂಕ್ರಾಮಿಕ ಸೋಂಕಿನಿಂದ ಯಾವುದೇ ರಾಷ್ಟ್ರಗಳು ತಪ್ಪಿಸಿಕೊಂಡಿಲ್ಲ. ಪ್ರಸ್ತುತ ಕೊರೊನಾ ವೈರಸ್ ಸೋಂಕನ್ನು ಎದುರಿಸಲು ಹಾಗೂ ಈ ಸೋಂಕಿಗೆ ಚಿಕಿತ್ಸೆಯನ್ನು ನೀಡಲು ನಮ್ಮ ಬಳಿ ಹಲವಾರು ಅಸ್ತ್ರಗಳು ಇದೆ. ಎಷ್ಟು ಸಮಯದವರೆಗೆ ಈ ಅಸಮಾನತೆಯು ಇರುತ್ತದೆಯೋ ಅಷ್ಟರವರೆಗೆ ಕೊರೊನಾ ವೈರಸ್ ಸೋಂಕು ಇರಲಿದೆ. ಅಸಮಾನತೆ ಅಧಿಕವಾದಂತೆ ಕೊರೊನಾ ವೈರಸ್ ಸಾಂಕ್ರಾಮಿಕವೂ ಕೂಡಾ ಅಧಿಕವಾಗಲಿದೆ. ನಾವು ಅಸಮಾನತೆಯನ್ನು ಅಂತ್ಯ ಮಾಡಿದರೆ, ಸಾಂಕ್ರಾಮಿಕವನ್ನು ಕೂಡಾ ಅಂತ್ಯ ಮಾಡಲು ಸಾಧ್ಯವಾಗಲಿದೆ," ಎಂದು ತಿಳಿಸಿದ್ದಾರೆ.
"ನಾವೀಗ ಕೊರೊನಾ ವೈರಸ್ ಸಾಂಕ್ರಾಮಿಕದ ಮೂರನೇ ವರ್ಷಕ್ಕೆ ಕಾಲಿರಿಸಿದ್ದೇವೆ. ಈ ವರ್ಷವೇ ಕೋವಿಡ್ ಸಾಂಕ್ರಾಮಿಕ ಅಂತ್ಯವಾಗಲಿದೆ ಎಂಬ ಭರವಸೆ ನನಗೆ ಇದೆ. ನಾವು ಜೊತೆಯಾಗಿ ಕೋವಿಡ್ ಅನ್ನು ಎದುರಿಸಿದರೆ ಮಾತ್ರ ಅದು ಸಾಧ್ಯವಾಗುತ್ತದೆ," ಎಂದು ಹೇಳಿರುವ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಮಿಲಿಯನ್‌ಗಟ್ಟಲೆ ಜನರಿಗೆ ಕೊರೊನಾ ಲಸಿಕೆಯು ಇನ್ನೂ ಕೂಡಾ ಲಭ್ಯವಾಗಿಲ್ಲ, ಸರಿಯಾದ ಚಿಕಿತ್ಸೆಯು ಲಭಿಸುತ್ತಿಲ್ಲ ಎಂಬ ವಿಚಾರವನ್ನು ಬೊಟ್ಟು ಮಾಡಿದ್ದಾರೆ.
"ಪೊಲೀಯೋವನ್ನು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯವಾಗಿಲ್ಲ, ಕೆಲವು ರಾಷ್ಟ್ರಗಳಲ್ಲಿ ಇನ್ನು ಕೂಡಾ ಕೆಲವು ಪೊಲೀಯೋ ಪ್ರಕರಣಗಳು ವರದಿ ಆಗಿದೆ. ತಂಬಾಕು ಬಳಕೆ ಕಡಿಮೆ ಆಗುತ್ತಿದೆ. ಈ ನಡುವೆ ಎಲ್ಲಾ ಬಿಕ್ಕಟ್ಟಿಗೂ ವಿಶ್ವ ಆರೋಗ್ಯ ಸಂಸ್ಥೆಯು ಸ್ಪಂದನೆ ನೀಡಿದೆ. ಎಬೊಲಾ ಹಾಗೂ ಮಾರ್ಬರ್ಗ್ ಅನ್ನು ತಡೆಯುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕಾರ್ಯ ನಿರ್ವಹಿಸಿದೆ. ಸಾಂಕ್ರಾಮಿಕ, ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯ ಮಾಡಲೆಂದೇ ನಾವು ಡಬ್ಲ್ಯೂಎಚ್‌ಒ ಹಬ್ ಸಿಸ್ಟಮ್ ಅನ್ನು ಆರಂಭ ಮಾಡಿದ್ದೇವೆ," ಎಂದು ತಿಳಿಸಿದರು. "2022ರ ಮಧ್ಯ ವರ್ಷದಲ್ಲಿ ಜಾಗತಿಕವಾಗಿ ಶೇಕಡ 70ರಷ್ಟು ಜನರಿಗೆ ಕೋವಿಡ್ ಲಸಿಕೆಯನ್ನು ನೀಡುವ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಎಲ್ಲಾ ದೇಶಗಳು ಕಾರ್ಯ ನಿರ್ವಹಣೆ ಮಾಡಬೇಕಾಗಿದೆ," ಎಂದು ಕೂಡಾ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications