Rahul Gandhi: ಇಡಿ ಭಾರತಕ್ಕೆ ಬೆಂಕಿ ಹಚ್ಚಲು ಕೇಂದ್ರ ಬಿಜೆಪಿ ಬಯಸುತ್ತಿದೆ: 'ರಾಗಾ' ವಾಗ್ದಾಳಿ
ನವದೆಹಲಿ, ಆಗಸ್ಟ್ 09: ಮಣಿಪುರದಲ್ಲಿ ಆರಂಭವಾದ ಜನಾಂಗೀಯ ಘರ್ಷಣೆ ಕುರಿತು ಲೋಕಸಭೆಯಲ್ಲಿ ಅವಿಶ್ವಾಸ ಮಂಡನೆಯ ಮೇಲಿನ ಚರ್ಚೆ ವೇಳೆ ಮಾತನಾಡಿದ ಕಾಂಗ್ರೆಸ್ ಅಗ್ರನಾಯಕ ರಾಹುಲ್ ಗಾಂಧಿಯವರು ನೀವು (ಬಿಜೆಪಿ)ಇಡಿ ರಾಷ್ಟ್ರಕ್ಕೆ ನೀವು ಬೆಂಕಿ ಹಚ್ಚುತ್ತಿದ್ದೀರಿ ಎಂದು ಮಣಿಪುರ ಮತ್ತು ಹರಿಯಾಣ ಹಿಂಸಾಚಾರ ಬಗ್ಗೆ ವಾಗ್ದಾಳಿ ನಡೆಸಿದರು.
ಬುಧವಾರ ಲೋಕಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ನಡೆಯಿತು. ಈ ವೇಳೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿ ಕಾರಿದರು.

ಮೊದಲು ಮಣಿಪುರ, ಈಗ ಹರಿಯಾಣದ ಮೂಲಕ ನೀವು ಇಡೀ ರಾಷ್ಟ್ರಕ್ಕೆ ಬೆಂಕಿ ಹಚ್ಚುತ್ತಿದ್ದೀರಿ, ದೇಶಾದ್ಯಂತ ಸೀಮೆಎಣ್ಣೆ ಎರೆಚಿದ್ದೀರಿ ಹೀಗಾಗಿಯೇ ಎರಡು ರಾಜ್ಯಗಳು ಹೊತ್ತಿ ಉರಿಯುತ್ತಿವೆ. ಮಣಿಪುರದಲ್ಲಿ ಬಿಜೆಪಿಯು ಭಾರತವನ್ನು ಕೊಲೆ ಮಾಡಿದೆ ಎಂದರು.
ಭಾರತದ ಧ್ವನಿ ಮಣಿಪುರದಲ್ಲಿ ಕೊಲೆಯಾಗಿದೆ
ಭಾರತದ ಧ್ವನಿಯನ್ನು ಹೃದಯವನ್ನು ಬಿಜೆಪಿಯು ಮಣಿಪುರದಲ್ಲಿ ಕೊಂದಿದೆ. ಭಾರತ ಮಾತೆಯನ್ನೇ ಕೊಲ್ಲಲಾಗಿದೆ. ನೀವು ದೇಶಭಕ್ತರಲ್ಲ. ಈ ಕಾರಣದಿಂದಲೇ ಅವರು ಮಣಿಪುರಕ್ಕೆ ಒಮ್ಮೆಯು ಭೇಟಿ ನೀಡಿಲ್ಲ. ನಾನು ಅಲ್ಲಿಗೆ ಬೇಟಿ ನೀಡಿದ್ದೇನೆ. ಮಗನ ಮೃತದೇಹ ಜೊತೆಗೆ ಇಡಿ ರಾತ್ರಿ ಕಳೆದ ತಾಯಿ ಜತೆ ಮಾತನಾಡಿದ್ದೇನೆ ಎಂದು ತಿಳಿಸಿದರು.
ಮಣಿಪುರವನ್ನು ಭಾರತವೆದಂದು ಪ್ರಧಾನಿ ಮೋದಿ ಪರಿಗಣಿಸದಂತೆ ಕಾಣುತ್ತಿಲ್ಲ. ಹೀಗಾಗಿಯೇ ಅಲ್ಲಿ ಬೆಂಕಿ ಬಿದ್ದರೂ ಸಹ ಮೌನವಾಗಿದ್ದಾರೆ. ಮಣಿಪುರವನ್ನು ಇಂತಹ ಘರ್ಷಣೆಗಳ ಮೂಲಕ ವಿಭಜಿಸಲಾಗಿದೆ. ಸೇನೆಯನ್ನು ಕರೆಸುವ ಮೂಲಕ ಮಣಿಪುರದಲ್ಲಿ ಹಿಂಸಾಚಾರವನ್ನು ಕೇಂದ್ರವು ತಡೆಯಬಹುದಿತ್ತು. ಆದರೆ ಅಂತಹ ಕೆಲಸಕ್ಕೆ ಬಿಜೆಪಿ ಮುಂದಾಗಲಿಲ್ಲ ಎಂದು ಅವರು ಆರೋಪಿಸಿದರು.

ದೇಶಾದ್ಯಂತ ಬಿಜೆಪಿ ಸೀಮೆಎಣ್ಣೆ ಎರಚಿದ್ದಕ್ಕೆ ಬೆಂಕಿ ಹತ್ತಿದೆ
ಬಿಜೆಪಿಯವರು ನೀವು ದೇಶದೆಲ್ಲಡೆ ಸೀಮೆಎಣ್ಣೆ ಎರಚಿದ್ದೀರಿ, ಮೊದಲು ಮಣಿಪುರಕ್ಕೆ ಬೆಂಕಿ ಹಚ್ಚಿದ್ದೀರಿ. ಇದೀಗ ಮತ್ತೊಂದು ರಾಜ್ಯವಾದ ಹರಿಯಾಣದಲ್ಲಿ ಅದೇ ಪ್ರಯತ್ನ ಮಾಡುತ್ತಿದ್ದೀರಿ. ಇತ್ತೀಚೆಗೆ ಗುರುಗ್ರಾಮ್ ಮತ್ತು ನುಹ್‌ನಲ್ಲಿ ಆರು ಜನರನ್ನು ಕೊಂದ ಕೋಮು ಘರ್ಷಣೆಯನ್ನು ಉಲ್ಲೇಖಿಸಿ ಅವರು ಕೇಂದ್ರ ನಡೆಯನ್ನು ಟೀಕಿಸಿದರು.
ರಾಹುಲ್ ಗಾಂಧಿಯವರು ಈ ಕುರಿತು ಮಾತನಾಡುತ್ತಿದ್ದಂತೆ ಲೋಕಸಭೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು.
ಕೆಲವು ಹಿರಿಯ ಸಚಿವರು ರಾಹುಲ್ ಗಾಂಧಿಯವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿಯವರು 'ಮೋದಿ ಉಪನಾಮ' ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳ ಹಿಂದೆ ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು. ಇತ್ತೀಚೆಗೆ ಸೂರತ್ ಹೈಕೋರ್ಟ್ ನೀಡಿದ್ದ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡುತ್ತಿದ್ದಂತೆ ರಾಹುಲ್ ಗಾಂಧಿಯವರಿಗೆ ಬಿಗ್ ರಿಲೀಪ್ ಸಿಕ್ಕಿತ್ತು.
ಇದಾದ ಬಳಿಕ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರ ಅನರ್ಹತೆ ಆದೇಶ ರದ್ದಿಗೆ ಆಗ್ರಹಿದ ಬೆನ್ನಲ್ಲೆ ಸೋಮವಾರ ಕೇಂದ್ರವು ಅವರ ಸಂಸದ ಸ್ಥಾನವನ್ನು ಪುನರ್ ಸ್ಥಾಪಿಸಿತು. ಅದಾದ ಬಳಿಕ ಸರ್ಕಾರಿ ಅಧಿಕೃತ ನಿವಾಸ (ಬಂಗಲೆ)ಕ್ಕೆ ರಾಹುಲ್ ಗಾಂಧಿ ಮಂಗಳವಾರ ಮರಳಿದರು. ಈ ಬೆಳವಣಿಗೆ ಬಳಿಕ ಲೋಕಸಭೆಯಲ್ಲಿ ತಮ್ಮ ಮೊದಲ ಭಾಷಣದಲ್ಲಿಯೇ ಅವರು ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications