ಸಮಸ್ಯೆಗಳು ಪರಿಹಾರವಾದರೆ ಮಾತ್ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗಿ: ಮೋದಿ ಸರ್ಕಾರವನ್ನು ಮುಜುಗುರಕ್ಕೆ ತಳ್ಳಿದ ಕುಸ್ತಿಪಟುಗಳ ಬೆದರಿಕೆ
ಬೆಂಗಳೂರು, ಜೂನ್ 10: ಎಲ್ಲಾ ಸಮಸ್ಯೆಗಳು ಪರಿಹಾರವಾದಾಗ ಮಾತ್ರ ನಾವು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತೇವೆ. ನಾವು ಪ್ರತಿದಿನ ಮಾನಸಿಕವಾಗಿ ಏನನ್ನು ಅನುಭವಿಸುತ್ತಿದ್ದೇವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಭಟನಾ ನಿರತ ಕುಸ್ತಿಪಟು ಸಾಕ್ಷಿ ಮಲಿಕ್ ಶನಿವಾರ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿರುವ ಕುಸ್ತಿಪಟು ಬಜರಂಗ್ ಪುನಿಯಾ, ಜೂನ್ 15 ರೊಳಗೆ ಕ್ರಮ ಕೈಗೊಳ್ಳದಿದ್ದರೆ, ನಾವು ಪ್ರತಿಭಟನೆಗೆ ಕರೆ ನೀಡುತ್ತೇವೆ. ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬುದಾಗಿ ನಾವು ಸರ್ಕಾರಕ್ಕೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗಿನ ಸಭೆಯ ನಂತರ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಜೂನ್ 15 ರ ವರೆಗೆ ಹಿಂತೆಗೆದುಕೊಂಡಿದ್ದಾರೆ. ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗುವುದಾಗಿ ಅನುರಾಗ್ ಠಾಕೂರ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ತಿಂಗಳಾಂತ್ಯದಲ್ಲಿ ಡಬ್ಲ್ಯುಎಫ್‌ಐ ಮುಖ್ಯಸ್ಥರ ಹುದ್ದೆಗೆ ಚುನಾವಣೆ ನಡೆಯಲಿದೆ ಎಂದು ಅವರು ಭರವಸೆ ನೀಡಿದ್ದಾರೆ ಎಂದೂ ವರದಿಯಾಗಿದೆ.
ಬ್ರಿಜ್ ಭೂಷಣ್ ಪ್ರಕರಣದಲ್ಲಿ ಸರ್ಕಾರದ ನಿಷ್ಕ್ರಿಯತೆಯ ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಏಷ್ಯನ್ ಗೇಮ್ಸ್‌ಗೆ ತಯಾರಿ ನಡೆಸಲು ಆಸಕ್ತಿ ತೋರಿಸಿದ್ದಾರೆ. ಆದರೆ, ಸಮಸ್ಯೆಗಳು ಪರಿಹಾರವಾಗುವರೆಗೂ ತಾವು ಯಾವುದೇ ಗೇಮ್ಸ್‌ನಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿದ್ದಾರೆ. ಇದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾರೀ ಮುಜುಗುರ ಉಂಟುಮಾಡಿದೆ.

ದಿನೇಶ್ ಗುಂಡೂರಾವ್ ಟ್ವೀಟ್
ಕುಸ್ತಿಪುಟಗಳ ವಿಚಾರವಾಗಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮೋದಿ ಸರ್ಕಾರದ ನಡೆಗೆ ದಿಗ್ಭ್ರಮೆಗೊಂಡಿರುವುದಾಗಿ ಹೇಳಿದ್ದಾರೆ.
'ಮೋದಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ನಾನು ದಿಗ್ಭ್ರಮೆಗೊಂಡಿದ್ದೇನೆ. ಡಬ್ಲ್ಯುಎಫ್‌ಐ ಮುಖ್ಯಸ್ಥ ಬಿಜೆಪಿ ಸಂಸದರಾಗಿರದಿದ್ದರೆ ಎಲ್ಲವೂ ಸಂಪೂರ್ಣವಾಗಿ ವಿಭಿನ್ನವಾಗಿರುತ್ತಿತ್ತು ಎಂದು ನನಗೆ ಖಾತ್ರಿಯಾಗಿದೆ. ಮೋದಿ ಸರ್ಕಾರದ ಬಗ್ಗೆ ಮಾಧ್ಯಮಗಳು ಟೀಕೆ ಮಾಡುತ್ತಿಲ್ಲ ಎಂಬುದು ಬೇಸರದ ಸಂಗತಿ' ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications