'ಭಾರತದೊಂದಿಗೆ ಉದ್ವಿಗ್ನ ಸ್ಥಿತಿ ಸಮಾಪ್ತಿ'- ತಿಪ್ಪೆ ಸಾರಿಸುತ್ತಿದೆಯಾ ಚೀನಾ?

ನವದೆಹಲಿ, ಸೆ. 30: ಲಡಾಖ್ ಬಳಿಯ ಪ್ಯಾಟ್ರೋಲಿಂಗ್ ಪಾಯಿಂಟ್ 15 (ಪಹರೆ ಸ್ಥಳ) ಸ್ಥಳದಂದ ಸೇನಾಪಡೆಗಳನ್ನು ಹಿಂಪಡೆದುಕೊಂಡ ಬಳಿಕ ಚೀನಾ ಇದೀಗ ಭಾರತ ಮತ್ತು ತನ್ನ ನಡುವೆ ಯಾವ ಉದ್ವಿಗ್ನ ಸ್ಥಿತಿಯೂ ಇಲ್ಲ ಎಂದು ಹೇಳಿಕೊಂಡಿದೆ.

ಲಡಾಖ್ ಸಂಘರ್ಷ ಘಟನೆಯ ನಂತರ ಭಾರತ ಮತ್ತು ಚೀನಾ ನಡುವೆ ಹಲವು ಸ್ಥಳಗಳಲ್ಲಿ ಸೂಕ್ಷ್ಮ ಪರಿಸ್ಥಿತಿ ನೆಲಸಿ ಪರಸ್ಪರ ಮುಖಾಮುಖಿಯಾಗಿ ನಿಂತಿದ್ದವು. ಈ ವಿಚಾರವಾಗಿ ಭಾರತ ಮತ್ತು ಚೀನಾ ಸೇನಾ ಪಡೆಗಳ ಮಧ್ಯೆ ಹಲವು ಸುತ್ತುಗಳ ಮಾತುಕತೆಗಳಾಗಿವೆ. ಮೂರು ವಾರಗಳ ಹಿಂದಷ್ಟೇ ಪಿಪಿ-15 ನಿಂದ ಎರಡೂ ಕಡೆಯ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.

ಈ ಬಗ್ಗೆ ನಿನ್ನೆ ಗುರುವಾರ ಹೇಳಿಕೆ ನೀಡಿರುವ ಚೀನಾ ರಾಯಭಾರಿ ಸುನ್ ವೇಡಾಂಗ್, ಗಾಲ್ವನ್ ಸಂಘರ್ಷ ಘಟನೆ ನಂತರ ತುರ್ತು ಸ್ಪಂದನೆ ಹಂತ ಮುಗಿದಿದೆ ಎಂದು ಘೋಷಿಸಿದ್ದಾರೆ.

"ಸದ್ಯ ಗಡಿ ಪರಿಸ್ಥಿತಿ ಸ್ಥಿರವಾಗಿದೆ. ಗಾಲ್ವನ್ ಕಣಿವೆ ಸಂಘರ್ಷ ಘಟನೆಯ ನಂತರ ಉದ್ಭವಿಸಿದ್ದ ತುರ್ತು ಪ್ರತಿಕ್ರಿಯೆ ಹಂತ ಮುಗಿದಿದೆ. ಗಡಿಯಲ್ಲಿ ಈಗ ಸಹಜ ಸ್ಥಿತಿ ನೆಲಸುತ್ತಿದೆ" ಎಂದು ಚೀನಾದ ರಾಯಭಾರಿ ಹೇಳಿದ್ದಾರೆ.

ಈಗಿನ ಕಮ್ಯೂನಿಸ್ಟ್ ಚೀನಾದ 73ನೇ ವಾರ್ಷಿಕೋತ್ಸವದ ನಿಮಿತ್ತವಾಗಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಚೀನಾದ ರಾಯಭಾರಿ ಸುನ್ ವೇಡೋಂಗ್ ಮಾತನಾಡುತ್ತಾ ಈ ವಿಚಾರವನ್ನು ತಿಳಿಸಿದ್ದಾರೆ.

ಸಮಸ್ಯೆಗಳು ಇನ್ನೂ ಇವೆ

ಸಮಸ್ಯೆಗಳು ಇನ್ನೂ ಇವೆ

ಆದರೆ, ಗಡಿಯಲ್ಲಿ ತುರ್ತು ಸ್ಪಂದನೆ ಸ್ಥಿತಿ ಇಲ್ಲ ಎನ್ನುವ ಚೀನಾದ ಮಾತನ್ನು ಭಾರತ ಒಪ್ಪಿಕೊಂಡಿಲ್ಲ. ಡೇಪ್‌ಸಾಂಗ್ ಮತ್ತು ಡೆಮ್‌ಚೋಕ್ ಭಾಗದಲ್ಲಿ ಈಗಲೂ ಸಂಘರ್ಷದ ವಾತಾವರಣ ಹೋಗಿಲ್ಲ ಎಂದು ಭಾರತ ಹೇಳಿದೆ. ಈ ಸ್ಥಳಗಳಲ್ಲಿ ಎರಡು ವರ್ಷಗಳಿಂದ ಚೀನಾ ಪಡೆಗಳು ಭಾರತದ ಗಡಿಯಿಂದ 18 ಕಿಮೀ ಒಳಗಿನವರೆಗೂ ನುಗ್ಗಿ ನಿಂತಿವೆ. ಆದರೂ ಕೂಡ ಚೀನಾ ಪಿಪಿ-15ರಲ್ಲಿ ಮಾತ್ರ ಸಂಘರ್ಷದ ವಾತಾವರಣ ಇದೆ ಎಂಬ ರೀತಿಯಲ್ಲಿ ಬಿಂಬಿಸುತ್ತಿರುವುದು ಅಚ್ಚರಿ ತಂದಿದೆ.

ಭಾರತ ಮತ್ತು ಚೀನಾ ಮಧ್ಯೆ ಬಹಳ ಕಾಲದಿಂದ ಗಡಿ ಬಿಕ್ಕಟ್ಟು ಇದೆ. ಸಾವಿರಾರು ಕಿಮೀ ಉದ್ದದ ಇರುವ ಗಡಿಭಾಗವನ್ನು ಹಲವು ದಶಕಗಳಾದರೂ ನಿರ್ಧರಿಸಿಲ್ಲ. ಚೀನಾದ ಸೇನಾ ಪಡೆಗಳು ಭಾವಿಸಿರುವ ಗಡಿರೇಖೆಯೇ ಬೇರೆ, ಭಾರತ ಭಾವಿಸಿರುವ ಗಡಿರೇಖೆಯೇ ಬೇರೆ. ಹೀಗಾಗಿ ಗಡಿವಿವಾದ ಹೆಚ್ಚಿದೆ. ಸದ್ಯ ಎಲ್‌ಎಸಿ (ಗಡಿ ವಾಸ್ತವ ನಿಯಂತ್ರಣ) ರೇಖೆ ರಚಿಸಲಾಗಿದೆ. ಅದರಂತೆ ಗಡಿಭಾಗದಲ್ಲಿ ಬಫರ್ ಝೋನ್ ಅನ್ನು ನಿರ್ದಿಷ್ಟಪಡಿಸಲಾಗಿದೆ. ಈ ಬಫರ್ ಝೋನ್‌ನಲ್ಲಿ ಎರಡೂ ಕಡೆಯ ಸೈನಿಕರು ಬರುವಂತಿಲ್ಲ. ಗಡಿಯನ್ನು ಅಂತಿಮವಾಗಿ ನಿರ್ದಿಷ್ಟಪಡಿಸುವವರೆಗೂ ಈ ಸ್ಥಿತಿ ಮುಂದುವರಿಸಬೇಕೆಂಬುದು ಹಿಂದೆ ಮಾಡಿಕೊಳ್ಳಲಾಗಿರುವ ಒಪ್ಪಂದ.

