ಇಸ್ರೇಲ್ ಭೀಕರ ದಾಳಿಗೆ ಎಲ್ಲಾ ಪೀಸ್.. ಪೀಸ್..!
ತಮ್ಮ ಮೇಲೆ ಹಮಾಸ್ ಉಗ್ರರು ಭೀಕರ ದಾಳಿ ಮಾಡಿದ್ದಾರೆ ಅಂತಾ ಆರೋಪಿಸಿ ಇಸ್ರೇಲ್ ಸೇನೆ ನಡೆಸುತ್ತಿರುವ ಘೋರ ಸೇನಾ ಕಾರ್ಯಾಚರಣೆ, ಗಾಜಾಪಟ್ಟಿ ಪ್ರದೇಶವನ್ನ ನರಕವಾಗಿ ಬದಲಾಯಿಸಿದೆ. ಸುಮಾರು 5 ತಿಂಗಳಿಗೂ ಹೆಚ್ಚು ಸಮಯದಿಂದ ನಡೆಯುತ್ತಿರುವ ಯುದ್ಧ ಕೈಮೀರಿ ಹೋಗಿದ್ದು, ಜೀವ ಉಳಿಸಿಕೊಳ್ಳಲು ಲಕ್ಷಾಂತರ ಜನರು ಊರು ಬಿಟ್ಟು ಓಡಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವಾಗಲೇ ಮತ್ತೊಂದು ಆಘಾತಕಾರಿ ವಿಚಾರವೂ ಬಯಲಾಗಿದೆ.
ಅಷ್ಟಕ್ಕೂ ಅಕ್ಟೋಬರ್ ತಿಂಗಳಲ್ಲಿ ಶುರುವಾದ ಇಸ್ರೇಲ್ & ಹಮಾಸ್ ನಡುವಿನ ಯುದ್ಧದಲ್ಲಿ ಈಗಾಗಲೇ 31 ಸಾವಿರಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ. ಅದರಲ್ಲೂ ಗಾಜಾದ ಭಾಗಶಃ ಕಟ್ಟಡಗಳು ಪೀಸ್ ಪೀಸ್ ಆಗಿ ಹೋಗಿವೆ. ಜನ ಜೀವ ಉಳಿಸಿಕೊಳ್ಳಲು ನೂರಾರು ಕಿಲೋ ಮೀಟರ್ ದೂರ ಓಡಿ ಹೋಗಿದ್ದಾರೆ. ಹೀಗಿದ್ದಾಗಲೇ ಗಾಜಾಪಟ್ಟಿ ಭಾಗದಲ್ಲಿ ಎಷ್ಟು ಕಟ್ಟಡಗಳಿಗೆ ಹಾನಿ ಆಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಆ ಅಂಕಿ & ಅಂಶ ಕೇಳಿದರೆ ಪಕ್ಕಾ ತಲೆ ಗಿರ್ ಅನ್ನುತ್ತೆ!

88,868 ಕಟ್ಟಡಗಳು ಉಡೀಸ್?
ಇಸ್ರೇಲ್ ದಾಳಿ ಪರಿಣಾಮ ಗಾಜಾ ಪಟ್ಟಿಯ ಶೇ 35ರಷ್ಟು ಕಟ್ಟಡಗಳು ಪೂರ್ತಿ ಅಥವಾ ಭಾಗಶಃ ಹಾನಿ ಆಗಿವೆ ಎಂಬ ವಿಚಾರ ಈಗ ಬಯಲಾಗಿದೆ. ವಿಶ್ವಸಂಸ್ಥೆ ಸ್ಯಾಟಲೈಟ್ ಕೇಂದ್ರ ಇಂತಹ ಭಯಾನಕ ಸತ್ಯವನ್ನು ಹೊರಗೆಡವಿದೆ. ಫೆಬ್ರವರಿ 29 ರಂದು ಮತ್ತು ಯುದ್ಧ ಆರಂಭವಾಗುವ ಮೊದಲು ಸೆರೆ ಹಿಡಿದಿರುವ ಚಿತ್ರ ಆಧರಿಸಿ ಈ ಲೆಕ್ಕಾಚಾರ ಮಾಡಲಾಗಿದೆ. ಗಾಜಾ ಪಟ್ಟಿಯಲ್ಲಿ 88,868 ಕಟ್ಟಡ ಪೂರ್ಣ ಅಥವಾ ಭಾಗಶಃ ಹಾನಿ ಆಗಿವೆ ಎಂಬುದು ಇದೀಗ ಉಪಗ್ರಹದಲ್ಲಿ, ಕಂಡುಬಂದಿರುವ ಚಿತ್ರಗಳಿಂದ ಗೊತ್ತಾಗಿದೆ.
ಜೀವನ ನಡೆಸಲು ಜನರ ಪರದಾಟ
ಹೀಗೆ ಹಾನಿಯಾಗಿರುವ ಕಟ್ಟಡಗಳ ಪೈಕಿ 31,198 ಕಟ್ಟಡ ಸಂಪೂರ್ಣವಾಗಿ ಹಾನಿಗೊಂಡಿದ್ದರೆ 16,908 ಕಟ್ಟಡ ಭಾಗಶಃ ಅಂದರೆ ಇನ್ನೇನು ಕುಸಿದು ಬೀಳುವ ಹಂತದಲ್ಲಿ ಇವೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ಯುದ್ಧ ಇದೇ ರೀತಿ ಮುಂದುವರಿದರೆ ಗಾಜಾದಲ್ಲಿ ಇರುವ ಎಲ್ಲಾ ಕಟ್ಟಡಗಳು ಕೂಡ ಧ್ವಂಸವಾಗಿ ಹೋಗುವ ಅಪಾಯ ಎದುರಾಗಿದೆ. ಜನರು ಅಲ್ಲಿ, ತಮ್ಮ ಜೀವನ ನಡೆಸಲು ಕುಸಿದು ಬಿದ್ದ ಕಟ್ಟಡದಲ್ಲೇ ಪರದಾಡುತ್ತಿದ್ದಾರೆ. ಇಂತಹ ಹಲವು ಫೋಟೋಗಳು ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿವೆ.

ಒಟ್ನಲ್ಲಿ ಹೀಗೆ ಇಸ್ರೇಲ್ & ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಯುದ್ಧವೀಗ ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿದ್ದು. ಒಂದು ಅಂದಾಜಿನ ಪ್ರಕಾರ, ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ಜೀವ ಉಳಿಸಿಕೊಳ್ಳಲು ಊರು ಬಿಟ್ಟು ಗಡಿ ಭಾಗಕ್ಕೆ ಓಡಿದ್ದಾರೆ. ಈ ಪರಿಸ್ಥಿತಿಯಲ್ಲೂ ಇಸ್ರೇಲ್ ಸೇನೆ ಮಾತ್ರ ಭರ್ಜರಿ ದಾಳಿ ಮಾಡುತ್ತಿದೆ. ಹೀಗಾಗಿ ವಿಶ್ವಸಂಸ್ಥೆ ಈ ಯುದ್ಧಕ್ಕೆ ಬ್ರೇಕ್ ಹಾಕಲು ಹರಸಾಹಸ ಪಡುತ್ತಿದೆ. ಆದರೂ ಯುದ್ಧವನ್ನು ನಿಲ್ಲಿಸಲು ಆಗುತ್ತಿಲ್ಲ ಎಂಬುದೇ ಆಧುನಿಕ ಕಾಲದ ಘೋರ ದುರಂತವೇ ಸರಿ ಎನ್ನಬಹುದು.












Click it and Unblock the Notifications