Donald Trump Tariff: ಅಮೆರಿಕ ವಿರುದ್ಧ ಶೇ. 34ರಷ್ಟು ತೆರಿಗೆ ಹೇರಿದ ಚೀನಾ!
ಅಮೆರಿಕ & ಚೀನಾ ನಡುವೆ ತೆರಿಗೆ ಕದನ ಆರಂಭವಾಗಿದ್ದು, ಎರಡೂ ದೇಶಗಳು ಹೊಸದಾಗಿ ಯುದ್ಧವನ್ನೇ ಶುರು ಮಾಡಿಬಿಟ್ಟಿವೆ. ಡೊನಾಲ್ಡ್ ಟ್ರಂಪ್ ಅವರು ಮೊದಲಿಗೆ ಭಾರಿ ದೊಡ್ಡ ಮೊತ್ತದ ತೆರಿಗೆ ಹೇರಿಕೆ ಮಾಡಿ ನಿರ್ಧಾರ ಪ್ರಕಟಿಸಿದ್ದರು. ಆ ನಂತರ ಬಿರುಗಾಳಿ ಎದ್ದಿದ್ದು, ಚೀನಾ ಕೂಡ ಸೇಡಿಗೆ ಸೇಡು ತೀರಿಸಿಕೊಂಡಿದೆ. ಹಾಗಾದ್ರೆ ಇದೀಗ ಚೀನಾ ಕೈಗೊಂಡಿರುವ ಮಹತ್ವದ ನಿರ್ಧಾರಗಳು ಯಾವುವು? ಬನ್ನಿ ತಿಳಿಯೋಣ.
ಅಮೆರಿಕ & ಚೀನಾ ನಡುವೆ ಆಗಾಗ ತೆರಿಗೆ ಯುದ್ಧ ನಡೆಯುತ್ತಲೇ ಬಂದಿದೆ. ಈ ಹಿಂದೆಯೂ ಡೊನಾಲ್ಡ್ ಟ್ರಂಪ್ ಚೀನಾ ಜೊತೆಗೆ ತೆರಿಗೆ ಕಿರಿಕ್ ಮಾಡಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿಯ ಫೈಟಿಂಗ್ ಶುರುವಾಗಿದ್ದು, ಚೀನಾ ಈ ವಿಚಾರದಲ್ಲಿ ಯಾವ ರೀತಿ ನಿರ್ಧಾರವನ್ನು ಕೈಗೊಳ್ಳಲಿದೆ? ಎಂಬ ಕುತೂಹಲ ಮೂಡಿತ್ತು. ಆರ್ಥಿಕವಾಗಿ ಬೀದಿಗೆ ಬೀಳುವ ಭಯದಲ್ಲಿ ಅಮೆರಿಕ ಏನೇನೋ ನಿರ್ಧಾರ ಪ್ರಕಟಿಸಿ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗುತ್ತಿದೆ. ಇದೇ ವೇಳೆ ಷೇರು ಮಾರುಕಟ್ಟೆ ಕೂಡ ಅಲ್ಲಾಡಿ ಹೋಗಿದ್ದು, ಹೂಡಿಕೆ ಮಾಡಿದ್ದವರಿಗೆ ಭಯದ ವಾತಾವರಣ ಎದುರಾಗಿದೆ. ಇಂತಹ ಸಮಯದಲ್ಲೇ ಚೀನಾ ಕೂಡ ಭರ್ಜರಿ ತೆರಿಗೆ ಹಾಕಲು ಮುಂದಾಗಿದೆ.

