ಇರಾನ್ VS ಅಮೆರಿಕ ನಡುವೆ ಯುದ್ಧ ಫಿಕ್ಸ್?
ಜಗತ್ತಿನಲ್ಲಿ ಮತ್ತೊಂದು ಯುದ್ಧಕ್ಕೆ ಇದೀಗ ರಣಕಹಳೆ ಮೊಳಗಿದಂತೆ ಕಾಣುತ್ತಿದೆ. ಈ ಮಾತಿಗೆ ಕಾರಣವಾಗಿದ್ದು ಇರಾನ್. ಯಾಕಂದ್ರೆ, ಡಮಾಸ್ಕಸ್ ಮೇಲೆ ನಡೆದ ದಾಳಿಯ ಪರಿಣಾಮ ರೊಚ್ಚಿಗೆದ್ದಿರುವ ಇರಾನ್ ಈಗ ಭೀಕರ ದಾಳಿಗೆ ಶಪಥ ಮಾಡಿದಂತೆ ಕಾಣ್ತಿದೆ. ಇದೇ ಕಾರಣಕ್ಕೆ ಇದೀಗ ಅಮೆರಿಕ ಮತ್ತು ಇಸ್ರೇಲ್ ಹೈ ಅಲರ್ಟ್ ಘೋಷಣೆ ಮಾಡಿ, ಸಂಭಾವ್ಯ ದಾಳಿ ಎದುರಿಸಲು ಸಜ್ಜಾಗಿವೆ.
ಅಂದಹಾಗೆ ಇದೇ ತಿಂಗಳ ಆರಂಭದಲ್ಲಿ ಇರಾನ್ ರೊಚ್ಚಿಗೇಳುವ ರೀತಿಯ ಘಟನೆಯು ನಡೆದಿತ್ತು. ಏಪ್ರಿಲ್ 2 ರಂದು ಸಿರಿಯಾದ ಡಮಾಸ್ಕಸ್‌ನ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆದಿತ್ತು. ದಾಳಿಯಲ್ಲಿ 11 ಜನರು ಕೊಲೆಯಾದರು. ದಾಳಿಯ ಬಳಿಕ ಇರಾನ್ ರೊಚ್ಚಿಗೆದ್ದಿದೆ. ಯಾಕೆ ಅಂದ್ರೆ ರಾಯಭಾರ ಕಚೇರಿ ಮೇಲಿನ ದಾಳಿಯಲ್ಲಿ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ನ, ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಮೃತಪಟ್ಟಿದ್ದು ಇರಾನ್‌ಗೆ ಕೆಂಡದಂತಹ ಕೋಪ ತರಿಸಿದೆ.

ಮತ್ತೊಂದು ಯುದ್ಧ ಶುರು?
ಈ ಎಲ್ಲಾ ಕಾರಣಕ್ಕೆ ಇದೀಗ ಇಸ್ರೇಲ್ ದಾಳಿಗೆ ಇರಾನ್ ಸೇನೆ ಪ್ರತೀಕಾರ ತೆಗೆದುಕೊಳ್ಳುವ ಸಂಭವ ಇದ್ದು, ಮಧ್ಯ ಪ್ರಾಚ್ಯದಲ್ಲಿ ಮಿಲಿಟರಿ & ರಾಯಭಾರ ಅಧಿಕಾರಿಗಳಿಗೆ ಅಮೆರಿಕವು ಹೈ ಅಲರ್ಟ್ ನೀಡಿದೆ ಎನ್ನಲಾಗಿದೆ. ಇದರ ನಡುವೆ ಇಸ್ರೇಲ್, ರಜೆ ಮೇಲೆ ಹೋಗಿರುವ ತನ್ನ ಸೇನಾಧಿಕಾರಿಗಳ ವಾಪಸ್ ಕರೆಯಿಸಿಕೊಂಡಿದೆ. ಹಾಗೆಯೇ ಸೇನಾ ಸಿಬ್ಬಂದಿ ರಜೆಯ ರದ್ದು ಮಾಡಿದೆ. ಜಿಪಿಎಸ್ ಸಿಗ್ನಲ್ ಸ್ಥಗಿತ ಮಾಡಿ ಸಂಭಾವ್ಯ ದಾಳಿ ಎದುರಿಸಲು ಎಲ್ಲ ರೀತಿ ಸಿದ್ಧತೆ ನಡೆಸಿದೆ.
ಇಷ್ಟೊಂದು ಕೋಪ ಯಾಕೆ?
ಮತ್ತೊಂದು ಕಡೆ ಡಮಾಸ್ಕಸ್ ದಾಳಿಗೆ ನೇರ ಪ್ರತಿಕ್ರಿಯೆ ನೀಡಲು ಇದೀಗ ಇರಾನ್ ತನ್ನ ಸಿದ್ಧತೆ ಆರಂಭಿಸಿದೆ ಎನ್ನಲಾಗಿದೆ. ಹಾಗೇ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸಿದ್ಧವಾಗಿರಲು ಸೂಚಿಸಿರುವುದು ಕೂಡ ಭಯ ಹೆಚ್ಚಿಸಿದೆ. ಹೀಗಾಗಿ ಅಮೆರಿಕ ಕೂಡ ಸಂಭಾವ್ಯ ದಾಳಿ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಮೊಹಮ್ಮದ್ ರೆಜಾ ಜಹೇದಿ ಜೊತೆಯಲ್ಲಿ ಇನ್ನೊಬ್ಬ ಉನ್ನತ ಶ್ರೇಣಿಯ ಅಧಿಕಾರಿ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಹಾದಿ ಹಾಜಿ ರಹೀಮಿ ಹಾಗೂ ಗಾರ್ಡ್‌ನ 7 ಸದಸ್ಯರು ಮೃತಪಟ್ಟಿರುವುದು ಇರಾನ್ ಪಿತ್ತ ನೆತ್ತಿಗೇರಿಸಿದೆ.
ನೂರಾರು ಜನರಿಗೆ ಗಾಯ
ಮತ್ತೊಂದು ಕಡೆ ನೂರಾರು ಜನರು ಈ ದಾಳಿಯಲ್ಲಿ ಗಾಯಗೊಂಡಿದ್ದು ಮೃತಪಟ್ಟಿದ್ದ ಸೇನಾಧಿಕಾರಿಗಳ ಅಂತ್ಯಕ್ರಿಯೆ ಟೆಹರಾನ್‌ನಲ್ಲಿ ನಡೆಯಿತು. ಈ ವೇಳೆ ಇರಾನ್ ಸೇನೆಯ ಅಧಿಕಾರಿಗಳು ಪ್ರತೀಕಾರದ ಶಪಥ ಮಾಡಿದ್ದಾರೆ. ಅಲ್ಲದೆ ಇದೇ ವಿಚಾರ ಈಗ ಅಮೆರಿಕ ಸೇರಿದಂತೆ ಇಸ್ರೇಲ್ ನಿದ್ದೆಗೆಡಿಸಿದೆ. ಯಾವಾಗ ಬೇಕಾದರೂ ಇರಾನ್ ಕಡೆಯಿಂದ ಈಗ ಭೀಕರ ದಾಳಿ ನಡೆಯುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ತನ್ನ ಬಳಿ ಇರುವ ಅಸ್ತ್ರಗಳನ್ನು ಜೋಡಿಸಿ ಇಟ್ಟುಕೊಂಡಿದೆ ಇರಾನ್ ಸೇನೆ. ಮತ್ತೊಂದ್ಕಡೆ, ತಮ್ಮ ಮೇಲೆ ದಾಳಿ ಮಾಡಿದರೆ ಉತ್ತರ ನೀಡಲು ಸಜ್ಜಾಗಿವೆ ಇಸ್ರೇಲ್ & ಅಮೆರಿಕ.












Click it and Unblock the Notifications