2016ರ ಹಿನ್ನೋಟ : ದೇಶ ಕಂಡ ಪ್ರಮುಖ ಪ್ರತಿಭಟನೆಗಳು

Posted By:
Subscribe to Oneindia Kannada

ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಪ್ರತಿಭಟನೆ, ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಅಸಹಕಾರ ಚಳವಳಿ ಪ್ರಮುಖ ಅಸ್ತ್ರವಾಗಿ ಹಿಂದಿನಿಂದ ಬೆಳೆದು ಬಂದಿದೆ.

ಭ್ರಷ್ಟಾಚಾರ ನಿರ್ಮೂಲನೆ, ಪ್ರಾದೇಶಿಕ ಅಸಮತೋಲನೆ, ಮೀಸಲಾತಿ, ದಲಿತರ ಮೇಲೆ ದೌರ್ಜನ್ಯ, ರೈತರ ಬವಣೆ, ಜಲವಿವಾದ ಸೇರಿದಂತೆ ಅನೇಕ ವಿಷಯಗಳು ದೇಶದಲ್ಲಿ ಕಳೆದ ವರ್ಷ ಬಹುಚರ್ಚಿತವಾಗಿದ್ದು, ಪ್ರತಿಭಟನೆಯ ಹಾದಿ ಹಿಡಿದು ಕುಂತಿವೆ.

ಇದೆಲ್ಲರ ಜತೆಗೆ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಮೂಲಕ ಪ್ರತಿಭಟನೆ ನಡೆಸಿರುವುದನ್ನು ಕಾಣಲಾಗಿದೆ. ಕೆಲವೊಮ್ಮೆ ಅನೇಕ ಪ್ರತಿಭಟನೆಗಳು ಏಕತಾನತೆಯಿಂದ ಬಳಲಿದರೆ, ಮತ್ತೆ ಕೆಲವು ಬೇರೆ ಹಾದಿ ಹಿಡಿದು ಪುಢಾರಿಗಳಿಗೆ ನೆರವಾಗಿದೆ. ಒಟ್ಟಾರೆ 2016ರಲ್ಲಿ ದೇಶದಲ್ಲಿ ಕಂಡು ಬಂದ ಪ್ರಮುಖ ಪ್ರತಿಭಟನೆಗಳ ಬಗ್ಗೆ ಒಂದು ಹಿನ್ನೋಟ ಇಲ್ಲಿದೆ...

ರೋಹಿತ್ ವೆಮುಲಾ ಆತ್ಮಹತ್ಯೆ

ರೋಹಿತ್ ವೆಮುಲಾ ಆತ್ಮಹತ್ಯೆ

ಹೈದರಾಬಾದಿನ ವಿಶ್ವವಿದ್ಯಾಲಯದ ಕ್ಯಾಂಪಸಿನಲ್ಲಿ ಸ್ನಾತಕೋತ್ತರ ಪದವೀಧರ ರೋಹಿತ್ ವೆಮುಲಾ ಅವರು ಆತ್ಮಹತ್ಯೆಗೆ ಶರಣಾಗಿದ್ದು ಭಾರಿ ಸುದ್ದಿಯಾಯಿತು. ಜನವರಿ 17ರಂದು ನಡೆದ ಈ ಘಟನೆಗೆ ಜಾತಿ ಬಣ್ಣ ಸಿಕ್ಕಿದ್ದಲ್ಲದೆ, ವಿದ್ಯಾರ್ಥಿಗಳ ಪ್ರತಿಭಟನೆಗೆ ನಾಂದಿ ಹಾಡಿತು. ಬಿಜೆಪಿ ಸರ್ಕಾರದ ನಿದ್ದೆಗೆಡಿಸಿದ ಈ ಘಟನೆ ದಲಿತರ ಹಕ್ಕು, ರಾಜಕೀಯ ದೊಂಬರಾಟಗಳ ನಡುವೆ ಸತ್ಯಾಸತ್ಯತೆಯನ್ನು ಮರೆಮಾಚುವಂತೆ ಮಾಡಿತು. ಇನ್ನೂ ಕೂಡಾ ವೆಮುಲಾ ಆತ್ಮಹತ್ಯೆ ಕುರಿತ ಸುದ್ದಿ ದೇಶದ ಹಲವೆಡೆ ಸದ್ದು ಮಾಡುತ್ತಿದೆ.

