ತೈವಾನ್ ವಿಚಾರದಲ್ಲಿ ಚೀನಾ ಕೊಟ್ಟ ವಾರ್ನಿಂಗ್ ಹೆಂಗಿದೆ ನೋಡಿ!
ಮಾಸ್ಕೋ: ತೈವಾನ್ ವಿಚಾರದಲ್ಲಿ ಚೀನಾ ತನ್ನ ಹಠ ಬಿಟ್ಟುಕೊಡುತ್ತಿಲ್ಲ. ಅದರಲ್ಲೂ ಈ ವಿಚಾರದಲ್ಲಿ ಅಮೆರಿಕ ಮೂಗು ತೂರಿಸಿದೆ ಎಂಬ ಆರೋಪವನ್ನೂ ಚೀನಾ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ತೈವಾನ್ ಪ್ರಶ್ನೆಯಲ್ಲಿ ಬೆಂಕಿಯೊಂದಿಗೆ ಆಟವಾಡುವ ಅಥವಾ ಚೀನಾ ನಿಯಂತ್ರಿಸಲು ತೈವಾನ್ ಪ್ರಶ್ನೆ ಬಳಸುವ ಪ್ರಯತ್ನ ಫಲಿಸಿಲ್ಲ ಎಂದಿದೆ ಚೀನಾ. ಹಾಗಾದರೆ ಈ ರೀತಿ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದು ಯಾಕೆ? ತಿಳಿಯೋಣ ಬನ್ನಿ.
ತೈವಾನ್ ವಿಚಾರದಲ್ಲಿ ಅಮೆರಿಕ ಅಥವಾ ಅಮೆರಿಕದ ಸ್ನೇಹಿತ ದೇಶಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಚೀನಾ ಸದಾ ವಿರೋಧ ವ್ಯಕ್ತಪಡಿಸುತ್ತಿದೆ. ಇದರ ಜೊತೆಗೆ ತೈವಾನ್ ವಿಚಾರ ಪ್ರಸ್ತಾಪ ಮಾಡುತ್ತಾ ಚೀನಾ ವಿರುದ್ಧ ಷಡ್ಯಂತ್ರ ಹೆಣೆಯುತ್ತಿರುವ ಆರೋಪವನ್ನು ಕೂಡ ಚೀನಾ ಮಾಡಿದೆ. ಇದೇ ಹೊತ್ತಲ್ಲಿ ತೈವಾನ್ ಬಗ್ಗೆ ಮತ್ತೊಮ್ಮೆ ತನ್ನ ನಿಲುವನ್ನು ಚೀನಾ ಬಹಿರಂಗಪಡಿಸಿದೆ. ರಷ್ಯ ರಾಜಧಾನಿ ಮಾಸ್ಕೋದ ಕುಬಿಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಭದ್ರತೆ ಕುರಿತಾದ 11ನೇ ಮಾಸ್ಕೋ ಸಮ್ಮೇಳನದಲ್ಲಿ ಈ ಹೇಳಿಕೆ ಬಂದಿದೆ. ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ಫು ಹೀಗೆ ನೇರ ಸಂದೇಶ ರವಾನಿಸಿದ್ದಾರೆ.

ಹೊರಗಿನವರು ತಲೆ ಹಾಕೋದು ಬೇಡ
ತೈವಾನ್ ತನ್ನದೇ ಭಾಗ, ಚೀನಾ ಮತ್ತೆ ಒಂದಾಗಲಿದೆ ಎಂಬುದು ಚೀನಾ ನಾಯಕರಿಂದ ಪದೇ ಪದೆ ಕೇಳಿಬರುವ ಹೇಳಿಕೆ. ಅದ್ರಲ್ಲೂ ಚೀನಾದ ಮುಖ್ಯ ಪ್ರದೇಶಕ್ಕೆ ತೈವಾನ್ ಕೂಡ ಮತ್ತೆ ಬಂದು ಸೇರಲಿದೆ ಎಂಬ ವಾದವನ್ನೇ ಚೀನಾ ಮಂಡಿಸುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಬೇರೆ ರಾಷ್ಟ್ರಗಳು ತೈವಾನ್ ಜೊತೆ ಬೆರೆಯುವುದು ಚೀನಾಗೆ ಕೋಪ ತರಿಸುತ್ತಿದೆ. ಈಗಲೂ ಅದೇ ಮಾತನ್ನು ಪರೋಕ್ಷವಾಗಿ ಹೇಳಿರುವ ಜನರಲ್ ಲಿ ಶಾಂಗ್ಫು ಅವರು, ತೈವಾನ್ ಪ್ರಶ್ನೆ ಚೀನಾ ಆಂತರಿಕ ವಿಚಾರ. ಈ ವಿಚಾರದಲ್ಲಿ ಹೊರಗಿನವರು ಎಂಟ್ರಿ ಹಾಕುವುದು ಅನಗತ್ಯ ಎಂದಿದ್ದಾರೆ.
ನಮ್ಮ ಸೇನೆ ಶಾಂತಿಗೆ ಬದ್ಧ
ಹಾಗೇ ಇದೇ ವೇಳೆ ಚೀನಾ ಸೇನೆಯ ನಿಲುವಿನ ಬಗ್ಗೆ ಜನರಲ್ ಲಿ ಶಾಂಗ್ಫು ಸ್ಪಷ್ಟನೆ ನೀಡಿ ಮಾತನಾಡಿದರು. ಚೀನಾ ಸೇನೆ ವಿಶ್ವ ಶಾಂತಿ ಮತ್ತು ಸ್ಥಿರತೆಗೆ ದೃಢವಾದ ಶಕ್ತಿಯಾಗಿದೆ ಎಂದು ಹೇಳಿದ್ದಾರೆ. ಮಿಲಿಟರಿ ಭದ್ರತಾ ಕಾರ್ಯತಂತ್ರಗಳಲ್ಲಿ ಪರಸ್ಪರ ನಂಬಿಕೆಯನ್ನು ನಿರಂತರವಾಗಿ ಬಲಪಡಿಸಲು ಹಾಗೇ ವಿವಿಧ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಸಹಕಾರ ಬಲಪಡಿಸಲು, ಪ್ರಪಂಚದ ಪ್ರತಿ ದೇಶದ ಜತೆ ಕೆಲಸ ಮಾಡಲು ನಾವು ಸಿದ್ಧ ಎಂದಿದ್ದಾರೆ. ಹೀಗೆ ಚೀನಾ ತನ್ನ ನಿಲುವು ಸ್ಪಷ್ಟಪಡಿಸಿದ್ದು, ಮತ್ತೊಮ್ಮೆ ತೈವಾನ್ ತಂಟೆಗೆ ಬರಲೇಬೇಡಿ ಎಂಬ ಸಂದೇಶ ಕೊಟ್ಟಿದೆ.

ಚೀನಾ & ಅಮೆರಿಕ ನಡುವೆ ಕಿರಿಕ್ ಯಾಕೆ?
ಅಮೆರಿಕ ಸೇನೆ ತೈವಾನ್ ಪರ ನಿಂತಿದೆ. ಚೀನಾ ಅದೇ ವಿಚಾರ ಹಿಡಿದು ತೈವಾನ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದೆ. ಬೀಜಿಂಗ್ (Beijing) ಪದೇ ಪದೆ ತೈವಾನ್‌ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಇದೇ ಸಂದರ್ಭದಲ್ಲಿ ತೈವಾನ್‌ಗೆ ಅಮೆರಿಕ ಸಹಾಯ ಮಾಡುತ್ತಾ, ವ್ಯಾಪಾರದಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದೆ. ಇದೇ ಕಾರಣಕ್ಕೆ ಚೀನಾ ಮೈಕೊಡವಿ ನಿಂತು, ಅಮೆರಿಕ ಸೇನೆ ವಿರುದ್ಧ ಜಗಳಕ್ಕೆ ಬರ್ತಿದೆ. ಈ ವೇಳೆ ಅಮೆರಿಕ ಕೂಡ ಎಚ್ಚರಿಕೆ ಸಂದೇಶ ನೀಡುತ್ತಿದೆ. ಹೀಗಾಗಿ ಅಮೆರಿಕ & ಚೀನಾ ಮಧ್ಯೆ ಭೀಕರ ಯುದ್ಧ ನಡೆಯುತ್ತಾ? ಅನ್ನೋ ಡೌಟ್ ಇಡೀ ಜಗತ್ತನ್ನೇ ಈ ಸಂದರ್ಭದಲ್ಲಿ ಕಾಡಲು ಶುರು ಮಾಡಿದೆ.

ಸದ್ಯದ ಸ್ಥಿತಿಯಲ್ಲಿ ಜಗತ್ತಿಗೆ ಯುದ್ಧ ಬೇಡ, ಹೀಗಾಗಿ ಚೀನಾ ಮತ್ತು ಅಮೆರಿಕದ ನಡುವೆ ಶಾಂತಿ ಮೂಡಲಿ ಎಂಬ ಬಯಕೆ ಜಗತ್ತಿನದ್ದು. ಆದರೆ ದಕ್ಷಿಣ ಚೀನಾ ಸಮುದ್ರದ ವಿಚಾರ ಹಾಗೂ ತೈವಾನ್ ವಿಷಯದಲ್ಲಿ ಅಮೆರಿಕ ಹಾಗೂ ಚೀನಾ ಮಧ್ಯೆ ಕಿರಿಕಿರಿ ಮುಂದುವರಿದೆ. ಈ ತಿಕ್ಕಾಟ ಯಾವಾಗ ನಿಲ್ಲುತ್ತೆ? ಸಮಸ್ಯೆ ಸಂಪೂರ್ಣವಾಗಿ ಯಾವಾಗ ಬಗೆಹರಿಯಲಿದೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications