ಬಾಂಗ್ಲಾದೇಶಕ್ಕೆ ಹೊಸ ಪ್ರಧಾನಿ ಆಯ್ಕೆಗೆ ಕೌಂಟ್‌ಡೌನ್, ಕುತೂಹಲ ಕೆರಳಿಸಿದ ಮತದಾರರ ಆಯ್ಕೆ | Bangladesh Election
ಬಾಂಗ್ಲಾದೇಶ ಅಂತೂ & ಇಂತೂ ಹೊಸ ಪ್ರಧಾನಿ ನೋಡಲು ಸಜ್ಜಾಗಿದೆ, ಶೇಖ್ ಹಸೀನಾ ರಾಜೀನಾಮೆ ನಂತರ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಸಂಸತ್ ಚುನಾವಣೆ ನಡೆದಿತ್ತು. ಹೀಗಾಗಿ ಬಾಂಗ್ಲಾದ ಮುಂದಿನ ಪ್ರಧಾನಿ ಯಾರು? ಎಂಬ ಕುತೂಹಲ ಕೆರಳಿತ್ತು. ಒಂದು ಕಡೆ ಭಾರತದ ಜೊತೆಗೆ ಸ್ನೇಹ & ಸಂಬಂಧ ಹಾಳು ಮಾಡಿಕೊಳ್ಳುತ್ತಿದ್ದ ಹಂಗಾಮಿ ಪ್ರಧಾನಿ ಹಾಗೂ ಅವರ ಜೊತೆಗಾರರು, ಭವಿಷ್ಯದಲ್ಲಿ ಬಾಂಗ್ಲಾಗೆ ಕಂಟಕ ತರುವ ವಾತಾವರಣ ನಿರ್ಮಾಣ ಮಾಡಿದ್ದರು.
ಹಾಗೇ ಬಾಂಗ್ಲಾದೇಶ ಕಳೆದ ಕೆಲ ತಿಂಗಳಿಂದ ಕೋಮು ಗಲಭೆಯಲ್ಲಿ ಮುಳುಗಿ ಹೋಗಿ, ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿರುವ ಆರೋಪ ತಲ್ಲಣ ಸೃಷ್ಟಿಸಿದೆ. ಇಂತಹ ಸಮಯದಲ್ಲೇ ಚುನಾವಣೆ ನಡೆದಿದ್ದು, ನೂತನ ಪ್ರಧಾನಿಗಾಗಿ ಬಾಂಗ್ಲಾ ಕಾದು ಕುಳಿತಿದೆ. ಸ್ವತಃ ಬಾಂಗ್ಲಾದೇಶದ ಜನರೇ ಹೇಳುವಂತೆ, ಈಗ ಅಧಿಕಾರಕ್ಕೆ ಬರುವ ಸರ್ಕಾರ ಬಾಂಗ್ಲಾ ನೆಲದಲ್ಲಿ ಶಾಂತಿ ನೆಲೆಸುವಂತೆ ಮಾಡಿದರೆ ಸಾಕು ಅಂತಿದ್ದಾರೆ. ರಾಜಕೀಯವಾಗಿ ಧರ್ಮದ ಬಣ್ಣ ಮೆತ್ತಿ, ಕೋಮು ಗಲಭೆಗಳಿಗೆ ಅಲ್ಲಿನ ಹಂಗಾಮಿ ಸರ್ಕಾರವೇ ಬೆಂಬಲ ನೀಡುತ್ತಿದೆ ಎಂಬ ಗಂಭೀರ ಆರೋಪಗಳು ಕೂಡ ಕೇಳಿ ಬಂದಿದ್ದವು. ಹೀಗಿದ್ದಾಗ ಚುನಾವಣೆ ನಡೆದು ಇದೀಗ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ಸಂಸತ್ ವ್ಯವಸ್ಥೆ ಹೊಂದಿರುವ ಬಾಂಗ್ಲಾದೇಶ
ಭಾರತದ ರೀತಿಯಲ್ಲೇ ಸಂಸತ್ ವ್ಯವಸ್ಥೆ ಹೊಂದಿರುವ ಬಾಂಗ್ಲಾದೇಶಕ್ಕೆ ಪ್ರಧಾನಿಯೇ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡ್ತಾರೆ. ಒಟ್ಟು 300 ಸಂಸತ್ ಕ್ಷೇತ್ರ ಹೊಂದಿರುವ ಬಾಂಗ್ಲಾದೇಶ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದೆ. ಹೀಗಿದ್ದರೂ ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದ ಜೊತೆ ಬಾಂಗ್ಲಾದೇಶ ಪದೇ ಪದೇ ಕಿರಿಕ್ ಮಾಡಿಕೊಂಡು ಜಾಗತಿಕವಾಗಿ ಟೀಕೆಗೆ ಗುರಿಯಾಗಿದೆ. ಒಟ್ಟು 51 ರಾಜಕೀಯ ಪಕ್ಷಗಳು ಈ ಬಾರಿ ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರೆ, ಒಟ್ಟಾರೆ 1,755 ಅಭ್ಯರ್ಥಿಗಳು ಕಣದಲ್ಲಿ ಇದ್ದರು.
ಬಾಂಗ್ಲಾ ಮುಂದಿನ ಪ್ರಧಾನಿ ಯಾರು?
2024 ಆಗಸ್ಟ್ ತಿಂಗಳಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳು ಆರಂಭವಾಗಿ, ಬಾಂಗ್ಲಾದೇಶ ಧಗಧಗನೇ ಹೊತ್ತಿ ಉರಿದಿತ್ತು. ಹೀಗೆ 2 ವರ್ಷದ ಹಿಂದೆ ಹಿಂಸಾಚಾರದ ಬೆಂಕಿಗೆ ಸಿಲುಕಿದ್ದ ಬಾಂಗ್ಲಾದೇಶದಲ್ಲಿ ಹಂಗಾಮಿ ಸರ್ಕಾರ ಆಡಳಿತ ನಡೆಸಿತ್ತು. ಅಂತಿಮವಾಗಿ ಫೆಬ್ರವರಿ 12 ಗುರುವಾರ ಬಾಂಗ್ಲಾದೇಶ ಸಂಸತ್ ಎಲೆಕ್ಷನ್ ನಡೆದಿದ್ದು, ಇದೀಗ ಲಭ್ಯ ಇರುವ ಮಾಹಿತಿಗಳ ಪ್ರಕಾರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಬಹುಮತ ಪಡೆದು ಸರ್ಕಾರ ರಚಿಸುವುದು ಗ್ಯಾರಂಟಿ ಆಗಿದೆ. ವಿದ್ಯಾರ್ಥಿ ಪ್ರತಿಭಟನೆಗಳ ನಂತರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರ ಬಿಟ್ಟು ಭಾರತಕ್ಕೆ ಬಂದು ಆಶ್ರಯ ಕೂಡ ಪಡೆದಿದ್ದಾರೆ. ಇದೇ ಸಮಯದಲ್ಲಿ ಬಾಂಗ್ಲಾಗೆ ಹೊಸ ಪ್ರಧಾನಿ ಆಯ್ಕೆ ಆಗುತ್ತಿದ್ದು, ಬಿಎನ್‌ಪಿ ಪಕ್ಷದ ತಾರಿಕ್ ರಹ್ಮಾನ್‌ಗೆ ಪ್ರಧಾನಿ ಪಟ್ಟ ಸಿಗುವ ನಿರೀಕ್ಷೆ ಇದೆ.
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಎಂದರೆ ಬಿಎನ್‌ಪಿ ಈಗಾಗಲೇ 150 ಸ್ಥಾನ ದಾಟಿ ಹೋಗಿ, ಸ್ಪಷ್ಟ ಬಹುಮತ ಪಡೆದಿದೆ ಎಂಬ ಸುದ್ದಿಯನ್ನು ಬಾಂಗ್ಲಾದೇಶ ಮಾಧ್ಯಮಗಳು ಬಿತ್ತರಿಸಿವೆ. ಹಾಗೇ ಇನ್ನೂ ಕೆಲವು ಬಾಂಗ್ಲಾದೇಶ ಮಾಧ್ಯಮಗಳ ಪ್ರಕಾರ, ಬಿಎನ್‌ಪಿ 197 ಸ್ಥಾನಗಳನ್ನ ಈಗಾಗಲೇ ಗೆದ್ದು ಬೀಗಿದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ, ಹೀಗಾಗಿ ಬಾಂಗ್ಲಾದೇಶ ಚುನಾವಣೆ ಫಲಿತಾಂಶದ ಬಿಸಿ ಏರುತ್ತಿದೆ. ಬಹುತೇಕ ಬಿಎನ್‌ಪಿ ಪಕ್ಷದ ತಾರಿಕ್ ರಹ್ಮಾನ್‌ಗೆ ಪ್ರಧಾನಿ ಪಟ್ಟ ಫಿಕ್ಸ್ ಎನ್ನಲಾಗಿದ್ದು, ಇಂದು ಸಂಜೆಯ ಒಳಗೆ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆ ಇದೆ.












Click it and Unblock the Notifications