ನೀರು ಕೊಡದಿದ್ರೆ ಭಾರತದೊಂದಿಗೆ ಮತ್ತೆ ಯುದ್ಧ: ವಾರ್ನಿಂಗ್ ಕೊಟ್ಟ ಪಾಕ್ ನಾಯಕ
ಇತ್ತೀಚೆಗೆ ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದ ಭಾರತ ಪಾಕಿಸ್ತಾನದ ಹುಟ್ಟಡಗಿಸಿತ್ತು. ಕೆಣಕಲು ಬಂದ ಪಾಕ್‌ಗೆ ಬೆವರಿಳಿಸಿತ್ತು. ಅಕ್ಷರಶಃ ಯುದ್ಧದ ವಾತಾವರಣ ನಿರ್ಮಾಣವಾಗಿ ಕೊನೆಗೆ ಪಾಕ್ ಮುದುಡಿಕೊಂಡಿತ್ತು. ಇದೀಗ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಭಾರತದೊಂದಿಗೆ ಪಾಕಿಸ್ತಾನ ಯುದ್ಧಕ್ಕೆ ಇಳಿಯುವುದಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಸಿಂಧೂ ಜಲ ಒಪ್ಪಂದದ (ಐಡಬ್ಲ್ಯೂಟಿ) ಅಡಿಯಲ್ಲಿ ಭಾರತವು ಇಸ್ಲಾಮಾಬಾದ್‌ಗೆ ತನ್ನ ನೀರಿನ ಪಾಲನ್ನು ನಿರಾಕರಿಸಿದರೆ, ಪಾಕಿಸ್ತಾನ ಯುದ್ಧ ಮಾಡುವುದು ಗ್ಯಾರಂಟಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥನೂ ಆಗಿರುವ ಬಿಲಾವಲ್ ಭುಟ್ಟೋ ಭಾರತ ನೀರು ನಿರಾಕರಿಸುವುದನ್ನು ಮುಂದುವರಿಸಿದರೆ ನಾವು ಮತ್ತೆ ಯುದ್ಧ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿದ ಬಿಲಾವಲ್ ಭಾರತದ ಕ್ರಮವನ್ನು ತಿರಸ್ಕರಿಸಿ, ಒಪ್ಪಂದವನ್ನು ಕಾನೂನುಬಾಹಿರವಾಗಿ ಅಮಾನತುಗೊಳಿಸಿದ್ದಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಭಾರತಕ್ಕೆ ಎರಡು ಆಯ್ಕೆಗಳಿವೆ. ಒಂದು ನೀರನ್ನು ನ್ಯಾಯಯುತವಾಗಿ ಹಂಚಿಕೊಳ್ಳಿ ಅಥವಾ ನಾವು ಆರು ನದಿಗಳಿಂದಲೂ ನಮಗೆ ನಮ್ಮ ನೀರನ್ನು ಪಡೆಯುತ್ತೇವೆ ಎಂದು ಅವರು ಸಿಂಧೂ ಜಲಾನಯನ ಪ್ರದೇಶದ ಆರು ನದಿಗಳನ್ನು ಉಲ್ಲೇಖಿಸಿ ಹೇಳಿದ್ದಾರೆ. ಸಿಂಧೂ ನದಿ ಮೇಲಿನ ದಾಳಿ ಮತ್ತು ಸಿಂಧೂ ಜಲ ಒಪ್ಪಂದ ಕೊನೆಗೊಂಡಿದೆ ಎಂಬ ಭಾರತದ ಹೇಳಿಕೆಯನ್ನ ಒಪ್ಪುವುದಿಲ್ಲ. ಮೊದಲನೆಯದಾಗಿ ಇದು ಕಾನೂನುಬಾಹಿರ. ನೀರನ್ನು ನಿಲ್ಲಿಸುವ ಬೆದರಿಕೆ ಯುಎನ್ ಚಾರ್ಟರ್ ಪ್ರಕಾರ ಕಾನೂನುಬಾಹಿರ ಎಂದು ಕರೆದಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ 1960ರ ನೀರು ಹಂಚಿಕೆ ಒಪ್ಪಂದವನ್ನು ಭಾರತ ಎಂದಿಗೂ ಪುನಃಸ್ಥಾಪಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ ಕೆಲವು ದಿನಗಳ ನಂತರ ಬಿಲಾವಲ್ ಭುಟ್ಟೋ ಈ ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಮಾತನಾಡಲು ನಿರಾಕರಿಸಿದರೆ ಮತ್ತು ಭಯೋತ್ಪಾದನೆಯ ಬಗ್ಗೆ ಸಮನ್ವಯವಿಲ್ಲದಿದ್ದರೆ ಎರಡೂ ದೇಶಗಳಲ್ಲಿ ಹಿಂಸಾಚಾರ ತೀವ್ರಗೊಳ್ಳುತ್ತದೆ ಎಂದು ಬಿಲಾವಲ್ ಹೇಳಿದ್ದಾರೆ.
ಭಾರತವು ರಾಜಕೀಯ ಉದ್ದೇಶಗಳಿಗಾಗಿ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಬಿಲಾವಲ್ ಹೇಳಿದ್ದಾರೆ. ಹಣಕಾಸು ಕ್ರಿಯಾ ಕಾರ್ಯಪಡೆ ಮುಂಭಾಗದಲ್ಲಿ ಪಾಕಿಸ್ತಾನದ ಲಾಭವನ್ನು ಹಿಮ್ಮೆಟ್ಟಿಸಲು ಭಾರತ ರಾಜತಾಂತ್ರಿಕವಾಗಿ ಕೆಲಸ ಮಾಡಿದೆ. ಭಾರತವು ಸುಳ್ಳು ನಿರೂಪಣೆಗಳು ಮತ್ತು ರಾಜತಾಂತ್ರಿಕ ಒತ್ತಡವನ್ನು ಬಳಸಿಕೊಂಡು ನಮ್ಮನ್ನು ಮತ್ತೆ ಬೂದು ಪಟ್ಟಿಗೆ ತರಲು ಎಲ್ಲ ಪ್ರಯತ್ನಗಳನ್ನು ಮಾಡಿತು ಎಂದು ಆರೋಪಿಸಿದ್ದಾರೆ.
ಕಾಶ್ಮೀರಕ್ಕೆ ಅಂತರರಾಷ್ಟ್ರೀಯ ಬೆಂಬಲ ನೀಡಿರುವುದನ್ನು ಉಲ್ಲೇಖಿಸಿದ ಬಿಲಾವಲ್ ಪಾಕಿಸ್ತಾನವು ಈ ವಿಷಯವನ್ನು ಜಾಗತಿಕವಾಗಿ ತೋರುವಲ್ಲಿ ಯಶಸ್ವಿಯಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಇಚ್ಛಿಸಿದ್ದಾರೆ ಎಂದೂ ಉಲ್ಲೇಖಿಸಿದ್ದಾರೆ.












Click it and Unblock the Notifications