World War 3: ಚೀನಾ ಬಳಿ ಇದೆಯಂತೆ ಪರಮಾಣು ಬಾಂಬ್‌ಗಳ ಸಂತೆ!
ಚೀನಾ ಮತ್ತು ಅಮೆರಿಕ ಮಧ್ಯೆ ಘರ್ಷಣೆ ತೀವ್ರಗೊಂಡಿರುವ ಸಮಯದಲ್ಲೇ ಅಮೆರಿಕ ಈಗ ಗಂಭೀರ ಆರೋಪ ಒಂದನ್ನ ಮಾಡಿದೆ. ಆ ಪ್ರಕಾರ ಈ ಹಿಂದೆ ಅಂದುಕೊಂಡಿದ್ದಕ್ಕಿಂತಲು ಹೆಚ್ಚಾಗಿ ಚೀನಾ ಬಳಿ ಪರಮಾಣು ಬಾಂಬ್‌ಗಳು ಇವೆಯಂತೆ. ಅಮೆರಿಕ ನೀಡಿರುವ ವರದಿ ಎಲ್ಲರನ್ನ ಬೆಚ್ಚಿಬೀಳಿಸಿದೆ. ಹಾಗಾದ್ರೆ ಚೀನಾ ಬಳಿ ಇರುವ ಒಟ್ಟು ಪರಮಾಣು ಬಾಂಬ್‌ಗಳ ಸಂಖ್ಯೆ ಎಷ್ಟು? ಜಗತ್ತಿನ ಬೇರೆ ಬೇರೆ ದೇಶಗಳ ಬಳಿ ಎಷ್ಟಿವೆ ನ್ಯೂಕ್ಲಿಯರ್ ಬಾಂಬ್‌ಗಳು?
ಇಷ್ಟುದಿನ ಪರಮಾಣು ಬಾಂಬ್‌ಗಳ ಬಾಸ್ ಎನಿಸಿಕೊಂಡಿದ್ದ ಅಮೆರಿಕ ಹಾಗೂ ರಷ್ಯಾ ಸಾಲಿಗೆ ಚೀನಾ ಕೂಡ ಸೇರುತ್ತಿದೆ. ಮಾತ್ರವಲ್ಲ ರಷ್ಯಾ ಹಾಗೂ ಚೀನಾ ಅತಿ ವೇಗವಾಗಿ ತಮ್ಮಲ್ಲಿ ಇರುವ ನ್ಯೂಕ್ಲಿಯರ್ ವೆಪನ್‌ಗಳನ್ನ ಅಧುನಿಕಗೊಳಿಸುತ್ತಿವೆ. ಖುದ್ದು ಅಮೆರಿಕದ ಅಧಿಕಾರಿ ಬಳಗ ಈ ಎಚ್ಚರಿಕೆ ನೀಡಿದ್ದು, ಇದರ ಜೊತೆಗೆ ಚೀನಾ ಬಳಿ ಈಗ ಇರುವ ಪರಮಾಣು ಬಾಂಬ್‌ಗಳ ಸಂಖ್ಯೆ ಬಗ್ಗೆಯೂ ಅಮೆರಿಕ ಶಕ್ತಿ ಕೇಂದ್ರ ಪೆಂಟಗಾನ್ ಮಾಹಿತಿ ನೀಡಿದೆ. ಚೀನಾ 1964ರ ಅಕ್ಟೋಬರ್ 16ರಂದು ಮೊದಲ ಬಾರಿಗೆ ಪರಮಾಣು ಬಾಂಬ್ ಪರೀಕ್ಷೆ ನಡೆಸಿತ್ತು.

ಚೀನಾ ಬಳಿ 500 ಪರಮಾಣು ಬಾಂಬ್?
ಹೌದು, ಪೆಂಟಗಾನ್ ಮಾಹಿತಿಯ ಪ್ರಕಾರ ಇದೀಗ ಚೀನಾ ಬಳಿ ಒಟ್ಟಾರೆ 500 ಪರಮಾಣು ಬಾಂಬ್ ಸಿದ್ಧವಾಗಿಯೆ ಎಂದು ಆರೋಪ ಮಾಡಲಾಗಿದೆ. ಇದರ ಜೊತೆಯಲ್ಲೇ ಮುಂದಿನ ಕೆಲವೇ ವರ್ಷದಲ್ಲಿ ಅಂದ್ರೆ 2030ರ ಒಳಗೆ 1,000ಕ್ಕೂ ಹೆಚ್ಚು ಪರಮಾಣು ಬಾಂಬ್‌ಗಳನ್ನ ಚೀನಾ ಸಿದ್ಧಗೊಳಿಸುತ್ತೆ ಎಂದು ಅಮೆರಿಕದ ಭದ್ರತಾ ಕೇಂದ್ರ ಪೆಂಟಗಾನ್ ತನ್ನ ವರದಿಯ ಮೂಲಕ ಆರೋಪಿಸಿದೆ. ಹೀಗಾಗಿ ಮತ್ತೆ ಜಗತ್ತನಲ್ಲಿ ಮೂರನೇ ಮಹಾಯುದ್ಧದ ಜೊತೆಗೆ, ಪರಮಾಣು ದಾಳಿಯ ಭೀತಿ ಕೂಡ ಆವರಿಸಿದೆ.
ರಷ್ಯಾ & ಚೀನಾ ನಡುವೆ ದೋಸ್ತಿ!
ಅಮೆರಿಕ ನಂಬರ್ 1 ಪಟ್ಟ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದು, ಅದರಲ್ಲೂ ಅಮೆರಿಕದ ಬಳಿ ಇರುವ ನ್ಯೂಕ್ಲಿಯರ್ ವೆಪನ್‌ಗಳೇ ಆ ದೇಶಕ್ಕೆ ಆನೆ ಬಲ. ಆದ್ರೆ ಈಗ ನ್ಯೂಕ್ಲಿಯರ್ ವೆಪನ್ ವಿಚಾರದಲ್ಲೂ ಅಮೆರಿಕ ಹಿಂದುಳಿಯುತ್ತಿದೆ. ಸಹಜವಾಗಿ ಈ ಬೆಳವಣಿಗೆ ಆತಂಕ ಸೃಷ್ಟಿಸಿದೆ, ಇತ್ತೀಚೆಗೆ ಜಗತ್ತಿನ ಪ್ರಬಲ ನೌಕಾಸೇನೆ ಹೊಂದಿರುವ ಹೆಗ್ಗಳಿಕೆಗೂ ಚೀನಾ ಪಾತ್ರವಾಗಿತ್ತು. ಹೀಗೆ ಇಷ್ಟು ದಿನ ಅಮೆರಿಕ ಹೆಸರಲ್ಲಿದ್ದ ಪಟ್ಟಕ್ಕೆ ಚೀನಾ ಎಂಟ್ರಿ ಕೊಟ್ಟಿತ್ತು. ಇದೀಗ ಪರಮಾಣು ಬಾಂಬ್‌ಗಳ ಅಭಿವೃದ್ಧಿಯಲ್ಲಿ ರಷ್ಯಾ & ಚೀನಾ ಒಗ್ಗೂಡಿರುವುದು, ಅಮೆರಿಕದ ನಾಯಕರನ್ನೂ ಚಿಂತೆಗೀಡು ಮಾಡಿದೆ.
ಅಮೆರಿಕ ಮಾಡಿದ ತಪ್ಪಿಗೆ ಜಗತ್ತಿಗೇ ಕಂಟಕ?
ಮನುಕುಲ ನಾಶ ಮಾಡಬಲ್ಲ 'ಅಣುಬಾಂಬ್'ಮೊಟ್ಟಮೊದಲಿಗೆ ಕಂಡುಹಿಡಿದಿದ್ದೇ ಅಮೆರಿಕ. ಹಾಗೇ, ಅಮೆರಿಕ ತನ್ನ ಕಾರ್ಯಸಾಧನೆಗೆ ಬಳಸಿಕೊಂಡಿದ್ದೂ ಶತಮಾನದ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಅವರನ್ನು. ಅವರಿಗೇ ಗೊತ್ತಿಲ್ಲದೆ ಅಣುಬಾಂಬ್ ತಂತ್ರ ಕದ್ದು, ಶಾಂತಿ ಸ್ಥಾಪನೆ ಹೆಸರಲ್ಲಿ ಅಮೆರಿಕ ಇಡೀ ಜಗತ್ತು ವಿನಾಶ ಮಾಡಬಲ್ಲ ನ್ಯೂಕ್ಲಿಯರ್ ಬಾಂಬ್‌ಗಳನ್ನೇ ಕಂಡು ಹಿಡಿಯಿತು ಎಂಬ ಆರೋಪವಿದೆ. ಹೀಗೆ ಮೊದಲಿಗೆ ತನ್ನ ಅಣುಬಾಂಬ್ ಪ್ರಯೋಗ ಮಾಡಿದ್ದು ಜಪಾನ್ ಮೇಲೆ. ನಂತರ ಈ ಬಾಂಬ್ ತಂತ್ರಜ್ಞಾನ ರಷ್ಯಾ ಮತ್ತಿತರ ರಾಷ್ಟ್ರಗಳಿಗೂ ಗೊತ್ತಾಯಿತು. ನ್ಯೂಕ್ಲಿಯರ್ ಬಾಂಬ್‌ಗಳ ತಯಾರಿಕೆಯಲ್ಲಿ ನಕ್ಷತ್ರಗಳು ಅಥವಾ ಸೂರ್ಯನ ಬೈಜಿಕ ಕ್ರಿಯೆಗಳ ಮಾದರಿ ಅನುಸರಿಸುತ್ತಾರೆ.

