Russia Ukrain War: ರಷ್ಯಾ-ಉಕ್ರೇನ್ ಯುದ್ಧದಲ್ಲಿ 12 ಭಾರತೀಯರು ಸಾವು; 16 ಜನ ಕಾಣೆ
ರಷ್ಯಾ - ಉಕ್ರೇನ್ ಯುದ್ಧ ಶುರುವಾಗಿ ಮೂರು ವರ್ಷವಾಗುತ್ತಾ ಬಂದಿದ್ದು ಎರಡೂ ರಾಷ್ಟ್ರಗಳ ಹಲವು ಸೈನಿಕರು, ನಾಗರಿಕರು ಮೃತಪಟ್ಟಿದ್ದಾರೆ. ಆದರೆ ಜೀವನೋಪಾಯಕ್ಕಾಗಿ ರಷ್ಯಾ ಸೇನೆಯಲ್ಲಿ ಸಹಾಕರಾಗಿ ಕೆಲಸ ಮಾಡಲು ಹೋಗಿದ್ದವರಲ್ಲಿ ಈವರೆಗೂ 12 ಮಂದಿ ಸಾವನ್ನಪ್ಪಿದ್ದು ಇನ್ನೂ 16 ಜನ ಕಾಣೆಯಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುತ್ತಿದ್ದ 12 ಭಾರತೀಯ ನಾಗರಿಕರು ಮೃತಪಟ್ಟಿದ್ದಾರೆ ಎಂದು ಶುಕ್ರವಾರ ಭಾರತ ದೃಢಪಡಿಸಿದೆ. 16 ಜನ ಕಾಣೆಯಾಗಿರುವುದಾಗಿ ಮಾಹಿತಿ ನೀಡಿದೆ. ಈ ಮೊದಲು ಅಧಿಕಾರಿಗಳು ನೀಡಿದ್ದ ಸಂಖ್ಯೆಗಳಿಗಿಂತ ಹೆಚ್ಚಿನ ಜನ ಮೃತಪಟ್ಟಿರುವುದು ಖಚಿತವಾಗಿದೆ.

ರಷ್ಯಾ ಸೇನೆಯಲ್ಲಿ ವಿವಿಧ ವಿಭಾಗದಲ್ಲಿ ಒಟ್ಟು 126 ಭಾರತೀಯರ ಕೆಲಸ ಮಾಡುತ್ತಿದ್ದರು ಎಂದು ಭಾರತೀಯ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಇದರಲ್ಲಿ ಈವರೆಗೆ 96 ಮಂದಿಯನ್ನು ರಷ್ಯಾ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾನಿನ ಸಂಖ್ಯೆ ಹೆಚ್ಚಳ
ಈ ಮೊದಲು ಅಧಿಕಾರಿಗಳು 9 ಭಾರತೀಯರು ರಷ್ಯಾ ಸೇನೆಯಲ್ಲಿ ಕೆಲಸ ಮಾಡುವಾಗ ಮೃತಪಟ್ಟಿದ್ದಾರೆ ಎಂದು ಹೇಳಿತ್ತು, ಆದರೆ ಇಂದು ನೀಡಿರುವ ಮಾಹಿತಿಯಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಇತ್ತೀಚೆಗೆ ಕೇರಳದ ವ್ಯಕ್ತಿಯೊಬ್ಬ ರಷ್ಯಾ ಸೇನೆಯಲ್ಲಿ ಕೆಲಸ ಮಾಡುವಾಗ ಸಾವನ್ನಪ್ಪಿದ್ದು ಮತ್ತೊಬ್ಬ ಗಾಯಗೊಂಡಿದ್ದರು. ಈವರೆಗೆ ಕಾಣೆಯಾಗಿರುವ ಭಾರತೀಯರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.
ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುತ್ತಿದ್ದ 126 ಭಾರತೀಯ ಪ್ರಜೆಗಳ ಪೈಕಿ 96 ಮಂದಿಯನ್ನು ಬಿಡುಗಡೆ ಮಾಡಿದ್ದು 96 ಮಂದಿ ಭಾರತಕ್ಕೆ ಮರಳಿದ್ದಾರೆ. ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಇನ್ನೂ 18 ಭಾರತೀಯರು ಕೆಲಸ ಮಾಡುತ್ತಿದ್ದು 16 ವ್ಯಕ್ತಿಗಳ ಸ್ಥಳ ಇನ್ನೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ರಷ್ಯಾ ಅಧಿಕಾರಿಗಳು ಅವರನ್ನು ಕಾಣೆಯಾದವರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಕಾಣೆಯಾದವರನ್ನು ಪತ್ತೆಹಚ್ಚಲು ಮತ್ತು ಸ್ವದೇಶಕ್ಕೆ ಕರೆತರಲು ನಾವು ರಷ್ಯಾ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ಜೈಸ್ವಾಲ್ ಹೇಳಿದರು.
ಕಾಣೆಯಾಗಿರುವ 16 ಜನರ ಕುಟುಂಬಗಳ ಜೊತೆ ಭಾರತೀಯ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಕೇರಳದ ನಿವಾಸಿ ಬಿನಿಲ್ ಬಾಬು ಇತ್ತೀಚೆಗೆ ರಷ್ಯಾದಲ್ಲಿ ಮೃತಪಟ್ಟಿದ್ದು ದುರದೃಷ್ಟಕರ ಎಂದು ಜೈಸ್ವಾಲ್ ವಿಷಾದ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಳಿ ತರಲು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ರಷ್ಯಾದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದೆ. ಗಾಯಗೊಂಡಿರುವ ಮತ್ತೊಬ್ಬ ಕೇರಳ ಮೂಲದ ವ್ಯಕ್ತಿ ಮಾಸ್ಕೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನೇಮಕಾತಿ ಏಜೆಂಟ್‌ಗಳು ಮೋಸದಿಂದ ಅನೇಕ ಭಾರತೀಯರನ್ನು ರಷ್ಯಾದ ಸೇನೆಗೆ ನೇಮಕವಾಗುವಂತೆ ಮಾಡಿದ್ದಾರೆ ಎಂದು ಭಾರತ ವಾದಿಸಿದೆ. ಈ ವಿಚಾರವಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಕಳೆದ ವರ್ಷ 19 ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು ಹಲವರನ್ನು ಬಂಧಿಸಿದೆ.












Click it and Unblock the Notifications