ಕೊರೊನಾ ಬೂಸ್ಟರ್ ಡೋಸ್; ದುಬಾರಿ ಸಂಗತಿಯಲ್ಲ ಎಂದ WHO
ವಾಷಿಂಗ್ಟನ್, ಆಗಸ್ಟ್ 30: ಕೊರೊನಾ ಸೋಂಕಿನ ವಿರುದ್ಧ ಎರಡು ಡೋಸ್ ಲಸಿಕೆ ನಂತರ ಬೂಸ್ಟರ್, ಅಂದರೆ ಮೂರನೇ ಡೋಸ್ ಲಸಿಕೆ ನೀಡುವತ್ತ ಹಲವು ದೇಶಗಳು ಆಲೋಚನೆ ಮಾಡುತ್ತಿವೆ. ಪ್ರಸ್ತುತ ಕೊರೊನಾ ರೂಪಾಂತರಗಳ ವಿರುದ್ಧ ಈಗಿರುವ ಲಸಿಕೆಗಳ ದಕ್ಷತೆ ಬಗ್ಗೆ ಗೊಂದಲಗಳು ಮೂಡಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಬೂಸ್ಟರ್ ಡೋಸ್ ನೀಡುವ ಸಿದ್ಧತೆಗಳು ನಡೆಸುತ್ತಿವೆ.
ಕೊರೊನಾ ಸೋಂಕಿನಿಂದ ದೂರವುಳಿಯಲು ಬೂಸ್ಟರ್ ಡೋಸ್ ಲಸಿಕೆ ನೀಡುವ ಅಗತ್ಯದ ಕುರಿತು ಈ ಮುನ್ನ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಹಂಚಿಕೊಂಡಿತ್ತು. ಕಡಿಮೆ ಆದಾಯದ ದೇಶಗಳಲ್ಲಿ ಒಂದು ಡೋಸ್ ಲಸಿಕೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಿದ್ದಾಗ ಮೂರನೇ ಡೋಸ್ ಲಸಿಕೆ ನೀಡುವ ಆಲೋಚನೆಯನ್ನು ಹೆಚ್ಚಿನ ಆದಾಯದ ದೇಶಗಳು ಸ್ವಲ್ಪ ಕಾಲ ತಡೆಹಿಡಿಯಬೇಕು ಎಂದು ಹೇಳಿತ್ತು.

ಇದೀಗ ಬೂಸ್ಟರ್ ಡೋಸ್ ಲಸಿಕೆ ನೀಡುವುದು ದುಬಾರಿ ಸಂಗತಿಯಲ್ಲ ಎಂದು ಡಬ್ಲುಎಚ್‌ಒದ ಯುರೋಪಿನ ಮುಖ್ಯಸ್ಥರು ಹೇಳಿದ್ದಾರೆ. ಮೂರನೇ ಡೋಸ್ ಲಸಿಕೆ ನೀಡುವುದು ಕೆಲವೆಡೆ ಅವಶ್ಯಕವಾಗಬಹುದು. ಇದು ಅತಿ ಅಪಾಯಕಾರಿ ಸೋಂಕಿನ ಹರಡುವಿಕೆಯನ್ನು ತಡೆಯಬಹುದು ಹಾಗೂ ಇದು ದುಬಾರಿ ಸಂಗತಿಯಲ್ಲ ಎಂದು ಹೇಳಿದ್ದಾರೆ.
ಇದೇ ತಿಂಗಳ ಆರಂಭದಲ್ಲಿ, ಇನ್ನೂ ಬೂಸ್ಟರ್ ಡೋಸ್‌ಗಳ ಅಗತ್ಯ ಕಂಡುಬಂದಿಲ್ಲ ಎಂದು ಆರೋಗ್ಯ ಸಂಸ್ಥೆ ತಿಳಿಸಿತ್ತು. ಕೊರೊನಾ ಲಸಿಕೆ ಹಂಚಿಕೆಯಲ್ಲಿ ತಾರತಮ್ಯ ಕಾಣುತ್ತಿದೆ. ಶ್ರೀಮಂತ-ಬಡರಾಷ್ಟ್ರಗಳ ನಡುವೆ ಲಸಿಕೆ ಹಂಚಿಕೆಯಲ್ಲಿ ಭಾರೀ ವ್ಯತ್ಯಾಸವಾಗಲಿದೆ ಎಂದು ಹೇಳಿತ್ತು. ಹೀಗಾಗಿ ಬೂಸ್ಟರ್ ಡೋಸ್ ಲಸಿಕೆ ನೀಡುವ ಆಲೋಚನೆಯನ್ನು ಕಾಯ್ದಿರಿಸಿ ಬಡರಾಷ್ಟ್ರಗಳಲ್ಲಿ ಲಸಿಕೆ ನೀಡುವ ಬಗ್ಗೆ ಗಮನ ಕೇಂದ್ರೀಕರಿಸಬೇಕು ಎಂದು ಕರೆ ನೀಡಿತ್ತು.
ಇದೀಗ WHO ಯುರೋಪ್ ಮುಖ್ಯಸ್ಥರು ಇದು ದುಬಾರಿಯಲ್ಲ ಎಂದು ಹೇಳಿದ್ದಾರೆ. 'ಮೂರನೇ ಡೋಸ್ ಲಸಿಕೆ ದುಬಾರಿಯಲ್ಲ. ಜೊತೆಗೆ ರೂಪಾಂತರಗಳು ಭೀಕರವಾಗುತ್ತಿರುವ ಈ ಸಂದರ್ಭ ಮೂರನೇ ಡೋಸ್ ನೀಡುವುದು ಅವಶ್ಯವಿದ್ದಾಗ ಉತ್ತಮ ಆಲೋಚನೆ ಕೂಡ' ಎಂದು ಹಾನ್ಸ್ ಕ್ಲುಗೆ ತಿಳಿಸಿದ್ದಾರೆ.
ಯುರೋಪ್ ದೇಶಗಳಲ್ಲಿ ಕಳೆದ ಎರಡು ವಾರಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಲಸಿಕೆ ನೀಡುವ ವಿಚಾರದಲ್ಲಿ ಹಿಂದುಳಿದಿರುವುದೇ ಇದಕ್ಕೆ ಕಾರಣ. ಇದು ಚಿಂತೆಗೆ ಈಡುಮಾಡಿದೆ ಎಂದು ಹೇಳಿದ್ದಾರೆ.
ಲಸಿಕೆ ಸಂಬಂಧ ಏಮ್ಸ್ ಮುಖ್ಯಸ್ಥರ ಸಲಹೆ: 'ಇಲ್ಲಿಯವರೆಗೆ ಲಸಿಕೆಯನ್ನೇ ಪಡೆಯದವರಿಗೆ ಲಸಿಕೆಯ ಹಾಕುವ ಕುರಿತು ಸರ್ಕಾರ ಕಾರ್ಯೋನ್ಮುಖವಾಗಬೇಕು. ವಿಶೇಷವಾಗಿ ಸೋಂಕಿನಿಂದ ಅಪಾಯದ ಸಾಧ್ಯತೆ ಹೆಚ್ಚಿರುವವರಿಗೆ ಲಸಿಕೆ ಹಾಕುವತ್ತ ಗಮನ ಹರಿಸಬೇಕು. ಇನ್ನೂ ಅನೇಕ ಆರೋಗ್ಯ ಕಾರ್ಯಕರ್ತರು, ವೃದ್ಧರು ಹಾಗೂ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಹಲವು ಮಂದಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿಲ್ಲ. ಅವರಲ್ಲಿಯೇ ಸೋಂಕು ಗಂಭೀರ ಸ್ವರೂಪ ಪಡೆಯುವ ಹಾಗೂ ಮರಣ ಸಾಧ್ಯತೆಯು ಹೆಚ್ಚಿದೆ' ಎಂದು ದೆಹಲಿಯ ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ ಹೇಳಿದ್ದರು.

