ಮನುಷ್ಯರೋ.. ರಾಕ್ಷಸರೋ?: ಮಕ್ಕಳು ಸೇರಿ 100 ಜನರ ಕಗ್ಗೊಲೆ!
ಕನ್ಬಾಲು: ಭೂಮಿ ಮೇಲಿನ ನರಕವಾಗಿ ಬದಲಾಗಿರುವ ಮ್ಯಾನ್ಮಾರ್ ರಕ್ತಸಿಕ್ತ ಅಧ್ಯಾಯಕ್ಕೆ ಮತ್ತೆ ಸಾಕ್ಷಿಯಾಗಿದೆ. ಅಮಾಯಕರ ಮೇಲೆ ಸೇನೆ ನಡೆಸಿರುವ ಭೀಕರ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 100 ಮಂದಿ ಮೃತಪಟ್ಟಿರುವ ವಿಚಾರ ಜಗತ್ತನ್ನೇ ನಡುಗಿಸಿದೆ. ಮ್ಯಾನ್ಮಾರ್ (Myanmar) ಸೇನಾ ಸರ್ಕಾರ ಜುಂಟಾ ನಡೆಸಿರುವ ದಾಳಿ ಇದಾಗಿದ್ದು, ಅಮೆರಿಕ (America) ಮತ್ತು ವಿಶ್ವಸಂಸ್ಥೆ ಎಚ್ಚರಿಕೆ ರವಾನಿಸಿವೆ.
ಅಂದಹಾಗೆ ಮ್ಯಾನ್ಮಾರ್‌ನ ಕನ್ಬಾಲು ಪಟ್ಟಣದ ಸಗಿಯಾಂಗ್ ಪ್ರದೇಶದ ಪಜಿಗಿ ಎಂಬ ಹಳ್ಳಿಯ ಹೊರಭಾಗದಲ್ಲಿ ಈ ದಾಳಿ ನಡೆದಿದೆ. ಗ್ರಾಮದ ಹೊರಗೆ ದೇಶದ ಸೇನಾಡಳಿತ ವಿರೋಧಿ ಚಳವಳಿ ಭಾಗವಾಗಿ ಕಚೇರಿಯೊಂದರ ಉದ್ಘಾಟನೆ ಆಯೋಜಿಸಲಾಗಿತ್ತು ಎಂದು ಸೇನೆ ಆರೋಪಿಸಿದೆ. ಈ ಕಾರ್ಯಕ್ರಮದಲ್ಲಿ 150 ಜನರು ಭಾಗವಹಿಸಿದ್ದರು. ಈ ವಿಷಯ ತಿಳಿದು ವಾಯು ದಾಳಿ ನಡೆಸಿರುವ ಮ್ಯಾನ್ಮಾರ್ ಸೇನೆ, 150 ಜನರಿದ್ದ ಗುಂಪಿನ ಮೇಲೆ ಬಾಂಬ್‌ಗಳನ್ನ ಎಸೆದಿದೆ. ಅದೆಷ್ಟೋ ಜನರ ದೇಹಗಳು ಛಿದ್ರವಾಗಿ ಹೋದರೆ, ಮಿಕ್ಕವರು ನರಳಿ ನರಳಿ ಪ್ರಾಣಬಿಟ್ಟಿದ್ದಾರೆ.

20-30 ಮಕ್ಕಳ ದೇಹ ಛಿದ್ರ
ಮ್ಯಾನ್ಮಾರ್ ಸೇನೆ ನಡೆಸಿರುವ ಈ ದಾಳಿ ಅದೆಷ್ಟು ಭೀಕರವಾಗಿತ್ತು ಎಂದರೆ, ಘಟನೆ ನಡೆದ ಸ್ಥಳದಲ್ಲಿದ್ದ 20ರಿಂದ 30 ಮಕ್ಕಳ ದೇಹ ಕೂಡ ಛಿದ್ರವಾಗಿ ಹೋಗಿದೆ. ಇದೇ ಜಾಗದಲ್ಲಿ ಜನ ಗುಂಪು ಸೇರಲಿದ್ದಾರೆಂಬ ಪಕ್ಕಾ ಮಾಹಿತಿ ಹಿನ್ನೆಲೆ ಅಲ್ಲಿಗೆ ಬಂದ ಮ್ಯಾನ್ಮಾರ್ ಸೇನೆಯ ಯುದ್ಧ ವಿಮಾನವೊಂದು, ನೇರವಾಗಿ ಜನರಿದ್ದ ಗುಂಪಿನ ಮೇಲೆ ಹತ್ತಾರು ಬಾಂಬ್ ಎಸೆದಿದೆ. ಅಲ್ಲಿದ 150ಕ್ಕೂ ಹೆಚ್ಚು ಜನರಲ್ಲಿ 100 ಮಂದಿಗೆ ಏನು ನಡೆಯುತ್ತಿದೆ ಎಂಬುದು ತಿಳಿಯುವ ಮೊದಲೇ ನರಳಾಡಿ ಜೀವ ಬಿಟ್ಟಿದ್ದಾರೆ. ಮಿಕ್ಕವರು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ.
ಶವಗಳ ಮೇಲೂ ಗುಂಡಿನ ದಾಳಿ?
ಇಷ್ಟೇ ಅಲ್ಲ ಯುದ್ಧ ವಿಮಾನದ ಮೂಲಕ ಬಾಂಬ್ ದಾಳಿ ನಡೆಸಿ ಹೋದ ಕೆಲವೇ ಸಮಯದಲ್ಲಿ ಹೆಲಿಕಾಪ್ಟರ್‌ನಲ್ಲಿ ಅಲ್ಲಿಗೆ ಬಂದ ಮ್ಯಾನ್ಮಾರ್ ಸೈನಿಕರು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವಗಳ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಈ ಮೂಲಕ ಮ್ಯಾನ್ಮಾರ್ ಸೇನೆಯ ಈ ರಾಕ್ಷಸ ಕೃತ್ಯದ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಮಕ್ಕಳು ಮತ್ತು ಮಹಿಳೆಯರನ್ನು ಅಮಾನವೀಯವಾಗಿ ಹತ್ಯೆ ಮಾಡುವ ಅಗತ್ಯತೆ ಏನಿತ್ತು? ಎಂದು ಜಗತ್ತೇ ಪ್ರಶ್ನಿಸುತ್ತಿದೆ.
ಭೀಕರ ದಾಳಿ ಒಪ್ಪಿಕೊಂಡ ಸೇನೆ
ಮ್ಯಾನ್ಮಾರ್ ಸೇನಾ ಸರ್ಕಾರ ಅದೆಷ್ಟು ಭೀಕರತೆ ತಂದೊಡ್ಡಿದೆ ಎಂದರೆ, ಈಗ ಘಟನೆ ನಡೆದಿರುವ ಪ್ರದೇಶಕ್ಕೆ ಮಾಧ್ಯಮಗಳ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬುದು ನಿಖರವಾಗಿ ಗೊತ್ತಾಗುತ್ತಿಲ್ಲ. ಅಲ್ಲದೆ ಈ ದಾಳಿ ಬಗ್ಗೆ ಮ್ಯಾನ್ಯಾರ್ ಜುಂಟಾ ಮಾಹಿತಿ ನೀಡಿದ್ದು, ನಾವೇ ಆ ಸ್ಥಳದ ಮೇಲೆ ದಾಳಿ ನಡೆಸಿದ್ದು ಎಂದು ಒಪ್ಪಿಕೊಂಡಿದೆ. ಅಲ್ಲದೆ ನಾವು ದಾಳಿ ನಡೆಸಿದ್ದು ಬಂಡುಕೋರರ ವಿರುದ್ಧ ಎನ್ನುವ ಮೂಲಕ ತನ್ನ ಭೀಕರ ಕೃತ್ಯವನ್ನು ಮ್ಯಾನ್ಮಾರ್ ಸೇನಾ ಸರ್ಕಾರ ಸಮರ್ಥಿಸಿಕೊಂಡಿದೆ.

ಮ್ಯಾನ್ಮಾರ್ ಸೇನಾ ಸರ್ಕಾರ ತಾನು ಕೊಂದಿರುವುದು ಬಂಡುಕೋರರನ್ನು ಎಂದು ಹೇಳಿಕೊಂಡಿದ್ದರೂ, ಅಲ್ಲಿ ಸಿಕ್ಕ ಅದೆಷ್ಟೋ ಹೆಣಗಳ ಮೇಲೆ ಸಾಮಾನ್ಯ ಜನರು ತೊಡುವ ಬಟ್ಟೆಗಳೇ ಕಂಡುಬಂದಿವೆ. ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ವಿಶ್ವಸಂಸ್ಥೆ ಕೂಡ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅತ್ತ ಅಮೆರಿಕ ಕೂಡ ಈ ಘಟನೆಯನ್ನು ಖಂಡಿಸಿದೆ. ಆದರೆ ಈಗಲಾದರೂ ಮ್ಯಾನ್ಮಾರ್ ಸೇನೆ ಇಂತಹ ಭೀಕರ ಕೃತ್ಯಗಳನ್ನ ನಿಲ್ಲಿಸುತ್ತಾ, ಇಲ್ಲ ಮತ್ತಷ್ಟು ಹೆಣಗಳನ್ನ ಬೀಳಿಸುತ್ತಾ ಕಾದು ನೋಡಬೇಕಿದೆ.












Click it and Unblock the Notifications