‘ಹಲೋ ಪಾಕಿಸ್ತಾನ್ ಕಂಗ್ರಾಟ್ಸ್’ ಎಂದ ಚೀನಾ: ಕಾರಣ ತಿಳಿಯಿರಿ!
ಭಾರತದ ಶತ್ರು ಪಾಕಿಸ್ತಾನ & ಚೀನಾ ನಡುವೆ ಅದೆಷ್ಟು ಆತ್ಮೀಯ ಸ್ನೇಹ ಇದೆ ಅನ್ನೋದು ಇಡೀ ಜಗತ್ತಿಗೆ ಗೊತ್ತು. ಅದ್ರಲ್ಲೂ ಪದೇ ಪದೇ ಚೀನಾ ಇದೇ ಪಾಕಿಸ್ತಾನವನ್ನು ಅಸ್ತ್ರವಾಗಿ ಬಳಸಿಕೊಂಡು ಭಾರತದ ವಿರುದ್ಧ ಕುತಂತ್ರ ಮಾಡುತ್ತದೆ ಎನ್ನುವ ಆರೋಪ ಕೂಡ ಇದೆ. ಹೀಗಿದ್ದಾಗಲೇ ಪಾಕ್ ಎಂಬ ಕುತಂತ್ರಿ ದೇಶಕ್ಕೆ ಈಗ ಹೊಸ ಪ್ರಧಾನಿ & ಅಧ್ಯಕ್ಷರ ಆಗಮನ ಆಗಿದ್ದು, ಖುದ್ದು ಚೀನಾ ಅಧ್ಯಕ್ಷರೇ ಪಾಕಿಸ್ತಾನಕ್ಕೆ ಫೋನ್ ಮಾಡಿದ್ದರಂತೆ!
ಇತ್ತೀಚೆಗೆ ಪಾಕಿಸ್ತಾನಕ್ಕೆ ಹೊಸ ಪ್ರಧಾನಿ ಆಯ್ಕೆ ಮಾಡಲಾಗಿತ್ತು. ಪಾಕಿಸ್ತಾನದ ಚುನಾವಣೆಯೇ ದೊಡ್ಡ ಜೋಕ್ ಆಗಿತ್ತು. ಎದ್ದೂ ಬಿದ್ದು ಚುನಾವಣೆ ಮುಗಿಸಿರುವ ಪಾಕಿಸ್ತಾನ ಹೊಸ ಪ್ರಧಾನಿ ಆಯ್ಕೆ ಮಾಡಿ ಸಮ್ಮಿಶ್ರ ಸರ್ಕಾರ ಕೂಡ ರಚನೆ ಮಾಡಿತ್ತು. ಈ ಬೆನ್ನಲ್ಲೇ ಈಗ ಹೊಸ ಅಧ್ಯಕ್ಷರ ಆಯ್ಕೆ ಮಾಡಿದೆ. ಹೀಗಾಗಿ ಪಾಕಿಸ್ತಾನಕ್ಕೆ ಕಾಲ್ ಮಾಡಿರುವ ಚೀನಾ ಅಧ್ಯಕ್ಷ ಕ್ಸಿ ಪಿನ್‌ಪಿಂಗ್, ಪಾಕಿಸ್ತಾನದ ನೂತನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಶುಭಾಶಯ ಹೇಳಿದ್ದಾರಂತೆ. ಈ ಮೂಲಕ ಚೀನಾ ಮತ್ತೊಮ್ಮೆ ಪಾಕಿಸ್ತಾನದ ಜೊತೆಗಿನ ಸಂಬಂಧವನ್ನು ಗಟ್ಟಿ ಮಾಡಿಕೊಳ್ತಿದೆ.

ಚೀನಾ & ಪಾಕ್ ಸಂಬಂಧ ಗಟ್ಟಿ!
ಜರ್ದಾರಿ ಅವರಿಗೆ ಮಾತ್ರವಲ್ಲ, ಶೆಹಬಾಜ್ ನವಾಜ್ ಪಾಕಿಸ್ತಾನ ಪ್ರಧಾನಿಯಾಗಿ ಆಯ್ಕೆಯಾದ ಸಮಯದಲ್ಲೂ ಚೀನಾದ ಅಧ್ಯಕ್ಷರಾದ ಕ್ಸಿ ಪಿನ್‌ಪಿಂಗ್ ಶುಭಾಶಯ ಕೋರಿದ್ದರು. ಈಗ ಮತ್ತೆ ಪಾಕಿಸ್ತಾನಕ್ಕೆ ಕರೆ ಮಾಡಿರುವ ಚೀನಾ ಅಧ್ಯಕ್ಷರು, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡ ಪಾಕಿಸ್ತಾನಕ್ಕೆ ವಿಶ್ ಮಾಡಿದ್ದಾರೆ. ಅಲ್ಲದೆ ಈ ವೇಳೆ ಚೀನಾ ಪಾಕಿಸ್ತಾನದ ನೆಲದಲ್ಲಿ ಕೈಗೊಂಡ ಆರ್ಥಿಕ ಕಾರಿಡಾರ್ ಅಂದ್ರೆ ಸ್ಪೆಷಲ್ ಹೆದ್ದಾರಿ ಕಾಮಗಾರಿ ವಿಚಾರವನ್ನೂ ಪಸ್ತಾಪ ಮಾಡಿ, ಪಾಕಿಸ್ತಾನದ ಜೊತೆಗಿನ ಚೀನಾ ಸ್ನೇಹವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಈಗ ಚೀನಾ ಅಧ್ಯಕ್ಷರು ಮುಂದಾಗಿದ್ದಾರೆ.
ಜರ್ದಾರಿ ಆಯ್ಕೆ ಆಗಿದ್ದು ಹೇಗೆ?
ಅಷ್ಟಕ್ಕೂ ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಈಗ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಆಯ್ಕೆ ಆಗಿದ್ದಾರೆ. ಜರ್ದಾರಿ 2ನೇ ಬಾರಿಗೆ ಈ ಸ್ಥಾನಕ್ಕೆ ಆಯ್ಕೆಯಾಗಿದ್ದು ವಿಶೇಷ. 68 ವರ್ಷ ವಯಸ್ಸಿನವರಾದ ಜರ್ದಾರಿ ಅವ್ರು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಹಾಗೂ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಜಂಟಿ ಅಭ್ಯರ್ಥಿ ಆಗಿ ಪಾಕಿಸ್ತಾನ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಎರಡೂ ಪಕ್ಷಗಳು ಜಂಟಿ ಆಗಿಯೇ ಸರ್ಕಾರ ರಚಿಸಿದ್ದು, ಪಾಕ್ ರಾಷ್ಟ್ರಪತಿ ಆಯ್ಕೆಯಲ್ಲಿ ಕೂಡ ಕೈಜೋಡಿಸಿದ್ದವು.

2ನೇ ಬಾರಿಗೆ ಅಧ್ಯಕ್ಷ ಪಟ್ಟ!
ಒಂದು ಕಡೆ ಜರ್ದಾರಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದಂತೆ, ಇನ್ನೊಂದು ಕಡೆಗೆ ಸುನ್ನಿ ಇತ್ತೇಹಾದ್ ಕೌನ್ಸಿಲ್ ಅಭ್ಯರ್ಥಿಯಾಗಿ 75 ವರ್ಷದ ಮಹಮ್ಮದ್ ಖಾನ್ ಅಚಕ್‌ಜಾಯ್ ಕೂಡ ಅಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ಇದ್ದರು. ಈ ಚುನಾವಣೆಯಲ್ಲಿ ಜರ್ದಾರಿ ಅವರು 255 ಮತ ಪಡೆದರೆ, ಪ್ರತಿಸ್ಪರ್ಧಿ ಅಚಕ್‌ಜಾಯ್ 119 ಮತ ಪಡೆದರು. ಜರ್ದಾರಿ ಅವರು, ಮಾಜಿ ಪ್ರಧಾನಿ & ದಿವಂಗತ ಬೆನಜೀರ್ ಭುಟ್ಟೋ ಪತಿ. ಹಿಂದೆಯೂ ಜರ್ದಾರಿ ಅವರು, ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. 2008 ರಿಂದ 2013 ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಜರ್ದಾರಿ.
ಜರ್ದಾರಿ ಪುತ್ರಿಗೆ ಪ್ರಥಮ ಮಹಿಳೆ ಸ್ಥಾನ
ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದ, ಆಸಿಫ್ ಅಲಿ ಜರ್ದಾರಿ ಅವರಿಗೆ ಮತ್ತೊಂದು ಮದುವೆ ಆಗಿಲ್ಲ. ಹೀಗಾಗಿ ಜರ್ದಾರಿ ಅವರು ವಿಧುರನಾದರು. ಈ ಕಾರಣ ಜರ್ದಾರಿ ಅವರು ಪಾಕಿಸ್ತಾನ ರಾಷ್ಟ್ರಾಧ್ಯಕ್ಷರಾಗಿದ್ದ ಈ ಹಿಂದಿನ ಅವಧಿ, ಅಂದರೆ 2008 ರಿಂದ 2013 ರವರೆಗೂ ಮೊದಲನೇ ಅವಧಿಯಲ್ಲೂ, ಪಾಕಿಸ್ತಾನ ದೇಶದ ಪ್ರಥಮ ಮಹಿಳೆಯ ಸ್ಥಾನ ಖಾಲಿ ಇತ್ತು. ಆದರೆ ಈ ಬಾರಿ ಜರ್ದಾರಿ ಅವರು ತಮ್ಮ ಪುತ್ರಿಗೆ ಪ್ರಥಮ ಮಹಿಳೆಯ ಸ್ಥಾನಮಾನ ನೀಡಿದ್ದಾರೆ. ಇದು ಪಾಕ್‌ನ ಇತಿಹಾಸದಲ್ಲೇ ಐತಿಹಾಸಿಕ ನಿರ್ಧಾರವಾಗಿದೆ.












Click it and Unblock the Notifications