'ಕೊರೊನಾ ನಿರ್ವಹಣೆಯಲ್ಲಿ ಮೂರು ಡೋಸ್, ನಾಲ್ಕು ಡೋಸ್ ಅಥವಾ ವಿಭಿನ್ನ ವಿಷಯಗಳನ್ನು ಪ್ರಯತ್ನಿಸುವುದಕ್ಕಿಂತ ಸಾಧ್ಯವಾದಷ್ಟು ಮಂದಿಗೆ ಲಸಿಕೆ ನೀಡುವುದು ಸದ್ಯದ ತುರ್ತು ಎಂದು ನನಗನಿಸುತ್ತಿದೆ. ಈಗ ನಮಗೆ ತಿಳಿದಿರುವ ವಿಷಯಗಳಿಗೆ ಒತ್ತು ನೀಡೋಣ, ನಮಗೆ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಲಸಿಕೆ ಹಾಕುವತ್ತ ಗಮನ ಹರಿಸೋಣ' ಎಂದಿದ್ದರು.
ಬೂಸ್ಟರ್ ಡೋಸ್ ಅಗತ್ಯದ ಕುರಿತು ಚರ್ಚೆ: ಕೊರೊನಾ ಸಾಂಕ್ರಾಮಿಕ ಹೆಚ್ಚಾಗುತ್ತಿರುವ ಹಿನ್ನೆಲೆ ರೂಪಾಂತರ ವೈರಸ್ ವಿರುದ್ಧ ಪ್ರಸ್ತುತ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂಬ ಅನುಮಾನ ಹುಟ್ಟಿಕೊಂಡಿದೆ. ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಇಸ್ರೇಲ್ ಈ ಬೂಸ್ಟರ್ ಡೋಸ್ ವಿತರಣೆ ಶುರು ಮಾಡಿದೆ. ಬೂಸ್ಟರ್ ಡೋಸ್ ಲಸಿಕೆ ವಿತರಣೆ ಬಗ್ಗೆ ಫೈಜರ್ ಕಂಪನಿ ಜೊತೆಗೆ ಅಮೆರಿಕ ಚರ್ಚೆ ನಡೆಸುತ್ತಿದೆ. ಭಾರತದಲ್ಲಿಯೂ ಈ ಕುರಿತು ಚರ್ಚೆಗಳು ಆರಂಭವಾಗಿವೆ. ಕಾಲಕ್ರಮೇಣ ಲಸಿಕೆ ಪ್ರತಿಕಾಯ ಮಟ್ಟ ಕ್ಷೀಣಿಸುವುದರಿಂದ ಬೂಸ್ಟರ್ ಡೋಸ್ ಅಗತ್ಯ ಬರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.












Click it and Unblock the Notifications