ಚೀನಾ ಕಿತಾಪತಿ

ಚೀನಾ ಕಿತಾಪತಿ

ಆದರೆ, ಹಲವಾರು ದಶಕಗಳಿಂದ ಚೀನಾ ಅತಿಕ್ರಮಣ ಮಾಡುತ್ತಲೇ ಬಂದಿದೆ. 2020ರಲ್ಲಿ ಲಡಾಖ್‌ನ ವಿವಿಧ ಭಾಗಗಳಲ್ಲಿ ಬಫರ್ ಝೋನ್ ದಾಟಿ ಚೀನಾ ಪಡೆಗಳು ಭಾರತದ ಗಡಿಭಾಗದೊಳಗೆ ಬಂದಿದ್ದವು. ಅದನ್ನು ಭಾರತದ ಸೈನಿಕರು ಪ್ರತಿರೋಧಿಸಿದ್ದರು. ಈ ಸಂದರ್ಭದಲ್ಲಿ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಭೀಕರ ಸಂಘರ್ಷ ಏರ್ಪಟ್ಟಿತ್ತು.

ಈ ವೇಳೆ ಎರಡೂ ಕಡೆಯ ಹತ್ತಾರು ಸೈನಿಕರು ಮೃತಪಟ್ಟಿರುವುದು ವರದಿಯಾಗಿದೆ. ಈ ಘಟನೆ ಬಳಿಕ ಭಾರತೀಯ ಸೇನೆ ಹೆಚ್ಚು ಜಾಗರೂಕವಾಗಿದೆ. ಗಡಿಭಾಗದಲ್ಲಿ ಚೀನೀ ಸೈನಿಕರು ಎಲ್ಲೆಲ್ಲೆ ಜಮೆಯಾಗಿದ್ದಾರೋ ಅಲ್ಲೆಲ್ಲಾ ಅಷ್ಟೇ ಸಂಖ್ಯೆಯಲ್ಲಿ ಸೈನಿಕರನ್ನು ಭಾರತ ನಿಯೋಜಿಸಿದೆ.

ಇಂಥ ಸಂಘರ್ಷದ ಸ್ಥಳಗಳಿಂದ ಎರಡೂ ಕಡೆಯ ಸೈನಿಕರನ್ನು ವಾಪಸ್ ಕರೆಸಿಕೊಂಡು ಉದ್ವಿಗ್ನ ಸ್ಥಿತಿ ಹೋಗಲಾಡಿಸಬೇಕೆಂಬ ಪ್ರಯತ್ನಗಳು ನಡೆದಿವೆ. ವಿವಿಧ ಹಂತಗಳ ಮಾತುಕತೆಗಳು ನಡೆದಿವೆ. ಕೊನೆಗೆ ಈಗ ಲಡಾಖ್‌ನ ಪೂರ್ವಭಾಗದಲ್ಲಿರುವ ಗೋಗ್ರಾ-ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿನ ಪ್ಯಾಟ್ರೋಲಿಂಗ್ ಪಾಯಿಂಟ್ 15ರಿಂದ ಭಾರತ ಮತ್ತು ಚೀನಾ ಸೈನಿಕರು ಸಂಪೂರ್ಣ ವಾಪಸ್ಸಾಗಿದ್ದಾರೆ. ಆದರೆ, ಡೆಪ್‌ಸಾಂಗ್ ಮತ್ತು ಡೆಮ್‌ಚೋಕ್‌ನಲ್ಲಿ ಈಗಲೂ ಭಾರತೀಯ ಸೈನಿಕರಿಗೆ ಪಹರೆ ತಿರುಗದಂತೆ ಚೀನೀಯರು ತಡೆದು ನಿಲ್ಲಿಸಿದ್ದಾರೆ.

ಭಾರತ ಹೇಳುವುದೇನು?

ಭಾರತ ಹೇಳುವುದೇನು?

ಪಿಪಿ-15ರಿಂದ ಚೀನೀಯರು ವಾಪಸ್ ಹೋಗಿರುವುದನ್ನು ಭಾರತದ ವಿದೇಶಾಂಗ ಸಚಿವಾಲದ ವಕ್ತಾರ ಅರಿಂದಮ್ ಬಾಗ್ಚಿ ಖಚಿತಪಡಿಸಿದ್ದಾರೆ. ಆದರೆ, ಎಲ್‌ಎಸಿಯಲ್ಲಿರುವ ಉಳಿದ ಬಿಕ್ಕಟ್ಟನ್ನು ಶಮನ ಮಾಡಿ ಗಡಿ ಪ್ರದೇಶದಲ್ಲಿ ಶಾಂತಿ ನೆಲಸುವಂತೆ ಮಾಡಲು ಮಾತುಕತೆ ಮುಂದುವರಿಸಲು ಎರಡೂ ದೇಶಗಳು ಒಪ್ಪಿಕೊಂಡಿದ್ದೇವೆ" ಎಂದವರು ಸ್ಪಷ್ಟಪಡಿಸಿದ್ದಾರೆ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇನ್ನೂ ಸ್ಪಷ್ಟವಾಗಿ ಇದನ್ನು ಹೇಳಿದ್ದಾರೆ. "ಪಿಪಿ-15 ಬೆಳವಣಿಗೆ ಬಳಿಕ ಗಡಿಯಲ್ಲಿ ಭಾರತಕ್ಕೆ ಒಂದು ಸಮಸ್ಯೆ ಕಡಿಮೆ ಆಗಿದೆ" ಎಂದು ಹೇಳುವ ಮೂಲಕ, ಬಗೆಹರಿಸಲು ಇನ್ನೂ ಕೆಲ ಸಮಸ್ಯೆಗಳು ಇವೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಚೀನಾ ಬೆದರಿಕೆ

ಚೀನಾ ಬೆದರಿಕೆ

ಚೀನಾ ರಾಯಭಾರಿ ಇದೇ ವೇಳೆ ಭಾರತಕ್ಕೆ ನಯವಾಗಿ ಬೆದರಿಕೆಯನ್ನೂ ಹಾಕಿದ್ದಾರೆ. ಚೀನಾಗೆ ಬಹಳ ಮುಖ್ಯವಾಗಿರುವ ಮತ್ತು ಸೂಕ್ಷ್ಮವಾಗಿರುವ ತೈವಾನ್ ಮತ್ತು ಟಿಬೆಟ್ ವಿಚಾರದಲ್ಲಿ ಭಾರತ ಎಚ್ಚರಿಕೆಯಿಂದ ಇರಬೇಕು ಎಂದು ಸುನ್ ವೇಡಾಂಗ್ ಹೇಳಿದ್ದಾರೆ. "ತತ್‌ಕ್ಷಣವೇ ಇತ್ಯರ್ಥಪಡಿಸಲಾಗದ ಸಮಸ್ಯೆಗಳನ್ನು ಸರಿಯಾದ ವಿಧಾನದಲ್ಲಿ ನಿರ್ವಹಿಸುವಂತಾಗಬೇಕು. ದ್ವಿಪಕ್ಷೀಯ ಸಂಬಂಧಕ್ಕೆ ಅವು ಧಕ್ಕೆ ತರದ ರೀತಿಯಲ್ಲಿ ನಿಭಾಯಿಸಬೇಕು" ಎಂದು ಅವರು ತಿಳಿಹೇಳಿದ್ದಾರೆ.

ಆದರೆ, ಕಾಶ್ಮೀರ ವಿಚಾರದಲ್ಲಿ ಭಾರತದ ಭಾವನೆಗಳಿಗೆ ತೃಣಮಾತ್ರವೂ ಬೆಲೆ ಕೊಡದ ಚೀನಾ ಈಗ ಟಿಬೆಟ್, ತೈವಾನ್ ವಿಚಾರಕ್ಕೆ ತನ್ನ ತಾಳಕ್ಕೆ ಭಾರತ ಕುಣಿಯಬೇಕೆಂದು ಬಯಸುತ್ತಿರುವುದು ವಿಪರ್ಯಾಸ. ಇತ್ತೀಚೆಗೆ ನಡೆದ ಎಸ್‌ಸಿಒ ಸಭೆಯಲ್ಲಿ ಚೀನಾ ಪ್ರಕಟಿಸಿದ ಭೂಪಟದಲ್ಲಿ ಭಾರತದ ನಕ್ಷೆಯಿಂದ ಕಾಶ್ಮೀರವೇ ಮಾಯವಾಗಿ ಹೋಗಿತ್ತು. ಕಾಶ್ಮೀರ ವಿಚಾರದಲ್ಲಿ ಚೀನಾ ಯಾವಾಗಲೂ ಪಾಕಿಸ್ತಾನದ ಪರ ವಹಿಸಿಕೊಂಡೇ ಬಂದಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+