China Rain: ಚೀನಾಗೆ ಈಗಲೇ ತಪ್ಪುವುದಿಲ್ಲ ಚಂಡಮಾರುತ ಕಂಟಕ!
ಬೀಜಿಂಗ್: ಪ್ರಕೃತಿ ಮಾತೆ ಮುನಿದರೆ ಮನುಷ್ಯ ಏನೂ ಮಾಡಲು ಆಗಲ್ಲ. ಹೀಗೆ ಪ್ರಕೃತಿಗೆ ದೊಡ್ಡ ದೇಶ, ಶಕ್ತಿಶಾಲಿ ದೇಶ, ಶ್ರೀಮಂತ ದೇಶ, ಬಡ ದೇಶ ಎನ್ನುವ ತಾರತಮ್ಯ ಇಲ್ಲ. ಈ ಕಾರಣಕ್ಕೆ ಪ್ರಕೃತಿ ಒಮ್ಮೆ ಮುನಿದರೆ ಸಾಕು ಎಂತಹ ಶಕ್ತಿಶಾಲಿ ದೇಶವಾದರೂ ನಲುಗಿ ಹೋಗುತ್ತದೆ. ಈಗ ಚೀನಾ ಸ್ಥಿತಿ ಕೂಡ ಅದೇ ಆಗಿದೆ. ಜುಲೈನಲ್ಲಿ ಚಂಡಮಾರುತ ಅಬ್ಬರ ಮತ್ತು ಪ್ರವಾಹಕ್ಕೆ ನಲುಗಿದ್ದ ಚೀನಾದಲ್ಲಿ ಮತ್ತೆ ಈಗ ಶಾಕ್ ಎದುರಾಗಿದೆ.
ಚೀನಾದಲ್ಲಿ ಈಗ ಎದುರಾಗಿರುವ ಸಮಸ್ಯೆ ಸರಿಪಡಿಸಲು ಇನ್ನೂ ಹಲವು ತಿಂಗಳೇ ಬೇಕು. ಇದೇ ಸಂದರ್ಭದಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ. ಕೊರೊನಾ ಕಂಟಕದ ನಂತರ ಹಲವು ರೀತಿ ಸಮಸ್ಯೆ ಎದುರಿಸುತ್ತಿರುವ ಚೀನಾದಲ್ಲಿ ಪ್ರಾಕೃತಿಕ ವಿಕೋಪ ಕೂಡ ಇದೀಗ ತಲೆನೋವು ತಂದಿಟ್ಟಿದೆ. ಜುಲೈ ರೀತಿಯಲ್ಲೇ ಆಗಸ್ಟ್ ತಿಂಗಳಲ್ಲಿ ಹಲವು ಚಂಡಮಾರುತಗಳು ಚೀನಾಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ ಎನ್ನಲಾಗಿದೆ. ಹೀಗಾಗಿ ಮತ್ತೆ ಭಾರಿ ಮಳೆ ಹಾಗೂ ಪ್ರವಾಹದ ಭೀತಿಯಲ್ಲಿ ಚೀನಾ ಜನರು ನಲುಗುವಂತಾಗಿದೆ.

ಚೀನಾ ಜೊತೆಗೆ ಜಪಾನ್‌ಗೂ ಕಂಟಕ
ಪ್ರಾಕೃತಿಕ ವಿಕೋಪಗಳ ಕಾರಣ ಚೀನಾ ರೀತಿ ಜಪಾನ್ ಕೂಡ ನಲುಗುತ್ತಿದೆ. ಅದರಲ್ಲೂ ಹೊಸ ಹೊಸ ಸುಳಿಗಾಳಿ ಅಂದರೆ ಚಂಡಮಾರುತ ಎರಡೂ ದೇಶಗಳಿಗೆ ಕಂಟಕ ತಂದಿವೆ. ಆಗಸ್ಟ್ ತಿಂಗಳಲ್ಲಿ ಎರಡಕ್ಕಿಂತ ಹೆಚ್ಚು ಸೈಕ್ಲೋನ್ ಜಪಾನ್‌ಗೂ ಕಂಟಕ ತರುವ ಅಪಾಯ ಈಗ ಎದುರಾಗಿದೆ. ಚೀನಾ ಕೂಡ ಚಂಡಮಾರುತಗಳ ಅಬ್ಬರಕ್ಕೆ ತತ್ತರಿಸುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಈಗಾಗಲೇ ಮಳೆ ರೌದ್ರಾವತಾರಕ್ಕೆ ಚೀನಾ ಬೆಚ್ಚಿಬಿದ್ದಿದೆ. ಅದರಲ್ಲೂ ಚೀನಾ ರಾಜಧಾನಿ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಜನರು ನರಳುತ್ತಿದ್ದು, ಚೀನಾ ಸರ್ಕಾರವು ಕೂಡ ಪರಿಸ್ಥಿತಿ ನಿಭಾಯಿಸಲು ಪರದಾಡುತ್ತಿದೆ.
140 ವರ್ಷದಲ್ಲೇ ಅತ್ಯಧಿಕ ಮಳೆ
ಅಂದಹಾಗೆ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಕಳೆದ ಶನಿವಾರದಿಂದ ಇಲ್ಲಿಯವರೆಗೂ 744.8 ಮಿಲಿ ಮೀಟರ್ ಅಂದ್ರೆ 29.3 ಇಂಚು ಮಳೆ ಬಿದ್ದಿದೆ. ಇದು ಬರೋಬ್ಬರಿ 140 ವರ್ಷದಲ್ಲೇ ಅತ್ಯಧಿಕ ಮಳೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಡೊಕ್ಸುರಿ ಚಂಡಮಾರುತದ ಪರಿಣಾಮ ಚೀನಾ ನಲುಗಿದೆ. ದಕ್ಷಿಣ ಚೀನಾ ಪ್ರಾಂತ್ಯದಿಂದ ಉತ್ತರ ಚೀನಾದ ಕಡೆಗೆ ಸೈಕ್ಲೋನ್ ಚಲಿಸಿದ ಪರಿಣಾಮ ಬೀಜಿಂಗ್ ಹಾಗೂ ಹೆಬೈ ಸುತ್ತಮುತ್ತ 140 ವರ್ಷದಲ್ಲೇ ಅತ್ಯಧಿಕ ಮಳೆ ಬಿದ್ದಿದೆ.

ಭೀಕರ ಮಳೆಗೆ ಬಲಿಯಾದವರು ಎಷ್ಟು?
ಪ್ರವಾಹದ ಪರಿಣಾಮ ಹೇಗಿದೆ ಅಂದ್ರೆ ಚೀನಾದಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ. ವಿದ್ಯುತ್ ಅಭಾವದ ಜೊತೆಗೆ ಕುಡಿಯುವ ನೀರಿನ ಪೂರೈಕೆ ಕೂಡ ನಿಂತು ಹೋಗಿದೆ. ಈ ಸಮಸ್ಯೆಗಳ ಜೊತೆಗೆ ರೈಲು, ವಿಮಾನ ಪ್ರಯಾಣ ಕೂಡ ಬಂದ್ ಆಗಿದೆ. ಹೆಬೈ ಪ್ರಾಂತ್ಯದ ಝುಝೌನಲ್ಲಿ ಭಾರಿ ಹಾನಿ ಸಂಭವಿಸಿದ್ದು, ಅಧಿಕಾರಿಗಳು ಹಗಲು ರಾತ್ರಿ ಎನ್ನದ ಪರಿಸ್ಥಿತಿ ನಿಭಾಯಿಸಲು ಶ್ರಮಿಸುತ್ತಿದ್ದಾರೆ. ಚೀನಾ ರಾಜಧಾನಿ ಬೀಜಿಂಗ್ ಸುತ್ತಮುತ್ತ ಹಲವು ದಿನದಿಂದ ಭಾರಿ ಮಳೆ ಬೀಳುತ್ತಿದೆ. ಪರಿಣಾಮ 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಜತೆಗೆ ಇನ್ನೂ ಹಲವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ.
ಅಷ್ಟಕ್ಕೂ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಪ್ರತಿವರ್ಷ ಕಡಿಮೆ ಬೀಳುವುದು ವಾಡಿಕೆ. ಆದ್ರೆ ಈ ಬಾರಿ ವರುಣ ದೇವ ಬೀಜಿಂಗ್ ಮೇಲೆ ವಕ್ರ ದೃಷ್ಟಿ ನೆಟ್ಟ ಪರಿಣಾಮ ಈ ಬೇಸಿಗೆಯಲ್ಲಿ ನಿರಂತರ ಮಳೆ ಬೀಳುತ್ತಿದೆ. ಪರಿಣಾಮ ಉತ್ತರ ಚೀನಾದ ಹಲವೆಡೆ ಪ್ರವಾಹ ಉಂಟಾಗಿ ಸಾವು ನೋವು ಸಂಭವಿಸಿದೆ. ಪ್ರವಾಹ ಭೀಕರತೆ ಕಂಡು ಚೀನಾ ಜನರು ಬೆಚ್ಚಿಬಿದ್ದಿದ್ದಾರೆ. ಹಾಗೇ ನಿಲ್ಲೋ ನಿಲ್ಲೋ ಮಳೆರಾಯ ಎಂದು ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಸರ್ಕಾರ ಕೂಡ ಅಲರ್ಟ್ ಆಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಆದರೆ ಈ ಹೊತ್ತಲ್ಲೇ ಮತ್ತೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.












Click it and Unblock the Notifications