ಚರ್ಚ್ ಮೇಲೆ ಬಿದ್ದ ಬಾಂಬ್: ಐತಿಹಾಸಿಕ ಕಟ್ಟಡ ಇನ್ನು ನೆನಪು ಮಾತ್ರ!
ಕೀವ್: ಉಕ್ರೇನ್ ವಿರುದ್ಧ ರಷ್ಯಾ ಸೇನೆ ನಡೆಸುತ್ತಿರುವ ದಾಳಿ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದೆ. ಅದರಲ್ಲೂ ಪಾರಂಪರಿಕ ಕಟ್ಟಡಗಳ ಮುಖ ನೋಡದೇ ರಷ್ಯಾ ತನ್ನ ದಾಳಿ ಮುಂದುವರಿಸಿದೆ. ಪರಿಣಾಮ ಉಕ್ರೇನ್ ಅಕ್ಷರಶಃ ನಲುಗಿ ಹೋಗಿದ್ದು, ಎಲ್ಲೆಲ್ಲೂ ಆತಂಕವೇ ಆವರಿಸಿದೆ. ಇದೇ ಸಂದರ್ಭದಲ್ಲಿ ರಷ್ಯಾ ಸೇನೆ ನಡೆಸಿರುವ ದಾಳಿಗೆ 1781ರಲ್ಲಿ ನಿರ್ಮಿಸಿದ್ದ ಚರ್ಚ್ ಕೂಡ ತೀವ್ರ ಹಾನಿಗೀಡಾಗಿದೆ.
ರಷ್ಯಾ ತನ್ನಲ್ಲಿನ ವಿನಾಶಕಾರಿ ಅಸ್ತ್ರಗಳ ಮೂಲಕ ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿದೆ. ಇದೇ ರೀತಿ ಉಕ್ರೇನ್‌ನ ಖೇರ್ಸನ್ ನಗರವನ್ನು ಗುರಿಯಾಗಿಸಿ ರಷ್ಯಾ ಪಡೆಗಳು ಶೆಲ್ ಅಟ್ಯಾಕ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ ಎನ್ನಲಾಗಿದೆ. ಘಟನೆಯಲ್ಲಿ ಪುರಾತನ ಚರ್ಚ್ ತೀವ್ರ ಹಾನಿಗೀಡಾಗಿದ್ದು ಶೆಲ್ ದಾಳಿಯಲ್ಲಿ ಕಟ್ಟಡ ಛಿದ್ರವಾಗಿದೆ. ಕಳೆದ ವಾರವಷ್ಟೇ ಕ್ಷಿಪಣಿ ಬಿದ್ದು ಈ ಚರ್ಚ್ ಭಾಗಶಃ ಹಾನಿಗೊಂಡಿತ್ತು. ಈಗ ಮತ್ತೊಮ್ಮೆ ಶೆಲ್ ದಾಳಿಯ ಪರಿಣಾಮ ಚರ್ಚ್ ಕಟ್ಟಡಕ್ಕೆ ಭಾರಿ ಹಾನಿ ಉಂಟಾಗಿದೆ ಎನ್ನಲಾಗಿದೆ. ನೂರಾರು ವರ್ಷ ಇತಿಹಾಸ ಇರುವ ಸೇಂಟ್ ಕ್ಯಾಥೆಡ್ರಲ್ ಚರ್ಚ್ ಈಗ ನೆನಪಾಗಿ ಉಳಿಯಲಿದೆ.

ಪುರಾತನ ಚರ್ಚ್ 1781ರಲ್ಲಿ ನಿರ್ಮಾಣವಾಗಿತ್ತು
ಉಕ್ರೇನ್ ಕಳೆದ 2 ವರ್ಷದಿಂದ ಅಕ್ಷರಶಃ ನರಕವಾಗಿ ಬದಲಾಗಿದೆ. ಯಾವ ಕ್ಷಣದಲ್ಲಿ ಯಾವ ಪ್ರದೇಶದಲ್ಲಿ ಬಾಂಬ್ ಅಥವಾ ಕ್ಷಿಪಣಿ ಬೀಳುತ್ತೋ. ಎಲ್ಲಿ ದಿಢೀರ್ ಶೆಲ್ ದಾಳಿ ನಡೆಯುತ್ತೋ ಗೊತ್ತಿಲ್ಲ. ಹೀಗಾಗಿ ಜನ ಜೀವ ಕೈಯಲ್ಲಿಡಿದು ಓಡಾಡುತ್ತಿದ್ದಾರೆ. ಹೀಗೆ ರಷ್ಯಾ ಬೇಕು ಅಂತಾ ಪಾರಂಪರಿಕ ಕಟ್ಟಡಗಳನ್ನ ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಕೂಡ ಆರೋಪ ಮಾಡಿದೆ. ಈಗ ಹಾನಿಯಾದ ಐತಿಹಾಸಿಕ ಚರ್ಚ್ 1781ರಲ್ಲಿ ನಿರ್ಮಾಣವಾಗಿತ್ತು. ಇಷ್ಟುದಿನ ಪ್ರಾರ್ಥನೆ ನಡೆಯುತ್ತಿದ್ದ ಜಾಗದಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.
ಉಕ್ರೇನ್ ರಾಜಧಾನಿ ಬೀದಿಗಳು ರಕ್ತಸಿಕ್ತ
ಅತ್ತ ಉಕ್ರೇನ್‌ನ ಇತರ ಪ್ರದೇಶಗಳ ಸ್ಥಿತಿ ಭೀಕರವಾದರೆ, ಉಕ್ರೇನ್ ರಾಜಧಾನಿ ಪರಿಸ್ಥಿತಿ ಇನ್ನೂ ಕರಾಳವಾಗಿದೆ. ಉಕ್ರೇನ್ ರಾಜಧಾನಿ ಕೀವ್ ಬೀದಿಗಳು ರಕ್ತಸಿಕ್ತವಾಗಿವೆ. ಹೀಗಾಗಿ ಜನ ಕೂಡ ಧೈರ್ಯವಾಗಿ ಹೊರಗೆ ಓಡಾಡಲು ಭಯಪಡುವ ಸ್ಥಿತಿ ಇದೆ. ಈಗ ರಷ್ಯಾ ನಡೆಸಿದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಅಂತಾ ಹೇಳಲಾಗಿದ್ದು, ಕೀವ್ ಅಂದರೆ ಉಕ್ರೇನ್ ರಾಜಧಾನಿಯನ್ನ ಗುರಿಯಾಗಿಸಿ ರಷ್ಯಾದ ಸೇನೆಯು 15 ಡ್ರೋನ್‌ಗಳನ್ನು ಹಾರಿಸಿತ್ತು ಎನ್ನಲಾಗಿದೆ. ಆದ್ರೆ ಎಲ್ಲಾ ಡ್ರೋನ್‌ಗಳನ್ನು ನಾವು ಹೊಡೆದು ಉರುಳಿಸಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ.

ಸಂಧಾನ ಸಭೆಗೆ ಭಾರತಕ್ಕೆ ಆಹ್ವಾನ
ರಷ್ಯಾ & ಉಕ್ರೇನ್ ಜಗಳ ಮುಂದುವರಿದರೆ ಮತ್ತೊಂದು ಮಹಾಯುದ್ಧ ಪಕ್ಕಾ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲು ಜಗತ್ತು ಒಂದಾಗುತ್ತಿದೆ. ಅಲ್ಲದೆ ಶಾಂತಿ ಸಭೆಯಲ್ಲಿ ಭಾರತಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸೌದಿ ಅರೇಬಿಯಾದ ಜೆಡ್ಹಾದಲ್ಲಿ ನಡೆಯಲಿರುವ ಸಭೆಗೆ ಭಾರತಕ್ಕೆ ಆಮಂತ್ರಣ ನೀಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಾಚಿ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಭಾರತ ಭಾಗವಹಿಸಲಿದೆ. ಇದು ಮಾತುಕತೆ & ರಾಜತಾಂತ್ರಿಕತೆಯ ಮುಂದಿನ ದಾರಿ ಎಂಬ ನಮ್ಮ ದೀರ್ಘಕಾಲದ ನಿಲುವಿಗೆ ಅನುಗುಣವಾಗಿದೆ ಎಂದಿದ್ದಾರೆ ವಕ್ತಾರರು. ಆಗಸ್ಟ್ 5 ಮತ್ತು 6ರಂದು ಸೌದಿ ಅರೇಬಿಯಾದಲ್ಲಿ ಈ ಮಹತ್ವದ ಸಭೆ ನಡೆಯಲಿದೆ.
ವ್ಲಾದಿಮಿರ್ ಪುಟಿನ್ ಬೇಡಿಕೆ ಏನು?
ರಷ್ಯಾ ಕೆಂಡವಾಗಿದ್ದು, ಉಕ್ರೇನ್ ವಿರುದ್ಧ ತನ್ನ ದಾಳಿಯನ್ನು ಭೀಕರಗೊಳಿಸುತ್ತಿದೆ. ಹೀಗಾಗಿ ಉಕ್ರೇನ್ ಕೂಡ ಬೆಚ್ಚಿಬಿದ್ದಿದೆ. ಏನು ಮಾಡಬೇಕು ಎಂಬ ಪರಿಸ್ಥಿತಿಯಲ್ಲಿದೆ ಉಕ್ರೇನ್. ಇದೇ ವೇಳೆ ಪುಟಿನ್ ಶಾಂತಿ ಮಾತುಕತೆ ಬಗ್ಗೆ ಹೇಳಿಕೆ ನೀಡಿದ್ದು ಯುದ್ಧಕ್ಕೆ ಬ್ರೇಕ್ ಬೀಳುತ್ತಾ? ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಪುಟಿನ್ ಯುದ್ಧ ನಿಲ್ಲಿಸುವ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾವು ಯುದ್ಧ ನಿಲ್ಲಿಸಲು ಸಿದ್ಧ ಎಂಬ ಮುನ್ಸೂಚನೆ ನೀಡಿದ್ದಾರೆ. ಆದ್ರೆ ಇದೇ ವೇಳೆ ಶರತ್ತು ಹಾಕಿರುವ ರಷ್ಯಾ ಅಧ್ಯಕ್ಷ ಪುಟಿನ್, ಬದಲಾದ ಸನ್ನಿವೇಶವನ್ನ ಉಕ್ರೇನ್‌ನ ಸೇನೆ ಒಪ್ಪಿಕೊಳ್ಳಬೇಕು ಅಂತಿದ್ದಾರೆ.












Click it and Unblock the Notifications