ಜೆಎನ್ ಯು ವಿದ್ಯಾರ್ಥಿಗಳ ಚಳವಳಿ

ಜೆಎನ್ ಯು ವಿದ್ಯಾರ್ಥಿಗಳ ಚಳವಳಿ

ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಪರ ಹಾಗೂ ವಿರೋಧ ದೇಶದೆಲ್ಲೆಡೆ ಕೂಗು ಕೇಳಿ ಬಂದಿತು. ದೇಶದ್ರೋಹದ ಆರೋಪ ಕೂಡಾ ಹೊತ್ತು ಕೊಂಡು ವಿದ್ಯಾರ್ಥಿ ಸಂಘಟನೆಯ ನಾಯಕರು ಹಲವೆಡೆ ಪ್ರತಿಭಟನೆ ನಡೆಸಿದರು. ವಿವಿಯ ಕಾರ್ಯಕ್ರಮವೊಂದರಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಬಗ್ಗೆ ಚರ್ಚೆ ನಡೆಯಿತು.ದೆಹಲಿ ಪೊಲೀಸರು ಹಾಗೂ ನರೇಂದ್ರ ಮೋದಿ ಸರ್ಕಾರದ ನಿದ್ದೆಗೆಡಿಸಿದ ಈ ಘಟನೆಯ ಲಾಭ ವಿದ್ಯಾರ್ಥಿಗಳಿಗೆ ಆಗಲಿಲ್ಲ.

ಬುರ್ಹಾನ್ ವಾನಿ ಎನ್ ಕೌಂಟರ್

ಬುರ್ಹಾನ್ ವಾನಿ ಎನ್ ಕೌಂಟರ್

ಜುಲೈ 8ರಂದು ಕಾಶ್ಮೀರ ಮೂಲದ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾಹಿ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಯಿತು. 21 ವರ್ಷ ವಯಸ್ಸಿನ ವಾನಿ ಪರ -ವಿರೋಧ ಪ್ರತಿಭಟನೆಗಳು ನಡೆಯಿತು. ಕಾಶ್ಮೀರದಲ್ಲಿ ನಡೆದ ಘರ್ಷಣೆಯಲ್ಲಿ 85ಕ್ಕೂ ಅಧಿಕ ಮಂದಿ ಸಾವನ್ನಪ್ಪಿದರು. ಕಣಿವೆ ರಾಜ್ಯದಲ್ಲಿ 53ಕ್ಕೂ ಅಧಿಕ ದಿನ ಕರ್ಫ್ಯೂ ಜಾರಿಯಲ್ಲಿತ್ತು.

ಮೀಸಲಾತಿ ಹೋರಾಟಗಳು

ಮೀಸಲಾತಿ ಹೋರಾಟಗಳು

2016ರಲ್ಲಿ ಅತಿ ಹೆಚ್ಚು ಚಳವಳಿ, ಪ್ರತಿಭಟನೆ, ಹೋರಾಟಗಳು ಮೀಸಲಾತಿ, ಜಾತಿ ಸಂಬಂಧಿತ ವಿಷಯಗಳ ಮೇಲೆ ನಡೆದಿದ್ದು ಗಮನಾರ್ಹ. ಹರ್ಯಾಣದ ಜಾಟ್ ಚಳವಳಿ, ಗುಜರಾತಿನ ಪಾಟಿದಾರ್, ಆಂಧ್ರಪ್ರದೇಶದ ಕಾಪು ಸಮುದಾಯದ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡವು. ಅಮಾಯಕರ ಮೇಲೆ ಅತ್ಯಾಚಾರ, ರೈಲಿಗೆ ಬೆಂಕಿ ಸೇರಿದಂತೆ ಅನೇಕರ ಸಾವು ನೋವಿಗೆ ಮೀಸಲಾತಿ ಹೋರಾಟಗಳು ಮೀಸಲಾಯಿತು.

ಕಾವೇರಿ ಹಾಗೂ ಕಳಸಾ ಬಂಡೂರಿ ಪ್ರತಿಭಟನೆ

ಕಾವೇರಿ ಹಾಗೂ ಕಳಸಾ ಬಂಡೂರಿ ಪ್ರತಿಭಟನೆ

ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದ ಹಲವು ದಶಕಗಳಿಂದ ಮುಂದುವರೆಯುತ್ತಲೇ ಇದೆ. 2016ರಲ್ಲಿ ಹೆಚ್ಚಿನ ಮಟ್ಟದಲ್ಲಿ ಕಾನೂನು ಹೋರಾಟ ಹಾಗೂ ಪ್ರತಿಭಟನೆಗಳು ಕಂಡು ಬಂದಿತು. ಮಂಡ್ಯ, ಬೆಂಗಳೂರು, ಮೈಸೂರಿನ ಭಾಗದಲ್ಲಿ ಹೆಚ್ಚಿನ ಪ್ರತಿಭಟನೆ ಇತ್ತು. ಉಭಯ ರಾಜ್ಯಗಳ ನಡುವೆ ಸಾರಿಗೆ ಸಂಪರ್ಕ, ವ್ಯಾಪಾರ ವಹಿವಾಟು ಕಡಿತಗೊಂಡಿತು.

ಇದರ ಜತೆಗೆ ಕಳಸಾ ಬಂಡೂರಿ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಭಟನೆಗಳು ಕೂಡಾ ನಡೆಯಿತು.

ಬೆಂಗಳೂರಿನ ಉಕ್ಕಿನ ಸೇತುವೆ ವಿವಾದ

ಬೆಂಗಳೂರಿನ ಉಕ್ಕಿನ ಸೇತುವೆ ವಿವಾದ

ಬೆಂಗಳೂರಿನಲ್ಲಿ ಹಿಂದೆಂದೂ ಕಾಣದಂಥ ಚಳವಳಿಯನ್ನು ಉಕ್ಕಿನ ಸೇತುವೆ ವಿರುದ್ಧ ಕಾಣಲಾಯಿತು. ಕರ್ನಾಟಕ ಸರ್ಕಾರದ ಉದ್ದೇಶಿತ ಯೋಜನೆಯ ವೆಚ್ಚ 1800 ಕೋಟಿ ರು ಹಾಗೂ 900ಕ್ಕೂ ಅಧಿಕ ಮರಗಳನ್ನು ಕಡಿಯುವುದರ ವಿರುದ್ಧ ನಾಗರಿಕ ಸಂಘಟನೆ ಸದಸ್ಯರು ತಿರುಗಿ ಬಿದ್ದು, ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಸದ್ಯಕ್ಕೆ ಈ ಕುರಿತಂತೆ ಕಾನೂನು ಹೋರಾಟ ಜಾರಿಯಲ್ಲಿದ್ದು, ಹಸಿರು ಪ್ರಾಧಿಕಾರದಿಂದ ಯೋಜನೆಗೆ ಇನ್ನೂ ಪೂರ್ಣ ಪ್ರಮಾಣದ ಒಪ್ಪಿಗೆ ಸಿಕ್ಕಿಲ್ಲ.

ಉನಾ ದಲಿತ ಚಳವಳಿ

ಉನಾ ದಲಿತ ಚಳವಳಿ

ಗೋ ರಕ್ಷಕಾ ಸಂಘಟನೆಯ ಸದಸ್ಯರು ಜುಲೈ 17ರಂದು ಗುಜರಾತಿನ ಉನಾದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಘಟನೆ ವಿರುದ್ಧ ಪ್ರತಿಭಟನೆಗಳು ಆರಂಭವಾಗಿ ದೇಶದೆಲ್ಲೆಡೆ ಹರಡಿತು. ಈ ಘಟನೆಯನ್ನು ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು ತೀವ್ರವಾಗಿ ಖಂಡಿಸಿದರು.

ಘಟನೆ ವಿರುದ್ಧ ಪ್ರತಿಭಟನೆ ರೂಪವಾಗಿ ಸೌರಾಷ್ಟ್ರ ಪ್ರದೇಶದ ದಲಿತರು ಮಲ ಸ್ವಚ್ಛತೆ ಕಾರ್ಯದಲ್ಲಿ ತೊಡಗುವುದಿಲ್ಲ ಎಂದರು. ಗೋವಿನ ರಕ್ಷಣೆ, ದಲಿತರ ಮೇಲೆ ಹಲ್ಲೆ ಚರ್ಚೆ ಹಾಗೂ ವಿವಾದಿತ ಹೇಳಿಕೆಗಳ ನಡುವೆ ಪ್ರತಿಭಟನೆಗಳು ಮುಂದುವರೆದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Year end special article- People's movements in India in 2016. 2016 has seen many instances of people getting together in protest or solidarity.
Please Wait while comments are loading...