ತೈವಾನ್‌ಗೆ ತನ್ನ ‘ದಶಾವತಾರ’ ತೋರಿಸಿದ ಚೀನಾ!
ತೈಪೆ: ತೈವಾನ್‌ಗೆ ಬುದ್ಧಿ ಕಲಿಸಲು ನಿರ್ಧಾರ ಮಾಡಿರುವ ಚೀನಾ, ಈ ಬಾರಿ ಏನೇ ಆದರೂ ಹಿಂದಕ್ಕೆ ಹೋಗಬಾರದು ಎಂಬ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿದೆ. ಈ ಕಾರಣಕ್ಕೆ ತೈವಾನ್ ವಿರುದ್ಧ ಹೊಸ ತಂತ್ರ ಹೂಡಿ, ತನ್ನಲ್ಲಿರುವ ಅಸ್ತ್ರಗಳನ್ನೆಲ್ಲಾ ಹೊರ ತೆಗೆಯುತ್ತಿದೆ. ಈ ಬೆಳವಣಿಗೆ ತೈವಾನ್‌ಗೆ ಭಯ ಹುಟ್ಟಿಸುವ ಜೊತೆಗೆ ಎಲ್ಲಿ 3ನೇ ಮಹಾಯುದ್ಧ ಶುರುವಾಗುತ್ತದೋ ಎಂಬ ಭೀತಿಯನ್ನ ಜನರಲ್ಲೂ ಬಿತ್ತುತ್ತಿದೆ.
ಕೆಲ ದಿನದ ಹಿಂದಷ್ಟೇ ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನು ಪ್ರಯಾಣಿಸಿಕೊಂಡು ಹೋಗಿತ್ತು ಅಮೆರಿಕ. ಇದಾದ ಬಳಿಕ ಚೀನಾ ತನ್ನ ಶಕ್ತಿ ಏನು ಅನ್ನೋದನ್ನ ಶತ್ರು ರಾಷ್ಟ್ರ ತೈವಾನ್‌ಗೆ ತೋರಿಸುತ್ತಿದೆ. ಕಳೆದ ತಿಂಗಳು ತೈವಾನ್ ಅಧ್ಯಕ್ಷೆ ಅಮೆರಿಕ ಪ್ರವಾಸ ಮಾಡಿ ಬಂದ ನಂತರ ಒಂದಲ್ಲ ಒಂದು ಸಮಸ್ಯೆ ಉದ್ಭವಿಸುತ್ತಿದೆ. ಅಲ್ಲದೆ ತೈವಾನ್ ನಮಗೆ ಸೇರಿದ ಜಾಗ ಎಂದು ಚೀನಾ ಒತ್ತಿ ಒತ್ತಿ ಪ್ರತಿಪಾದಿಸುತ್ತಿದೆ. ಈ ನಡುವೆ 3-4 ದಿನದ ಹಿಂದಷ್ಟೇ ಚೀನಾ ಸೇನೆ ತೈವಾನ್ ಬಳಿ ಬಿಡಾರ ಹೂಡಿ ವಾರ್ನಿಂಗ್ ಕೊಟ್ಟಿತ್ತು. ಈಗ ತೈವಾನ್‌ಗೆ ತನ್ನ ಮತ್ತೊಂದು ಮುಖ ತೋರಿಸಿದೆ ಚೀನಾ!

ತೈವಾನ್ ಗಡಿಯಲ್ಲಿ ಹೊಸ ವೆಪನ್ಸ್!
ಚೀನಾ ತೈವಾನ್ ಗಡಿಗೆ ನುಗ್ಗಿಸುತ್ತಿರುವ ಪ್ರತಿಯೊಂದು ಡ್ರೋನ್ ಕೂಡ ವಿನಾಶಕಾರಿಯಾಗಿದೆ. ಈ ಹಿಂದೆ ಎಸ್‌ಯು-30, ಎರಡು ಜೆ-16 ಹಾಗೂ ಟಿಬಿ-001 ರವಾನಿಸಿತ್ತು. ನಂತರ Z-9 ಹೆಲಿಕಾಪ್ಟರ್ ಹಾರಾಡಿಸಿ ಭಯಹುಟ್ಟಿಸಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ BZK-005 ಡ್ರೋನ್‌ಗಳ ಪರಿಚಯ ಮಾಡಿಸಿದೆ. ಚೀನಾ ಬಳಿ ಇರುವ ಈ ಡ್ರೋನ್ ಎಷ್ಟು ಬಲಶಾಲಿ ಎಂದರೆ, ಸಾಮಾನ್ಯ ಡ್ರೋನ್‌ಗಳಿಂತ ಅತಿಹೆಚ್ಚು ದೂರ ಒಂದೇ ಬಾರಿಗೆ ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಜೊತೆಗೆ ನಿಖರವಾಗಿ ದಾಳಿ ಕೂಡ ಮಾಡಬಲ್ಲವು.
ವಿಡಿಯೋ ಮೂಲಕ ಯುದ್ಧಕ್ಕೆ ರಣವೀಳ್ಯ!
ಈ ಹಿಂದೆ ಒಂದು ವಿಡಿಯೋ ರಿಲೀಸ್ ಮಾಡಿ, ತೈವಾನ್ ವಿರುದ್ಧ ತಾನು ಯುದ್ಧ ಮಾಡಿದರೆ ಪರಿಸ್ಥಿತಿ ಹೇಗಿರಲಿದೆ ಎಂಬ ಝಲಕ್ ತೋರಿಸಿತ್ತು ಚೀನಾ. ಈ ಮೂಲಕ ಚೀನಾ ರೊಚ್ಚಿಗೆದ್ದಿದ್ದು, ಅಮೆರಿಕ ವಿರುದ್ಧದ ಸಿಟ್ಟಲ್ಲಿ ಏನೇನೋ ಮಾಡಲು ಹೋಗುತ್ತಿದೆ. ಬೇಡ ಬೇಡ ಅಂದ್ರೂ ತೈವಾನ್ ನಾಯಕರು ಅಮೆರಿಕ ಜೊತೆಗೆ ಸ್ನೇಹ ಬೆಸೆಯಲು ಮುಂದಾದ ಪರಿಣಾಮ ಭೀಕರ ಸಮರಕ್ಕೆ ಚೀನಾದ ಸೇನೆ ಸಿದ್ಧತೆ ನಡೆಸಿದೆ. ಆದರೆ ತೈವಾನ್ ನಾಯಕರು ಮಾತ್ರ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅಮೆರಿಕದ ಸಹಾಯಕ್ಕೆ ಕಾದು ಕುಳಿತಿದ್ದಾರೆ.

ಚೀನಾಗೆ ರಷ್ಯಾ, ಉ.ಕೊರಿಯಾ ಬಲ!
ರಷ್ಯಾ & ಉಕ್ರೇನ್ ಒಬ್ಬರಿಗೊಬ್ಬರು ಬಾಂಬ್ ಎಸೆಯುತ್ತಾ ಶೆಲ್ ದಾಳಿ ಮಾಡುತ್ತಾ ವಿನಾಶದ ಮುನ್ಸೂಚನೆ ನೀಡುತ್ತಿವೆ. ಇತ್ತ ತೈವಾನ್ ಮತ್ತು ಚೀನಾ ಗಡಿಯಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಅಮೆರಿಕ ಕೂಡ ಚೀನಾ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಚೀನಾ, ತೈವಾನ್ ವಿಚಾರದಲ್ಲಿ ಎಂಟ್ರಿ ಆಗಬೇಡಿ ಎಂಬ ಎಚ್ಚರಿಕೆಯನ್ನ ಅಮೆರಿಕದ ನಾಯಕರಿಗೆ ನೀಡುತ್ತಿದೆ. ಈಗಿನ ಸ್ಥಿತಿ ನೋಡಿದರೆ ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದೆ. ತೈವಾನ್ ಜನ ನೆಮ್ಮದಿಯಾಗಿ ನಿದ್ದೆ ಮಾಡಲು ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚೀನಾ ತನ್ನ ಸುತ್ತಮುತ್ತಲು ಅಮೆರಿಕ ನಡೆಸುತ್ತಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಈ ನಡುವೆ ಅಮೆರಿಕ ಕೂಡ ಈ ಘರ್ಷಣೆಗೆ ತುಪ್ಪ ಸುರಿಯುತ್ತಿದೆ. ಜೊತೆ ಜೊತೆಗೆ ಎರಡೂ ರಾಷ್ಟ್ರಗಳ ಸಂಬಂಧ ಕೂಡ ಹಳಸುತ್ತಿದೆ. ಭವಿಷ್ಯದಲ್ಲಿ ಇದು ಯುದ್ಧಕ್ಕೆ ದಾರಿ ಮಾಡಿಕೊಡುವ ಆತಂಕ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿರುವ ದೇಶಗಳನ್ನ ಕಾಡುತ್ತಿದೆ. ರಷ್ಯಾ ಮತ್ತು ಉತ್ತರ ಕೊರಿಯಾ ದೇಶಗಳು ಈ ವಿಚಾರದಲ್ಲಿ ಚೀನಾಗೆ ಸಂಪೂರ್ಣ ಬೆಂಬಲ ನೀಡುತ್ತಿವೆ. ದಕ್ಷಿಣ ಕೊರಿಯಾ, ಜಪಾನ್, ತೈವಾನ್ ದೇಶಗಳು ಅಮೆರಿಕ ಜೊತೆಗೆ ಕೈಜೋಡಿಸಿ ಚೀನಾಗೆ ಸವಾಲು ಹಾಕುತ್ತಿವೆ.












Click it and Unblock the Notifications