ಭಾರತ ವಿರೋಧಿ ಪಾಕಿಸ್ತಾನದ ಯೋಗ್ಯತೆ ಇದು ನೋಡಿ!
ಪಾಕಿಸ್ತಾನ ಏನೇ ಮಾಡಿದರೂ ಉಗಿಸಿಕೊಳ್ಳುವುದೇ ಆಗಿದೆ, ಯಾಕಂದ್ರೆ ಪಾಕಿಸ್ತಾನದಲ್ಲಿ ಇರುವ ರಾಜಕಾರಣಿಗಳ ಯೋಗ್ಯತೆ ಅಷ್ಟೇ. ಹೀಗಿದ್ದಾಗಲೇ ಕಳೆದ ವಾರ ನಡೆದಿದ್ದ ಚುನಾವಣೆಯು ಕೂಡ ದೊಡ್ಡ ಸದ್ದು ಮಾಡುತ್ತಿದ್ದು, ಪಾಕಿಸ್ತಾನದ ಮರ್ಯಾದಿ ಬೀದಿ ಪಾಲಾಗುತ್ತಿದೆ. ಈ ಸಂದರ್ಭದಲ್ಲೇ ಪಾಕಿಸ್ತಾನ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎನ್ನುವ ಸಂಗತಿಯನ್ನು ಚುನಾವಣಾ ಅಧಿಕಾರಿಗಳೇ ಬಯಲು ಮಾಡಿದ್ದಾರೆ!
ಹೌದು, ಪಾಕಿಸ್ತಾನ ಚುನಾವಣಾ ಆಯೋಗದ ಮುಖ್ಯ ಆಯುಕ್ತರು & ಮುಖ್ಯ ನ್ಯಾಯಮೂರ್ತಿ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಈ ಮೂಲಕ, ಪಾಕಿಸ್ತಾನ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪಾಕಿಸ್ತಾನದ ಅಧಿಕಾರಿಯು ಇದೀಗ ಆರೋಪ ಮಾಡಿದ್ದಾರೆ. ರಾವಲ್ಪಿಂಡಿಯ ಮಾಜಿ ಆಯುಕ್ತ, ಲಿಯಾಖತ್ ಅಲಿ ಛತ್ತಾ ಈ ರೀತಿ ಆರೋಪ ಮಾಡಿದ್ದಾರೆ. ಅಕ್ರಮಗಳ ಮೂಲಕ, ಸೋಲಬೇಕಿದ್ದ ಅಭ್ಯರ್ಥಿಗಳನ್ನೆಲ್ಲಾ ಗೆಲ್ಲಿಸಿದ್ದಾರೆ. ಹಾಗೇ ಗೆಲ್ಲಬೇಕಿದ್ದ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ ಎಂದು ಆರೋಪಿಸಿದ್ದು ಸಂಚಲನ ಸೃಷ್ಟಿ ಮಾಡಿದೆ.

ತನಿಖೆ ನಡೆಸುತ್ತಾ ಪಾಕಿಸ್ತಾನ ಆಯೋಗ?
ಹೀಗೆ ಸ್ವತಃ ಪಾಕಿಸ್ತಾನದ ಅಧಿಕಾರಿಯೇ ತನ್ನ ದೇಶದ ಚುನಾವಣಾ ಅಕ್ರಮದ ಬಗ್ಗೆ ಗಂಭೀರ ಆರೋಪ ಮಾಡಿರುವುದು, ಸಹಜವಾಗಿಯೇ ದೊಡ್ಡ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಈ ಬಗ್ಗೆ ಗಂಭೀರ ತನಿಖೆ ನಡೆಸಬೇಕು ಅನ್ನೋ ಆಗ್ರಹ ಕೂಡ ಕೇಳಿಬಂದಿದೆ. ಈ ಆರೋಪದ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಚುನಾವಣಾ ಆಯೋಗ, ಆ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದಿದೆ. ಫಲಿತಾಂಶ ಬದಲಿಸುವಂತೆ ಆಯೋಗದ ಯಾವುದೇ ಅಧಿಕಾರಿ ಯಾರೊಬ್ಬರಿಗೂ ನಿರ್ದೇಶನ ನೀಡಿಲ್ಲ ಹಾಗೇ ಆರೋಪದ ಬಗ್ಗೆ ತನಿಖೆ ನಡೆಸುತ್ತೇವೆ, ಅಂತಾ ಮಾಹಿತಿ ನೀಡಿದೆ.
ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ?
ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಪಾಕಿಸ್ತಾನದಲ್ಲಿ ಹೇಗಾದರೂ ಮಾಡಿ ಸರ್ಕಾರ ರಚಿಸಬೇಕೆಂಬ ಹುಮ್ಮಸ್ಸಿನಲ್ಲಿ ಮಾಜಿ ಪ್ರಧಾನಿ, ನವಾಜ್ ಷರೀಫ್ & ಟೀಂ ಇದೆ. ಮೈತ್ರಿ ಸರ್ಕಾರ ರಚನೆಗೆ ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಮತ್ತು ಬಿಲಾವಲ್ ಭುಟ್ಟೊ ನೇತೃತ್ವದ ಪಿಪಿಪಿ, ಪ್ರಯತ್ನ ನಡೆಸುತ್ತಿದೆ. ನವಾಜ್ ಷರೀಫ್ ಪಕ್ಷ 75 & ಬಿಲಾವಲ್ ಬುಟ್ಟೋ ಪಕ್ಷವು 54 ಸ್ಥಾನ ಗೆದ್ದಿದೆ. 17 ಸ್ಥಾನ ಗೆದ್ದಿರುವ ಎಂಕ್ಯೂಎಂ-ಪಿ ಕೂಡಾ ಮೈತ್ರಿ ಬೆಂಬಲಿಸಲು ತೀರ್ಮಾನಿಸಿದ್ದು, ಸಮ್ಮಿಶ್ರ ಸರ್ಕಾರ ರಚನೆ ಬಹುತೇಕ ಪಕ್ಕಾ ಎನ್ನಲಾಗಿದೆ.

ಪಾಕಿಸ್ತಾನ ರಾಜಧಾನಿಯಲ್ಲಿ ನಿಷೇಧಾಜ್ಞೆ
ಹೀಗಿದ್ದಾಗ ಇಮ್ರಾನ್ ಖಾನ್ ಪಕ್ಷ 93 ಸ್ಥಾನದಲ್ಲಿ ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿದ್ದರೂ ಪಾಕಿಸ್ತಾನದ ಅಧಿಕಾರದ ಚುಕ್ಕಾಣಿ ಹಿಡಿಯಲು ಆಗುತ್ತಿಲ್ಲ. ಹೀಗಾಗಿ ಪಾಕ್ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಾಕ್‌ನಲ್ಲೀಗ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇನ್ನು ಪ್ರತಿಭಟನೆ ಹಿಂಸೆಗೆ ತಿರುಗುವ ಭೀತಿಯು ಆವರಿಸಿದ್ದು, ಹೀಗಾಗಿಯೇ ಪಾಕಿಸ್ತಾನದ ರಾಜಧಾನಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೆ ಸೂಕ್ಷ್ಮ ಪ್ರದೇಶದಲ್ಲಿ ಪಾಕ್ ಪೊಲೀಸರು ಭಾರಿ ಕಟ್ಟೆಚ್ಚರ ವಹಿಸಿದ್ದಾರೆ. ಅನುಮಾನ ಇರುವ ಹಲವರನ್ನು ಅರೆಸ್ಟ್ ಮಾಡಿದ್ದಾರೆ.












Click it and Unblock the Notifications