ಡ್ರಗ್ಸ್ ಸಾಗಿಸಲು ಗಡಿ ಪ್ರದೇಶದಲ್ಲಿ ಡ್ರೋನ್ ಬಳಸಿದ ಕಿರಾತಕರು!
ಜಲಂಧರ್: ಒಂದ್ಕಡೆ ಪಾಕಿಸ್ತಾನದ ಒಳಗೆ ಅರಾಜಕತೆ ತಾಂಡವ ಆಡುತ್ತಿದ್ದರೆ, ಭಾರತದ ಗಡಿಯಲ್ಲಿ ಟೆರರಿಸ್ಟ್‌ಗಳ ಗ್ಯಾಂಗ್ ಆಟ ಮುಂದುವರಿಸಿದೆ. ಹಾಗೇ ಮತ್ತೊಂದ್ಕಡೆ ಭಾರತದ ಒಳಗೆ ಡ್ರಗ್ಸ್ ನುಸುಳುವಂತೆ ಮಾಡುವ ಪಾಕಿಗಳ ಪ್ರಯತ್ನ ವಿಫಲವಾಗಿದೆ. ಭಾರತೀಯ ಸೇನೆ ಇಂಥ ಕೃತ್ಯ ಪತ್ತೆ ಮಾಡಿ ಗಡಿಯಲ್ಲಿ ಅದಕ್ಕೆ ಮೊಳೆ ಹೊಡೆಯುತ್ತಿದೆ. ಈಗಲೂ ಅಷ್ಟೇ ಭಾರಿ ಪ್ರಮಾಣದ ಡ್ರಗ್ಸ್ ಲಾಕ್ ಆಗಿದೆ.
ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಬಂಧನದ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ಇಮ್ರಾನ್ ಖಾನ್ ಮನೆಯಲ್ಲಿ ಭಯೋತ್ಪಾದಕರು ಇದ್ದಾರೆ ಎಂದು ದೊಡ್ಡ ಸುದ್ದಿ ಓಡಾಡುತ್ತಿದೆ. ಇಷ್ಟೆಲ್ಲದರ ನಡುವೆ ನಮ್ಮ ದೇಶದೊಳಗೆ ಪಾಕಿಸ್ತಾನದಿಂದ ಡ್ರಗ್ಸ್ ನುಸುಳಿಸಲು ವಿಫಲ ಯತ್ನ ನಡೆದಿದ್ದು, ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ 2 ಡ್ರೋನ್‌ಗಳನ್ನು ಪತ್ತೆಹಚ್ಚಿ ಹೊಡೆದುರುಳಿಸಿದ್ದಾರೆ ಬಿಎಸ್‌ಎಫ್ ಯೋಧರು. ನಂತರ ಡ್ರೋನ್ ಪರಿಶೀಲನೆ ನಡೆಸಿದಾಗ ಅದರೊಳಗೆ 15 ಕೆ.ಜಿ.ಗೂ ಹೆಚ್ಚು ತೂಕದ ಮಾದಕ ವಸ್ತು ಪತ್ತೆಯಾಗಿದೆ.

ಭಯೋತ್ಫಾದನೆ ಜೊತೆ ಡ್ರಗ್ಸ್ ಕಾಟ
ಭಾರತದ ಗಡಿಯಲ್ಲಿ ಭಯೋತ್ಪಾದಕರು ಕೊಡುತ್ತಿರುವ ಕಿರುಕುಳದಷ್ಟೇ ಮಾದಕ ವಸ್ತುಗಳ ಕಳ್ಳಸಾಗಣೆ ಕೂಡ ತಲೆನೋವಾಗಿದೆ. ಇದನ್ನ ತಡೆಯಲು ಏನೇ ವ್ಯವಸ್ಥೆ ಮಾಡಿದ್ದರೂ ಕಿರಾತಕರು ಅದನ್ನೆಲ್ಲಾ ಮೀರಿ, ತಮ್ಮ ಕೃತ್ಯ ಮುಂದುವರಿಸುತ್ತಾರೆ. ಈಗಲೂ ಅಷ್ಟೇ ಡ್ರೋನ್‌ಗಳ ಮೂಲಕ ಡ್ರಗ್ಸ್ ಸಾಗಿಸಲು ಯತ್ನಿಸಿದ್ದಾರೆ. ಆದ್ರೆ ಇದೇ ಸಂದರ್ಭದಲ್ಲಿ ಬಿಎಸ್ಎಫ್ ಯೋಧರು ಗಮನಿಸಿದ ಪರಿಣಾಮ, ಮಾದಕ ವಸ್ತು ಇದ್ದ ಡ್ರೋನ್ ಪತ್ತೆ ಆಗಿದೆ. ಕೂಡಲೆ ಗುರಿಯಿಟ್ಟು ಡ್ರೋನ್‌ಗಳಿಗೆ ಒಂದು ಗತಿ ಕಾಣಿಸಲಾಗಿದೆ.
ಡ್ರಗ್ಸ್ ಸಿಕ್ಕಿದ್ದು ಯಾವ ಪ್ರದೇಶದಲ್ಲಿ?
ಅಂದಹಾಗೆ ಇದೀಗ ಡ್ರಗ್ಸ್ ಇದ್ದ ಡ್ರೋನ್ ಸಿಕ್ಕಿರುವುದು ಭಾರತದ-ಪಾಕಿಸ್ತಾನ ಗಡಿ ಭಾಗದಲ್ಲಿ ಇರುವ ಹಳ್ಳಿ ಸಮೀಪದಲ್ಲಿ. ಅಮೃತಸರದ ರಾಮ್‌ಕೋಟ್ ಹಳ್ಳಿಯಲ್ಲಿ ಮಧ್ಯರಾತ್ರಿ ವೇಳೆ ಡ್ರೋನ್ ಹಾರಾಟದ ಬಗ್ಗೆ ಮಾಹಿತಿ ಸಿಕ್ಕಿತ್ತು. ಡ್ರೋನ್ ಹಾರಾಡುವ ಶಬ್ಧ ಕೇಳಿಸಿದೆ, ಕೂಡಲೇ ಡ್ರೋನ್ ಕೆಳಗಿಳಿಸುವಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಬಿಎಸ್ಎಫ್ ಯೋಧರು. ಆದರೆ ಇದಕ್ಕೆ ಬಗ್ಗದೆ ಬೇರೆ ಏನೋ ಕಿರಾತಕ ಕೆಲಸ ಮಾಡೋದಕ್ಕೆ ಹೋಗಿದ್ದಾರೆ ಡ್ರಗ್ ಡೀಲರ್ಸ್. ಆದರೆ ಕೊನೆಗೆ ಎಲ್ಲಾ ಉಲ್ಟಾ ಹೊಡೆದು, ಡ್ರಗ್ಸ್ ಲಾಕ್ ಆಗಿದೆ.

ಯೋಧರು ಬರುತ್ತಿದ್ದಂತೆ ಕಿರಾತಕರು ಎಸ್ಕೇಪ್
ಇನ್ನು ಡ್ರೋನ್ ಹಾರಾಡುವ ಶಬ್ಧ ಕೇಳುತ್ತಿದ್ದಂತೆ ಎಚ್ಚೆತ್ತ ಬಿಎಸ್‌ಎಫ್ ಯೋಧರು ಡ್ರೋನ್ ಕೆಳಗಿಳಿಸಿ ಎಂದು ಸೂಚನೆ ನೀಡಿದ್ದರು. ಆದರೆ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಂತೆ ಡ್ರೋನ್‌ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಡ್ರಗ್ಸ್ ತಗೋಂಡು ಓಡಿ ಹೋಗಲು ಡ್ರಗ್ ಡೀಲರ್ಸ್ ಪ್ರಯತ್ನಿಸಿದ್ದಾರೆ. ಆಗ ತಕ್ಷಣ ಡ್ರೋನ್ ಹೊಡೆದುರುಳಿಸಿ ಬಿಎಸ್‌ಎಫ್ ಯೋಧರು ಆ ಸ್ಥಳಕ್ಕೆ ಓಡಿ ಬಂದಿದ್ದಾರೆ. ಅಷ್ಟರಲ್ಲಿ ಮೂವರು ಕಿತಾತಕರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಸುಮಾರು 5 ಪೊಟ್ಟಣದಲ್ಲಿ ಇದ್ದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ.
ಡ್ರಗ್ಸ್ ತಂದವರ ಪತ್ತೆಗೆ ಹುಡುಕಾಟ
ಇನ್ನು ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ನೀಡಲಾಗಿದ್ದು, ಜಿಲ್ಲೆಯ ಕಕ್ಕಡ್ ಗ್ರಾಮದಲ್ಲಿ ರಾತ್ರಿ 1.20ರವೇಳೆಗೆ ದೇಶದ ವಾಯುಗಡಿ ಉಲ್ಲಂಘಿಸಿ, ಪಾಕಿಸ್ತಾನದ ಡ್ರೋನ್ ಒಳನುಸುಳಿದೆ. ಆಗ ಬಿಎಸ್‌ಎಫ್ ಯೋಧರು ಡ್ರೋನ್ ಹೊಡೆದುರುಳಿಸಿ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಲಾಗಿದೆ. ಈ ಘಟನೆ ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿ ತಪ್ಪಿಸಿಕೊಂಡ ಡ್ರಗ್ ಡೀಲರ್‌ಗಳಿಗೆ ಹುಡುಕಾಟ ನಡೆಸಲಾಗಿದೆ. ಆದರೆ ಅಷ್ಟರಲ್ಲೇ ಕಿರಾತಕರು ಎಸ್ಕೇಪ್ ಆಗಿದ್ದಾರೆ.
ಒಟ್ನಲ್ಲಿ ಭಾರತದ ಒಳಗೆ ಒಂದಲ್ಲ ಒಂದು ರೀತಿ ದುಷ್ಕೃತ್ಯ ಎಸಗಲು ಸದಾ ಪ್ರಯತ್ನಿಸುವ ಪಾಕಿಸ್ತಾನ, ಈಗ ಡ್ರಗ್ಸ್ ಅಂದರೆ ಮಾದಕ ವಸ್ತುಗಳನ್ನ ಭಾರತದ ಒಳಗೆ ನುಗ್ಗಿಸಲು ಪ್ರಯತ್ನಿಸುತ್ತಿದೆ. ಆದರೆ ಭಾರತೀಯ ಸೇನೆ ಇದನ್ನ ವಿಫಲಗೊಳಿಸುತ್ತಿದೆ. ತನ್ನ ದೇಶದ ಒಳಗೆ ಅರಾಜಕತೆ ಇಟ್ಟುಕೊಂಡಿರುವ ಪಾಕಿಸ್ತಾನ, ಗಡಿಯಲ್ಲೂ ಇಂತಹ ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂಬ ಆರೋಪವಿದೆ. ಅದರಲ್ಲೂ ಪಾಕಿಸ್ತಾನ ಸೇನೆ ವಿರುದ್ಧ ಈ ಕುರಿತು ಗಂಭೀರ ಆರೋಪಗಳಿವೆ.












Click it and Unblock the Notifications