ಜೊಮ್ಯಾಟೊ ಡೆಲಿವರಿ ಬಾಯ್ ದೇಶದ ಟಾಪ್ ಬ್ಯುಸಿನೆಸ್ ಸ್ಕೂಲ್ ವಿದ್ಯಾರ್ಥಿ: ಇಲ್ಲಿದೆ ಗಿರೀಶ್ ಶರ್ಮಾ ಯಶೋಗಾಥೆ
ಕನಸು ಕಾಣಲು ಯಾವುದೇ ಮಿತಿಗಳಿಲ್ಲ, ಆದರೆ ಆ ಕನಸನ್ನು ನನಸಾಗಿಸಲು ಬೇಕಾಗಿರುವುದು ಕಠಿಣ ಪರಿಶ್ರಮ, ಅಪಾರ ತಾಳ್ಮೆ ಮತ್ತು ಅಚಲವಾದ ವಿಶ್ವಾಸ. ಬೀದಿ ಬೀದಿ ಸುತ್ತಿ ಗ್ರಾಹಕರಿಗೆ ಆಹಾರ ವಿತರಿಸುವ ಜೊಮ್ಯಾಟೊ ಡೆಲಿವರಿ ಬಾಯ್ ಒಬ್ಬರು ಇಂದು ದೇಶದ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ ಎಂದರೆ ನೀವು ನಂಬುತ್ತೀರಾ? ಹೌದು, ಇದು ಯಾವುದೇ ಸಿನಿಮಾ ಕಥೆಯಲ್ಲ, ಬದಲಿಗೆ ಗಿರೀಶ್ ಶರ್ಮಾ ಎಂಬ ಯುವಕನ ನಿಜವಾದ ಸಾಧನೆಯ ಕಥೆ.
ಕೆಲವು ದಿನಗಳ ಹಿಂದಷ್ಟೇ ಜೊಮ್ಯಾಟೊ ಡೆಲಿವರಿ ಬಾಯ್ ಆಗಿ ಹಗಲಿರುಳು ಕೆಲಸ ಮಾಡುತ್ತಿದ್ದ ಗಿರೀಶ್, ಇಂದು ಕಠಿಣವಾದ ಕ್ಯಾಟ್ (CAT) ಪರೀಕ್ಷೆಯನ್ನು ಬರೆದು ಉತ್ತಮ ಅಂಕ ಗಳಿಸಿ ದೆಹಲಿ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಗೆ ಸೇರ್ಪಡೆಗೊಂಡಿದ್ದಾರೆ.

ತಮ್ಮ ಈ ಸ್ಫೂರ್ತಿದಾಯಕ ಹಾಗೂ ರೋಚಕ ಪ್ರಯಾಣವನ್ನು ಗಿರೀಶ್ ಶರ್ಮಾ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. "ಜೊಮ್ಯಾಟೊ ಡೆಲಿವರಿ ರೈಡರ್ನಿಂದ ಎಫ್ಎಂಎಸ್ ದೆಹಲಿಗೆ" ಎಂಬ ಶೀರ್ಷಿಕೆಯಡಿ ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. "ಹೌದು, ಇದು ನನ್ನ ಕಥೆ. ಸರಿಸುಮಾರು ಆರು ವರ್ಷಗಳ ಹಿಂದೆ, ದೈನಂದಿನ ಬದುಕು ಕಟ್ಟಿಕೊಳ್ಳುವ ಹಾಗೂ ಹೊಟ್ಟೆಪಾಡಿನ ಕಠಿಣ ಹೋರಾಟದಲ್ಲಿ ನಾನು ನನ್ನೆಲ್ಲಾ ಮಹತ್ವಾಕಾಂಕ್ಷೆಗಳನ್ನು ಕಳೆದುಕೊಂಡಿದ್ದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಅಪ್ಪಳಿಸುವ ಮೊದಲು, ನಾನು ಜೊಮ್ಯಾಟೊ ಡೆಲಿವರಿ ರೈಡರ್ ಆಗಿ ಕೆಲಸ ಮಾಡುತ್ತಿದ್ದೆ, ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದೆ ಮತ್ತು ಜೀವನ ನಿರ್ವಹಣೆಗಾಗಿ ಇತರ ಕೆಲವು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆ" ಎಂದು ಅವರು ಬರೆದುಕೊಂಡಿದ್ದಾರೆ.
ಆದರೆ ಕೋವಿಡ್-19 ಲಾಕ್ಡೌನ್ ಸಮಯವು ಅವರಿಗೆ ತಮ್ಮ ಜೀವನದ ಗುರಿಯನ್ನು ಮರುಪರಿಶೀಲಿಸಲು ಹಾಗೂ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸಲು ಒಂದು ಅವಕಾಶವನ್ನು ನೀಡಿತು. ಈ ಡೆಲಿವರಿ ಕೆಲಸವನ್ನು ಮುಂದುವರಿಸಲು ತಮಗೆ ಇಷ್ಟವಿಲ್ಲ ಎಂಬುದನ್ನು ಅರಿತ ಅವರು, ವ್ಯವಹಾರ (ಬ್ಯುಸಿನೆಸ್) ಮತ್ತು ಆಡಳಿತ ನಿರ್ವಹಣೆ ಕ್ಷೇತ್ರದಲ್ಲಿ ತಮ್ಮ ಆಸಕ್ತಿಯನ್ನು ಮರಳಿ ಪಡೆದರು. ಯಾವುದೇ ಸಾಮಾನ್ಯ ಕಾಲೇಜಿನಲ್ಲಿ ಅಲ್ಲ, ಬದಲಾಗಿ ದೇಶದ ಟಾಪ್ ಬಿ-ಸ್ಕೂಲ್ನಿಂದ ಮಾತ್ರ ಎಂಬಿಎ ಮಾಡುವ ಮೂಲಕ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ದೃಢ ನಿರ್ಧಾರ ಮಾಡಿದರು.
ಆರಂಭದಲ್ಲಿ ಅವರಿಗೆ ಕ್ಯಾಟ್ ಪರೀಕ್ಷೆ ಮತ್ತು ಸಂದರ್ಶನಗಳ ಪ್ರಕ್ರಿಯೆಗಳ ಬಗ್ಗೆ ಯಾವುದೇ ಸರಿಯಾದ ತಿಳುವಳಿಕೆ ಇರಲಿಲ್ಲ. ಎಲ್ಲವೂ ಹೊಸದಾಗಿತ್ತು. ಕೆಲವು ವಿಫಲ ಪ್ರಯತ್ನಗಳ ನಂತರ, ಛಲ ಬಿಡದೆ ಓದಿ CAT'23 ರಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದರು. ತಾವು ಅರ್ಜಿ ಸಲ್ಲಿಸಿದ್ದ ಬಹುತೇಕ ಎಲ್ಲಾ ಕಾಲೇಜುಗಳಿಂದ ಸಂದರ್ಶನಕ್ಕೆ ಕರೆಗಳು ಬಂದವು. ಆದರೆ, ಒಂದೊಂದಾಗಿ ಎಲ್ಲಾ ಕಾಲೇಜುಗಳು ಅವರನ್ನು ವೇಯ್ಟಿಂಗ್ ಲಿಸ್ಟ್ನಲ್ಲಿ ಇಟ್ಟವು ಅಥವಾ ಕೊನೆ ಕ್ಷಣದಲ್ಲಿ ತಿರಸ್ಕರಿಸಿದವು. ಕೊನೆಗೆ ಕೇವಲ ಒಂದು ಕಾಲೇಜಿನಲ್ಲಿ ಪ್ರವೇಶಕ್ಕೆ ಅವಕಾಶ ಸಿಕ್ಕರೂ, ಅವರಿಗೆ ಅದರಿಂದ ತೃಪ್ತಿಯಾಗಲಿಲ್ಲ. ಹೀಗಾಗಿ ಮತ್ತೆ ತಮ್ಮ ಪ್ರಯತ್ನ ಮುಂದುವರಿಸಿದ ಗಿರೀಶ್, ಇದೀಗ ಈ ವರ್ಷ ಪ್ರತಿಷ್ಠಿತ ಎಫ್ಎಂಎಸ್-ದೆಹಲಿ ಸೇರಲು ಸಜ್ಜಾಗಿದ್ದಾರೆ.
ಗಿರೀಶ್ ಶರ್ಮಾ ಅವರ ಈ ಯಶೋಗಾಥೆಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕಷ್ಟಪಟ್ಟು ಓದುವ ಸಾವಿರಾರು ವಿದ್ಯಾರ್ಥಿಗಳಿಗೆ ಹಾಗೂ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ. ಯಶಸ್ಸಿಗೆ ಬಡತನ ಅಥವಾ ನಾವು ಮಾಡುವ ಕೆಲಸ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಗಿರೀಶ್ ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಪೋಸ್ಟ್ಗೆ ಬಳಕೆದಾರರೊಬ್ಬರು "ನಿಮ್ಮ ಪರಿಶ್ರಮ ನಿಜಕ್ಕೂ ಅದ್ಭುತ! ಇಂದಿನ ಯುವಜನತೆಗೆ ನೀವು ದೊಡ್ಡ ಸ್ಫೂರ್ತಿ. ಎಫ್ಎಂಎಸ್ನಲ್ಲಿ ನಿಮ್ಮ ಭವಿಷ್ಯ ಉಜ್ವಲವಾಗಲಿ ಬ್ರದರ್." ಎಂದಿದ್ದಾರೆ. " ಬಾಲಿವುಡ್ ಸಿನಿಮಾ ಸ್ಟೋರಿಗಿಂತಲೂ ರೋಚಕವಾಗಿದೆ ನಿಮ್ಮ ಈ ಪ್ರಯಾಣ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಕಷ್ಟಪಟ್ಟು ಓದುವವರಿಗೆ ಎಂತಹ ಪರಿಸ್ಥಿತಿಯಲ್ಲೂ ಯಶಸ್ಸು ಖಂಡಿತ ಸಿಗುತ್ತದೆ ಎಂಬುದಕ್ಕೆ ನೀವೇ ಜೀವಂತ ಉದಾಹರಣೆ. ಜೊಮ್ಯಾಟೊ ರೈಡರ್ನಿಂದ ಟಾಪ್ ಎಂಬಿಎ ಕಾಲೇಜಿಗೆ.. ವಾವ್! ಕೀಪ್ ಇಟ್ ಅಪ್." ಎಂದು ಮತ್ತೊಬ್ಬ ಬಳಕೆದಾರರು ಶುಭ ಹಾರೈಸಿದ್ದಾರೆ.












Click it and Unblock the Notifications