ಚೀನಾದಲ್ಲಿ ಪ್ರವಾಹ : ಮೆಟ್ರೋ ಸುರಂಗಕ್ಕೆ ನೀರು ನುಗ್ಗಿ 12 ಮಂದಿ ಸಾವು
ಬೀಜಿಂಗ್, ಜುಲೈ 21: ಚೀನಾದಲ್ಲಿ ಕಳೆದ ಒಂದು ದಿನದಿಂದ ಭಾರಿ ಮಳೆ ಸುರಿಯುತ್ತಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಮೆಟ್ರೋ ಸುರಂಗಕ್ಕೆ ನೀರು ನುಗ್ಗಿ 12 ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ರೈಲಿನಲ್ಲಿದ್ದ ಪ್ರಯಾಣಿಕರು ರಕ್ಷಿಸುವಂತೆ ಕೂಗಾಡುತ್ತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಕಾಏಕಿ ಮಳೆ ಸುರಿದಿರುವ ಕಾರಣ ಮೆಟ್ರೋ ಸುರಂಗದಲ್ಲಿ ನೀರು ನುಗ್ಗಿದೆ. ಇದರಿಂದ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಬೀಜಿಂಗ್ ಹಾಗೂ ಹೆನಾನ್ ಪ್ರಾಂತ್ಯದಲ್ಲಿ ಕೆಲ ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದುವರೆಗೆ 1 ಕೋಟಿಗೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಜತೆಗೆ ಪ್ರವಾಹ ಪೀಡಿದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದೆ.

ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ. ಪ್ರವಾಹದಿಂದಾಗಿ ಅಪಾರ ಪ್ರಮಾಣದ ಬೆಳೆ, ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಕಷ್ಟು ಮಂದಿ ಶಾಲೆಗಳು, ಮೆಟ್ರೋದಲ್ಲಿ ಸಿಲುಕಿಕೊಂಡಿದ್ದಾರೆ, ವಾಹನಗಳು ತೇಲಿ ಹೋಗಿವೆ. 4 ರಿಂದ 5 ಗಂಟೆಯವರೆಗೆ 20 ಸೆಂ.ಮೀ ಮಳೆ ಸುರಿದಿದೆ. ಹಾಗೆಯೇ ಜೆನ್‌ಜೌನಲ್ಲಿರುವ ಶಾವೊಲಿನ್ ಬೌದ್ಧ ದೇವಾಲಯಕ್ಕೂ ಹಾನಿಯುಂಟಾಗಿದೆ.

ಮುಂದಿನ ಕೆಲವೇ ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಮಳೆ ಹೆಚ್ಚಾಗಲಿರುವ ಭೀತಿ ಎದುರಾಗಿದ್ದು, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications