3ನೇ ಮಹಾಯುದ್ಧ: ತೈವಾನ್ ನೆಮ್ಮದಿಗೆ ಬೆಂಕಿ ಹಚ್ಚಿದ ಅಮೆರಿಕ?
ತೈಪೆ: ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಮತ್ತೆ ಶಾಂತಿ ಕದಡಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅಮೆರಿಕ ಜೊತೆ ಸ್ನೇಹ ಬೆಸೆದ ಮರುಕ್ಷಣವೇ ಯುದ್ಧದ ಭೀತಿ ಆವರಿಸಿತ್ತು. ಆದರೆ ಕೆಲ ದಿನಗಳಿಂದ ಪರಿಸ್ಥಿತಿ ಸರಿ ಹೋಗುತ್ತಿತ್ತು. ಇದೀಗ ಅಮೆರಿಕ (America) ಸೇನೆ ಮತ್ತೆ ತೈವಾನ್ (Taiwan) ಬಳಿ ಸೇನಾ ಹಡಗನ್ನು ತಂದು ಶಾಂತಿ ಕದಡಿದೆ.
ಅಷ್ಟಕ್ಕೂ ಚೀನಾ ಸೇನೆ ತೈವಾನ್ ದ್ವೀಪದ ಸುತ್ತಲ್ಲೂ ತನ್ನ ಸೇನೆ ನಿಯೋಜನೆ ಮಾಡಿ, ಅತ್ಯಂತ ಉಗ್ರ ರೂಪದಲ್ಲಿ ಸೇನಾ ಸಮರಭ್ಯಾಸ ನಡೆಸಿತ್ತು. ಅಲ್ಲದೆ ತೈವಾನ್ ವಿರುದ್ಧ ಯುದ್ಧ ಸಾರುವುದು ಪಕ್ಕಾ ಎಂದಿದ್ದರು ಚೀನಾ ಅಧ್ಯಕ್ಷ ಜಿನ್‌ಪಿಂಗ್. ಇದು ಮುಗಿದು, ಸ್ವಲ್ಪ ದಿನದಿಂದ ಚೀನಾ ಕೂಡ ಸೈಲೆಂಟ್ ಆಗಿದೆ. ಇದೇ ಹೊತ್ತಲ್ಲಿ ತೈವಾನ್ ಜಲಸಂಧಿಯ ಮೂಲಕ ಅಮೆರಿಕದ ಯುದ್ಧನೌಕೆ ಯುಎಸ್ಎಸ್ ಮಿಲಿಯಸ್ ಪ್ರಯಾಣ ಬೆಳೆಸಿದೆ. ಮತ್ತೆ ಚೀನಾ ಸೇನೆಯನ್ನ ಕೆರಳುವಂತೆ ಮಾಡಿರುವ ಈ ಘಟನೆ, ಮಹಾಯುದ್ಧಕ್ಕೆ ನಾಂದಿ ಹಾಡುವ ಸಾಧ್ಯತೆ ದಟ್ಟವಾಗಿದೆ.

ಮತ್ತೊಂದ್ಕಡೆ ತಪ್ಪನ್ನು ಅಮೆರಿಕ ಸಮರ್ಥಿಸಿಕೊಂಡ ಆರೋಪ ಕೇಳಿಬಂದಿದೆ. ತೈವಾನ್ ಜಲಸಂಧಿ ಮೂಲಕ ಅಮೆರಿಕ ಯುದ್ಧನೌಕೆ ಪ್ರಯಾಣಿಸಿರುವ ಘಟನೆ 'ಮಾಮೂಲಿ' ಎಂದಿದೆ ಅಮೆರಿಕ. ಆದರೆ ಚೀನಾ ಇದೇ ತೈವಾನ್ ಸುತ್ತಲೂ ಮಿಲಿಟರಿ ಡ್ರಿಲ್ ಅಂದರೆ ಸಮರಭ್ಯಾಸ ನಡೆಸುವಾಗ ಅಮೆರಿಕ ಸೇನೆ & ಹಡಗುಗಳು ಎಲ್ಲಿ ಮಾಯವಾಗಿದ್ದವು ಎಂಬ ಚರ್ಚೆ ಶುರುವಾಗಿದೆ. 10 ಯುದ್ಧ ನೌಕೆ ಹಾಗೂ 70ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ತೈವಾನ್ ಸುತ್ತಲೂ ನಿಯೋಜಿಸಿ ಚೀನಾ ಮಿಲಿಟರಿ ಸಮರಾಭ್ಯಾಸ ನಡೆಸಿ ಎಚ್ಚರಿಕೆ ನೀಡಿತ್ತು. ಆಗ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿತ್ತು ಅಮೆರಿಕ ಸೇನೆ.
3ನೇ ಮಹಾಯುದ್ಧಕ್ಕೆ ಇಲ್ಲೇ ಮುನ್ನುಡಿ?
ಚೀನಾ-ತೈವಾನ್ ನಡುವೆ ಆಗಾಗ ಯುದ್ಧದ ವಾತಾವರಣ ನಿರ್ಮಾಣ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಗಂಭೀರವಾಗಿದೆ. ಅದರಲ್ಲೂ ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅಮೆರಿಕಕ್ಕೆ ಭೇಟಿ ನೀಡಿದ ತಕ್ಷಣ ತನ್ನ ಶತ್ರು ರಾಷ್ಟ್ರಕ್ಕೆ ಚೀನಾ ಆಘಾತ ನೀಡಿತ್ತು. ತೈವಾನ್ ಸುತ್ತ ಸಮರಭ್ಯಾಸ ನಡೆಸಿದ ಬಳಿಕ ತೈವಾನ್ ವಿರುದ್ಧ ಯುದ್ಧ ಸಾರಿದರೆ ಹೇಗೆ ದಾಳಿ ಮಾಡುತ್ತೇವೆ ಎಂಬುದರ ವಿಡಿಯೋ ತೋರಿಸಿ ಭಯ ಹುಟ್ಟಿಸಿತ್ತು ಚೀನಾ. ಈಗ ಯುದ್ಧಕ್ಕೆ ಮುಂದಾಗಿರುವುದು 3ನೇ ಮಹಾಯುದ್ಧಕ್ಕೆ ಮುನ್ನುಡಿ ಎಂದೇ ಬಿಂಬಿಸಲಾಗುತ್ತಿದೆ.

ರಷ್ಯಾ ರೀತಿಯಲ್ಲೇ ಚೀನಾ ಅಟ್ಯಾಕ್?
ಒಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ತೊಡೆತಟ್ಟಿ ನಿಂತಿದೆ, ಇನ್ನೊಂದು ಕಡೆ ತೈವಾನ್ ವಿರುದ್ಧ ಯುದ್ಧ ಆರಂಭಿಸಲು ಚೀನಾ ಕೂಡ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ಸಜ್ಜಾದಂತೆ ಭಾಸವಾಗುತ್ತಿದೆ. ಥೇಟ್ ರಷ್ಯಾ ತನ್ನ ಶತ್ರು ದೇಶ ಉಕ್ರೇನ್ ಮೇಲೆ ಎರಗಿದಂತೆ ಚೀನಾ ಕೂಡ ತೈವಾನ್ ವಿರುದ್ಧ ಯುದ್ಧ ಸಾರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಯುದ್ಧ ಆರಂಭವಾದರೆ ಪರಿಸ್ಥಿತಿ ಹೇಗಿರಲಿದೆ ಎಂಬುದರ ಸ್ಯಾಂಪಲ್ ತೋರಿಸಿರುವ ಡ್ರ್ಯಾಗನ್ ಸೇನೆ, ತೈವಾನ್ ವಿರುದ್ಧ ಉರಿದು ಬೀಳುತ್ತಿದೆ.

ಹೀಗೆ ಸುಮ್ಮನಿದ್ದ ಚೀನಾ ಕೆಣಕಲು ಅಮೆರಿಕ ಮತ್ತೊಮ್ಮೆ ಮುಂದಾದಂತೆ ಕಾಣುತ್ತಿದೆ. ಅಮೆರಿಕದ ಹಡಗು ತೈವಾನ್ ಸಮೀಪವೇ ಹಾದುಹೋಗಿರುವ ಬಗ್ಗೆ ಚೀನಾ ಇನ್ನೂ ರಿಯಾಕ್ಷನ್ ಕೊಟ್ಟಿಲ್ಲ. ಹಾಗಾದರೆ ಮತ್ತೊಮ್ಮೆ ತೈವಾನ್ ಸೇನೆಗೆ ಬಿಸಿಮುಟ್ಟಿಸಲು ಚೀನಾ ಕಾಯುತ್ತಿದೆಯಾ? ಎಂಬ ಪ್ರಶ್ನೆಯೂ ಉದ್ಭವಿಸಿದೆ. ಇದು ತೈವಾನ್ ನಾಯಕರ ನಿದ್ದೆಗೆಡಿಸಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ.












Click it and Unblock the Notifications