ಗೂಗಲ್ ಪೋರಿಗೆ 20 ರ ಹರೆಯವಂತೆ, ವಿಶ್ ಮಾಡಿದ್ದೀರಾ?!
20 ವರ್ಷಗಳ ಹಿಂದೆ ಗೂಗಲ್ ಅಸ್ತಿತ್ವವೇ ಇಲ್ಲದ ಕಾಲವೊಂದಿತ್ತು ಎಂದರೆ ಈ ತಲೆಮಾರಿನ ಜನರು ನಂಬಬಹುದಾ? ಗೂಗಲ್ ಇಲ್ಲದ ಬದುಕನ್ನು ಅವರಿಂದ ಊಹಿಸಿಕೊಳ್ಳುವುದಕ್ಕಾದರೂ ಸಾಧ್ಯವಿದೆಯಾ?
ಕಲಿಯುಗದ ಕಾಮಧೇನು ಅಂದ್ರೆ 'ಗೂಗಲ್' ಅನ್ನಬಹುದೇನೋ! ಕೇಳಿದ್ದನ್ನೆಲ್ಲ ಕೈಗಿಡದಿದ್ದರೂ, ಅಗತ್ಯ ಮಾಹಿತಿಯನ್ನಂತೂ ಧಾರಾಳವಾಗಿ ನೀಡುತ್ತದೆ. ಇಂಥ ಗೂಗಲ್ ಗೆ ಈಗ 20 ರ ಹರೆಯವಂತೆ.
ಸೆಪ್ಟೆಂಬರ್ 4, 1998 ರಂದು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ ಪಿಎಚ್ ಡಿ ವಿದ್ಯಾರ್ಥಿಗಳಾದ ಲಾರಿ ಪೇಜ್ ಮತ್ತು ಸೆರ್ಜೆ ಬ್ರಿನ್ ಮೊಟ್ಟ ಮೊದಲ ಬಾರಿಗೆ ಗೂಗಲ್ ಎಂಬ ಸರ್ಜ್ ಇಂಜಿನ್ ಅನ್ನು ಪರಿಚಯಿಸಿದರು.

ಮುಂದೊಮ್ಮೆ ಇದು ಕೋಟಿ ಕೋಟಿ ಜನರ ಅತ್ಯಗತ್ಯವಾಗುತ್ತದೆ ಎಂದು ಆಗ ಅವರೂ ಊಹಿಸಿರಲಿಕ್ಕಿಲ್ಲ. ಸದ್ಯಕ್ಕೆ ಜಗತ್ತಿನ ಅಗ್ರ ಮಾಹಿತಿ ಕಣಜವಾಗಿ ಮುಂಚೂಣಿಯಲ್ಲಿರುವ ಗೂಗಲ್ ಅನ್ನು ಪ್ರತಿ ತಿಂಗಳು ಶತಕೋಟಿಗೂ ಹೆಚ್ಚು ಜನ ಬಳಕೆ ಮಾಡುತ್ತಾರೆ.
ಇಂತಿಪ್ಪ ಗೂಗಲ್ ಗೆ ಈಗ 20 ವರ್ಷ ವಯಸ್ಸು! ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ, ಆಧುನಿಕ ತಲೆಮಾರಿಗೆ ತಕ್ಕಂತೆ ಸೂಕ್ತ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತ, ಹೊಸ ಪೀಳಿಗೆಯ ಅಗತ್ಯಕ್ಕಾಗಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತ ಗೂಗಲ್ ಪ್ರಸಿದ್ಧಿ ಪಡೆದಿದೆ. ಗೂಗಲ್ ಆವಿಷ್ಕಾರವಾದ ದಿನ ಸೆಪ್ಟೆಂಬರ್ 4 ಆದರೂ, ಸೆಪ್ಟೆಂಬರ್ 27 ರಂದು ಗೂಗಲ್ ಡೂಡಲ್ ಮೂಲಕ 'ತನಗೆ ತಾನೇ ಬರ್ಥಡೇ ವಿಶಸ್ ಹೇಳಿಕೊಳ್ಳಲಿದೆ ಗೂಗಲ್!' ಇಂಥ ಗೂಗಲ್ ಗೆ ನಮ್ಮ ಕಡೆಯಿಂದ ಹ್ಯಾಪಿ ಬರ್ಥಡೇ!












Click it and Unblock the Notifications