Zomato, Swiggy: ದೀಪಾವಳಿ ಸಮಯದಲ್ಲಿ ಜನರಿಗೆ ಶುಲ್ಕ ಹೆಚ್ಚಳದ ಬರೆ
ನವದೆಹಲಿ, ಅಕ್ಟೋಬರ್ 24: ದೀಪಾವಳಿ ಹಬ್ಬದ ಸಮಯದಲ್ಲಿ ಭಾರತದ ಆಹಾರ ವಿತರಣಾ ಸಂಸ್ಥೆಗಳಾದ ಝೊಮ್ಯಾಟೊ ಮತ್ತು ಸ್ವಿಗ್ಗಿ ಗ್ರಾಹಕರಿಗೆ ಶುಲ್ಕದ ಬರೆ ಹಾಕಿದೆ. ಪ್ಲಾಟ್ ಫಾರ್ಮ್ ಶುಲ್ಕವನ್ನು ಏರಿಕೆ ಮಾಡಲಾಗಿದೆ. 2023ರಲ್ಲಿ ಎರಡೂ ಸಂಸ್ಥೆಗಳು ಈ ಮಾದರಿ ಶುಲ್ಕವನ್ನು ಜಾರಿಗೆ ತಂದಿದ್ದವು. ಆದರೆ ಈಗ ಹಬ್ಬ ಎದುರಾದ ಸಂದರ್ಭದಲ್ಲಿಯೇ ಶುಲ್ಕವನ್ನು ಏರಿಕೆ ಮಾಡಲಾಗಿದೆ.
ಝೊಮ್ಯಾಟೊ ಮತ್ತು ಸ್ವಿಗ್ಗಿ ಪ್ಲಾಟ್ ಫಾರ್ಮ್ ಶುಲ್ಕವನ್ನು 10 ರೂ. ಗಳಿಗೆ ಏರಿಕೆ ಮಾಡಿವೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಗ್ರಾಹಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಶುಲ್ಕವನ್ನು ಹೆಚ್ಚಿಸಲಾಗಿದೆ. ಈ ಮೊದಲು ಝೊಮ್ಯಾಟೊ 6, ಸ್ವಿಗ್ಗಿ 7 ರೂ. ಪ್ಲಾಟ್ ಫಾರ್ಮ್ ಶುಲ್ಕವನ್ನು ವಿಧಿಸುತ್ತಿತ್ತು.

ಪ್ಲಾಟ್ ಫಾರ್ಮ್ ಶುಲ್ಕವನ್ನು ಸ್ವಲ್ಪ ಮಟ್ಟಿಗೆ ಏರಿಕೆ ಮಾಡಲಾಗಿದೆ. ಈ ಶುಲ್ಕಗಳು ನಮ್ಮ ಬಿಲ್‌ಗಳನ್ನು ಪಾವತಿ ಮಾಡಲು ಅನುಕೂಲವಾಗಿದೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಾಯಕವಾಗಲಿದೆ ಎಂದು ಝೊಮ್ಯಾಟೊ ಹೇಳಿದೆ.
ಪ್ಲಾಟ್ ಫಾರ್ಮ್ ಶುಲ್ಕ: 2023ರಲ್ಲಿ ಪ್ಲಾಟ್ ಫಾರ್ಮ್ ಶುಲ್ಕವನ್ನು ಝೊಮ್ಯಾಟೊ ಮತ್ತು ಸ್ವಿಗ್ಗಿ ಪರಿಚಯಿಸಿತ್ತು. ಸ್ವಿಗ್ಗಿ 7 ರೂ. ಮತ್ತು ಝೊಮ್ಯಾಟೊ 2 ರೂ. ಶುಲ್ಕವನ್ನು ವಿಧಿಸುತ್ತಿತ್ತು. ಬಳಿಕ ಝೊಮ್ಯಾಟೊ ಆಗಾಗ ಶುಲ್ಕವನ್ನು ಏರಿಕೆ ಮಾಡುತ್ತಲೇ ಬಂದಿತ್ತು.
ಪ್ಲಾಟ್ ಫಾರ್ಮ್ ಶುಲ್ಕವನ್ನು ಏರಿಕೆ ಮಾಡಿದ ಝೊಮ್ಯಾಟೊ ಮತ್ತು ಸ್ವಿಗ್ಗಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಝೊಮ್ಯಾಟೊ ಮತ್ತು ಸ್ವಿಗ್ಗಿ ವಿರುದ್ಧ ಗ್ರಾಹಕರು ತಿರುಗಿ ಬಿದ್ದಿದ್ದಾರೆ. 'ಜನರು ಮನೆಯಲ್ಲಿಯೇ ತಿನ್ನುವ ಹಳೆಯ ದಿನಕ್ಕೆ ವಾಪಸ್ ಹೋಗಬೇಕು' ಎಂದು ಹೇಳುತ್ತಿದ್ದಾರೆ. 'ನೋಡಿ ಹಬ್ಬದ ಸಮಯದಲ್ಲಿ ಹೇಗೆ ದರ ಏರಿಕೆ ಮಾಡುವ ಮೂಲಕ ಜನರನ್ನು ಸುಲಿಗೆ ಮಾಡುತ್ತಿದ್ದಾರೆ' ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಆಹಾರದ ನಿಖರವಾದ ಬೆಲೆಗಿಂತ ಇತರ ಶುಲ್ಕಗಳೇ ಅಧಿಕವಾಗಿವೆ' ಎಂದು ನೆಟ್ಟಿಗರು ಕಮೆಂಟ್ ಹಾಕುತ್ತಿದ್ದಾರೆ.
'ಇವೆಲ್ಲ ಮಾರುಕಟ್ಟೆ ತಂತ್ರಗಳು ಮೊದಲು ಎಲ್ಲವೂ ಫ್ರೀ, ಜನರು ಅದನ್ನು ಉಪಯೋಗಿಸಲು ಆರಂಭಿಸಿದ ಬಳಿಕ ಎಲ್ಲವೂ ಫೀ' ಎಂದು ಜನರು ಟೀಕಿಸುತ್ತಿದ್ದಾರೆ. 'ಆಗ ಆಹಾರ ಸರಬರಾಜು ಉಚಿತವಾಗಿತ್ತು. ಈಗ ಜಿಎಸ್‌ಟಿ ಸೇವಾ ಶುಲ್ಕ ಪಾರ್ಕಿಂಗ್ ಫೀ ಪಾಟ್ ಫಾರ್ಮ್ ಫೀ ಎಂದು ಕತ್ತರಿ ಹಾಕಲಾಗುತ್ತಿದೆ' ಎಂದು ಜನರು ಹೇಳುತ್ತಿದ್ದಾರೆ.
ಕರ್ನಾಕದ ಕಾಂಗ್ರೆಸ್ ಸರ್ಕಾರ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳ ವ್ಯವಹಾರದ ಮೇಲೆ ಶೇ 1 ರಿಂದ 2ರಷ್ಟು ಶುಲ್ಕವನ್ನು ವಿಧಿಸಲು ತೀರ್ಮಾನಿಸಿದೆ. ಸ್ವಿಗ್ಗಿ, ಝೊಮ್ಯಾಟೋಗಳಂತಹ ಫುಡ್‍ಡೆಲಿವರಿ, ಇ-ಕಾಮರ್ಸ್ ಸಂಸ್ಥೆಗಳ ಅಪ್ಲಿಕೇಶನ್ ಬಳಕೆ ಮಾಡುವವರಿಗೆ ಶುಲ್ಕವನ್ನು ವಿಧಿಸಲು ಮುಂದಾಗಿದೆ. ಆದರೆ ಈ ಕುರಿತು ಮೊದಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಬೇಕಿದೆ.












Click it and Unblock the Notifications