US Elections 2024: ಅಮೆರಿಕ ಅಖಾಡದಲ್ಲಿ ಚುನಾವಣೆ ಕಿಚ್ಚು, ಗಡಿಯಾಚೆಗೂ ಮಹತ್ವ ಪಡೆದ ‘ದೊಡ್ಡಣ್ಣ’ನ ಚುನಾವಣೆ!
ತನ್ನ ಅಸಾಧಾರಣ ವಿಚಾರಗಳಿಗಾಗಿ ಜಗತ್ತಿನ ಮಹತ್ವ ಪಡೆದಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ, 2024ರಲ್ಲಿ ಗಂಭೀರ ವಿಚಾರಗಳ ಕಾರಣಗಳಿಂದಲೂ ಜಾಗತಿಕ ಗಮನ ಸೆಳೆದಿದೆ. ಈ ಬಾರಿಯ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯೇ ಗೆದ್ದರೂ, ಜಗತ್ತಿನ ಕಣ್ಣಿನಲ್ಲಿ ಪ್ರಜಾಪ್ರಭುತ್ವದ ಮುಖಂಡ ಎಂಬ ಅಮೆರಿಕಾದ ಕೀರ್ತಿಗೆ ಹಾನಿಯಾಗುವ ಸಾಧ್ಯತೆಗಳಂತೂ ದಟ್ಟವಾಗಿ ಗೋಚರಿಸುತ್ತಿವೆ.
ನವೆಂಬರ್ 5ರಂದು ಮುಖ್ಯ ಮತದಾನ ದಿನವನ್ನು ಹೊಂದಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಅಲ್ಲಿಗೆ ಬಹುತೇಕ ಕೊನೆ ಕಾಣುತ್ತದೆ. ಈ ಬಾರಿಯ ಚುನಾವಣೆ ಭಾರೀ ಭಿನ್ನಾಭಿಪ್ರಾಯಗಳು, ಸಂಘರ್ಷಗಳು, ಮತ್ತು ಹಲವಾರು ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಈ ಬಾರಿಯ ಚುನಾವಣಾ ಫಲಿತಾಂಶದ ಆಧಾರದಲ್ಲಿ, 'ಜೆಫರ್ಸನಿಯನ್' ಆಲೋಚನೆಗಳ ಆಧಾರಿತವಾಗಿರುವ ಅಮೆರಿಕಾದ ಪ್ರಜಾಪ್ರಭುತ್ವ ಹೊಂದಿರುವ ವೈಯಕ್ತಿಕ ಹಕ್ಕುಗಳು ಮತ್ತು ಜನ ಅಧಿಕಾರದ ಸರ್ಕಾರಕ್ಕೆ ಧಕ್ಕೆ ಉಂಟಾಗಬಹುದು ಎಂದು ಬಹಳಷ್ಟು ಜನರು ಆತಂಕ ಹೊಂದಿದ್ದಾರೆ.

'ಜೆಫರ್ಸನಿಯನ್' ಎಂಬ ಪದ ಅಮೆರಿಕಾದ ಆರಂಭಿಕ ನಾಯಕರಲ್ಲೊಬ್ಬರಾದ ಥಾಮಸ್ ಜೆಫರ್ಸನ್ ಅವರ ತತ್ವಗಳನ್ನು ಸೂಚಿಸುತ್ತದೆ. ಜೆಫರ್ಸನ್ ಅವರ ಸಿದ್ಧಾಂತಗಳು ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಜನರ ಮೇಲೆ ಆಳ್ವಿಕೆ ನಡೆಸುವ ಬದಲು, ಜನರನ್ನು ಪ್ರತಿನಿಧಿಸುವ, ಅವರ ಒಳಿತಿಗಾಗಿ ಕೆಲಸ ಮಾಡುವ ಸರ್ಕಾರಕ್ಕೆ ಮಹತ್ವ ನೀಡುತ್ತವೆ.
ಪ್ರಸ್ತುತ ಅಮೆರಿಕಾದ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ನಡುವೆ ಈ ಬಾರಿ ತೀವ್ರ ಪೈಪೋಟಿ ಇರುವಂತೆ ಕಾಣುತ್ತಿದೆ. ಇಬ್ಬರ ಪೈಕಿ ಯಾರಿಗೂ ಇನ್ನೂ ಸ್ಪಷ್ಟ ಮುನ್ನಡೆ ಲಭ್ಯವಾಗಿಲ್ಲದಿರುವುದು ಅಧ್ಯಕ್ಷೀಯ ಓಟವನ್ನು ಬಹಳ ನಿಕಟ ಮತ್ತು ಅನಿಶ್ಚಿತ ಸ್ಪರ್ಧೆಯನ್ನಾಗಿಸಿದೆ. ಅಂತಿಮ ಫಲಿತಾಂಶ ಏನು ಬೇಕಾದರೂ ಆಗುವ ಸಾಧ್ಯತೆಗಳು ಇರುವುದರಿಂದ, ಎರಡೂ ಪಕ್ಷಗಳು ಈಗ ಆತಂಕದಿಂದಲೇ ಅದನ್ನು ಎದುರು ನೋಡುತ್ತಿವೆ.
ಈ ಒಂದು ವಾಸ್ತವವೇ ಅಮೆರಿಕಾದ ಪ್ರಜಾಪ್ರಭುತ್ವದ ದುಸ್ಥಿತಿಯ ಕುರಿತ ನೈಜ ಚಿತ್ರಣವನ್ನು ಕಟ್ಟಿಕೊಡುತ್ತಿದೆ. ಪ್ರಸ್ತುತ ಅಮೆರಿಕಾದ ವ್ಯವಸ್ಥೆಯ ಸ್ಥಿತಿ ಎಷ್ಟು ಆತಂಕಕಾರಿಯಾಗಿದೆ ಎನ್ನುವುದನ್ನು ಇದು ತೋರಿಸುತ್ತಿದೆ.
ಅಮೆರಿಕಾ ಒಂದು ಸುಭದ್ರ ಪ್ರಜಾಪ್ರಭುತ್ವವಾಗಿದ್ದು, ತನ್ನನ್ನು ತಾನು ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಎಂದು ಕರೆದುಕೊಳ್ಳುತ್ತದೆ. ಇಂತಹ ರಾಷ್ಟ್ರದಲ್ಲಿ ಡೊನಾಲ್ಡ್ ಟ್ರಂಪ್ ಅವರಂತಹ ಅಭ್ಯರ್ಥಿ ಗೆಲುವಿಗೆ ಇಷ್ಟು ಸನಿಹದಲ್ಲಿರುವುದೇ ಹುಬ್ಬೇರುವಂತೆ ಮಾಡಿದೆ. ಡೊನಾಲ್ಡ್ ಟ್ರಂಪ್ ಹೇಗೆ ಕನಿಷ್ಠ ಸಭ್ಯತೆಯನ್ನೂ ಗಾಳಿಗೆ ತೂರಿ, ಹಲವಾರು ಕಾನೂನುಗಳನ್ನು ಮುರಿದಿದ್ದಾರೆ ಎನ್ನುವುದೇ ಇಂತಹ ಅಭಿಪ್ರಾಯ ಮೂಡಲು ಕಾರಣವಾಗಿದೆ.
ಪವರ್ ಪ್ಲೇ: ಇದು ಅಧಿಕಾರದ ಆಟ
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2019 ಮತ್ತು 2021ರಲ್ಲಿ ಎರಡು ಬಾರಿ ಮಹಾಭಿಯೋಗಕ್ಕೆ (ತಪ್ಪು ಮಾಡಿರುವುದಕ್ಕೆ ಅಧಿಕೃತವಾಗಿ ಕಾಂಗ್ರೆಸ್‌ನಿಂದ ಆರೋಪಕ್ಕೊಳಗಾಗುವುದು) ತುತ್ತಾಗಿದ್ದಾರೆ. ಇನ್ನು ಈ ವರ್ಷ ಅವರು 34 ಫೆಲೋನಿ ಕೌಂಟ್‌ಗಳಲ್ಲಿ (ಗಂಭೀರ ಅಪರಾಧ) ತಪ್ಪಿತಸ್ಥರೆಂದು ಗುರುತಿಸಲ್ಪಟ್ಟಿದ್ದು, ಒಂದು ನಾಗರಿಕ ವಿಚಾರಣೆಯಲ್ಲಿ ಲೈಂಗಿಕ ಶೋಷಣೆಯ ಆರೋಪದಲ್ಲೂ ದೋಷಿ ಎಂದು ಸಾಬೀತಾಗಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಅನುಮತಿ ಇಲ್ಲದೆ ರಹಸ್ಯ ಸರ್ಕಾರಿ ದಾಖಲೆಗಳನ್ನು ಇಟ್ಟುಕೊಂಡಿದ್ದ ಮತ್ತು ಕ್ಯಾಪಿಟಲ್ ಹಿಲ್ (ಅಮೆರಿಕಾದ ಸಂಸತ್ತು ಅಥವಾ ಕಾಂಗ್ರೆಸ್ ಸಭೆ ಸೇರುವ ಕಟ್ಟಡ) ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡಿರುವ ಗಂಭೀರ ಆರೋಪಗಳನ್ನೂ ಟ್ರಂಪ್ ಎದುರಿಸುತ್ತಿದ್ದಾರೆ. ಇವೆಲ್ಲದರ ಹೊರತಾಗಿಯೂ, ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾಗಿ ಶ್ವೇತ ಭವನಕ್ಕೆ ಮರಳುವುದಕ್ಕೆ ಹತ್ತಿರಾಗುತ್ತಿದ್ದಾರೆ.
ಚುನಾವಣಾ ಪ್ರಚಾರದ ಅವಧಿಯಲ್ಲಿ, ಟ್ರಂಪ್ ಒಂದು ಹತ್ಯಾ ಯತ್ನದಲ್ಲಿ ಪಾರಾಗಿ, ಇನ್ನೊಂದು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.
ಅತ್ಯಂತ ಸುದೀರ್ಘ ಅವಧಿಗೆ ಚೀಫ್ ಆಫ್ ಸ್ಟಾಫ್ ಆಗಿ ಸೇವೆ ಸಲ್ಲಿಸಿದ್ದ, ಮಾಜಿ ನಾಲ್ಕು ಸ್ಟಾರ್‌ಗಳ ಮರೀನ್ ಜನರಲ್ ಆದ ಜಾನ್ ಎಫ್ ಕೆಲ್ಲಿ ಅವರು ಟ್ರಂಪ್ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು, ಅವರು 'ಫ್ಯಾಸಿಸ್ಟ್' ಎನ್ನುವುದರ ಎಲ್ಲ ವಿವರಣೆಗೂ ಸರಿ ಹೊಂದುತ್ತಾರೆ ಎಂದಿದ್ದಾರೆ. ಫ್ಯಾಸಿಸ್ಟ್ ಎಂದರೆ, ದೇಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ, ಅಗತ್ಯ ಬಿದ್ದಲ್ಲಿ ವಿರೋಧವನ್ನು ದಮನಿಸಲು ಬಲ ಪ್ರಯೋಗ ನಡೆಸಿ ಆಡಳಿತ ನಡೆಸುವ ಸರ್ವಾಧಿಕಾರಿ ಸರ್ಕಾರದ ಬೆಂಬಲಿಗ ಎಂಬ ಅರ್ಥವಿದೆ.
ಜಾನ್ ಎಫ್ ಕೆಲ್ಲಿ ಅವರು ಮಾಧ್ಯಮ ಹೇಳಿಕೆ ನೀಡುತ್ತಾ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಓರ್ವ ತೀವ್ರ ಬಲಪಂಥೀಯ ಧೋರಣೆಯ, ಸರ್ವಾಧಿಕಾರಿ ಮನೋಭಾವದ ವ್ಯಕ್ತಿ ಎಂದಿದ್ದಾರೆ. ತಾನು ಸರ್ವಾಧಿಕಾರಿಗಳನ್ನು ಬಹಿರಂಗವಾಗಿಯೇ ಮೆಚ್ಚುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ. ಆದ್ದರಿಂದ, ಕೆಲ್ಲಿಯವರ ಪ್ರಕಾರ ಟ್ರಂಪ್ ಫ್ಯಾಸಿಸ್ಟ್ ಎಂಬ ಪದಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತಾರೆ.
ಸದ್ಯದ ವಿದ್ಯಮಾನಗಳಂತಹ ಕತೆಯನ್ನು ಯಾರಾದರೂ ಲೇಖಕ ಬರೆದು, ಅದನ್ನು ಪ್ರಕಟಣೆಗೆ ಕಳುಹಿಸಿದರೆ, ಪ್ರಕಾಶಕರು ಇದೆಂತ ನಂಬಲಸಾಧ್ಯವಾದ ಕತೆ ಎಂದು ನಕ್ಕುಬಿಡಬಹುದು. ಆದರೆ, ಸೌತ್ ಏಷ್ಯಾ ಪೀಸ್ ಆ್ಯಕ್ಷನ್ ನೆಟ್ವರ್ಕ್ (ಸಪನ್) ಹೇಳುವಂತೆ, ಇಂತಹ ಕತೆ ಅಮೆರಿಕನ್ನರ ಜೀವನದಲ್ಲಿ ನಿಜವಾಗಿದೆ.
ಟ್ರಂಪ್ ಸುತ್ತಲೂ ಇರುವ ವಿವಾದಗಳಿಗೆ ವ್ಯತಿರಿಕ್ತವಾಗಿ, ಇನ್ನೋರ್ವ ಅಭ್ಯರ್ಥಿಯಾದ ಕಮಲಾ ಹ್ಯಾರಿಸ್ ಅವರು ಮೇಲೆಬಂದ ರೀತಿ ನಿಜಕ್ಕೂ ಐತಿಹಾಸಿಕ ಮತ್ತು ಸ್ಫೂರ್ತಿಯುತವಾಗಿದೆ. ಅವರು ಒಂದು ಪ್ರಮುಖ ರಾಜಕೀಯ ಪಕ್ಷದಿಂದ ನಾಮನಿರ್ದೇಶನಗೊಂಡಿರುವ, ಭಾರತ ಮತ್ತು ಕೆರಿಬಿಯನ್ ಆಫ್ರಿಕನ್ ಪರಂಪರೆ ಹೊಂದಿರುವ ಮೊದಲ ಮಹಿಳೆಯಾಗಿದ್ದಾರೆ.
ಆದರೆ, ಈ ಹಂತಕ್ಕೆ ಕಮಲಾ ಹ್ಯಾರಿಸ್ ಅವರ ಬೆಳವಣಿಗೆಯೂ ಅಪಾರ ಅನಿರೀಕ್ಷಿತ ಸವಾಲುಗಳು ಮತ್ತು ಅಸಹಜ ಘಟನೆಗಳನ್ನು ಒಳಗೊಂಡಿತ್ತು.
ಎರಡನೇ ಅವಧಿಗೆ ಅಧ್ಯಕ್ಷೀಯ ಚುನಾವಣೆಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಸಹಜ ಆಯ್ಕೆಯಾಗಿದ್ದರು. ಆದರೆ ಅವರು ನಾಯಕತ್ವ ವಹಿಸಲು ವಯಸ್ಸು ಅಡ್ಡಿಯಾಗುವ ಕುರಿತು ಸಾಕಷ್ಟು ಕಳವಳಗಳಿದ್ದ ಕಾರಣ, ಅವರು ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿದರು. ಇದರ ಪರಿಣಾಮವಾಗಿ, ಅಂತಿಮ ಹಂತದಲ್ಲಿ ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಹೊರಹೊಮ್ಮಿದರು.
ಸೋಲು ಕಾಣದ ಸಮರ
ನಿಜಕ್ಕೂ 2024ರ ಅಧ್ಯಕ್ಷೀಯ ಚುನಾವಣೆಯನ್ನು ಇನ್ನೂ ಹೆಚ್ಚು ಅಸಹಜ ವಿದ್ಯಮಾನವನ್ನಾಗಿಸಿರುವುದು, ಅಮೆರಿಕಾದಿಂದ ಬಹುತೇಕ 6,000 ಮೈಲಿ ದೂರದ ಮಧ್ಯ ಪೂರ್ವದಲ್ಲಿ, ಇಸ್ರೇಲ್, ಪ್ಯಾಲೆಸ್ತೀನ್, ಲೆಬನಾನ್ ಮತ್ತು ಇರಾನ್‌ಗಳನ್ನು ಒಳಗೊಂಡು ನಡೆಯುತ್ತಿರುವ ಯುದ್ಧ.
ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಸಂಘಟನೆ ಅತ್ಯಂತ ಹಿಂಸಾತ್ಮಕ ಆಕ್ರಮಣ ನಡೆಸಿತು. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ಸಹ ಅತ್ಯಂತ ವಿಧ್ವಂಸಕ ಪ್ರತಿದಾಳಿ ನಡೆಸಿತು. ಈ ಬೆಳವಣಿಗೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.
ಕಮಲಾ ಹ್ಯಾರಿಸ್ ಅವರಿಗೆ ಇಸ್ರೇಲ್ ಕುರಿತ ಅಮೆರಿಕಾದ ಘನಿಷ್ಠ ಬೆಂಬಲ ಮತ್ತು ಪ್ಯಾಲೆಸ್ತೀನಿಯನ್ ಜನರ ಹಕ್ಕುಗಳ ಕುರಿತು ಧ್ವನಿ ಎತ್ತುವುದರ ನಡುವೆ ಸಮತೋಲನ ಸಾಧಿಸುವ ಕಷ್ಟಕರ ಜವಾಬ್ದಾರಿ ಇತ್ತು. ಇದೇ ಸಂದರ್ಭದಲ್ಲಿ, ಡೆಮಾಕ್ರಟಿಕ್ ಪಕ್ಷದ ಎಡಪಂಥೀಯ ನಿಲುವು ಹೊಂದಿರುವ ಸದಸ್ಯರು ಕಮಲಾ ಹ್ಯಾರಿಸ್ ಮೇಲೆ ಹೆಚ್ಚು ಹೆಚ್ಚು ಪ್ಯಾಲೆಸ್ತೀನಿಗೆ ಬೆಂಬಲ ನೀಡುವಂತೆ ಒತ್ತಡ ಹೇರತೊಡಗಿದ್ದರು.
ಆದರೆ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಇಸ್ರೇಲನ್ನು ಬೆಂಬಲಿಸಿದ್ದು, ಅದರೊಡನೆ ಅಮೆರಿಕನ್ ಮುಸ್ಲಿಂ ಮತದಾರರ ಬೆಂಬಲ ಗಳಿಸಲು ಪ್ರಯತ್ನ ನಡೆಸಿದ್ದಾರೆ.
ಟ್ರಂಪ್ ಇಸ್ರೇಲನ್ನು ಸಂಪೂರ್ಣವಾಗಿ ಬೆಂಬಲಿಸುವ ಸ್ಪಷ್ಟ ನಿರ್ಧಾರ ಕೈಗೊಂಡಿದ್ದರೂ, ಅವರ ನಿಲುವಿನ ಕುರಿತು ಅವರು ಪ್ರತಿನಿಧಿಸುವ ರಿಪಬ್ಲಿಕನ್ ಪಕ್ಷದ ಒಳಗೆ ಹೆಚ್ಚಿನ ಪ್ರತಿರೋಧ ಕಂಡುಬಂದಿಲ್ಲ. ಇದು ಕಮಲಾ ಹ್ಯಾರಿಸ್ ಮುಂದಿದ್ದ ಸವಾಲಿಗಿಂತ ಸಂಪೂರ್ಣ ಭಿನ್ನ ಸ್ಥಿತಿಯಾಗಿತ್ತು.
ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರುತ್ತಿರುವ ಇನ್ನೊಂದು ಗಂಭೀರ ವಿಚಾರವೆಂದರೆ, ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಯುದ್ಧ. ಇದರಲ್ಲಿ ಬೈಡನ್ - ಕಮಲಾ ಆಡಳಿತ ಸ್ಪಷ್ಟವಾಗಿ ಉಕ್ರೇನನ್ನು ಬೆಂಬಲಿಸಿದೆ.
ಆದರೆ ಟ್ರಂಪ್ ಈ ವಿಚಾರದ ಮಹತ್ವವನ್ನು ಕಡಿಮೆಗೊಳಿಸಿದ್ದು, ತಾನು ಈ ಯುದ್ಧವನ್ನು ಕೇವಲ ಒಂದು ದಿನದಲ್ಲಿ ಕೊನೆಗೊಳಿಸಬಲ್ಲೆ ಎಂದಿದ್ದಾರೆ! ಮೇಲ್ನೋಟಕ್ಕೆ ಇದೊಂದು ಹಾಸ್ಯಾಸ್ಪದ ಹೇಳಿಕೆಯಂತೆ ಕಂಡರೂ, ಆಶ್ಚರ್ಯಕರವಾಗಿ ಟ್ರಂಪ್ ಬೆಂಬಲಿಗರು ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಈ ಯುದ್ಧಗಳು, ವಿದೇಶಾಂಗ ನೀತಿಯ ಕುರಿತು ಟ್ರಂಪ್ ಮತ್ತು ಕಮಲಾ ಹೊಂದಿರುವ ಸಂಪೂರ್ಣ ವ್ಯತಿರಿಕ್ತ ದೃಷ್ಟಿಕೋನವನ್ನು ಪ್ರದರ್ಶಿಸಿವೆ. ಇದರಿಂದಾಗಿ, ಚುನಾವಣಾ ಫಲಿತಾಂಶದ ಪರಿಣಾಮವಾಗಿ ಉಂಟಾಗುವ ರಾಜಕೀಯ ಪರಿಣಾಮಗಳೇನು ಎನ್ನುವುದು ಸ್ಪಷ್ಟವಾಗಿ ಗೋಚರವಾಗಿದೆ.
ಅಮೆರಿಕಾ ಜಗತ್ತಿನಾದ್ಯಂತ ಹಲವಾರು ವರ್ಷಗಳ ಕಾಲ ವಿವಿಧ ಯುದ್ಧಗಳಲ್ಲಿ ನಿರತವಾಗಿದ್ದರಿಂದ, ವಿವಿಧ ದೇಶಗಳ ಜನರು ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೆಲವು ದೇಶಗಳು ಹೆಚ್ಚು ಆತಂಕ ಹೊಂದಿದ್ದರೆ, ಇನ್ನು ಕೆಲವು ಪ್ರಕರಣಗಳಲ್ಲಿ ಕೊಂಚ ನೆಮ್ಮದಿ ಹೊಂದುತ್ತಿದ್ದಾರೆ.
ಯಾರೇ ಅಧ್ಯಕ್ಷರಾದರೂ, ಹಲವಾರು ದೇಶಗಳ ಮೇಲೆ ಅದರ ಪ್ರಭಾವ ಉಂಟಾಗುವುದರಿಂದ ಜನರು ಆತಂಕ ಹೊಂದಿದ್ದಾರೆ. ಅದರೊಡನೆ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಸಭ್ಯ ಮತ್ತು ಆಘಾತಕಾರಿ ನಡವಳಿಕೆಗಳಿಂದಾಗಿ ಅಮೆರಿಕಾವನ್ನು ಜನರು ಆಡಿಕೊಂಡು ನಕ್ಕಿದ್ದೂ ಇದೆ.
ಯಾರಾದರೂ ಒಬ್ಬ ಅಭ್ಯರ್ಥಿ ಬೃಹತ್ ಅಂತರದ ಮುನ್ನಡೆ ಸಾಧಿಸುವ ಹೊರತಾಗಿ, ನವೆಂಬರ್ 6ರಂದು ಚುನಾವಣಾ ಫಲಿತಾಂಶ ಸ್ಪಷ್ಟವಾಗಿ ತಿಳಿಯುವ ಸಾಧ್ಯತೆಗಳಿಲ್ಲ.
ಟ್ರಂಪ್ ಮತ್ತು ಅವರ ಬೆಂಬಲಿಗರು 2016ರ ಚುನಾವಣೆಯಲ್ಲಿ ಬೈಡನ್ ವಿರುದ್ಧದ ಸೋಲನ್ನೂ ಒಪ್ಪಿಕೊಂಡಿರಲಿಲ್ಲ. ಒಂದು ವೇಳೆ ಈ ಬಾರಿಯ ಚುನಾವಣೆಯಲ್ಲೂ ಟ್ರಂಪ್ ಸೋಲು ಕಂಡರೆ, ಆತ ಮತ್ತು ಬೆಂಬಲಿಗರು ಹಲವಾರು ಸವಾಲುಗಳನ್ನು ಒಡ್ಡುವ ಸಾಧ್ಯತೆಗಳಿವೆ. ಒಂದು ವೇಳೆ ಟ್ರಂಪ್ ಏನಾದರೂ ಸಣ್ಣ ಅಂತರದ ಸೋಲು ಕಂಡರೆ, ಅವರ ಮತ್ತು ಬೆಂಬಲಿಗರ ಪ್ರತಿಕ್ರಿಯೆ ಇನ್ನಷ್ಟು ತೀವ್ರ ಮತ್ತು ಹಿಂಸಾತ್ಮಕ ರೂಪ ಪಡೆಯುವ ಸಾಧ್ಯತೆಗಳಿವೆ.
2016ರ ಅಮೆರಿಕಾ ಚುನಾವಣೆಯ ಫಲಿತಾಂಶದ ಬಳಿಕ ತಲೆದೋರಿದ ಪರಿಸ್ಥಿತಿಯನ್ನು ಅಂತಾರಾಷ್ಟ್ರೀಯ ಸಮುದಾಯ, ಅದರಲ್ಲೂ ಚೀನಾ ಮತ್ತು ರಷ್ಯಾಗಳಂತಹ ರಾಷ್ಟ್ರಗಳು ಆಡಿಕೊಂಡಿದ್ದವು. ಒಂದು ವೇಳೆ ಪರಿಸ್ಥಿತಿ ಹಾಗೆಯೇ ಆದರೆ, ಅವುಗಳಿಗೆ ಇನ್ನಷ್ಟು ಸಮಾಧಾನ ಸಿಗಬಹುದೇನೋ!
ಯಾರೇ ವಿಜೇತರಾದರೂ, 2024ರ ಅಧ್ಯಕ್ಷೀಯ ಚುನಾವಣೆಯ ಸುತ್ತ ಬಹಳಷ್ಟು ವಿಚಿತ್ರ ಮತ್ತು ಅಸಹಜ ಬೆಳವಣಿಗೆಗಳು ನಡೆದಿರುವುದರಿಂದ ಅದು ಜಗತ್ತಿಗೆ ಆತಂಕಕಾರಿಯಾಗಿದೆ. ಅದರೊಡನೆ, ಈ ಚುನಾವಣೆಯೂ ಜಗತ್ತಿನ ಕಣ್ಣಲ್ಲಿ ಶಕ್ತಿಶಾಲಿ ಪ್ರಜಾಪ್ರಭುತ್ವ ಎಂಬ ಅಮೆರಿಕಾದ ಗೌರವಕ್ಕೂ ಕುತ್ತು ತರುವ ಸಾಧ್ಯತೆಗಳು ದಟ್ಟವಾಗಿವೆ.












Click it and Unblock the Notifications