ಪಾಕ್ ವಿರುದ್ದ ಕಿಡಿಕಾರಿ, ಭಾರತ 'ನಿಜವಾದ ಸ್ನೇಹಿತ' ಎಂದ ಅಫ್ಘಾನ್ ಪಾಪ್ ತಾರೆ ಆರ್ಯಾನಾ
ನವದೆಹಲಿ, ಆಗಸ್ಟ್ 24: ತಾಲಿಬಾನ್‌ನಿಂದ ತಪ್ಪಿಸಿಕೊಳ್ಳಲು ಕಾಬೂಲ್ ತೊರೆದ ಅಫ್ಘಾನಿಸ್ತಾನದ ಪ್ರಸಿದ್ದ ಪಾಪ್ ತಾರೆ ಆರ್ಯಾನಾ ಸಯೀದ್ ಪಾಕಿಸ್ತಾನದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನವು ಭಯೋತ್ಪಾದನಾ ಸಂಘಟನೆಗಳನ್ನು ಪೋಷಿಸಿದೆ ಎಂದು ಆರೋಪ ಮಾಡಿ ಪಾಕಿಸ್ತಾನದ ವಿರುದ್ದ ಕಿಡಿಕಾರಿದ ಅಫ್ಘಾನ್ ಪಾಪ್ ತಾರೆ ಆರ್ಯಾನಾ ಸಯೀದ್ ಇದೇ ಸಂದರ್ಭದಲ್ಲಿ ಅಫ್ಘಾನ್‌ನಲ್ಲಿ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯ ಮಾಡುತ್ತಿರುವ ಹಾಗೂ ಈ ಹಿಂದೆಯೂ ಹಲವಾರು ಸಹಾಯವನ್ನು ಮಾಡಿರುವ ಭಾರತವನ್ನು ಶ್ಲಾಘಿಸಿದ್ದಾರೆ.
"ತಾಲಿಬಾನ್ ಅನ್ನು ಪೋಷಿಸಿದ ವಿಚಾರದಲ್ಲಿ ನಾನು ಪಾಕಿಸ್ತಾನದ ವಿರುದ್ದ ಆರೋಪ ಮಾಡುತ್ತೇನೆ. ಕಳೆದ ಹಲವಾರು ವರ್ಷಗಳಿಂದ ನಾವು ನೋಡಿರುವ ಹಲವಾರು ವಿಡಿಯೋಗಳ ಮೂಲಕ ತಾಲಿಬಾನ್ ಅನ್ನು ಪೋಷಿಸಿದ ಪ್ರಮುಖ ದೇಶ ಪಾಕಿಸ್ತಾನ ಎಂಬುವುದು ತಿಳಿದು ಬಂದಿದೆ," ಎಂದು ಆರೋಪ ಮಾಡಿದ್ದಾರೆ.
"ಅಫ್ಘಾನಿಸ್ತಾನ ಸರ್ಕಾರವು ತಾಲಿಬಾನ್ ಉಗ್ರರನ್ನು ಸೆರೆ ಹಿಡಿದು ಅವರ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ, ಪ್ರತಿ ಬಾರಿಯೂ ಆ ವ್ಯಕ್ತಿಯು ಪಾಕಿಸ್ತಾನದ ವ್ಯಕ್ತಿ ಎಂದು ಸಾಭಿತಾಗಿದೆ. ಈ ಕಾರಣದಿಂದಾಗಿ ನಾನು ತಾಲಿಬಾನ್ ಅನ್ನು ಪೋಷಿಸಿದ ವಿಚಾರದಲ್ಲಿ ಪಾಕಿಸ್ತಾನವನ್ನು ದೂರುತ್ತೇನೆ. ಹಾಗೆಯೇ ಇನ್ನಾದರೂ ಪಾಕಿಸ್ತಾನ ತನ್ನ ಈ ಕೃತ್ಯದಿಂದ ಹಿಂದಕ್ಕೆ ಸರಿಯುತ್ತದೆ ಹಾಗೂ ಅಫ್ಘಾನಿಸ್ತಾನದ ರಾಜಕೀಯಕ್ಕೆ ತಲೆ ಹಾಕುವುದಿಲ್ಲ ಎಂದು ನಾನು ನಂಬುತ್ತೇನೆ," ಎಂದು ಬಹಿರಂಗಪಡಿಸಲು ಇಚ್ಛಿಸದ ಸ್ಥಳದಿಂದ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಅಫ್ಘಾನಿಸ್ತಾನ ಪಾಪ್ ತಾರೆ ಆರ್ಯಾನಾ ಸಯೀದ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನವು ತರಬೇತಿ ನೀಡಿದೆ ಹಾಗೂ ಸೂಚನೆಗಳನ್ನು ನೀಡಿದೆ ಎಂದು ಆರ್ಯಾನಾ ಸಯೀದ್ ಆರೋಪ ಮಾಡಿದ್ದಾರೆ. "ತಾಲಿಬಾನ್‌ಗೆ ಪಾಕಿಸ್ತಾನ ಸೂಚನೆಗಳನ್ನು ನೀಡುತ್ತಿದೆ. ತಾಲಿಬಾನಿಗರ ಮೂಲ ಸ್ಥಾನ ಪಾಕಿಸ್ತಾನವಾಗಿದ್ದು ಪಾಕ್‌ನಲ್ಲೇ ತಾಲಿಬಾನಿಗರಿಗೆ ತರಬೇತಿ ನೀಡಲಾಗುತ್ತದೆ. ಆದ್ದರಿಂದ ತಾಲಿಬಾನ್‌ಗೆ ಹಣ ಸಹಾಯ ಮಾಡುವ ಪಾಕಿಸ್ತಾನಕ್ಕೆ ಎಲ್ಲಾ ಅಂತಾರಾಷ್ಟ್ರೀಯ ಸಮುದಾಯ, ಸಂಸ್ಥೆಗಳು ಯಾವುದೇ ಹಣ ಸಹಾಯ ಮಾಡಬಾರದು, ಎಲ್ಲಾ ಹಣ ಸಹಾಯವನ್ನು ಸ್ಥಗಿತಗೊಳಿಸಬೇಕು ಎಂದು ನಾನು ಮನವು ಮಾಡುತ್ತೇನೆ," ಎಂದು ಸಯೀದ್ ವಿನಂತಿಸಿದ್ದಾರೆ.
ಹಾಗೆಯೇ ಪ್ರಮುಖವಾಗಿ ಅಂತಾರಾಷ್ಟ್ರೀಯ ಸಮುದಾಯಗಳು ಒಂದು ಸಭೆ ಸೇರಿ ಅಫ್ಘಾನ್‌ನಲ್ಲಿ ಶಾಂತಿ ಸ್ಥಾಪನೆಗೆ ಪರಿಹಾರವನ್ನು ಅಥವಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ಸಯೀದ್ ಈ ಸಂದರ್ಭದಲ್ಲೇ ಒತ್ತಾಯಿಸಿದ್ದಾರೆ. "ಅಂತಾರಾಷ್ಟ್ರೀಯ ಸಮುದಾಯಗಳು ಪಾಕಿಸ್ತಾನದ ಮೇಲೆ ಒತ್ತಡ ಹೇರಬಹುದು ಎಂದು ನಾನು ಭಾವಿಸುತ್ತೇನೆ. ಅಫ್ಘಾನಿಸ್ತಾನದಲ್ಲಿ ನಾವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪಾಕಿಸ್ತಾನವೇ ಕಾರಣ ಎಂದು ನಾವು ನಂಬುತ್ತೇವೆ," ಎಂದು ಆರ್ಯಾನಾ ಸಯೀದ್ ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಅಫ್ಘಾನಿಸ್ತಾನದ ಪ್ರಸಿದ್ದ ಪಾಪ್ ತಾರೆ ಆರ್ಯಾನಾ ಸಯೀದ್, ಅಫ್ಘಾನಿಸ್ತಾದಲ್ಲಿ ಶಾಂತಿ ನೆಲೆಸಲು ಹಾಗೂ ಅಫ್ಘಾನಿಸ್ತಾನದ ಅಭಿವೃದ್ದಿಗೆ ಸಹಕರಿಸಿದ ಭಾರತ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಭಾರತವು ಅಫ್ಘಾನಿಸ್ತಾನದ ನಿಜವಾದ ಸ್ನೇಹಿತ ಎಂದು ಉಲ್ಲೇಖ ಮಾಡಿದ್ದಾರೆ. "ಅಫ್ಘಾನಿಸ್ತಾನಕ್ಕೆ ಭಾರತವು ಎಲ್ಲಾ ಸಂದರ್ಭದಲ್ಲಿ ಉತ್ತಮ ಕಾರ್ಯವನ್ನು ಮಾಡಿದೆ. ಭಾರತ ಸರ್ಕಾರವು ಅಫ್ಘಾನಿಸ್ತಾನದ ನಿಜವಾದ ಸ್ನೇಹಿತರಾಗಿದ್ದಾರೆ. ನಿರಾಶ್ರಿತರೂ ಸೇರಿದಂತೆ ಅಫ್ಘಾನಿಸ್ತಾನದ ಜನರಿಗೆ ಭಾರತವು ಸಾಕಷ್ಟು ಸಹಾಯವನ್ನು ಮಾಡಿದೆ. ಈ ಹಿಂದೆ ಭಾರತದಲ್ಲಿ ಇದ್ದ ಅಫ್ಘಾನಿಸ್ತಾನದ ಜನರು ಯಾವಾಗಲೂ ಭಾರತ ದೇಶ ಹಾಗೂ ಅಲ್ಲಿನ ಜನರ ಬಗ್ಗೆ ಉತ್ತಮ, ಶ್ಲಾಘನಾರ್ಹ ಮಾತುಗಳನ್ನು ಆಡುತ್ತಾರೆ. ನಾವು ಅಫ್ಘಾನಿಸ್ತಾನಕ್ಕೆ ಕೃತಜ್ಞರಾಗಿದ್ದೇವೆ," ಎಂದು ಪಾಪ್ ತಾರೆ ಆರ್ಯಾನಾ ಸಯೀದ್ ಭಾರತವನ್ನು ಶ್ಲಾಘಿಸಿದ್ದಾರೆ.
"ಅಫ್ಘಾನಿಸ್ತಾನದ ಪರವಾಗಿ ನಾನು ಭಾರತಕ್ಕೆ ಕೃತಜ್ಞತೆಯನ್ನು ಅರ್ಪಿಸಲು ಬಯಸುತ್ತೇನೆ. ಹಾಗೆಯೇ ಭಾರತಕ್ಕೆ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ. ಹಲವಾರು ವರ್ಷಗಳ ಎಲ್ಲಾ ಬೆಳವಣಿಗೆಯ ಬಳಿಕ ಅಫ್ಘಾನಿಸ್ತಾನದ ನಿಜವಾದ ಉತ್ತಮ ಸ್ನೇಹ ಹೊಂದಿರುವ ನೆರೆಯ ದೇಶ ಭಾರತ ಎಂಬುವುದು ಈಗ ನಮಗೆ ತಿಳಿದು ಬಂದಿದೆ," ಎಂದು ಕೂಡಾ ಈ ವೇಳೆ ಹೇಳಿದ್ದಾರೆ.
ಅಫ್ಘಾನಿಸ್ತಾನದ ಪ್ರಸಿದ್ದ ಪಾಪ್ ತಾರೆ ಆರ್ಯಾನಾ ಸಯೀದ್ ಅಫ್ಘಾನಿಸ್ತಾನದಲ್ಲೇ ಪ್ರಮುಖ ದಾಖಲೆಯನ್ನು ಬರೆದ ಮಹಿಳೆಯಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯಾಗಿ ಹಾಡಿದ, ಹಿಜಾಬ್ ಧರಿಸದಿರುವ ಹಾಗೂ ಸ್ಟೇಡಿಯಂಗೆ ಪ್ರವೇಶಿಸಿ ಹಾಡಿದ ಮಹಿಳೆ ಆರ್ಯಾನಾ ಆಗಿದ್ದಾರೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications