ನಾವಿದ್ದೀವಿ, ಟೆನ್ಷನ್ ತಗೋಬೇಡಿ ಅಂತಿದೆ ಅಮೆರಿಕ!
ವಾಷಿಂಗ್ಟನ್: ಚೀನಾ ಸೇನೆ ತೈವಾನ್ ಸರ್ಕಾರನ ಹೊಸಕಿ ಹಾಕ್ತೀವಿ ಅಂತಾ ಎಚ್ಚರಿಕೆ ನೀಡಿದ ಮರುದಿನವೇ ಅಮೆರಿಕ ಅಲರ್ಟ್ ಆಗಿದೆ. ತನ್ನ ಸ್ನೇಹಿತ ತೈವಾನ್ ನೆರವಿಗೆ ನಿಲ್ಲುವ ಭರವಸೆ ನೀಡಿದ್ದಾನೆ ದೊಡ್ಡಣ್ಣ. ಈ ಬಗ್ಗೆ ಬೈಡನ್ ಸರ್ಕಾರ ಮಾಹಿತಿ ನೀಡಿದ್ದು, ತೈವಾನ್ ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಶಸ್ತ್ರಾಸ್ತ್ರ & ಯುದ್ಧ ನೌಕೆಗಳನ್ನ ತೈವಾನ್‌ಗೆ ಕಳುಹಿಸಿಕೊಡುವ ಚಿಂತನೆ ನಡೆಸಿದೆ.
ಈಗಾಗಲೇ ಚೀನಾ ಸೇನೆ ತೈವಾನ್ ದೇಶವನ್ನ ಸುತ್ತುವರಿದಿದೆ. ತನ್ನ ಅತ್ಯಂತ ಶಕ್ತಿಶಾಲಿ ಡ್ರೋನ್‌ಗಳನ್ನ ಅಲ್ಲಿ ಬಿಡಾರ ಹೂಡಿಸಿರುವ ಚೀನಾ, ಮನಸ್ಸಿಗೆ ಬಂದಂತೆ ವರ್ತಿಸುತ್ತಿರುವ ಆರೋಪವೂ ಕೇಳಿಬಂದಿದೆ. ಇಷ್ಟೆಲ್ಲಾ ಕಿರಿಕ್ ನಡುವೆ ತೈವಾನ್ ಸರ್ಕಾರವನ್ನೇ ಕೆಡವುತ್ತೇವೆ ಎನ್ನುವ ರೀತಿ ಚೀನಾ ಸೇನೆ ಎಚ್ಚರಿಕೆ ನೀಡಿತ್ತು. ಇದೇ ಮಾತು ಈಗ ಅಮೆರಿಕನ ರೊಚ್ಚಿಗೆಬ್ಬಿಸಿದೆ. ತೈವಾನ್ ಮುಟ್ಟಿದರೆ ಮುಂದಿನ ಪರಿಣಾಮ ನೆಟ್ಟಗಿರಲ್ಲ ಎನ್ನುವ ರೀತಿ ಮಾತನಾಡಿರುವ ಅಮೆರಿಕ, ಇನ್ನಷ್ಟು ಯುದ್ಧ ನೌಕೆ ಕಳಿಹಿಸುವ ಬಗ್ಗೆ ಚಿಂತನೆ ನಡೆಸಿದೆ.

ತೈವಾನ್‌ಗೆ ಭಾರಿ ಗಿಫ್ಟ್?
ಈಗಾಗಲೇ ಅಮೆರಿಕ ತನ್ನ ಸ್ನೇಹಿತ ಮತ್ತು ಚೀನಾದ ಶತ್ರು ತೈವಾನ್‌ಗೆ ಭಾರಿ ದೊಡ್ಡ ಮೊತ್ತದ ಶಸ್ತ್ರಾಸ್ತ್ರಗಳ ನೆರವು ನೀಡುವ ಬಗ್ಗೆ ಮಾತು ಕೊಟ್ಟಿದೆ. ಸಾವಿರಾರು ಕೋಟಿ ಬೆಲೆಯ ಶಸ್ತ್ರಾಸ್ತ್ರಗಳನ್ನ ತೈವಾನ್‌ಗೆ ಕಳಿಸಲು ಸಿದ್ಧತೆ ಕೂಡ ಸಾಗಿದೆ. ಹಾಗೇ ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದ ಸಮೀಪದಲ್ಲೇ ಅಮೆರಿಕ ಯುದ್ಧ ನೌಕೆ ಬಿಡಾರ ಹೂಡಿದೆ. ಇದರ ಜೊತೆಗೆ ಮತ್ತಷ್ಟು ಯುದ್ಧ ನೌಕೆ ಹಾಗೂ ಅಗತ್ಯವಾದ ವೆಪನ್ಸ್ ಕಳಿಹಿಸುವ ಬಗ್ಗೆ ಅಮೆರಿಕ ಮುನ್ಸೂಚನೆ ಕೊಟ್ಟಿರುವುದು ಚೀನಾ ಸೇನೆಯನ್ನ ಕೆರಳಿಸಿದೆ.
ತೈವಾನ್ ಹೊಸಕಿ ಹಾಕುತ್ತಾ ಚೀನಾ?
ಹೌದು, ಅತ್ತ ಅಮೆರಿಕ ಸೇನೆ ತೈವಾನ್ ಪರ ಗಟ್ಟಿಯಾಗಿ ನಿಂತಿದೆ. ಇತ್ತ ಚೀನಾ ಅದೇ ವಿಚಾರ ಹಿಡಿದು ತೈವಾನ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದೆ. ಈಗ ಬೀಜಿಂಗ್ (Beijing) ನೀಡಿರುವ ಎಚ್ಚರಿಕೆ ಸಂದೇಶ ತೈವಾನ್‌ಗೆ ನಡುಕ ತರಿಸಿದೆ. ಅದೇನೆಂದರೆ ತೈವಾನ್ ದೇಶದ ಅಮೆರಿಕ ಸ್ನೇಹಿ ಸರ್ಕಾರ ಹೊಸಕಿ ಹಾಕಿ, ತೈವಾನ್‌ನ ಸಂಪೂರ್ಣವಾಗಿ ವಶ ಮಾಡಿಕೊಳ್ಳುವುದಾಗಿ ಚೀನಾ (China) ಹೇಳಿದೆ. ಹಾಗಾದರೆ ಚೀನಾ ತಾನು ಹೇಳಿದಂತೆ ಮಾಡೇ ಬಿಡುತ್ತಾ? ಎಂಬ ಪ್ರಶ್ನೆ ತೈವಾನ್‌ನ ಕಾಡುತ್ತಿದೆ.

ಅಮೆರಿಕದ ಸಹವಾಸ ತಂದಿಟ್ಟ ಆತಂಕ!
ಅಷ್ಟಕ್ಕೂ ತೈವಾನ್ ನಾಯಕರು ಅಮೆರಿಕದ ಸಹವಾಸ ಮಾಡಿ ಪರದಾಡುತ್ತಿದ್ದಾರೆ. ಯಾಕಂದ್ರೆ ಅಮೆರಿಕ ಬೃಹತ್ ಮೊತ್ತದ ಸಹಾಯ ಮಾಡಲು ಮುಂದೆ ಬಂದಿದ್ದು ತೈವಾನ್ ಸೇನೆಗೆ ಚೀನಾ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರವನ್ನ ಪೂರೈಕೆ ಮಾಡುತ್ತಿದೆ. ಇದು ಚೀನಾ ಸೇನೆ ಕೆರಳಿಸಿದ್ದು, ತೈವಾನ್ ಸರ್ಕಾರವನ್ನ ಹೊಸಕಿ ಹಾಕುವ ಎಚ್ಚರಿಕೆ ನೀಡಿದೆ. ಹಾಗಾದ್ರೆ ಚೀನಾ ನಿಜವಾಗೂ ತೈವಾನ್ ವಿರುದ್ಧ ಯುದ್ಧ ಸಾರುತ್ತಾ? ಯುದ್ಧ ಸಾರಿದ್ರೆ ಮುಂದೆ ಏನೆಲ್ಲ ಸಂಕಷ್ಟ ಎದುರಾಗಬಹುದು? ತಿಳಿಯೋಣ ಬನ್ನಿ.
3ನೇ ಮಹಾಯುದ್ಧದ ಆತಂಕ ಏಕೆ?
ಚೀನಾ ರೊಚ್ಚಿಗೆದ್ದಿದೆ ಅಮೆರಿಕ ವಿರುದ್ಧದ ಸಿಟ್ಟಲ್ಲಿ ಏನೇನೋ ಮಾಡಲು ಹೋಗುತ್ತಿದೆ. ಭೀಕರ ಸಮರಕ್ಕೆ ಚೀನಾ ಸೇನೆ ಸಿದ್ಧತೆ ನಡೆಸಿದೆ. ಇದರ ಮೊದಲ ಭಾಗವಾಗಿ ತೈವಾನ್ (Taiwan) ಗಡಿ ಆಕ್ರಮಿಸಿಕೊಳ್ತಿದೆ. ದ್ವೀಪರಾಷ್ಟ್ರದ ಸುತ್ತಲೂ ನೌಕಾಪಡೆಯ ಯುದ್ಧನೌಕೆ ಹಾಗೂ ಯುದ್ಧ ವಿಮಾನಗಳನ್ನ ರವಾನಿಸಿರುವ ಚೀನಾ, ಮತ್ತಷ್ಟು ಭೀಕರ ಅಸ್ತ್ರಗಳನ್ನ ತೈವಾನ್ ಗಡಿಗೆ ಸಾಗಿಸುತ್ತಿದೆ. ಇದೇ ಹೊತ್ತಲ್ಲಿ ತೈವಾನ್‌ಗೆ ಅಮೆರಿಕ ಬೆಂಬಲ ನೀಡಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಇದು 3ನೇ ಮಹಾಯುದ್ಧದ ಆತಂಕ ಮೂಡುವಂತೆ ಮಾಡಿದೆ.

ಸಮಸ್ಯೆ ಶುರುವಾಗಿದ್ದು ಎಲ್ಲಿಂದ?
ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಕಿತಾಪತಿ ಮಾಡುತ್ತಿದೆ. ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದಷ್ಟೇ ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನ ಪ್ರಯಾಣಿಸಿಕೊಂಡು ಹೋಗಿತ್ತು ಅಮೆರಿಕ. ಬಳಿಕ ಚೀನಾ ತನ್ನ ಶಕ್ತಿ ಏನು ಅಂತಾ ಶತ್ರು ರಾಷ್ಟ್ರ ತೈವಾನ್‌ಗೆ ತೋರಿಸುತ್ತಲೇ ಇದೆ. ತೈವಾನ್ ವಿರುದ್ಧ ನೇರವಾಗಿ ತೊಡೆತಟ್ಟಿ, ರಣವೀಳ್ಯ ನೀಡಿದೆ ಚೀನಾ. ಹೀಗಾಗಿ ತೈವಾನ್ ಮತ್ತು ಚೀನಾ ಗಡಿಯಲ್ಲಿ ಯಾರೂ ಊಹಿಸದ ಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications