(UPDATE) ಮೆಕ್ಸಿಕೋ ಭೂಕಂಪ: ಸಾವಿನ ಸಂಖ್ಯೆ 248ಕ್ಕೆ ಏರಿಕೆ
ಮೆಕ್ಸಿಕೋದಲ್ಲಿ ಮತ್ತೆ ಭೂಕಂಪ. ಕಟ್ಟಡ ಕುಸಿದು 100ಕ್ಕೂ ಹೆಚ್ಚು ಜನರ ಸಾವು.
ಮೆಕ್ಸಿಕೋ ನಗರ, ಸೆಪ್ಟೆಂಬರ್ 20: ಕೇವಲ 11 ದಿನಗಳ ಹಿಂದಷ್ಟೇ ಪ್ರಬಲ ಭೂಕಂಪಕ್ಕೆ ಬಲಿಯಾಗಿದ್ದ ಮೆಕ್ಸಿಕೊ ದಲ್ಲಿ ಸ್ಥಳೀಯ ಕಾಲಮಾನದ ಪ್ರಕಾರ, ಸೆ. 19ರ ಮಧ್ಯಾಹ್ನ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಸುಮಾರು 7.1ರಷ್ಟು ತೀವ್ರತೆ ಹೊಂದಿದ್ದ ಈ ಭೂಕಂಪದಲ್ಲಿ ಈವರೆಗೆ 248 ಜನರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೆಕ್ಸಿಕೋದ ರಾಜಧಾನಿ ಮೆಕ್ಸಿಕೋ ಸಿಟಿಯಲ್ಲೇ 117 ಜನರು ಮೃತಪಟ್ಟಿದ್ದಾರೆ. ಇದರಲ್ಲಿ 21 ಶಾಲಾ ಮಕ್ಕಳೂ ಸೇರಿದ್ದಾರೆ. ನಗರದಲ್ಲಿರುವ ಪ್ರಾಥಮಿಕ ಹಂತದ ಶಾಲೆ ಕುಸಿದ ಪರಿಣಾಮವಾಗಿ ಅದರಲ್ಲಿದ್ದ 21 ಮಕ್ಕಳ ಶಾಲೆಯಡಿ ಸಮಾಧಿಯಾಗಿದ್ದಾರೆ. ಮೆಕ್ಸಿಕೋ ಸಿಟಿಯಲ್ಲಿನ ಕಟ್ಟಡವೊಂದು ಕುಸಿದು ಅದರಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಸೆ. 8ರಂದು ಮೆಕ್ಸಿಕೊ ದೇಶದ ದಕ್ಷಿಣ ಭಾಗದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 90ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದಾಗಿ, 11 ದಿನಗಳಲ್ಲೇ ಈಗ ಸಂಭವಿಸಿರುವ ಮತ್ತೊಂದು ಭೂಕಂಪ ದೇಶಕ್ಕೆ ಭಾರೀ ಹಾನಿ ಮಾಡಿದೆ.
ಕಟ್ಟಡದಲ್ಲಿ ಎಷ್ಟು ಜನರಿದ್ದರೆಂಬುದು ಸ್ಪಷ್ಟವಾಗಿರಲಿಲ್ಲ. ಹಾಗಾಗಿ, ಕನಿಷ್ಟ ನೂರು ಜನರು ಸಾವಿಗೀಡಾಗಿದ್ದಾರೆಂದು ಅಂದಾಜಿಸಲಾಗಿದೆ. ಈ ಕಟ್ಟಡದ ಕುಸಿತದಲ್ಲಿ ಆದ ಸಾವಿನ ಸಂಖ್ಯೆಯೂ ಸೇರಿದಂತೆ ಸೆ. 19ರ ಭೂಕಂಪದಲ್ಲಿ ಸುಮಾರು 139 ಜನರು ಸಾವಿಗೀಡಾಗಿದ್ದಾರೆಂದು ಸರ್ಕಾರ ತಿಳಿಸಿದೆ.

ವಿಪರ್ಯಾಸವೆಂದರೆ, 1985ರಲ್ಲಿ ಸಂಭವಿಸಿದ್ದ ಭೂಕಂಪದಿಂದ ಬಲಿಯಾಗಿದ್ದ ಸಾವಿರಾರು ನಾಗರಿಕರ ಪುಣ್ಯ ಸ್ಮರಣೆಗೆ ದೇಶ ಸಜ್ಜಾಗಿತ್ತು. ಅಷ್ಟರಲ್ಲಾಗಲೇ ಕೇವಲ 11 ದಿನಗಳಲ್ಲಿ ಎರಡು ಭಾರೀ ಭೂಕಂಪಗಳು ಸಂಭವಿಸಿದ್ದು, ಇಲ್ಲಿನ ಜನರು ತತ್ತರಿಸುವಂತಾಗಿದೆ.












Click it and Unblock the Notifications