ಬೇರೆಯವರ ಕನಸಿಗಾಗಿ ದಶಕಗಳ ಕಾಲ ದುಡಿಯುವ ಜನ, ತಮ್ಮದೇ ಐಡಿಯಾಗೆ ಸಮಯ ಕೊಡುವುದಿಲ್ಲ: ಝೊಮ್ಯಾಟೊ CEO ದೀಪಿಂದರ್
ನವದೆಹಲಿ: ಸ್ಟಾರ್ಟ್‌ಅಪ್ ಆರಂಭಿಸುವುದು ಎಂದರೆ ಅದು ಸುಲಭದ ಮಾತಲ್ಲ. ಅದಕ್ಕೆ ಅಪಾರ ತಾಳ್ಮೆ, ಸತತ ಪ್ರಯತ್ನ ಹಾಗೂ ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಬೇಕು. ಆದರೆ, ಬಹುತೇಕರು ಬೇರೆಯವರ ಕಂಪನಿಗಳಲ್ಲಿ ದಶಕಗಳ ಕಾಲ ದುಡಿಯಲು ಸಿದ್ಧರಿರುತ್ತಾರೆ, ಆದರೆ ತಮ್ಮದೇ ಆದ ಐಡಿಯಾಗಳ ಮೇಲೆ ಒಂದೆರಡು ವರ್ಷಗಳ ಕಾಲ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಾರೆ. ಈ ಬಗ್ಗೆ ಝೊಮ್ಯಾಟೊ ಸಹ-ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಅವರು ಯುವ ಉದ್ಯಮಿಗಳಿಗೆ ಕಿವಿಮಾತು ಹೇಳಿದ್ದಾರೆ.
ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉದ್ಯಮಶೀಲತೆಯತ್ತ ಒಲವು ಹೊಂದಿರುವ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ.

ಯುವ ಉದ್ಯಮಿಗಳಿಗೆ ಝೊಮ್ಯಾಟೊ ಸಿಇಒ ಸಲಹೆ
ಮಾಸಿಕ ಸಂಬಳ ಬರುವ ಉದ್ಯೋಗಕ್ಕೂ, ಸ್ವಂತ ಉದ್ಯಮ ಕಟ್ಟುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಉದ್ಯೋಗದಲ್ಲಿ ತಿಂಗಳಾಂತ್ಯಕ್ಕೆ ಸರಿಯಾಗಿ ಸ್ಯಾಲರಿ ನಮ್ಮ ಕೈಸೇರುತ್ತದೆ. ಆದರೆ ಸ್ಟಾರ್ಟ್‌ಅಪ್ ಜಗತ್ತಿನಲ್ಲಿ ಹಾಗಲ್ಲ. ಗ್ರಾಹಕರನ್ನ ಹುಡುಕುವುದು, ಮಾರುಕಟ್ಟೆಗೆ ತಕ್ಕಂತೆ ಬ್ಯುಸಿನೆಸ್ ಮಾಡೆಲ್ ರೂಪಿಸುವುದು ಮತ್ತು ಲಾಭದಾಯಕ ಹಂತಕ್ಕೆ ತಲುಪುವುದು ಬಹಳ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ.
ದೀಪಿಂದರ್ ಗೋಯಲ್ ಅವರು ಹೇಳುವಂತೆ, "ಜನರು ಬೇರೆಯವರ ಕನಸನ್ನ ನನಸು ಮಾಡಲು ತಮ್ಮ ಜೀವನವನ್ನೇ ಸವೆಸುತ್ತಾರೆ. ಆದರೆ ತಮ್ಮದೇ ಆದ ಒಂದು ಐಡಿಯಾ ಅಥವಾ ಕನಸನ್ನ ನನಸು ಮಾಡಲು ಕೆಲವು ವರ್ಷಗಳ ಕಾಲ ಕಾಯಲು ಸಿದ್ಧರಿರುವುದಿಲ್ಲ." ಸ್ವಂತ ಉದ್ಯಮ ಕಟ್ಟುವಾಗ ಎದುರಾಗುವ ಅನಿಶ್ಚಿತತೆ, ಆರ್ಥಿಕ ತೊಂದರೆಗಳು ಮತ್ತು ಸವಾಲುಗಳನ್ನ ಎದುರಿಸಲು ಪ್ರತಿಯೊಬ್ಬ ಉದ್ಯಮಿಯೂ ಮಾನಸಿಕವಾಗಿ ಸಿದ್ಧನಿರಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಫುಡೀಬೇ ಇಂದ ಝೊಮ್ಯಾಟೊವರೆಗಿನ ಯಶಸ್ಸಿನ ಪಯಣ
ಯಾವುದೇ ಕಂಪನಿ ರಾತ್ರೋರಾತ್ರಿ ಯಶಸ್ಸು ಗಳಿಸುವುದಿಲ್ಲ. ಅದಕ್ಕೆ ಝೊಮ್ಯಾಟೊ ಕಂಪನಿಯೇ ದೊಡ್ಡ ಉದಾಹರಣೆ. 2008ರಲ್ಲಿ 'ಫುಡೀಬೇ' ಎಂಬ ಹೆಸರಿನೊಂದಿಗೆ ಆರಂಭವಾದ ಈ ಸಣ್ಣ ಸ್ಟಾರ್ಟ್‌ಅಪ್, ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಝೊಮ್ಯಾಟೊ ಆಗಿ ಬೆಳೆಯಲು ಹಲವು ವರ್ಷಗಳೇ ಬೇಕಾಯಿತು. ವ್ಯವಹಾರವು ಕಾಲಕ್ರಮೇಣ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನ ಈ ಪಯಣ ಸ್ಪಷ್ಟವಾಗಿ ತೋರಿಸುತ್ತದೆ.
ಆರಂಭಿಕ ದಿನಗಳಲ್ಲಿ ತಾಳ್ಮೆ ಕಳೆದುಕೊಳ್ಳದೆ, ಮಾರುಕಟ್ಟೆಯ ಅಗತ್ಯಗಳನ್ನ ಅರಿತು ಹೆಜ್ಜೆ ಇಟ್ಟಿದ್ದೇ ಝೊಮ್ಯಾಟೊ ಯಶಸ್ಸಿಗೆ ಕಾರಣವಾಯಿತು. ಯುವ ಸಂಸ್ಥಾಪಕರು ಕೇವಲ ಐಡಿಯಾ ಇಟ್ಟುಕೊಂಡು ಕುಳಿತರೆ ಸಾಲದು, ಅದನ್ನ ಕಾರ್ಯರೂಪಕ್ಕೆ ತರುವಾಗ ಬರುವ ಸವಾಲುಗಳನ್ನ ಎದುರಿಸಿ ನಿಲ್ಲುವ ಛಲ ಬೆಳೆಸಿಕೊಳ್ಳಬೇಕು ಎನ್ನುವುದು ಗೋಯಲ್ ಅವರ ಅನುಭವದ ಮಾತು.
ದೀರ್ಘಕಾಲೀನ ಬೆಳವಣಿಗೆಗೆ ಬೇಕು ಪಕ್ಕಾ ಪ್ಲಾನ್
ಯುವ ಉದ್ಯಮಿಗಳು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾಗುವ ಕನಸು ಕಾಣುವ ಬದಲು, ಕಂಪನಿಯ ದೀರ್ಘಕಾಲೀನ ಬೆಳವಣಿಗೆಯ ಕಡೆಗೆ ಗಮನಹರಿಸಬೇಕು ಎಂದು ದೀಪಿಂದರ್ ಗೋಯಲ್ ಸಲಹೆ ನೀಡಿದ್ದಾರೆ. ವ್ಯವಹಾರದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಅನಿವಾರ್ಯ, ಆದರೆ ಅದು ಕ್ಯಾಲ್ಕುಲೇಟಿವ್ ರಿಸ್ಕ್ ಆಗಿರಬೇಕು.
ಹಣಕಾಸಿನ ನಿರ್ವಹಣೆಯನ್ನ ಜಾಣ್ಮೆಯಿಂದ ಮಾಡಬೇಕು. ತಪ್ಪುಗಳು ಮತ್ತು ಹಿನ್ನಡೆಗಳು ಸಹಜ, ಆದರೆ ಅವುಗಳಿಂದ ಪಾಠ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ತಾಳ್ಮೆ ಎಷ್ಟು ಮುಖ್ಯವೋ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಗುಣ ಮತ್ತು ಬುದ್ಧಿವಂತಿಕೆಯ ನಿರ್ಧಾರಗಳು ಕೂಡ ಅಷ್ಟೇ ಮುಖ್ಯ. ತಮ್ಮದೇ ಐಡಿಯಾಗಾಗಿ ಕೆಲವು ವರ್ಷಗಳನ್ನ ಮುಡಿಪಾಗಿಡುವ ಧೈರ್ಯ ಮಾಡಿದರೆ, ಭವಿಷ್ಯದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅವರು ಯುವಜನತೆಗೆ ಪ್ರೇರಣೆ ನೀಡಿದ್ದಾರೆ.


Click it and Unblock the Notifications