ಹೇಗೆ ವರ್ಕ್ ಆಗುತ್ತೆ ಬಾಂಬ್?
ಸಾಮಾನ್ಯ ಭಾಷೆಯಲ್ಲಿ ಹೇಳುವುದಾದ್ರೆ ಅಣುಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ಸ್ ನಕ್ಷತ್ರದ ಮಾದರಿ ಅನುಸರಿಸುತ್ತವೆ. ಆದರೆ ನಕ್ಷತ್ರಗಳಲ್ಲಿ ಬೈಜಿಕ ಸಮ್ಮಿಲನದ ಮೂಲಕ ಶಕ್ತಿ ಬಿಡುಗಡೆ ಆಗುತ್ತದೆ. ಆದ್ರೆ ಅಣು ಬಾಂಬ್‌ಗಳಲ್ಲಿ ಬೈಜಿಕ ವಿದಳನ ಕ್ರಿಯೆಯಿಂದ ಸ್ಫೋಟ ಸಂಭವಿಸುತ್ತೆ. ಉದಾಹರಣೆಗೆ ಹೈಡ್ರೋಜನ್ (H1) + ಹೈಡ್ರೋಜನ್ (H1) ಒಂದುಗೂಡಿ ಹೀಲಿಯಂ (H2) ಆಗುತ್ತೆ. ಅದೇ ಹೀಲಿಯಂ (H2) + ಹೀಲಿಯಂ (H2) ಒಂದುಗೂಡಿ ಬೆರಿಲಿಯಂ (Be4) ಆಗುತ್ತದೆ. ಇದನ್ನು ಬೈಜಿಕ ಸಮ್ಮಿಲನ ಎನ್ನುತ್ತೇವೆ. ನಕ್ಷತ್ರಗಳಲ್ಲಿ ಈ ಕ್ರಿಯೆ ನಡೆಯುತ್ತದೆ.
ಮಾನವ ಸೃಷ್ಟಿಸಿದ ವಿನಾಶಕಾರಿ ಅಸ್ತ್ರ!
ಆದರೆ ನ್ಯೂಕ್ಲಿಯರ್ ಬಾಂಬ್‌ನಲ್ಲಿ ಇದು ಉಲ್ಟಾ ಆಗಿರುತ್ತದೆ. ಉದಾಹರಣೆಗೆ ಬೆರಿಲಿಯಂನ (Be4) ಪರಮಾಣುವನ್ನು, ಬೇರೆಯ ಒಂದು ಕಣದಿಂದ ಜೋರಾಗಿ ತಾಡಿಸಿ ಅದನ್ನ ಇಬ್ಬಾಗ ಮಾಡುತ್ತಾರೆ. ಆಗ ಬೆರಿಲಿಯಂ (Be4) 2 ಭಾಗವಾಗಿ ಹೀಲಿಯಂ (H2) + ಹೀಲಿಯಂ (H2) ಆಗುತ್ತದೆ. ಹೀಗೆ ಪರಮಾಣು ಪೀಸ್ ಆಗುವಾಗ ಅಪಾರ ಪ್ರಮಾಣದ ಶಕ್ತಿಯೂ ಬಿಡುಗಡೆ ಆಗುತ್ತದೆ. ಆದರೆ ಪರಮಾಣು ಬಾಂಬ್‌ಗಳಲ್ಲಿ ಸಾಮಾನ್ಯವಾಗಿ ಬೆರಿಲಿಯಂ ಬಳಸುವುದಿಲ್ಲ ಬದಲಾಗಿ, ಯುರೇನಿಯಂ ಧಾತುವನ್ನ ಬಳಸುತ್ತಾರೆ. ಒಟ್ನಲ್ಲಿ ನ್ಯೂಕ್ಲಿಯರ್ ವೆಪನ್ಸ್ ಇಡೀ ಜಗತ್ತಿನ ವಿನಾಶಕಾರಿ ಅಸ್ತ್ರ ಎಂಬುದರಲ್ಲಿ ಅನುಮಾನವೇ ಇಲ್ಲ.
ರಷ್ಯಾ & ಅಮೆರಿಕ ಪರಮಾಣು ರೇಸ್
ಅದು 1945ರ ಆಗಸ್ಟ್ 6 ಮತ್ತು ಆಗಸ್ಟ್ 9 ಮನುಷ್ಯ ತಾನೆಷ್ಟು ಡೆಂಜರ್ ಅಂತಾ ತೋರಿಸಿದ್ದ. ನೋಡ ನೋಡುತ್ತಲೇ, ಜಪಾನ್ ದೇಶದ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಪರಮಾಣು ಬಾಂಬ್ ಹಾಕಿದ್ದ. ಅಮೆರಿಕ ಮಾಡಿದ ಕೆಲಸ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಮುಕ್ಕಾಲು ಶತಮಾನದ ಹಿಂದೆ ನಡೆದಿದ್ದ ಈ ಘಟನೆಯಿಂದ ಈವತ್ತಿಗೂ ಜಪಾನ್ ಜನರು ನರಳುತ್ತಿದ್ದಾರೆ. ಆದರೆ ಜಗತ್ತಿನ ಬೇರೆ ದೇಶಗಳು ಮಾತ್ರ ಈ ಘಟನೆಯಿಂದ ಪಾಠ ಕಲಿತಿಲ್ಲ ಅಂತಾ ಕಾಣುತ್ತಿದೆ. ಇದೇ ಕಾರಣಕ್ಕೆ ರಷ್ಯಾ ಮತ್ತು ಅಮೆರಿಕ ಮಧ್ಯೆ ದಿಢೀರ್ ಪರಮಾಣು ಅಸ್ತ್ರಗಳ ಪರೀಕ್ಷೆಗೆ ರೇಸ್ ಶುರುವಾಗಿದೆ.

ಜಗತ್ತಿನಲ್ಲಿರುವ ಪರಮಾಣು ಬಾಂಬ್ ಎಷ್ಟು?
ಈಗಿನ ಲೆಕ್ಕಾಚಾರದಂತೆ ಜಗತ್ತಿನಾದ್ಯಂತ 13,000 ಪರಮಾಣು ಅಸ್ತ್ರ ಶೇಖರಣೆಯಾಗಿವೆ. ಈ ಪೈಕಿ ರಷ್ಯಾ ಹಾಗೂ ಅಮೆರಿಕ ಬಳಿ ಮುಕ್ಕಾಲು ಭಾಗಕ್ಕೂ ಹೆಚ್ಚು ಅಸ್ತ್ರಗಳು ಇವೆ. ಆದ್ರೆ ಶೀತಲ ಸಮರದ ಸಮಯದಲ್ಲಿ ಈ ಸಂಖ್ಯೆ ಸುಮಾರು 60,000ಕ್ಕೂ ಹೆಚ್ಚು ಇತ್ತು. ಇದಕ್ಕೆ ಹೋಲಿಕೆ ಮಾಡಿದ್ರೆ ಪರಿಸ್ಥಿತಿ ಸುಧಾರಿಸುತ್ತಿದೆ ಬಿಡು ಎನ್ನಲಾಗಿತ್ತು. ಅಲ್ಲದೆ 2010ರ ಏಪ್ರಿಲ್ 8ರಂದು ಅಮೆರಿಕ & ರಷ್ಯಾ ಮಧ್ಯೆ ಒಪ್ಪಂದ ನಡೆದು, ಈ ಡೆಡ್ಲಿ ನ್ಯೂಕ್ಲಿಯರ್ ಬಾಂಬ್‌ಗಳನ್ನು ನಾಶ ಮಾಡಿ ಹಿಡಿತಕ್ಕೆ ತರುವ ಒಪ್ಪಂದಕ್ಕೂ ಬರಲಾಗಿತ್ತು. ಒಬಾಮಾ ಇದ್ದಾಗ ಈ ಮಹತ್ವದ ಕಾರ್ಯ ನಡೆದಿತ್ತು, ಆದರೆ ಈಗ ಎಲ್ಲವೂ ಹಾಳಾಗಿದೆ.
ಒಟ್ನಲ್ಲಿ ಚೀನಾ ಬಳಿ ಒಟ್ಟಾರೆ ಅರ್ಧ ಸಾವಿರ ಪರಮಾಣು ಬಾಂಬ್‌ಗಳು ಇವೆ ಎನ್ನುತ್ತಿದೆ ಅಮೆರಿಕ. ಆದರೆ ಪೆಂಟಗಾನ್ ಮಾಡಿರುವ ಆರೋಪಕ್ಕೆ ಚೀನಾ ಇನ್ನೂ ಉತ್ತರ ನೀಡಿಲ್ಲ. ಹೀಗಾಗಿ ಮುಂದೆ ಏನಾಗುತ್ತೆ? ಅಮೆರಿಕ ಮಾಡಿರುವ ಆರೋಪಕ್ಕೆ ಚೀನಾ ಯಾವ ರೀತಿಯ ಉತ್ತರ ನೀಡುತ್ತೆ? ಇದರಿಂದಾಗ ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧ ಶುರುವಾಗುತ್ತಾ? ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications