Israel VS Palestine: ಬೀದಿಗಳೆಲ್ಲಾ ರಕ್ತ.. ಎಲ್ಲೆಲ್ಲೂ ಶವಗಳ ರಾಶಿ..
ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವೆ ಆರಂಭವಾಗಿರುವ ಯುದ್ಧ ಕಂಡ ಕಂಡವರ ಜೀವ ತೆಗೆಯುತ್ತಿದೆ. ನೆಮ್ಮದಿಯಾಗಿದ್ದ ಇಸ್ರೇಲ್ ನೆಲದಲ್ಲಿ ರಕ್ತದ ನದಿ ಹರಿಯುತ್ತಿದ್ದು, ಇದೇ ಭಯಾನಕ ಪರಿಸ್ಥಿತಿ ಗಾಜಾಪಟ್ಟಿ ಸೇರಿದಂತೆ ಪ್ಯಾಲೆಸ್ತೀನ್ ನೆಲದಲ್ಲೂ ಸೃಷ್ಟಿಯಾಗಿದೆ. ಈ ಯುದ್ಧ ನಿನ್ನೆಯಿಂದ ಭಯಂಕರ ರೂಪ ಪಡೆದಿದ್ದು, ಕೇವಲ ಒಂದು ದಿನದಲ್ಲಿ ಹಿಂಸೆಗೆ ಬಲಿಯಾದವರ ಸಂಖ್ಯೆ ಕೇಳಿದರೆ ತಲೆ ತಿರುಗುತ್ತೆ.
ನಿನ್ನೆ ಬೆಳಗ್ಗೆ ಹಮಾಸ್ ಬಂಡುಕೋರರ ಗ್ಯಾಂಗ್ ಇಸ್ರೇಲ್ ಕಡೆಗೆ 5000ಕ್ಕೂ ಹೆಚ್ಚು ರಾಕೆಟ್‌ನ್ನ ಒಂದೇ ಬಾರಿಗೆ ಉಡಾಯಿಸಿತ್ತು. ಅಲ್ಲದೆ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ರು. ಹೀಗಾಗಿ ಇಸ್ರೇಲ್ ಸೇನೆ ಯೋಧರು ಸಿದ್ಧವಾಗಿ ನಿಂತರು, ಈ ಸಮಯಕ್ಕೆ ಇಸ್ರೇಲ್ ಪ್ರಧಾನಿ ಕೂಡ ಯುದ್ಧವನ್ನ ಘೋಷಿಸಿಯೇ ಬಿಟ್ಟರು. ಹೀಗೆ ಶುರುವಾದ ಯುದ್ಧ ಒಂದೇ ದಿನಕ್ಕೆ ಸುಮಾರು 500 ಜನರ ಜೀವವನ್ನ ಬಲಿಪಡೆದಿದೆ ಎನ್ನಲಾಗಿದೆ. ಹಾಗೇ ಸಾಕಷ್ಟು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.

ಇರಾನ್ ಬೆಂಬಲದಿಂದ ಉಗ್ರರ ದಾಳಿ?
ತನ್ನ ನೆಲದ ಮೇಲೆ ಹೀಗೆ ಹಮಾಸ್ ಉಗ್ರರು ಭೀಕರ ದಾಳಿ ನಡೆಸಿರುವ ಕಾರಣ ಇಸ್ರೇಲ್‌ಗೆ ಪಿತ್ತ ನೆತ್ತಿಗೇರಿದೆ. ಹೀಗಾಗಿ ವಾಯುದಾಳಿ ಮತ್ತು ಭೂ ದಾಳಿ ಮೂಲಕ ಗಾಜಾಪಟ್ಟಿಯಲ್ಲಿ ರಕ್ತಪಾತ ನಡೆಸುತ್ತಿದೆ. ಇನ್ನೊಂದು ಕಡೆ ಇಸ್ರೇಲ್‌ನ ಹಲವು ಪ್ರದೇಶಗಳು ಕೂಡ ಈಗಲೂ ಉಗ್ರರ ಹಿಡಿತದಲ್ಲೇ ಇವೆ. ಏಕೆಂದರೆ ಸಾವಿರಾರು ಹಮಾಸ್ ಬಂಡುಕೋರರು ಈ ಭಾಗದ ಪ್ರದೇಶಗಳಲ್ಲಿ ಗನ್ ಹಿಡಿದು ಹಿಂಸೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಇರಾನ್ ಬೆಂಬಲ ಹಮಾಸ್ ಉಗ್ರರ ಈ ವರ್ತನೆಗೆ ಕಾರಣ, ಇರಾನ್ ಶಸ್ತ್ರಾಸ್ತ್ರಗಳನ್ನು ಈ ಉಗ್ರರಿಗೆ ಕೊಟ್ಟಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಗಡಿಯಲ್ಲಿ ಮತ್ತಷ್ಟು ಯೋಧರ ನಿಯೋಜನೆ
ಉಗ್ರರು ಇಸ್ರೇಲ್ ಗಡಿಯಲ್ಲಿ ಹಿಂಸಾಚಾರ ನಡೆಸಿ, ಇಸ್ರೇಲ್ ಒಳಗೆ ನುಗ್ಗುತ್ತಿರುವ ಕಾರಣ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜಿಸಿದೆ ಇಸ್ರೇಲ್ ಸರ್ಕಾರ. ಅದ್ರೂ ಪರಿಸ್ಥಿತಿ ಕೈಮೀರಿ ಹೋಗಿದೆ. ಹೀಗಾಗಿ ಇಸ್ರೇಲ್ ಇನ್ಯಾವ ಭಯಾನಕ ಅಸ್ತ್ರ ಪ್ರಯೋಗ ಮಾಡುತ್ತೋ? ಎಂಬ ಆತಂಕ ಕೂಡ ಆವರಿಸಿದೆ. ಮತ್ತೊಂದ್ಕಡೆ ಇಸ್ರೇಲ್ ಅಟ್ಯಾಕ್ ನೋಡಿ ಬೆಚ್ಚಿಬಿದ್ದಿರುವ ಪ್ಯಾಲೇಸ್ತೀನ್ ಹಾಗೂ ಗಾಜಾ ಪಟ್ಟಿಯ ಅಮಾಯಕರು ಮನೆ ಬಿಟ್ಟು ಹೋಗುತ್ತಿದ್ದಾರೆ. ಮಕ್ಕಳ ಜೊತೆ ಸುರಕ್ಷಿತವಾದ ಸ್ಥಳಕ್ಕೆ ಓಡಿ ಹೋಗುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಅಮ್ಮಂದಿರ ಕೈಹಿಡಿದು ಹೋಗುತ್ತಿರುವ ದೃಶ್ಯ ಎಲ್ಲೆಲ್ಲೂ ಕಂಡುಬರುತ್ತಿದೆ.

ಇಸ್ರೇಲ್‌ಗೆ ಭಾರಿ ಸಹಾಯ ಮಾಡಲಿದೆ ಅಮೆರಿಕ!
ಹೀಗೆ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಯುದ್ಧ ಘೋಷಣೆ ಮಾಡಿದ ನಂತರ ಅಮೆರಿಕ ಕೂಡ ಭಾರಿ ಪ್ರಮಾಣದ ನೆರವು ಘೋಷಿಸಿದೆ. ಹೀಗಾಗಿ ಯುದ್ಧ ಇನ್ನಷ್ಟು ಭೀಕರವಾಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ತಕ್ಷಣಕ್ಕೆ ಸುಮಾರು 8 ಬಿಲಿಯನ್ ಅಮೆರಿಕನ್ ಡಾಲರ್‌ಗಳ ಸಹಾಯಕ್ಕೆ ಅಮೆರಿಕ ಮುಂದಾಗಿದೆ. ಅಂದ್ರೆ ಇದು ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಸುಮಾರು 66 ಸಾವಿರ ಕೋಟಿ ರೂಪಾಯಿಗೂ ಹೆಚ್ಚು. ಇಷ್ಟು ದೊಡ್ಡ ಮೊತ್ತದ ಯುದ್ಧ ನೆರವಿಗೆ ಅಮೆರಿಕ ಸರ್ಕಾರ ಮುಂದೆ ಬಂದಿರುವುದು ಸಂಚಲನ ಸೃಷ್ಟಿಸಿದೆ.
ಒಟ್ನಲ್ಲಿ ಇಸ್ರೇಲ್ ಪುಟಾಣಿ ದೇಶ ಆಗಿದ್ರೂ ಅದರ ಸೇನಾ ಶಕ್ತಿ ಬಲಶಾಲಿ ದೇಶಗಳನ್ನೇ ಮೀರಿಸಿ ನಿಲ್ಲುತ್ತದೆ. ಹೀಗಾಗಿಯೇ ಇಸ್ರೇಲ್ ಸೇನೆ ಬಳಿ ಭಯಾನಕ ಫೈಟರ್ ಜೆಟ್ ಎನ್ನಲಾಗುವ F-35s ಮಾದರಿಯ 75 ಯುದ್ಧ ವಿಮಾನಗಳು ಇವೆ. ಇಷ್ಟೇ ಅಲ್ಲದೆ ಡ್ರೋನ್‌ಗಳು ಸೇರಿ ಒಟ್ಟಾರೆ 684 ಯುದ್ಧ ವಿಮಾನಗಳು ಇಸ್ರೇಲ್ ವಾಯು ಸೇನೆಯಲ್ಲಿ ಇವೆ. ಇದನ್ನು ನಿಭಾಯಿಸಲು 34,000 ಸೈನಿಕರು ಸಿದ್ಧವಾಗಿದ್ದು, 55,000 ಮೀಸಲು ಪಡೆ ಸೈನಿಕರೂ ಸಿದ್ಧರಾಗಿ ತಮ್ಮ ದೇಶವನ್ನು ಕಾಪಾಡಲು ಮುಂದಾಗಿದ್ದಾರೆ. ಹಮಾಸ್ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ ಇಸ್ರೇಲ್‌ನ ಯೋಧರು.












Click it and Unblock the Notifications