ಬಾಂಬ್ ಬೆದರಿಕೆ: ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ವಿಮಾನ ಉಜ್ಬೇಕಿಸ್ತಾನಕ್ಕೆ
ಪಣಜಿ, ಜನವರಿ 21: ರಷ್ಯಾದ ರಾಜಧಾನಿ ಮಾಸ್ಕೋದಿಂದ 240 ಪ್ರಯಾಣಿಕರೊಂದಿಗೆ ಗೋವಾಕ್ಕೆ ಹೊರಟಿದ್ದ ಚಾರ್ಟರ್ಡ್ ವಿಮಾನವನ್ನು ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಉಜ್ಬೇಕಿಸ್ತಾನ್‌ಗೆ ತಿರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾರ್ಟರ್ಡ್ ವಿಮಾನವು ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಮುಂಜಾನೆ 4:15 ಕ್ಕೆ ಇಳಿಯಬೇಕಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಅಜುರ್ ಏರ್ ಕಂಪೆನಿ ನಿರ್ವಹಿಸುತ್ತಿದ್ದ ಈ ವಿಮಾನ (AZV2463) ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲು ಅದನ್ನು ತಿರುಗಿಸಲಾಯಿತು. ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಉಲ್ಲೇಖಿಸಿರುವ ಡಾಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರಿಂದ 12:30ಕ್ಕೆ ಇಮೇಲ್ ಬಂದ ನಂತರ ಅದನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಬಾಂಬ್ ಬೆದರಿಕೆಯ ನಂತರ ಮಾಸ್ಕೋದಿಂದ ಗೋವಾ ವಿಮಾನವು ಗುಜರಾತ್‌ನ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಸುಮಾರು ಎರಡು ವಾರಗಳ ನಂತರ ಈ ಘಟನೆ ಸಂಭವಿಸಿದೆ. ಯುರೋಪ್, ಏಷ್ಯಾ, ಆಫ್ರಿಕಾ ಮತ್ತು ಮಧ್ಯ ಅಮೆರಿಕದ ಸ್ಥಳಗಳಿಗೆ ಸೇವೆಗಳನ್ನು ಒದಗಿಸುವ ರಷ್ಯಾದ ಚಾರ್ಟರ್ ಏರ್‌ನ ಅಜುರ್ ಏರ್ ವಿಮಾನವು 2 ಶಿಶುಗಳು ಮತ್ತು 7 ಸಿಬ್ಬಂದಿ ಸೇರಿದಂತೆ ಒಟ್ಟು 238 ಪ್ರಯಾಣಿಕರನ್ನು ಹೊಂದಿತ್ತು ಎಂದು ವಿಮಾನ ನಿಲ್ದಾಣದ ಮೂಲಗಳು ದೃಢಪಡಿಸಿವೆ.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಈ ಚಾರ್ಟರ್ಡ್ ವಿಮಾನವು ರಷ್ಯಾದ ಪೆರ್ಮ್ ನಗರದ ನೈಋತ್ಯಕ್ಕೆ 16 ಕಿಲೋಮೀಟರ್ ದೂರದಲ್ಲಿರುವ ಬೊಲ್ಶೋಯ್ ಸವಿನೋದಲ್ಲಿರುವ ಪೆರ್ಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು ಎಂದು ತಿಳಿದು ಬಂದಿದೆ.












Click it and Unblock the Notifications