ಜಾಕಿ ಚಾನ್ ಮಗ ಡ್ರಗ್ಸ್ ಕೇಸಿನಲ್ಲಿ ಬಂಧನ
ಬೀಜಿಂಗ್, ಸೆ. 17: ಹಾಂಕಾಂಗ್‌ನ ಮಾರ್ಷಲ್ ಆರ್ಟ್ಸ್ ಚಿತ್ರಗಳ ಸ್ಟಾರ್ ಜಾಕಿ ಚಾನ್ ಅವರ ಪುತ್ರ ಡ್ರಗ್ಸ್ ಪೂರೈಕೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಬೀಜಿಂಗ್ ಪೊಲೀಸರು ಜೇಯ್ಸಿ ಚಾನ್‌ರನ್ನು ಅಧಿಕೃತವಾಗಿ ಬಂಧಿಸಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ಆರೋಪ ಸಾಬೀತಾದರೆ ಗರಿಷ್ಠ ಮೂರು ವರ್ಷಗಳ ಸೆರೆವಾಸದ ಶಿಕ್ಷೆ ಕಾದಿದೆ.
ಒಂದು ವಾರದ ಹಿಂದೆ ಪೊಲೀಸರು ನಟ ಜೇಯ್ಸಿ ಚಾನ್‌ನ ರನ್ನು ಬಂಧಿಸಲು ಮನವಿ ಮಾಡಿದ್ದರು. ಜೇಯ್ಸಿ ಅಧಿಕೃತ ಬಂಧನಕ್ಕೆ ಅನುಮೋದನೆ ನೀಡಿರುವುದಾಗಿ ಡಾಂಗ್‌ಚೆಂಗ್ ಜಿಲ್ಲಾ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.
ಆಗಸ್ಟ್ 14ರಂದು ಚೀನಾ ಅಧಿಕಾರಿಗಳು ನಡೆಸಿದ ಮಾದಕ ದ್ಯವ್ಯ ನಿಗ್ರಹ ಕಾರ್ಯಾಚರಣೆಯ ವೇಳೆ 31 ವರ್ಷದ ಜೇಯ್ಸಿ ಚಾನ್‌ರನ್ನು ಪೊಲೀಸರು ಬಂಧಿಸಿದ್ದರು. ಈ ಕಾರ್ಯಾಚರಣೆಯ ವೇಳೆ ಅತ್ಯಂತ ಪ್ರತಿಷ್ಠಿತ ಖ್ಯಾತನಾಮ ವ್ಯಕ್ತಿಗಳು ಸೆರೆ ಸಿಕ್ಕಿದ್ದರು. ಜೇಯ್ಸಿ ಜೊತೆಗೆ ತೈವಾನ್‌ನ ಚಿತ್ರ ತಾರೆ ಕೋ ಕಾಯ್‌ರನ್ನೂ ಬಂಧಿಸಲಾಗಿತ್ತು.

ಈ ಇಬ್ಬರೂ ನಟರು ಮರಿಜುವಾನ ಸೇವಿಸಿದ್ದು ಪರೀಕ್ಷೆಗಳಲ್ಲಿ ಖಾತ್ರಿಯಾಗಿತ್ತು. ಅದೂ ಅಲ್ಲದೆ, ತಾವು ಮಾದಕ ದ್ರವ್ಯವನ್ನು ಬಳಸುವುದನ್ನು ಇಬ್ಬರೂ ನಟರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದರು.100 ಗ್ರಾಂ ಮಾದಕ ದ್ರವ್ಯವನ್ನು ಪೊಲೀಸರು ಚಾನ್‌ರ ಮನೆಯಿಂದ ವಶಪಡಿಸಿಕೊಂಡಿದ್ದರು.
ಚೀನಾದಲ್ಲಿ ಆರೋಪಿಯನ್ನು ಬಂಧಿಸಲು ಪ್ರಾಸಿಕ್ಯೂಟರ್ ಅವರ ಅಧಿಕೃತ ಒಪ್ಪಿಗೆ ಅಗತ್ಯವಿದೆ. ಅಧಿಕೃತ ಬಂಧನವಾದ ಮೇಲೆ ವಿಚಾರಣೆ ಕೈಗೊಳ್ಳಬಹುದು. ನಟ ಕೋ ಅವರು 14 ದಿನ ನ್ಯಾಯಾಂಗ ಬಂಧನ ಅನುಭವಿಸಿ ಹೊರಬಂದ ಮೇಲೆ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಡ್ರಗ್ಸ್, ಧೂಮಪಾನದಿಂದ ನಿಮ್ಮ ಮುಂದೆ ತಲೆತಗ್ಗಿಸುತ್ತಿದ್ದೇನೆ ಎಂದು ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದರು.
ದುರಂತವೆಂದರೆ 2009ರಲ್ಲಿ ಚಾಕಿ ಚಾನ್ ಅವರು ಮಾದಕ ದ್ರವ್ಯ ಬಳಕೆ ವಿರೋಧಿ ಅಭಿಯಾನದ ರಾಯಭಾರಿಯಾಗಿದ್ದರು. ಈಗ ತನ್ನ ಮಗನ ದುಷ್ಕೃತ್ಯದಿಂದ ತಲೆತಗ್ಗಿಸಿ ಎಲ್ಲರ ಕ್ಷಮೆಯಾಚಿಸಿದ್ದಾರೆ. ಅಧ್ಯಕ್ಷ ಜಿನ್ ಪಿಂಗ್ ಅವರು ಮಾದಕ ವ್ಯಸನಿಗಳ ವಿರುದ್ಧ ಸಮರ ಸಾರುವಂತೆ ಸರ್ಕಾರಕ್ಕೆ ಸೂಚನೆ ಕೊಟ್ಟ ಬೆನ್ನಲ್ಲೇ ದೇಶದ ವಿವಿಧೆಡೆ ದಾಳಿ ನಡೆಸಲಾಗಿತ್ತು.












Click it and Unblock the Notifications