ಕರೆಂಟ್ ಇಲ್ಲ, ಜನರ ಪರದಾಟ ತಪ್ಪುತ್ತಿಲ್ಲ: ರಷ್ಯಾ ರಣತಂತ್ರ ಹೇಗಿದೆ?
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ದಾಳಿ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆದಿದ್ದು, ಸಾಮಾನ್ಯ ಜನರು ನಲುಗಿ ಹೋಗಿದ್ದಾರೆ. ಪರಿಸ್ಥಿತಿ ಕೂಡ ಕೈಮೀರಿ ಹೋಗಿದೆ. ಹೀಗಿದ್ದಾಗ ರಷ್ಯಾ ಸೇನೆ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೂಡ ಕೇಳಿಬಂದಿದೆ. ಹಾಗಾದರೆ, ಏನದು ಗಂಭೀರ ಆರೋಪ? ರಷ್ಯಾ ಸೇನೆ ತನ್ನ ಶತ್ರು ನಾಶಕ್ಕೆ ಕೈಗೊಂಡಿರುವ ಕ್ರಮಗಳು ಯಾವುವು? ಮುಂದೆ ಓದಿ.
ಹೌದು, ಉಕ್ರೇನ್‌ನ ಅತಿ ದೊಡ್ಡ ಜಲವಿದ್ಯುತ್ ಸ್ಥಾವರ ಸೇರಿದಂತೆ ಪವರ್ ಪ್ಲಾಂಟ್‌ಗಳನ್ನೇ ಟಾರ್ಗೆಟ್ ಮಾಡಿ ಇದೀಗ ರಷ್ಯಾ ಸೇನೆ ದಾಳಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ರಷ್ಯಾ ಡ್ರೋನ್ & ಕ್ಷಿಪಣಿ ದಾಳಿ ನಡೆಸಿ ಶತ್ರುಗಳ ಹುಟ್ಟಡಗಿಸಲು ಪ್ರಯತ್ನ ಮಾಡುತ್ತಿದ್ದು, ಈ ಮೂಲಕ ಉಕ್ರೇನ್ ತಿರುಗೇಟು ನೀಡಲು ಪರದಾಡುವ ಪರಿಸ್ಥಿತಿಯನ್ನ ಇದೀಗ ರಷ್ಯಾ ಸೇನೆ ನಿರ್ಮಾಣ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗೆ ರಷ್ಯಾ ವಿದ್ಯುತ್ ಸ್ಥಾವರ & ಉಕ್ರೇನ್‌ನ ಆಯಕಟ್ಟಿನ ಜಾಗಗಳ ಮೇಲೆ ದಾಳಿ ನಡೆಸುತ್ತಿರುವ ಪರಿಣಾಮ ಉಕ್ರೇನ್ ಜನರ ಜೀವ ಕೂಡ ಹೋಗುತ್ತಿದೆ.

ಅಣು ಸ್ಥಾವರದ ಪರಿಸ್ಥಿತಿ ಘೋರ?
ರಷ್ಯಾ ಅಧ್ಯಕ್ಷ ಪುಟಿನ್ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನಿರಂತರ, ಘೋರ ದಾಳಿ ಆರಂಭವಾಗಿದೆ. ಅದ್ರಲ್ಲೂ ಯುರೋಪ್‌ನ ಅತಿ ದೊಡ್ಡದಾದ ಅಣು ವಿದ್ಯುತ್ ಸ್ಥಾವರ ಝಪೊರಿಝಿಯಾ ಮೇಲೆ ರಷ್ಯಾ ನಿರಂತರವಾಗಿ ದಾಳಿ ಮಾಡುತ್ತಿದೆ. ಹೀಗಾಗಿ ಈಗ ಝಪೊರಿಝಿಯಾ ಅಣು ವಿದ್ಯುತ್ ಸ್ಥಾವರಕ್ಕೆ ವಿದ್ಯುತ್ ಪೂರೈಸುವ ಜಲವಿದ್ಯುತ್ ಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡು ಪರಿಸ್ಥಿತಿ ಕೈಮೀರಿ ಹೋಗಿದೆ ಎನ್ನಲಾಗಿದೆ. ಹಲವು ತಿಂಗಳಿಂದ ಈ ಭಾಗದಲ್ಲಿ ರಷ್ಯಾ & ಉಕ್ರೇನ್ ನಡುವೆ ಘೋರ ಯುದ್ಧವೇ ನಡೆಯುತ್ತಿದೆ. ಈಗಾಗಲೇ ರಷ್ಯಾ ಸೇನೆ ಈ ಅಣು ಸ್ಥಾವರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
ಉಕ್ರೇನ್‌ಗೆ ಬರುತ್ತಾ ಅಮೆರಿಕ ಸೇನೆ?
ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಅಮೆರಿಕ ಸೇನೆ ನೇರವಾಗಿ ಉಕ್ರೇನ್‌ಗೆ ಬೆಂಬಲ ನೀಡುತ್ತದೆ ಎಂಬ ಮಾತು ಓಡಾಡುತ್ತಿವೆ. ಆದರೆ ಈಗಾಗಲೇ ರಷ್ಯಾ ಈ ಬಗ್ಗೆ ಖಡಕ್ ಎಚ್ಚರಿಕೆ ಕೊಟ್ಟು ಪರಮಾಣು ಯುದ್ಧದ ವಾರ್ನಿಂಗ್ ಕೊಟ್ಟಿದೆ. ಹೀಗಾಗಿ, ಅಮೆರಿಕ ಸೇನೆ ನೇರವಾಗಿ ಉಕ್ರೇನ್ ಪರ ಅಖಾಡಕ್ಕೆ ಇಳಿಯುವ ಸಾಧ್ಯತೆ ಇಲ್ಲ. ಹೀಗಿದ್ದರೂ, ಪರೋಕ್ಷವಾಗಿ ಉಕ್ರೇನ್ ಸೇನೆಗೆ ಇದೀಗ ಸೇನಾ ಸಲಕರಣೆ ನೀಡುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದು ಕಡೆ ಯುರೋಪ್ ಕೂಡ ಈ ಎಲ್ಲಾ ಬೆಳವಣಿಗೆ ಪರಿಣಾಮ ಬೆಚ್ಚಿ ಬಿದ್ದಿದೆ.

ತುತ್ತು ಅನ್ನಕ್ಕೂ ಕಷ್ಟದ ಪರಿಸ್ಥಿತಿ
ರಷ್ಯಾ ಸೇನೆ ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿ ಪರಿಣಾಮ ಈಗ ಉಕ್ರೇನ್ ದೇಶದಲ್ಲಿನ ಆಹಾರ ಸಂಗ್ರಹ ಸಂಪೂರ್ಣ ನಾಶವಾಗಿ ಹೋಗಿದೆ. ಹೀಗಾಗಿ ಅಲ್ಲಿನ ಜನರು ತುತ್ತು ಅನ್ನ ಸಿಗಲಿ ಅಂತಾ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸಾಲದು ಎನ್ನುವಂತೆ ಈಗ ವಿದ್ಯುತ್ ಸ್ಥಾವರಗಳ ಮೇಲೆ ಕೂಡ ದಾಳಿ ನಡೆದಿರುವುದು ಸಹಜವಾಗಿ ಭಯ ಹೆಚ್ಚಿಸಿದೆ.












Click it and Unblock the Notifications