ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ ಪಾಕ್ ಪ್ರಧಾನಿ!
ಇಸ್ಲಾಮಾಬಾದ್, ಮಾರ್ಚ್ 21: ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿರುವ, ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿರುವ ತಮ್ಮ ನೆರೆಯ ದೇಶವಾದ ಭಾರತವನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ಶ್ಲಾಘಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ಎನ್‌ಡಿಎ ಸರ್ಕಾರದ ಕಟು ಟೀಕಾಕಾರರಾದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿದೇಶಾಂಗ ನೀತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಅಮೆರಿಕದ ನಿರ್ಬಂಧವಿದ್ದರೂ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿರುವುದಕ್ಕೆ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಇಮ್ರಾನ್ ಖಾನ್ ಹೊಗಳಿದ್ದಾರೆ ಎಂದು ವರದಿ ಹೇಳಿದೆ.
ಖೈಬರ್-ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, "ನೆರೆಯ ಭಾರತವು ಉತ್ತಮವಾದ ವಿದೇಶಾಂಗ ನೀತಿ ಹೊಂದಿದೆ. ಭಾರತ ಸ್ವತಂತ್ರ ವಿದೇಶಾಂಗ ನೀತಿ ಹೊಂದಿರುವುದರಿಂದ ಅದನ್ನು ಹೊಗಳಲು ಬಯಸುತ್ತೇನೆ," ಎಂದು ಹೇಳಿರುವ ಖಾನ್, ಕ್ವಾಡ್‌ನ ಭಾಗವಾಗಿರುವ ಭಾರತವು ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಒತ್ತಿ ಹೇಳಿದ್ದಾರೆ.

"ಈ ನೀತಿ ಪಾಕಿಸ್ತಾನದ ಜನರಿಗೆ ಅನುಕೂಲ"
"ಭಾರತದ ವಿದೇಶಾಂಗ ನೀತಿಯೂ ಪಾಕಿಸ್ತಾನದ ಜನರಿಗೆ ಅನುಕೂಲವಾಗಲಿದೆ. ನಾನು ಯಾರ ಮುಂದೆಯೂ ತಲೆಬಾಗಿಲ್ಲ ಮತ್ತು ನನ್ನ ರಾಷ್ಟ್ರವನ್ನು ಬಗ್ಗಿಸಲು ಬಿಡುವುದಿಲ್ಲ," ಎಂದು ಸಂಸತ್ತಿನಲ್ಲಿ ತಮ್ಮ ವಿರುದ್ಧ ಅವಿಶ್ವಾಸ ಮತಕ್ಕೆ ಮುಂಚಿತವಾಗಿ ಸಾರ್ವಜನಿಕ ಬೆಂಬಲವನ್ನು ಸಂಗ್ರಹಿಸುತ್ತಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ರಷ್ಯಾ ವಿರುದ್ಧ ಇಯುಗೆ ಪಾಕಿಸ್ತಾನದ ಬೆಂಬಲವಿಲ್ಲ
ಸಾರ್ವಜನಿಕ ಸಭೆ ಅಥವಾ ರ್‍ಯಾಲಿಯಲ್ಲಿ ಸಾಮಾನ್ಯವಾಗಿ ವಿದೇಶಿ ಸಂಬಂಧಗಳಿಗೆ ಸಂಬಂಧಿಸಿದ ಸಂಕೀರ್ಣ ವಿಷಯಗಳನ್ನು ಬಹಿರಂಗವಾಗಿ ಚರ್ಚೆ ಮಾಡುವಂತಿಲ್ಲ. ಆದರೆ ಈ ಸಂಪ್ರದಾಯದಿಂದ ಹೊರಬಂದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ನಡೆಯುತ್ತಿರುವ ಉಕ್ರೇನ್ ಸಂಘರ್ಷದಲ್ಲಿ ರಷ್ಯಾದ ವಿರುದ್ಧ ಪಾಕಿಸ್ತಾನದ ಬೆಂಬಲವನ್ನು ಕೋರುವ ಇಯು ರಾಯಭಾರಿಗಳಿಗೆ ತಾನು ಸಂಪೂರ್ಣವಾಗಿ ಬೆಂಬಲ ನೀಡಲ್ಲ ಎಂದರು.
ಬೆಂಬಲವನ್ನು ಕೋರುವ ಮೂಲಕ ಐರೋಪ್ಯ ಒಕ್ಕೂಟವು ಮಾರ್ಗಸೂಚಿಯನ್ನು ಮುರಿದಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಆರೋಪ ಕೂಡಾ ಮಾಡಿದ್ದಾರೆ. "ಐರೋಪ್ಯ ಒಕ್ಕೂಟದ ಮನವಿಯನ್ನು ಪಾಲಿಸುವುದರಿಂದ ಪಾಕಿಸ್ತಾನಕ್ಕೆ ಏನೂ ಲಾಭವಾಗುತ್ತಿರಲಿಲ್ಲ. ನಾವು ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯ ವಿರುದ್ಧ ಅಮೆರಿಕದ ಯುದ್ಧದ ಭಾಗವಾಗಿದ್ದೇವೆ ಮತ್ತು 80,000 ಜನರನ್ನು ಕಳೆದುಕೊಂಡಿದ್ದೇವೆ ಮತ್ತು 100 ಶತಕೋಟಿ ಯುಎಸ್‌ಡಿ ಅನ್ನು ಕಳೆದುಕೊಂಡಿದ್ದೇವೆ," ಎಂದು ಉಲ್ಲೇಖ ಮಾಡಿದರು.
ರಷ್ಯಾದ ಇಂಧನ ಖರೀದಿ ಮಾಡುತ್ತಿರುವ ಭಾರತ
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಮಾಸ್ಕೋ ಮೇಲೆ ಹಲವಾರು ರಾಷ್ಟ್ರಗಳು ನಿರ್ಬಂಧವನ್ನು ಹೇರಿದೆ. ಈ ನಡುವೆ ಭಾರತ ಮಾತ್ರ ರಷ್ಯಾದೊಂದಿಗಿನ ತನ್ನ ವಹಿವಾಟನ್ನು ಮುಂದುವರಿಸಿದೆ. ಯುಎಸ್‌ನ ನಿರ್ಬಂಧಗಳ ಹೊರತಾಗಿಯೂ ರಷ್ಯಾದ ಶಕ್ತಿಯ ಮೂಲವನ್ನು ಕೆಲವು ದೇಶಗಳು ಅವಲಂಭಿಸಿದೆ. ಭಾರತವು ರಷ್ಯಾದೊಂದಿಗೆ ಇಂಧನ ಸಹಕಾರವನ್ನು ಗಾಢವಾಗಿಸುವ ನಿರೀಕ್ಷೆ ಇದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ನಂತರ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಎರಡು ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿದೆ ಎಂಬ ವರದಿ ಆಗಿದೆ. "ರಿಯಾಯಿತಿ"ಯಲ್ಲಿ ನೀಡಲಾಗುತ್ತಿರುವ ರಷ್ಯಾದ ಇಂಧನವನ್ನು ಭಾರತ ಆಯ್ಕೆ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ಪ್ರತಿಕ್ರಿಯೆ ನೀಡಿದ ಮೂಲಗಳು "ನಾವು ಅದನ್ನು ತೆಗೆದುಕೊಳ್ಳುತ್ತೇವೆ" ಎಂದು ಹೇಳಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications