ಭಾರತದ ಮೇಲೆ ಪಾಕಿಸ್ತಾನ ಚೂ ಬಿಟ್ಟ ಅಮೆರಿಕಾ: ಪರಮಾಣು ದಾಳಿ ಬೆದರಿಕೆ, ರಾಜತಾಂತ್ರಿಕರಿಗೆ ಕಿರುಕುಳ!
ಅಮೆರಿಕದ ಬೆಂಬಲದಿಂದ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದೆ. ಪಾಪಿ ಪಾಕಿಸ್ತಾನಕ್ಕೆ ಅಮೆರಿಕದ ಬೆಂಬಲ ಹೆಚ್ಚಾಗುತ್ತಿದ್ದಂತೆಯೇ ಮತ್ತೆ ನ್ಯೂಕ್ಲಿಯರ್ ಬಾಂಬ್ ದಾಳಿಯ ಬೆದರಿಕೆಯನ್ನು ಪಾಕಿಸ್ತಾನ ಹಾಕಿತ್ತು. ಇದೀಗ ಪಾಕಿಸ್ತಾನದಲ್ಲಿರುವ ಭಾರತದ (Indian Diplomats) ರಾಜತಾಂತ್ರಿಕರಿಗೆ ಸಮಸ್ಯೆ ಕೊಡುತ್ತಿದೆ. ಅಮೆರಿಕಾ ಭಾರತದಿಂದ ಆಮದು ಆಗುವ ವಸ್ತುಗಳ ಮೇಲೆ ಶೇ 50ರಷ್ಟು ತೆರಿಗೆ ವಿಧಿಸಿದೆ. ಇಷ್ಟಾದರೂ ಭಾರತ ಅಮೆರಿಕದ ಮುಂದೆ ರಾಜಿ ಆಗುತ್ತಿಲ್ಲ. ಪರ್ಯಾಯವಾಗಿ ರಷ್ಯಾ - ಚೀನಾ ಹಾಗೂ ಭಾರತ ಒಕ್ಕೂಟ ರಚನೆಗೆ ಸಿದ್ಧವಾಗಿದೆ. ಇದನ್ನು ಸಹಿಸಿಕೊಳ್ಳುವುದಕ್ಕೆ ಅಮೆರಿಕಾಗೆ ಆಗುತ್ತಿಲ್ಲ. ಹೀಗಾಗಿ ಭಾರತದ ಮೇಲೆ ಪಾಕಿಸ್ತಾನವನ್ನು ಚೂಬಿಡುತ್ತಿದೆ. ಮೊದಲೇ ಪದೇ ಪದೇ ಕಿರಿಕಿರಿ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕದ ಬೆಂಬಲ ಮತ್ತಷ್ಟು ಮೆರೆಯುವಂತೆ ಮಾಡಿದೆ.
ಭಾರತ ಮತ್ತು ಅಮೆರಿಕದ ನಡುವಿನ ಬಾಂಧವ್ಯ ಭಾರತ ಮತ್ತು ಪಾಕಿಸ್ತಾನದ ಯುದ್ಧದ ನಂತರ ಸಾಕಷ್ಟು ಹಳಸಿದೆ. ಇದರ ನಡುವೆ ಅಮೆರಿಕ, ಭಾರತದ ಮೇಲೆ ಸೇಡು ತೇರಿಸಿಕೊಳ್ಳುವುದಕ್ಕೆ ಪಾಕಿಸ್ತಾನವನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಭಾರತ ಸಹ ಅಮೆರಿಕದ ಮೇಲೆ ಚೀನಾದಂತೆ ಕಠಿಣವಾದ ತೆರಿಗೆ ವಿಧಿಸುವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಈ ಕಾರಣಗಳಿಗೆ ಅಮೆರಿಕಾ ಹಾಗೂ ಪಾಕಿಸ್ತಾನದ ಉಪಟಳ ಹೆಚ್ಚಾಗಿದೆ. ಇದೀಗ ಮತ್ತೊಂದು ಕಿರಿಕ್ ಅನ್ನು ಪಾಕಿಸ್ತಾನ ತೆಗೆದಿದೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾಜಿ ಸಂಧಾನಕ್ಕೆ ಮುಂದಾಗಿತ್ತು ಎನ್ನಲಾಗಿರುವ ಪಾಕಿಸ್ತಾನವು ಇದೀಗ ಭಾರತದ ವಿರುದ್ಧ ತನ್ನ ಕುತಂತ್ರ ಬುದ್ಧಿಯನ್ನು ಪ್ರದರ್ಶಿಸಿದೆ. ಪಾಕಿಸ್ತಾನವು ಭಾರತೀಯ ರಾಜತಾಂತ್ರಿಕರಿಗೆ ಅನಿಲ (ಗ್ಯಾಸ್ ಸಿಲಿಂಡರ್)ಪೂರೈಕೆ ನೀರು ಸರಬರಾಜು ಮಾಡುವುದನ್ನು ನಿರ್ಬಂಧಿಸಿದೆ. ಇದಕ್ಕೆ ಭಾರತವು ಪ್ರತೀಕಾರ ತೀರಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಇಸ್ಲಾಮಾಬಾದ್‌ನಲ್ಲಿ ಭಾರತೀಯ ರಾಜತಾಂತ್ರಿಕರು ಅನಿಲ ಮತ್ತು ನೀರು ಸರಬರಾಜಿನ ವಿಷಯದಲ್ಲಿ ಅಡೆತಡೆ ಎದುರಿಸುತ್ತಿದ್ದಾರೆ. ಹೀಗಾಗಿ ಭಾರತವು ಪಾಕಿಸ್ತಾನಿ ರಾಜತಾಂತ್ರಿಕರ ವಿರುದ್ಧ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಜತಾಂತ್ರಿಕರ ನಿವಾಸಗಳು ಮತ್ತು ಕಚೇರಿಗಳಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಕಣ್ಗಾವಲು ತೀವ್ರಗೊಳಿಸಿದ್ದಾರೆ. 2019 ರಲ್ಲಿ ಗಡಿಯಾಚೆಗಿನ ದಾಳಿಯ ನಂತರ ವಿಧಿಸಲಾದ ಕ್ರಮಗಳಂತೆಯೇ ಅನಿಲ ಹಾಗೂ ನೀರು ಸರಬರಾಜಿನ ವಿಷಯದಲ್ಲೂ ಭಾರತೀಯ ರಾಜತಾಂತ್ರಿಕರು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕಾದ ನ್ಯೂಯಾರ್ಕ್‌ಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಭೇಟಿ ಮಾಡಿದ ಬೆನ್ನಲ್ಲೇ ಅಣುಬಾಂಬ್ ದಾಳಿಯ ಮಾತನಾಡಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಮತ್ತೊಂದು ಎಡವಟ್ಟನ್ನು ಪಾಕಿಸ್ತಾನ ಮಾಡಿದೆ.
ಏತನ್ಮಧ್ಯೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಇದು ಎರಡು ದೇಶಗಳ ನಡುವಿನ ಭವಿಷ್ಯದ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬೆದರಿಕೆ ಹಾಕಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಪರಮಾಣು ಬ್ಲ್ಯಾಕ್‌ಮೇಲ್‌ಗೆ ಮಣಿಯುವುದಿಲ್ಲ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಭಾರತ ಹೇಳಿದೆ.












Click it and Unblock the Notifications