ಕುಸಿದು ಬಿದ್ದ ಅಮೆರಿಕ ಮಾರುಕಟ್ಟೆ
ಡೊನಾಲ್ಡ್ ಟ್ರಂಪ್ ಹಾಕಿರುವ ಲೆಕ್ಕಾಚಾರ ಇದೀಗ ಉಲ್ಟಾ ಆಗುತ್ತಿದ್ದು, ಅಮೆರಿಕದ ಷೇರು ಪೇಟೆ ಮಕಾಡೆ ಮಲಗುತ್ತಿದೆ. ಟ್ರಂಪ್ ಅವರ ಹೊಸ ತೆರಿಗೆ ನೀತಿಯಿಂದ ಭಯ ಎದುರಾಗಿದೆ. ಅಮೆರಿಕದ ಷೇರು ಸೂಚ್ಯಂಕ ನಾಸ್ಡಾಕ್ ಕಾಂಪೋಸಿಟ್ ಸುಮಾರು 962.82 ಅಂಕಗಳನ್ನು ಕಳೆದುಕೊಂಡು ಬರೋಬ್ಬರಿ ಶೇ. 5.82 ರಷ್ಟು ಕುಸಿತ ಕಂಡಿದೆ. ಹಾಗೇ ಇನ್ನುಳಿದ ಪ್ರಮುಖ ಸೂಚ್ಯಂಕಗಳು ಕೂಡ ಮಕಾಡೆ ಮಲಗಿವೆ. ಇದು ಸಾಲದು ಎನ್ನುವಂತೆ ಎಲಾನ್ ಮಸ್ಕ್‌ರ ಟೆಸ್ಲಾ ಕಂಪನಿ ಶೇರುಗಳು ಒಂದೇ ದಿನ ಶೇ. 10.42 ರಷ್ಟು ಕುಸಿದು ಬಿದ್ದು, 239.43 ಡಾಲರ್ ತಲುಪಿವೆ. ಇಂತಹ ಸಮಯದಲ್ಲೇ ಚೀನಾ ಕೂಡ ಹೆಚ್ಚಿನ ತೆರಿಗೆ ಹೇರಿಕೆ ಮಾಡಿದೆ.
ಚೀನಾ ಕಡೆಯಿಂದಲೂ ಭರ್ಜರಿ ತೆರಿಗೆ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿರುವ ಹೊಸ ತೆರಿಗೆ ನೀತಿಯ ವಿರುದ್ಧ ರೊಚ್ಚಿಗೆದ್ದಿರುವ ಚೀನಾ, ಸೇಡಿಗೆ ಸೇಡು ಎನ್ನುವಂತೆ ಅಮೆರಿಕ ರಫ್ತು ಮಾಡುವ ವಸ್ತುಗಳ ವಿರುದ್ಧ ಭರ್ಜರಿ 34 ಪರ್ಸೆಂಟ್ ತೆರಿಗೆ ಹಾಕಲು ಮುಂದಾಗಿದೆ. ಇದೇ ತಿಂಗಳು ಅಂದ್ರೆ ಏಪ್ರಿಲ್ 10 ರಿಂದ ಅಮೆರಿಕ ವಿರುದ್ಧ ಚೀನಾ ಶೇಕಡಾ 34 ರಷ್ಟು ತೆರಿಗೆ ಹಾಕಲು ನಿರ್ಧಾರ ಮಾಡಿದೆ. ಇದು ಡೊನಾಲ್ಡ್ ಟ್ರಂಪ್ ಅವರಿಗೆ ಹೊಸ ತಲೆನೋವು ತರಿಸಿದ್ದು, ಈಗಾಗಲೇ ಆರ್ಥಿಕವಾಗಿ ನರಳಿ ಹೋಗಿರುವ ಅಮೆರಿಕಗೆ ಇದು ಮತ್ತಷ್ಟು ಹಿನ್ನಡೆ ತರಿಸಿದೆ.
ಒಟ್ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಕೈಗೊಂಡ ನಿರ್ಧಾರಕ್ಕೆ ಪ್ರತಿಯಾಗಿ ಇದೀಗ ಬೇರೆ ಬೇರೆ ದೇಶಗಳು ಕೂಡ ಹೆಚ್ಚಿನ ತೆರಿಗೆ ವಿಧಿಸಲು ನಿರ್ಧಾರ ಕೈಗೊಂಡಿವೆ. ಇದು, ಮುಂದಿನ ಸ್ಥಿತಿ ಇನ್ನಷ್ಟು ಕಗ್ಗಂಟು ಮಾಡುವ ಭಯ ಇದ್ದು, ಈಗಾಗಲೇ ಆರ್ಥಿಕ ತಜ್ಞರು ಆರ್ಥಿಕತೆ ಕುಸಿತ ಕಾಣುವ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications