Year Ender 2024: ಈ ವರ್ಷ ಅಬ್ಬರಿಸಿದ್ದ ಚಂಡಮಾರುತಗಳು, ಪ್ರವಾಹ-ಮಳೆ ಹಾನಿ ವಿವರ
ಬೆಂಗಳೂರು, ಡಿಸೆಂಬರ್ 13: ಭಾರತದಲ್ಲಿ ಪ್ರತಿ ವರ್ಷವು ಸುರಿಯುವ ನಿರೀಕ್ಷಿತ ವಾಡಿಕೆ ಮಳೆಯು ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಕೃಷಿ ಪ್ರಧಾನ ದೇಶ ಭಾರತದಲ್ಲಿ ಬಹುಪಾಲು ಮಂದಿ ವ್ಯವಸಾಯದಿಂದಲೇ ಬದುಕುತ್ತಿದ್ದಾರೆ. ಹೀಗೆ ಕೃಷಿಗೆ ಅಗತ್ಯವಾದ ಮಳೆಯು ಕೆಲವೊಮ್ಮೆ ಬೆಳೆ ಹಾನಿ ಮಾತ್ರವಲ್ಲದೇ, ಜನ ಜೀವನ ದುಸ್ತರವಾಗಲು, ಜೀವ ಹಾನಿಗೂ ಕಾರಣವಾಗಿಬಿಡುತ್ತದೆ. ಅದಕ್ಕೆ ಕಾರಣ ಸಮುದ್ರ ಮೇಲೆ ನಡೆಯುವ ಬದಲಾವಣೆಗಳು. ಅಂತಹ ಬದಲಾವಣೆಗಳು (ವೈಪರಿತ್ಯಗಳು) ಚಂಡಮಾರುತವಾಗಿ ಅಪ್ಪಳಿಸಿ ತಣ್ಣಗಾಗುತ್ತವೆ.
ಸಮುದ್ರ ಮೇಲ್ಮೈನಲ್ಲಿ ಉಂಟಾಗುವ ಕಡಿಮೆ ಒತ್ತಡದ ಪ್ರದೇಶ, ಸ್ಟ್ರಫ್/ಸುಳಿಗಾಳಿ, ವಾಯುಭಾರ ಕುಸಿತವು ಕೆಲವೊಮ್ಮೆ ಚಂಡಮಾರುತವಾಗಿ (Cyclone) ಪರಿವರ್ತನೆಯಾಗುತ್ತವೆ. ಅವು ಭಾರೀ ಮಳೆಯನ್ನು ಸುರಿಸುತ್ತವೆ. ಪ್ರವಾಹ, ಸಾವು ನೋವುಗಳಿಗೆ ಕಾರಣವಾಗುವ ಚಂಡಮಾರುತಗಳು ಪ್ರತಿವರ್ಷವು ಅಬ್ಬರಿಸುತ್ತಿವೆ. ಹಾಗಾದರೆ ಪ್ರಸಕ್ತ 2024ರಲ್ಲಿ ಕಾಡಿದ ಚಂಡಮಾರುತಗಳು ಯಾವುವು, ಅವುಗಳ ಹೆಸರು, ಎಲ್ಲೆಲ್ಲಿ ಅವುಗಳ ಪ್ರಭಾವ ಉಂಟಾಗಿತ್ತು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

2024 ವರ್ಷ ಕೊನೆಗೊಳ್ಳುತ್ತಿದೆ. ವರ್ಷಾಂತ್ಯದ ಹಿಂಗಾರು ಋತುವಿನಲ್ಲಿ ಸೈಕ್ಲೋನ್ ಅಬ್ಬರ ಶುರುವಾಗಿದೆ. ಎಲ್ಲೆಡೆ ಭಾರೀ ಮಳೆ ದಾಖಲಾಗಿದೆ. ತಮಿಳುನಾಡು ಕರಾವಳಿ ರಾಜ್ಯದ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಹತ್ತೇ ದಿನಗಳಲ್ಲಿ ಎರಡು ಚಂಡಮಾರುತ ಪ್ರಭಾವ ಭೀರಿವೆ.
ಈ ವರ್ಷ ಅಬ್ಬರಿಸಿದ್ದ ಚಂಡಮಾರುತಗಳು
'ರೆಮೆಲ್' ಚಂಡಮಾರುತ: ಮೇ 2024
ಸದರಿ ವರ್ಷ ಜೂನ್ ತಿಂಗಳಲ್ಲಿ ಮುಂಗಾರು ಮಳೆ ಆರಂಭವಾಗುವ ಮೊದಲೇ ಅಂದರೆ ಮೇ ತಿಂಗಳಲ್ಲಿ ರೆಮೆಲ್ ಚಂಡಮಾರುತ (Remal) ಅಬ್ಬರಿಸಿತ್ತು. ಇದು ವರ್ಷದ ಮೊದಲ ಚಂಡಮಾರುತವಾಗಿದೆ. ಈ ಸೈಕ್ಲೋನ್ ಈಶಾನ್ಯ ರಾಜ್ಯಗಳ ಮೇಲೆ ಭೀಕರ ಪ್ರಭಾವ ಉಂಟು ಮಾಡಿತ್ತು.
ರೆಮೆಲ್ ಅಬ್ಬರದಿಂದ ಕೆಲ ವಾರಗಳ ಕಾಲ ಧಾರಾಕಾರ ಮಳೆ ಸುರಿದಿತ್ತು. ಮಳೆಗೆ ಭೂಕುಸಿತ ಸಂಭವಿಸಿತ್ತು. ಜನರ ವಾಸಸ್ಥಾನಗಳು, ಪ್ರದೇಶಗಳು, ಜಲಾವೃತಗೊಂಡವು. ಒಟ್ಟು 36ಕ್ಕೂ ಅಧಿಕ ಜನರು ಸಾವನ್ನಪಿದರು. ಅಸ್ಸಾಂ, ಮಿಜೋರಾಂ, ತ್ರಿಪುರ, ನಾಗಾಲ್ಯಾಂಡ್ ಸೇರಿದಂತೆ ವಿವಿಧ ಈಶಾನ್ಯ ನಾಲ್ಕು ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟಾಗಿತ್ತು.
'ಆಸ್ನಾ' ಚಂಡಮಾರುತ: ಆಗಸ್ಟ್ 2024
ಈ ವರ್ಷ ಮುಂಗಾರು ಮಳೆ ಕೊನೆಯಾರ್ಧ ಭಾಗದಲ್ಲಿ ಅರಬ್ಬಿ ಸಮುದ್ರದಲ್ಲಿ ಹುಟ್ಟಿಕೊಂಡ ಈ ವೈಪರಿತ್ಯವು 'ಆಸ್ನಾ' ಚಂಡಮಾರುತವಾಗಿ ಬದಲಾಯಿತು. ಆಗಸ್ಟ್ ಕೊನೆಯ ವಾರ ಮಧ್ಯ ಪ್ರದೇಶ, ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ, ರಾಜಸ್ಥಾನ ರಾಜ್ಯಗಳ ಮೇಲೆ ಇದರ ಪ್ರಭಾವ ಉಂಟಾಯಿತು. ಸುಮಾರು ಎರಡು ವಾರಗಳ ಕಾಲ ಅತ್ಯಧಿಕ ಮಳೆ ಆಯಿತು. ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಕೈಗೆ ಬಂದ ಮುಂಗಾರು ಬೆಳೆ ನಾಶವಾಗಲು, ಜನರು ತೊಂದರೆ ಅನುಭವಿಸಲು ಈ ಸೈಕ್ಲೋನ್ ಕಾರಣವಾಯಿತು.
'ಡಾನಾ' ಚಂಡಮಾರುತ: ಅಕ್ಟೋಬರ್ 2024
'ರೆಮೆಲ್' ಚಂಡಮಾರುತ ಬಳಿಕ ಹೆಚ್ಚು ಅಬ್ಬರಿಸಿದ, ಭಾರೀ ಮಳೆ ಹಾಗೂ ಹೆಚ್ಚು ಹಾನಿಗೆ ಕಾರಣವಾದ ಮತ್ತೊಂದು ಚಂಡಮಾರುತ ಎಂದರೆ ಅದು 'ಡಾನಾ'. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿ ಈ ಚಂಡಮಾರುತವು, ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿ ಜಿಲ್ಲೆಗಳ ಜನರನ್ನು ಅತೀವವಾಗಿ ಕಾಡಿತ್ತು.
ಆಂಧ್ರ ಪ್ರದೇಶ ಕರಾವಳಿ ಹಾಗೂ ಕರ್ನಾಟಕದ ಮೇಲೆ ಕೊಂಚ ಪರಿಣಾಮ ಬೀರಿತ್ತು. ಒಡಿಶಾ ರಾಜ್ಯದಲ್ಲಿ ಡಾನಾದಿಂದ ಸುಮಾರು 600ಕ್ಕೂ ಅಧಿಕ ಕೋಟಿ ಆಸ್ತಿ, ಪಾಸ್ತಿ ನಷ್ಟ ಉಂಟು ಮಾಡಿತು. ಇದರ ವರದಿ ಕೇಂದ್ರಕ್ಕೆ ಸಲ್ಲಿಸಿರುವ ಒಡಿಶಾ ಸರ್ಕಾರ ಪರಿಹಾರ ನಿರೀಕ್ಷೆಯಲ್ಲಿದೆ.
ಫೆಂಗಲ್ ಚಂಡಮಾರುತ: ನವೆಂಬರ್-ಡಿಸೆಂಬರ್ 2024
'ಡಾನಾ' ಬೆನ್ನಲ್ಲೆ ಈ ವರ್ಷಾಂತ್ಯಕ್ಕೆ 'ಫೆಂಗಲ್' ಚಂಡಮಾರುತದ ಅಬ್ಬರ ಶುರುವಾಯಿತು. ಬಂಗಾಳಕೊಲ್ಲಿಯಿಂದ ವೇಗವಾಗಿ ಆಗಮಿಸಿದ್ದ 'ಫೆಂಗಲ್' ತಮಿಳುನಾಡು ಕರಾವಳಿಗೆ ಅಪ್ಪಳಿಸಿತ್ತು. ಚೆನ್ನೈ ಮಹಾನಗರಕ್ಕೆ ಇನ್ನಿಲ್ಲದಂತೆ ಮಳೆ ಸುರಿಸಲು ಕಾರಣವಾಗಿದ್ದ ಈ ಸೈಕ್ಲೋನ್ ಭಾರೀ ಮಳೆ ದಾಖಲಾಯಿತು. ಶಾಲೆಗಳಿಗೆ ರಜೆ ನೀಡಲಾಯಿತು. ರಸ್ತೆಗಳು, ತಗ್ಗು ಪ್ರದೇಶ ಮನೆಗಳು ಜಲಾವೃತಗೊಂಡು ಸಮಸ್ಯೆ ಉಂಟಾಗಿತ್ತು.
'ಫೆಂಗಲ್' ಬೆನ್ನಲ್ಲೆ ಒಂದೇ ವಾರಕ್ಕೆ ಹಿಂದೂ ಮಹಾಸಾಗರ ಹಾಗೂ ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿ ಮತ್ತೆ ವಾಯುಭಾರ ಕುಸಿತ ಸಂಭವಿಸಿವೆ. ಅವು ಈಗಾಗಲೇ ಸ್ಪಷ್ಟ ಚಂಡಮಾರುತವಾಗಿ ಬದಲಾಗುವ ಹಂತದಲ್ಲಿವೆ. ಇದರಿಂದ ಚೆನ್ನೈ, ತಮಿಳುನಾಡು, ಕರ್ನಾಟಕ, ಆಂಧ್ರ ಕರಾವಳಿ ಭಾಗದ ಜಿಲ್ಲೆಗಳಿಗೆ ಡಿಸೆಂಬರ್ ಮೊದಲ ವಾರಿದಂದಲೇ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯಲಿದೆ.












Click it and Unblock the Notifications