ಡ್ರ್ಯಾಗನ್ ರಾಜಧಾನಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ವಿಸಿಟ್
ಬೀಜಿಂಗ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾ-ಚೀನಾ ಅತ್ಯಾಪ್ತ ರಾಷ್ಟ್ರಗಳಾಗಿ ಗುರುತಿಸಿಕೊಳ್ಳುತ್ತಿವೆ. ಅದರಲ್ಲೂ ಉಕ್ರೇನ್ ಯುದ್ಧ ಶುರುವಾದ ನಂತರ, ನ್ಯಾಟೋ ಸದಸ್ಯ ಫ್ರಾನ್ಸ್ ಸೇರಿದಂತೆ ಅಮೆರಿಕ ಬೆಂಬಲಿತ ರಾಷ್ಟ್ರಗಳೆಲ್ಲಾ ರಷ್ಯಾ, ಚೀನಾದಿಂದ ದೂರ ಓಡುತ್ತಿವೆ. ಆದರೆ ಇದೇ ಹೊತ್ತಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ವಿಶೇಷ ನಿರ್ಧಾರ ಕೈಗೊಂಡಿದ್ದು, ಡ್ರ್ಯಾಗನ್ ರಾಜಧಾನಿಗೆ ಮ್ಯಾಕ್ರಾನ್ ವಿಸಿಟ್ ಕೊಟ್ಟಿದ್ದಾರೆ.
ಚೀನಾ ರಾಜಧಾನಿ ಬೀಜಿಂಗ್‌ಗೆ ಬಂದಿಳಿದ ಇಮ್ಯಾನುಯೆಲ್ ಮ್ಯಾಕ್ರಾನ್, ಚೀನಾ ಪ್ರಧಾನಿ ಲಿ ಕಿಯಾಂಗ್ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ನಂತರ ಇತಿಹಾಸದಲ್ಲೇ ಮೊದಲ ಬಾರಿಗೆ ಚೀನಾ ಮತ್ತು ಯುರೋಪ್ ಸಂಬಂಧ ಭಾರಿ ಕೆಟ್ಟ ಹಂತ ತಲುಪಿದೆ. ಅದರಲ್ಲೂ ಮೊದಲಿನಿಂದ ಫ್ರಾನ್ಸ್ ಜೊತೆಗೂ ಚೀನಾ ಸಂಬಂಧ ಅಷ್ಟಕಷ್ಟೇ. ಇದೀಗ ಅಸಮಾಧಾನ ತೊಲಗಿಸಿ, ಸ್ನೇಹ ಗಟ್ಟಿಗೊಳಿಸಲು ಮ್ಯಾಕ್ರಾನ್ ಚೀನಾಗೆ ಭೇಟಿ ನೀಡಿದ್ದಾರೆ.

ಅಮೆರಿಕದ ಸುಪಾರಿ?: ಚೀನಾ ಸದ್ಯಕ್ಕೆ ಜಗತ್ತಿಗೇ ಬೇಕಾಗಿರುವ ರಾಷ್ಟ್ರ. ಚೀನಾ ಪ್ರಪಂಚದ 2ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶ ಎಂಬುದು ಒಂದು ಕಡೆಯಾದರೆ, ರಷ್ಯಾ ಜೊತೆ ಚೀನಾ ಹೋಗದಂತೆ ತಡೆಯಲು ಅಮೆರಿಕ ಯತ್ನಿಸುತ್ತಿದೆ. ಅದರಲ್ಲೂ ಉಕ್ರೇನ್ ವಿಚಾರಲ್ಲಿ ಚೀನಾ ತಮ್ಮ ಪರ ನಿಲ್ಲಲಿ ಎಂಬುದೇ ಅಮೆರಿಕದ ಟಾರ್ಗೆಟ್. ಹೀಗಾಗಿಯೇ ಫ್ರಾನ್ಸ್ ಮೂಲಕ ಚೀನಾ ಮನವೊಲಿಸಲು ಅಮೆರಿಕ ಮುಂದಾಗಿದೆ. ಉಕ್ರೇನ್ ಯುದ್ಧದ ವಿಚಾರದಲ್ಲಿ ರಷ್ಯಾಗೆ ಬುದ್ಧಿ ಹೇಳುವಂತೆ ಫ್ರಾನ್ಸ್ ಮೂಲಕ ಅಮೆರಿಕ ಒತ್ತಡ ಹೇರಲು ಮುಂದಾಗಿದೆ.
ರಷ್ಯಾ ಸ್ನೇಹಿತ: ಮೊದಲಿನಿಂದಲೂ ರಷ್ಯಾ ಜೊತೆಗೆ ಉತ್ತಮ ಸ್ನೇಹ ಹೊಂದಿರುವ ಚೀನಾ, ಈಗಾಗಲೇ ಉಕ್ರೇನ್ ಯುದ್ಧದ ವಿಚಾರದಲ್ಲಿ ತನ್ನ ಬೆಂಬಲವನ್ನು ಸಂಪೂರ್ಣವಾಗಿ ರಷ್ಯಾ ಪರ ಘೋಷಿಸಿದೆ. ಚೀನಾದ ಈ ನಿರ್ಧಾರ ಅಮೆರಿಕ ಮತ್ತು ನ್ಯಾಟೋ ಸದಸ್ಯ ರಾಷ್ಟ್ರಗಳಿಗೆ ನುಂಗಲಾರದ ತುತ್ತಾಗಿಸಿದೆ. ಇದೇ ಕಾರಣಕ್ಕೆ ಹೇಗಾದರೂ ಮಾಡಿ ಚೀನಾ ತನ್ನ ಮನಸ್ಸು ಬದಲಾಯಿಸುವಂತೆ ಮಾಡಲು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಕೊನೆಕ್ಷಣದ ಪ್ರಯತ್ನ ಮಾಡಲಿದ್ದಾರೆ.
ಫ್ರಾನ್ಸ್‌ಗೂ ಭಯ: ಈಗಾಗಲೇ ರಷ್ಯಾ ವಿರೋಧ ಕಟ್ಟಿಕೊಂಡಿರುವ ಫ್ರಾನ್ಸ್, ತನ್ನ ಮೇಲೂ ಮುಂದೆ ರಷ್ಯಾ ದಾಳಿ ನಡೆಸಬಹುದು ಎಂಬ ಭಯದಲ್ಲೇ ಇದೆ. ಮತ್ತೊಂದು ಕಡೆ ಇದೇ ಭಯವನ್ನು ಬಳಸಿಕೊಂಡು ಅಮೆರಿಕ ರಷ್ಯಾ ವಿರುದ್ಧ ಯುರೋಪ್ ರಾಷ್ಟ್ರಗಳನ್ನು ಎತ್ತಿಕಟ್ಟುತ್ತಿದೆ. ಇದೀಗ ಇಮ್ಯಾನುಯೆಲ್ ಮ್ಯಾಕ್ರಾನ್ ಅದರ ಮುಂದುವರಿದ ಭಾಗ ಎನ್ನಬಹುದು. ಏಕೆಂದರೆ ಅಕಸ್ಮಾತ್ ಮ್ಯಾಕ್ರಾನ್ ಚೀನಾ ಮನವೊಲಿಸಿ, ಅಮೆರಿಕದ ಆಸೆ ಈಡೇರಿಸಿದರೆ ಅದರ ಸಂಪೂರ್ಣ ಲಾಭ ಸಿಗುವುದು ಜಗತ್ತಿನ ದೊಡ್ಡಣ್ಣನಿಗೆ ಮಾತ್ರ.
ಪುಟಿನ್ ಋಣಿ: ಕಳೆದ ತಿಂಗಳು ಚೀನಾ ಅಧ್ಯಕ್ಷ ಜಿನ್‌ಪಿಂಗ್ ರಷ್ಯಾ ಪ್ರವಾಸ ಕೈಗೊಂಡು ಉಕ್ರೇನ್ ಯುದ್ಧದ ವಿಚಾರದಲ್ಲಿ ರಷ್ಯಾಗೆ ಬೆಂಬಲ ನೀಡಿದ್ದರು. ಅಲ್ಲದೆ ಶಾಂತಿ ಮಾತುಕತೆಗೂ ಜಿನ್‌ಪಿಂಗ್ ರಷ್ಯಾಗೆ ಸಲಹೆ ನೀಡಿದ್ದರು. ಹೀಗೆ ಕಷ್ಟದ ಸಮಯದಲ್ಲಿ ಇಡೀ ಜಗತ್ತೇ ರಷ್ಯಾ ವಿರುದ್ಧ ನಿಲ್ಲಲು ಸಿದ್ಧವಾಗಿದ್ದರೆ ಚೀನಾ ಮಾತ್ರ ರಷ್ಯಾ ಪರ ಬ್ಯಾಟ್ ಬೀಸಿತ್ತು. ಚೀನಾದ ಈ ಬೆಂಬಲಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಗೌರವ ಅರ್ಪಿಸಿದ್ದರು. ಚೀನಾದ ಚಿಂತನೆಗಳನ್ನು ಜಾಗರೂಕತೆಯಿಂದ ಅಭ್ಯಸಿಸಿರುವುದಾಗಿ ಮತ್ತು ಗೌರವದಿಂದ ನೋಡಿರುವುದಾಗಿ ಪುಟಿನ್ ಹೇಳಿದ್ದರು.
ಒಟ್ಟಾರೆ ಫ್ರಾನ್ಸ್ ಅಧ್ಯಕ್ಷರ ಚೀನಾ ಪ್ರವಾಸ ಕೇವಲ ವ್ಯಾಪರ ಸಂಬಂಧ ವೃದ್ಧಿ ಸೀಮಿತವಾದರೆ ಅದೇ ದೊಡ್ಡ ಸಾಧನೆ ಎನ್ನಬಹುದು. ಇದನ್ನ ಹೊರತುಪಡಿಸಿ ಉಕ್ರೇನ್ ವಿಚಾರದಲ್ಲಿ ಚೀನಾ ಮನಸ್ಸು ಬದಲಿಸುವಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಸಕ್ಸಸ್ ಆಗ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications