ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ! ಇದು ಸಾಧ್ಯವಾಗಿದ್ದು ಹೇಗೆ?
ಮಾಸ್ಕೋ: ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ ಮುಂದುವರಿಸಿದೆ. ರಷ್ಯಾ ಸೇನೆ ದಾಳಿಗೆ ಪ್ರತಿಯಾಗಿ ದಾಳಿ ನಡೆಸುತ್ತಿದ್ದೇವೆ ಅಂತಾ ಉಕ್ರೇನ್ ಅಧ್ಯಕ್ಷ ಪರೋಕ್ಷವಾಗಿ ಮುನ್ಸೂಚನೆ ನೀಡುತ್ತಿದ್ದಾರೆ. ಹಾಗಾದ್ರೆ ಉಕ್ರೇನ್‌ಗೆ ದಿಢೀರ್ ಇಷ್ಟು ಶಕ್ತಿ ಬಂದಿದ್ದು ಹೇಗೆ? ಯುರೋಪ್ ಶೃಂಗ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ಭಾಗವಹಿಸಿದ ನಂತರ ಈ ಬೆಳವಣಿಗೆ ನಡೆದಿದ್ದೇಗೆ? ತಿಳಿಯೋಣ ಬನ್ನಿ.
ರಕ್ತಕ್ಕೆ ರಕ್ತ ಅನ್ನೋ ಸ್ಲೋಗನ್ ಇಟ್ಕೊಂಡು ರಷ್ಯಾ, ಉಕ್ರೇನ್ ಬಡಿದಾಟ ಶುರುಮಾಡಿವೆ. ಒಂದೂವರೆ ವರ್ಷದಿಂದ ಎರಡೂ ರಾಷ್ಟ್ರದ ನಡುವೆ ಭೀಕರ ಕಾಳಗ ನಡೆಯುತ್ತಿದೆ. ಇದೇ ಕಾರಣಕ್ಕೆ ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಕೂಡ ಸಾಗಿದೆ. ಆದರೂ ಈ ಹಿಂಸೆಗೆ ಅಂತ್ಯ ಹಾಡಲು ಆಗುತ್ತಿಲ್ಲ. ಆದರೆ ಇದೇ ಸಂದರ್ಭದಲ್ಲಿ ಉಕ್ರೇನ್ ಕೂಡ ರಷ್ಯಾ ವಿರುದ್ಧ ಭೀಕರ ದಾಳಿ ಶುರು ಮಾಡಿದೆ. ಹೀಗೆ ಎರಡೂ ದೇಶಗಳ ನಡುವೆ ಸಾವಿನ ಸಂಖ್ಯೆ ಹೆಚ್ಚಾಗ್ತಿದ್ದು, ಉಕ್ರೇನ್‌ಗೆ ಇಷ್ಟು ಪವರ್ ಬಂದಿದ್ದು ಹೇಗೆ ಅನ್ನೋದರ ಬಗ್ಗೆಯೂ ಚರ್ಚೆ ಶುರುವಾಗಿದೆ (Russia Ukraine War). ಆ ಕುರಿತು ಮಾಹಿತಿ ಇಲ್ಲಿದೆ ಓದಿ.

ಯುರೋಪ್ ಪವರ್, ಉಕ್ರೇನ್ ಪಂಚ್?
ಅಂದಹಾಗೆ ಮಾಲ್ಡೋವಾದಲ್ಲಿ ಯುರೋಪ್ ಒಕ್ಕೂಟದ ಶೃಂಗಸಭೆ ನಡೆಯುತ್ತಿದೆ. ಶೃಂಗಸಭೆ ಸಮಯವನ್ನೇ ದಾಳ ಮಾಡಿಕೊಂಡು ಯುರೋಪ್ ಒಕ್ಕೂಟದ ಜೊತೆ ನೇರವಾಗಿ ಸಹಾಯದ ಮಾತುಕತೆ ಮುಂದುವರಿಸಿದ್ದಾರೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ. ಇನ್ನಷ್ಟು ಶಸ್ತ್ರಾಸ್ತ್ರ ನೀಡಲು ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ರಷ್ಯಾ ವಿರುದ್ಧ ಯುರೋಪ್ ರಾಷ್ಟ್ರಗಳನ್ನ ಒಟ್ಟುಗೂಡಿಸಿ ಶತ್ರು ಹಣಿಯಲು ಉಕ್ರೇನ್ ಪ್ಲ್ಯಾನ್ ಮಾಡಿತ್ತು. ಆದ್ರೆ ಹೀಗೆ ಉಕ್ರೇನ್ & ಯುರೋಪ್ ಚರ್ಚೆ ನಡೆದ ಒಂದೇ ದಿನದ ಅಂತರದಲ್ಲಿ ರಷ್ಯಾ ಮೇಲೆ ಭೀಕರ ದಾಳಿ ನಡೆದಿದೆ.
2500 ಜನರಿಗೆ ಎದುರಾಯ್ತು ಅಪಾಯ
ಅಷ್ಟಕ್ಕೂ ಪಶ್ಚಿಮ ರಷ್ಯಾದ ವಿವಿಧ ಪ್ರದೇಶಗಳ ಮೇಲೆ ಉಕ್ರೇನ್ ಶೆಲ್ ಮತ್ತು ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ರಷ್ಯಾ ಗಡಿ ಸಮೀಪದ 2 ಗ್ರಾಮಗಳ ಮೇಲೆ ಉಕ್ರೇನ್ ಶೆಲ್ ದಾಳಿ ನಡೆಸಿದ ಪರಿಣಾಮ ಪರಿಸ್ಥಿತಿ ಸೂಕ್ಷ್ಮವಾಗಿದೆ. ಅಲ್ಲದೆ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಕಟ್ಟಡಗಳಿಗೆ ಡ್ಯಾಮೇಜ್ ಆಗಿದೆ. ಹೀಗಾಗಿ ಶೆಬೆಕಿನೋ ಜಿಲ್ಲೆಯಲ್ಲಿ 2,500 ಜನರನ್ನ ಶಿಫ್ಟ್ ಮಾಡಲಾಗಿದೆ. ಇಷ್ಟೆಲ್ಲಾ ಘಟನೆ ನಡೆದರೂ ತಾನೇ ದಾಳಿ ಮಾಡಿರುವುದು ಅನ್ನೋದನ್ನ ಉಕ್ರೇನ್ ಸೇನೆ ಮಾತ್ರ ಒಪ್ಪಿಕೊಳ್ಳುತ್ತಿಲ್ಲ.

ಶೃಂಗಸಭೆಯೋ, ರಷ್ಯಾ ವಿರುದ್ಧ ರಣತಂತ್ರವೋ?
ಹೌದು, ಈ ಬಾರಿಯ ಯುರೋಪ್ ಒಕ್ಕೂಟದ ಶೃಂಗಸಭೆ ಥೇಟ್ ರಷ್ಯಾ ವಿರುದ್ಧದ ಮೀಟಿಂಗ್ ಅನ್ನುವಂತೆ ಬಿಂಬಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣ ರಷ್ಯಾ ವಿರುದ್ಧ ಉಕ್ರೇನ್ ಸೇನೆ ಮತ್ತು ನಾಯಕರಿಗೆ ಬಲ ನೀಡಲು ಯುರೋಪ್ ಒಕ್ಕೂಟದ ಸದಸ್ಯರು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಯುರೋಪ್ ಒಕ್ಕೂಟದ ಶೃಂಗಸಭೆ ಸಾಕಷ್ಟು ಗಮನ ಸೆಳೆಯುತ್ತಿದೆ. ಬಹುದೊಡ್ಡ ಮೊತ್ತದ ಶಸ್ತ್ರಾಸ್ತ್ರ ಪೂರೈಕೆಯನ್ನ ಉಕ್ರೇನ್ ಬಯಸುತ್ತಿದ್ದು, ರಷ್ಯಾ ಕೊತಕೊತ ಕುದಿಯುತ್ತಿದೆ.
3 ಲಕ್ಷ ಕೋಟಿ ನೆರವು ನೀಡಿದೆ ಅಮೆರಿಕ
ಉಕ್ರೇನ್‌ಗೆ ಒಂದೇ ವರ್ಷದಲ್ಲಿ ಅಮೆರಿಕ 3 ಲಕ್ಷ ಕೋಟಿ ನೆರವನ್ನು ನೀಡಿದೆ. ಮೊನ್ನೆ ಮೊನ್ನೆ ಸಾವಿರಾರು ಕೋಟಿ ಪ್ಯಾಕೇಜ್ ನೀಡಿದ್ದ ಅಮೆರಿಕ ಮತ್ತೆ ₹2,482 ಕೋಟಿ ಮೊತ್ತದ ನೆರವಿನ ಹೊಸ ಪ್ಯಾಕೇಜ್ ಘೋಷಿಸಲು ಸಿದ್ಧವಾಗಿರುವ ಆರೋಪ ಕೇಳಿಬಂದಿದೆ. ಈ ಪ್ಯಾಕೇಜ್‌ನಲ್ಲಿ ಹೆಚ್ಚುವರಿ ಡ್ರೋನ್ ಪೂರೈಸಲಾಗುತ್ತಿದೆ ಎಂದು ಅಮೆರಿಕ ಸೇನಾ ಅಧಿಕಾರಿಗಳು ಹೇಳಿರುವುದು ಪುಟಿನ್ ಪಿತ್ತ ನೆತ್ತಿಗೇರಿಸಿದೆ.

ಉಕ್ರೇನ್ ಪರ ಯುರೋಪ್ ಬ್ಯಾಟಿಂಗ್!
ರಷ್ಯಾ ವಿರುದ್ಧ ನ್ಯಾಟೋ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿವೆ. ಯುರೋಪ್ ಒಕ್ಕೂಟದ ಹಲವು ರಾಷ್ಟ್ರಗಳು ನ್ಯಾಟೋ ಲೆಕ್ಕದಲ್ಲೇ ಬರುತ್ತವೆ. ರಷ್ಯಾ & ಉಕ್ರೇನ್ ವಾರ್ ಶುರುವಾಗಿ ಒಂದು ವರ್ಷ ಉರುಳಿದೆ, ಆದ್ರೂ ಯುದ್ಧ ನಿಲ್ಲುತ್ತಿಲ್ಲ. ಬದಲಾಗಿ ಎರಡೂ ದೇಶಗಳ ದ್ವೇಷ ಹೆಚ್ಚಾಗುತ್ತಲೇ ಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ ದಿನ ಕಳೆದಂತೆ ಮತ್ತಷ್ಟು ವಿನಾಶಕಾರಿ ಆಗುತ್ತಿದೆ.












Click it and Unblock the Notifications