ಕೈ ಕಾಲು ಕಟ್ ಆದ್ರೂ ಇನ್ನೂ ಚಿಂತಿಸಬೇಕಾಗಿಲ್ಲ, ಮತ್ತೆ ಜೋಡಿಸುವ ತಂತ್ರಜ್ಞಾನವೂ ಬಂದಿದೆ
ಕಳೆದುಕೊಂಡ ಬೆರಳು, ಕೈ ಅಥವಾ ಇಡೀ ಅಂಗವನ್ನು ಮರುಬೆಳವಣಿಗೆ ಮಾಡುವುದು ಮನುಷ್ಯರಿಗೆ ಸಾಧ್ಯವಿಲ್ಲ ಎನ್ನುವುದು ದೀರ್ಘಕಾಲದಿಂದ ಇರುವ ನಂಬಿಕೆ. ಸಲಾಮಾಂಡರ್ ಮತ್ತು ಆಕ್ಸೊಲೊಟ್ಲ್ನಂತಹ ಜೀವಿಗಳು ತಮ್ಮ ಅಂಗಗಳನ್ನು ಮರುಬೆಳವಣಿಗೆ ಮಾಡಿಕೊಳ್ಳಬಲ್ಲವು. ಕೆಲವು ಹಲ್ಲಿಗಳು ತುಂಡಾದ ತಮ್ಮ ಬಾಲವನ್ನು ಮತ್ತೆ ಬೆಳೆಸಿಕೊಳ್ಳಬಲ್ಲವು. ಆದರೆ, ಸಸ್ತನಿಗಳು ಸಾಮಾನ್ಯವಾಗಿ ಗಾಯದ ಕಲೆಗಳನ್ನು ರೂಪಿಸುವ ಮೂಲಕ ಗಾಯಗಳನ್ನು ವಾಸಿ ಮಾಡುತ್ತವೆ.
ಆದರೆ, ಟೆಕ್ಸಾಸ್ ಎ ಅಂಡ್ ಎಂ ವಿಶ್ವವಿದ್ಯಾಲಯದ ಹೊಸ ಅಧ್ಯಯನವು ಈ ಹಳೆಯ ನಂಬಿಕೆಯನ್ನು ಹುಸಿಗೊಳಿಸಿದೆ. 'ನೇಚರ್ ಕಮ್ಯುನಿಕೇಷನ್ಸ್' ಜರ್ನಲ್ನಲ್ಲಿ ಪ್ರಕಟವಾದ ಈ ಸಂಶೋಧನೆಯ ಪ್ರಕಾರ, ವಿಜ್ಞಾನಿಗಳು ಕಾಂಡಕೋಶಗಳ ಕಸಿ ಅಥವಾ ಜೆನೆಟಿಕ್ ಎಂಜಿನಿಯರಿಂಗ್ ಅನ್ನು ಅವಲಂಬಿಸಿದೆ. ನೈಸರ್ಗಿಕವಾಗಿ ಕಂಡುಬರುವ ಎರಡು ಪ್ರೋಟೀನ್ಗಳನ್ನು ಬಳಸಿ ಇಲಿಗಳ ತುಂಡಾದ ಬೆರಳುಗಳಲ್ಲಿ ಸಂಕೀರ್ಣ ಅಂಗಾಂಶಗಳ ಮರುಬೆಳವಣಿಗೆಯನ್ನು ಪ್ರಚೋದಿಸುವಲ್ಲಿ ಈ ಅಧ್ಯಯನ ಯಶಸ್ವಿಯಾಗಿದೆ.

ಮನುಷ್ಯನ ದೇಹವು ಕಳೆದುಕೊಂಡ ಅಂಗಗಳನ್ನು ಮತ್ತೆ ಬೆಳೆಸಿಕೊಳ್ಳಬಲ್ಲದೇ?:
ಡಿಜಿಟ್ ರಿಜನರೇಶನ್ ಇನ್ ಮೈಸ್ ಈಸ್ ಸ್ಟಿಮ್ಯುಲೇಟೆಡ್ ಬೈ ಸಿಕ್ವೆನ್ಶಲ್ ಟ್ರೀಟ್ಮೆಂಟ್ ವಿತ್ FGF2 ಆಂಡ್ BMP2 ಎಂಬ ಶೀರ್ಷಿಕೆಯ ಈ ಅಧ್ಯಯನವು, ಕೆಲವು ಪ್ರಾಣಿಗಳಲ್ಲಿ ಕಂಡುಬರುವ ಮರುಬೆಳವಣಿಗೆಯ ಸಾಮರ್ಥ್ಯವನ್ನು ಸಸ್ತನಿಗಳಲ್ಲೂ ಮರುಸಕ್ರಿಯಗೊಳಿಸಬಹುದೇ ಎಂಬುದರ ಬಗ್ಗೆ ಸಂಶೋಧನೆ ನಡೆಸಿದೆ.
ಇಲ್ಲಿ ವಿಜ್ಞಾನಿಗಳು ಸಾಮಾನ್ಯವಾಗಿ ಗುಣವಾಗುವ ಮಟ್ಟದಲ್ಲಿ ಇಲಿಗಳ ಬೆರಳುಗಳನ್ನು ಕತ್ತರಿಸಿದರು. ಈ ನೈಸರ್ಗಿಕ ಗುಣಪಡಿಸುವ ಪ್ರಕ್ರಿಯೆಯನ್ನು ಒಪ್ಪಿಕೊಳ್ಳುವ ಬದಲು, ಅವರು ಗಾಯಗಳಿಗೆ ಎರಡು 'ಗ್ರೋತ್ ಫ್ಯಾಕ್ಟರ್' ಪ್ರೋಟೀನ್ಗಳನ್ನು ನಿರ್ದಿಷ್ಟ ಸಮಯದ ಅಂತರದಲ್ಲಿ ನೀಡಿದರು. ಈ ಚಿಕಿತ್ಸೆಯು ಮೂಳೆ, ಕಾರ್ಟಿಲೆಜ್ (cartilage), ಸ್ನಾಯುರಜ್ಜುಗಳು (tendons), ಅಸ್ಥಿರಜ್ಜುಗಳು (ligaments) ಮತ್ತು ಕಾರ್ಯನಿರ್ವಹಿಸುವ ಕೀಲುಗಳು ಸೇರಿದಂತೆ ಹೊಸ ಅಸ್ಥಿಪಂಜರದ ರಚನೆಗಳ ಬೆಳವಣಿಗೆಯನ್ನು ಉತ್ತೇಜಿಸಿತು. ಇದು ಕೇವಲ ಹಾನಿಗೊಳಗಾದ ಅಂಗಾಂಶವನ್ನು ಬದಲಾಯಿಸುವ ಬದಲು ಬೆಳವಣಿಗೆಯ ಪ್ರಕ್ರಿಯೆಗಳನ್ನೇ ಮರುಪ್ರಾರಂಭಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಸಸ್ತನಿಯೊಂದರಲ್ಲಿ ಇಂತಹ ಸಂಕೀರ್ಣ ಮರುಬೆಳವಣಿಗೆಯನ್ನು ಪ್ರೇರೇಪಿಸಬಹುದು ಎಂಬುದಕ್ಕೆ ಇದು ಮೊದಲ ನಿದರ್ಶನವಾಗಿದೆ.
ಈ ಚಿಕಿತ್ಸೆ ಹೇಗೆ ಕೆಲಸ ಮಾಡಿತು?:
ಈ ಚಿಕಿತ್ಸೆಯು ನೈಸರ್ಗಿಕವಾಗಿ ಉತ್ಪತ್ತಿಯಾಗುವ ಎರಡು ಪ್ರೋಟೀನ್ಗಳನ್ನು ಒಂದರ ನಂತರ ಒಂದರಂತೆ ಅನ್ವಯಿಸುವುದರ ಮೇಲೆ ಅವಲಂಬಿಸಿದೆ:
FGF2 (ಫೈಬ್ರೊಬ್ಲಾಸ್ಟ್ ಗ್ರೋತ್ ಫ್ಯಾಕ್ಟರ್ 2): ಗಾಯವು ಮುಚ್ಚಿದ ನಂತರ ಮೊದಲ ಪ್ರೋಟೀನ್ ಅಂದರೆ ಫೈಬ್ರೊಬ್ಲಾಸ್ಟ್ ಬೆಳವಣಿಗೆಯ ಅಂಶ 2 (FGF2) ಅನ್ನು ಅನ್ವಯಿಸಲಾಯಿತು. ಗಾಯದ ಸ್ಥಳದಲ್ಲಿ ಜೀವಕೋಶಗಳನ್ನು ಬ್ಲಾಸ್ಟೀಮಾವನ್ನು ರೂಪಿಸಲು ಪ್ರೋತ್ಸಾಹಿಸುವುದು ಇದರ ಕೆಲಸ. ಇದು ಅಂಗಗಳನ್ನು ಮತ್ತೆ ಬೆಳೆಯುವ ಸಾಮರ್ಥ್ಯವಿರುವ ಪ್ರಾಣಿಗಳಲ್ಲಿ ಪುನರುತ್ಪಾದನೆಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಅಪಕ್ವ ಕೋಶಗಳ ತಾತ್ಕಾಲಿಕ ಸಂಗ್ರಹವಾಗಿದೆ.
BMP2 (ಬೋನ್ ಮೋರ್ಫೋಜೆನೆಟಿಕ್ ಪ್ರೋಟೀನ್ 2): ಕೆಲವು ದಿನಗಳ ನಂತರ ಇದನ್ನು ಅನ್ವಯಿಸಲಾಯಿತು. ಈ ಎರಡನೇ ಪ್ರೋಟೀನ್, ಬ್ಲಾಸ್ಟೆಮಾ ಕೋಶಗಳಿಗೆ ವಿಶೇಷ ಅಂಗಾಂಶಗಳಾಗಿ ಅಭಿವೃದ್ಧಿ ಹೊಂದಲು ಸೂಚನೆ ನೀಡುತ್ತದೆ. ಇದರಿಂದಾಗಿ ಹಾನಿಗೊಳಗಾದ ಬೆರಳು ಕೇವಲ ಗಾಯದ ಕಲೆಯಾಗಿ ಉಳಿಯುವ ಬದಲು ಬಹು ರಚನೆಗಳನ್ನು ಮರುನಿರ್ಮಾಣ ಮಾಡಲು ಸಾಧ್ಯವಾಯಿತು.
ಈ ಚಿಕಿತ್ಸೆಯ ಸಮಯ ಮತ್ತು ಅನುಕ್ರಮ ಎರಡೂ ಅತ್ಯಗತ್ಯ ಎನ್ನುವುದನ್ನು ಈ ಸಂಶೋಧನೆಯ ವೇಳೆ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಪ್ರೋಟೀನ್ಗಳನ್ನು ಬೇರೆ ರೀತಿಯಲ್ಲಿ ಬಳಸಿದರೆ ಇಂತಹ ಮರುಬೆಳವಣಿಗೆ ಸಾಧ್ಯವಾಗುವುದಿಲ್ಲ.
ಈ ಆವಿಷ್ಕಾರ ಏಕೆ ಮುಖ್ಯ?:
ಈ ಅಧ್ಯಯನದ ಅತ್ಯಂತ ಮಹತ್ವದ ಅಂಶವೆಂದರೆ, ಯಾವುದೇ ಬಾಹ್ಯ ಕಾಂಡಕೋಶಗಳನ್ನು (stem cells) ಸೇರಿಸದೆಯೇ ಮರುಬೆಳವಣಿಗೆಯನ್ನು ಇಲ್ಲಿ ಸಾಧಿಸಲಾಗಿದೆ. ಗಾಯದ ನಂತರ ಸಾಮಾನ್ಯವಾಗಿ ಕಲೆಗಳನ್ನು ಸೃಷ್ಟಿಸುವ ಜೀವಕೋಶಗಳಾದ 'ಫೈಬ್ರೊಬ್ಲಾಸ್ಟ್ಗಳನ್ನು' ಸಂಶೋಧಕರು ಬೇರೆ ದಿಕ್ಕಿನಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿದ್ದಾರೆ.
"ಈ ಜೀವಕೋಶಗಳು ಎರಡು ವಿಭಿನ್ನ ದಿಕ್ಕುಗಳಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಅವು ಗಾಯದ ಕಲೆಯನ್ನು ಉಳಿಸಬಹುದು ಅಥವಾ ಬ್ಲಾಸ್ಟೆಮಾವನ್ನು ಮಾಡಬಹುದು. ಗಾಯದ ಸ್ಥಳದಲ್ಲಿ ಈಗಾಗಲೇ ಇರುವ ಫೈಬ್ರೊಬ್ಲಾಸ್ಟ್ಗಳ ನಡವಳಿಕೆಯನ್ನು ಬದಲಾಯಿಸುವುದರ ಮೇಲೆ ನಮ್ಮ ಸಂಶೋಧನೆ ಕೇಂದ್ರೀಕರಿಸಲಾಗಿದೆ" ಎಂದು ಮುಖ್ಯ ಸಂಶೋಧಕ ಡಾ. ಕೆನ್ ಮುನಿಯೊಕಾ ವಿವರಿಸಿದ್ದಾರೆ.
ಈ ಸಂಶೋಧನೆಗಳು, ಸಸ್ತನಿಗಳಲ್ಲಿ ಮರುಬೆಳವಣಿಗೆಯ ಕಾರ್ಯಕ್ರಮಗಳು (regenerative programmes) ಇನ್ನೂ ಅಸ್ತಿತ್ವದಲ್ಲಿರಬಹುದು. ಆದರೆ ಗಾಯದ ನಂತರ ಸಾಮಾನ್ಯವಾಗಿ ಇದು ನಿಷ್ಕ್ರಿಯವಾಗಿರುತ್ತವೆ ಎಂದು ಸೂಚಿಸುತ್ತವೆ.ಸಈ ಸಂಶೋಧನೆಯನ್ನು ಇಲಿಗಳ ಮೇಲೆ ನಡೆಸಲಾಗಿದ್ದರೂ, ಇದು ಪುನರುತ್ಪಾದಕ ಔಷಧದ ಪರಿಕಲ್ಪನೆಗೆ ಪ್ರಮುಖ ಪುರಾವೆಯನ್ನು ಒದಗಿಸುತ್ತದೆ.
ಭವಿಷ್ಯದ ಸಂಭಾವ್ಯ ಉಪಯೋಗಗಳು:
ಅಂಗಚ್ಛೇದನಗಳ (amputations) ನಂತರದ ಚೇತರಿಕೆಯನ್ನು ಸುಧಾರಿಸುವುದು.
ಹಾನಿಗೊಳಗಾದ ಮೂಳೆಗಳು, ಕೀಲುಗಳು ಮತ್ತು ಸ್ನಾಯುರಜ್ಜುಗಳನ್ನು ಸರಿಪಡಿಸುವುದು.
ಗುಣಪಡಿಸಲು ಕಷ್ಟಕರವಾದ ಗಾಯಗಳಿಗೆ ಚಿಕಿತ್ಸೆ ನೀಡುವುದು.
ಶಸ್ತ್ರಚಿಕಿತ್ಸೆ ಅಥವಾ ಅಪಘಾತದ ನಂತರದ ಗಾಯದ ಕಲೆಗಳನ್ನು ಕಡಿಮೆ ಮಾಡುವುದು.
ಅಧ್ಯಯನದಲ್ಲಿ ಬಳಸಲಾದ BMP2 ಪ್ರೋಟೀನ್ ಅನ್ನು ಈಗಾಗಲೇ ಕೆಲವು ಮೂಳೆ ಶಸ್ತ್ರಚಿಕಿತ್ಸೆಗಳಿಗಾಗಿ ಅಮೆರಿಕದ FDA ಅನುಮೋದಿಸಿದೆ. FGF2 ಅನ್ನು ಅನೇಕ ಕ್ಲಿನಿಕಲ್ ಅಧ್ಯಯನಗಳಲ್ಲಿ ಪರಿಶೀಲಿಸಲಾಗಿದೆ. ಇವುಗಳ ಸುರಕ್ಷತೆಯು ಸಾಬೀತಾಗಿರುವುದರಿಂದ ಭವಿಷ್ಯದ ಸಂಶೋಧನೆಗಳನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ.
ಗಾಯದ ರಚನೆಯನ್ನು ಮಾತ್ರ ಸಂಭವನೀಯ ಫಲಿತಾಂಶವೆಂದು ನೋಡುವ ಬದಲು, ಸರಿಯಾದ ಪರಿಸ್ಥಿತಿಗಳಲ್ಲಿ, ದೇಹದ ಸ್ವಂತ ಜೀವಕೋಶಗಳನ್ನೇ ಮರುಬೆಳವಣಿಗೆಯತ್ತ ಮರುನಿರ್ದೇಶಿಸಬಹುದು ಎಂಬುದಕ್ಕೆ ಈ ಅಧ್ಯಯನ ಸಾಕ್ಷಿಯಾಗಿದೆ. ಈ ಆವಿಷ್ಕಾರವು ಸಂಶೋಧನೆಗೆ ಒಂದು ಅತ್ಯಾಕರ್ಷಕ ಹೊಸ ಮಾರ್ಗವನ್ನು ತೆರೆಯುತ್ತದೆ. ಹಾನಿಗೊಳಗಾದ ಅಥವಾ ಕಳೆದುಹೋದ ದೇಹದ ಭಾಗಗಳನ್ನು ಪುನಃಸ್ಥಾಪಿಸಲು ಸಹಾಯ ಮಾಡುವ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವತ್ತ ವಿಜ್ಞಾನಿಗಳನ್ನು ಒಂದು ಹೆಜ್ಜೆ ಹತ್ತಿರ ತಂದಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications